ಪ್ಲಾಸ್ಮಾ ಥೆರಫಿ ಕೊರೊನಾದಿಂದ ನನ್ನನ್ನು ಬದುಕಿಸಿದೆ: ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್
ಕೊರೊನಾ ಸೋಂಕಿಗೆ ಒಳಗಾಗಿದ್ದ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಆರೋಗ್ಯದಲ್ಲಿ ತುಂಬಾ ಏರುಪೇರು ಕಂಡಿದ್ದ ಅವರು ಪ್ರಾಣಾಪಾಯದ ಅಂಚಿಗೆ ತಲುಪಿದ್ದರು. ಪ್ಲಾಸ್ಮಾ ತೆರಫಿ ಚಿಕಿತ್ಸೆ ಪಡೆದ ನಂತರ ಅವರ ಆರೋಗ್ಯ ಸುಧಾರಿಸಿದೆ. ಕೊರೊನಾ ಸೋಂಕಿನಿಂದ ಪ್ರಾಣಾಪಾಯದ ಸ್ಥಿತಿಗೆ ತಲುಪಿದ್ದ ನಾನು ಪ್ಲಾಸ್ಮಾ ಥೆರಪಿಯಿಂದ ಬದುಕುಳಿದಿದ್ದೇನೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.
ಈ ಹಿಂದೆ ತೀವ್ರ ಜ್ವರದ ಹಿನ್ನೆಲೆಯಲ್ಲಿ ಕಳೆದ ವಾರ ಅವರು ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಮೊದಲ ದಿನ ಅವರ ಕೊರೊನಾ ವರದಿ ನೆಗೆಟಿವ್ ಬಂದಿತ್ತು. ಆದರೆ ಎರಡನೇ ವರದಿ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಅವರನ್ನು ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆರೋಗ್ಯ ತೀವ್ರ ಹದಗೆಟ್ಟಿತ್ತು. ತೀವ್ರ ಜ್ವರದಿಂದ ಬಳಲುತ್ತಿದ್ದ ಅವರಲ್ಲಿ ಆಕ್ಸಿಜನ್ ಮಟ್ಟ ಏಕಾಏಕಿ ಕುಸಿದಿತ್ತು. ನಂತರ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು.
ಅಲ್ಲಿಂದ ಅವರನ್ನು ಸಾಕೇತ್‌ನಲ್ಲಿರುವ ಮಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕ್ಸಿಜನ್ ಸಂಪರ್ಕದಲ್ಲಿ ಇದ್ದ ಅವರಿಗೆ ಅಲ್ಲಿ ಪ್ಲಾಸ್ಮಾ ಚಿಕಿತ್ಸೆ ನೀಡದ ನಂತರ ಚೇತರಿಸಿಕೊಂಡಿದ್ದರು. ಗುಣಮುಖರಾಗಿದ್ದ ಅವರು ಇತ್ತೀಚೆಗಷ್ಚೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.
ಇದೀಗ ಆಸ್ಪತ್ರೆಯಿಂದ ಬಳಿಕ ಮೊದಲ ಬಾರಿಗೆ ಟ್ವೀಟ್ ಮಾಡಿರುವ ಅವರು, ಎಲ್ಲರ ಶುಭ ಹಾರೈಕೆಗಳಿಂದ ನಾನು ಚೇತರಿಸಿಕೊಂಡಿದ್ದೇನೆ. ಪ್ರಸ್ತುತ ನಾನು ಆಸ್ಪತ್ರೆಯಿಂದ ಮನೆಗೆ ಬಂದಿದ್ದೇನೆ. ಪ್ಸಾಸ್ಮಾ ಬ್ಯಾಂಕ್ ಸ್ಥಾಪನೆ ಮಾಡುವ ಸಿಎಂ ಕೇಜ್ರಿವಾಲ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಮತ್ತು ಕ್ರಾಂತಿಕಾರಿ ನಡೆ. ಪ್ಲಾಸ್ಮಾ ಥೆರಪಿಯಿಂದಾಗಿ ನಾನು ಮರು ಜೀವ ಪಡೆದಿದ್ದೇನೆ. ಹೀಗಾಗಿ ಎಲ್ಲ ಕೊರೋನಾ ಗುಣಮುಖರೂ ಪ್ಲಾಸ್ಮಾ ದಾನ ಮಾಡಬೇಕು. ನಾನೂ ಕೂಡ ನನ್ನ ಪ್ಲಾಸ್ಮಾ ದಾನ ಮಾಡಿದ್ದೇನೆ ನೀವೂ ಮಾಡಿ ಎಂದು ಮನವಿ ಮಾಡಿದ್ದಾರೆ.