ಕಾಂಗ್ರೆಸ್ ಪಕ್ಷದಿಂದ ಡಿಜಿಟಲ್ ‘ಐಎನ್‌ಸಿ ಟಿವಿ’ ಚಾನೆಲ್ ಆರಂಭ!

ಕೆಲವು ಸುದ್ದಿ ಮಾಧ್ಯಮಗಳು ವಾಸ್ತವವನ್ನು ಬದಿಗೊತ್ತಿ, ಸರ್ಕಾರವನ್ನು ಹೊಗಳುವುದರಲ್ಲಿ ನಿರತವಾಗಿವೆ. ಹೀಗಾಗಿ ಜನರ ಧ್ವನಿ ಮರೆಯಾಗುತ್ತಿದೆ ಎಂದು ಹೇಳಿರುವ ಕಾಂಗ್ರೆಸ್‌, ಜನರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ತನ್ನದೇ ಆದ ‘ಐಎನ್‌ಸಿ ಟಿವಿ’ ಯೂಟ್ಯೂಬ್‌ ಚಾನೆಲ್‌ ಅನ್ನು ಆರಂಭಿಸಿದೆ.

ಶನಿವಾರ ನಡೆದ ವರ್ಚುವಲ್‌ ಕಾರ್ಯಕ್ರಮದಲ್ಲಿ ಚಾನೆಲ್‌ಅನ್ನು ಉದ್ಘಾಟಿಸಲಾಗಿದೆ. ದೇಶದ ವಿವಿಧ ಸಂಸ್ಥೆಗಳು ಸರ್ಕಾರ ಕಪಿಮುಷ್ಟಿಗೆ ಸಿಲುಕಿಕೊಂಡಿವೆ. ಇದರಿಂದಾಗಿ ಜನರಿಗೆ ವಾಸ್ತವವನ್ನು ತಿಳಿಯಲಾಗುತ್ತಿಲ್ಲ. ಬಿಜೆಪಿ ಸರ್ಕಾರವು ಮಾಧ್ಯಮಗಳನ್ನು ನಿಯಂತ್ರಿಸುತ್ತಿದೆ. ಸತ್ಯವನ್ನು ಪ್ರಸಾರ ಮಾಡದಂತೆ ತಡೆಯುತ್ತಿದೆ. ಹೀಗಾಗಿ ಆ ಚಾನೆಲ್‌ಗಳಲ್ಲಿ ಪ್ರಸಾರವಾಗದೇ ಉಳಿದುಹೋಗುವ ಸುದ್ದಿ-ಮಾಹಿತಿಗಳನ್ನು ‘ಐಎನ್‌ಸಿ ಟಿವಿ’ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗುವುದು. ಜನರಿಗೆ ವಸ್ತುನಿಷ್ಟ ಸತ್ಯವನ್ನು ತಿಳಿಸಲಾಗುವುದು ಎಂದು ಕಾಂಗ್ರೆಸ್‌ ಹೇಳಿದೆ.

ಚಾನಲ್‌ ಉದ್ಘಾಟಿಸಿದ ನಂತರ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಈ ಡಿಜಿಟಲ್ ಚಾನೆಲ್ ಮೂಲಕ ಪಕ್ಷವು ಜನರ ದನಿಯನ್ನು ಹೆಚ್ಚಿಸುತ್ತದೆ ಮತ್ತು ಸಾರ್ವಜನಿಕ ಹಿತಾಸಕ್ತಿ ವಿಷಯಗಳ ಬಗ್ಗೆ ತ್ವರಿತವಾಗಿ ಕೆಲಸ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತದೆ ಎಂದು ಹೇಳಿದ್ದಾರೆ.

ಇಂದು ಕೆಲವು ಟಿವಿ ಚಾನೆಲ್‌ಗಳು ಸಾಮಾನ್ಯ ಜನರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ. ಜನರ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ಆ ಸಮಸ್ಯೆಗಳನ್ನು ನಮ್ಮ ಚಾನೆಲ್‌ನಲ್ಲಿ ಎತ್ತಲಾಗುವುದು. ಸರ್ಕಾರ ಮತ್ತು ಅದಕ್ಕಾಗಿ ಕೆಲಸ ಮಾಡುವ ಚಾನೆಲ್‌ಗಳಿಗೆ ನಮ್ಮ ಚಾನೆಲ್‌ ಮಹತ್ವ ನೀಡುವುದಿಲ್ಲ ಎಂದು ಖಜಾಂಚಿ ಪವನ್ ಬನ್ಸಾಲ್ ಹೇಳಿದರು.

ಚಾನೆಲ್‌ ಉದ್ಘಾಟನೆ ವೇಳೆ, ಪಕ್ಷದ ವಕ್ತಾರ ಪವನ್ ಖೇಡಾ, ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ರೋಹನ್ ಗುಪ್ತಾ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಹಾಗೂ ಪಕ್ಷದ ಇನ್ನೂ ಅನೇಕ ನಾಯಕರು ಉಪಸ್ಥಿತರಿದ್ದರು.

ಇದನ್ನೂ ಓದಿ: ದೆಹಲಿ: ಆಸ್ಪತ್ರೆಯ ಬಾಗಿಲಲ್ಲಿಯೇ ಸಾವನ್ನಪ್ಪುತ್ತಿದ್ದಾರೆ ಕೊರೊನಾ ಸೋಂಕಿತರು!

Spread the love

Leave a Reply

Your email address will not be published. Required fields are marked *