ಸಚಿನ್ ಪೈಲಟ್‌ರನ್ನು‌ ಸಮರ್ಥಿಸಿಕೊಂಡ ಸಂಜಯ್‌ ಝಾ ಕಾಂಗ್ರೆಸ್‌ನಿಂದ ಉಚ್ಛಾಟನೆ!

ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದುಕೊಂಡು ಕಾಂಗ್ರೆಸ್‌ ನಾಯಕತ್ವ ಹಾಗೂ ಕಾಂಗ್ರೆಸ್‌ನ ಕಾರ್ಯನಿರ್ವಹಣೆಯ ಬಗ್ಗೆ ಭಿನ್ನಾಭಿಪ್ರಾಯ ಮತ್ತು ಟೀಕೆಗಳನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿದ್ದ ಕಾಂಗ್ರೆಸ್‌ನ ಮಾಜಿ ವಕ್ತಾರ ಸಂಜಯ್‌ ಝಾ ಅವರನ್ನು ಪಕ್ಷದ ಸಾಮಾನ್ಯ ಸದಸ್ಯತ್ವದಿಂದಲೂ ಕಾಂಗ್ರೆಸ್‌ ವಜಾ ಮಾಡಿದೆ.

ಪಕ್ಷ ವಿರೋಧಿ ಚಟುವಟಿಕೆ ಹಾಗೂ ಶಿಸ್ತು ನಿಯಮ ಉಲ್ಲಂಘನೆ ಕಾರಣಕ್ಕಾಗಿ ಮಹಾರಾಷ್ಟ್ರದ ಸಂಜಯ್ ಝಾ ಅವರನ್ನ ಉಚ್ಛಾಟಿಸಲು ತೀರ್ಮಾನಿಸಿದ್ದ ಮಹಾರಾಷ್ಟ್ರ ಘಟಕದ ಕಾಂಗ್ರೆಸ್, ನಿನ್ನೆ (ಮಂಗಳವಾರ) ಸಂಜಯ್‌ ಝಾರನ್ನು ಅಧಿಕೃತವಾಗಿ ಪಕ್ಷದಿಂದ ಅಮಾನತು ಮಾಡಿರುವುದಾಗಿ ಟ್ವೀಟ್‌ ಮಾಡುವ ಮೂಲಕ ತಿಳಿಸಿದೆ.

“ಕಾಂಗ್ರೆಸ್ ಪಕ್ಷ ಅತಿ ಆಲಸ್ಯತನ ತೋರುತ್ತಿದೆ. ಪಕ್ಷ ಅಪ್ರಸ್ತುತ ಎನಿಸುವ ಸ್ಥಿತಿ ತಲುಪುತ್ತಿದ್ದರೂ ಕಾಂಗ್ರೆಸ್ ಪಕ್ಷದ ಉದಾಸೀನತೆ ಬಹಳ ಆಶ್ಚರ್ಯ ತರುತ್ತಿದೆ…. ನಾನು ಇದ್ದದ್ದನ್ನ ಇದ್ದ ಹಾಗೆ ಹೇಳುತ್ತೇನೆ. ಪಕ್ಷಕ್ಕೆ ಪುನಶ್ಚೇತನ ಕೊಡುವ ಯಾವ ಗಂಭೀರ ಪ್ರಯತ್ನವೂ ಆಗುತ್ತಿಲ್ಲ….” ಎಂದು ಅವರು  ಕಾಂಗ್ರೆಸ್‌ ಪಕ್ಷವನ್ನು ಟೀಕೆ ಮಾಡಿ  ಟೈಮ್ಸ್ ಆಫ್ ಇಂಡಿಯಾಗೆ ಮಾರ್ಚ್ 3ರಂದು ಬರೆದ ಲೇಖನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಬಹಿರಂಗವಾಗಿ ಪಕ್ಷವನ್ನು ಟೀಕಿಸಿದ ನಂತರ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಳೆದ ತಿಂಗಳು ಸಂಜಯ್ ಝಾ ಅವರನ್ನ ಪಕ್ಷದ ವಕ್ತಾರ ಸ್ಥಾನದಿಂದ ಕಿತ್ತುಹಾಕಿದ್ದರು.

ಕೆಲ ದಿನಗಳ ಹಿಂದೆ ಸಂಜಯ್ ಝಾ ಅವರು ಮಹಾರಾಷ್ಟ್ರ ಘಟಕದ ಆಲ್ ಇಂಡಿಯಾ ಪ್ರೊಫೆಷನಲ್ಸ್ ಕಾಂಗ್ರೆಸ್​ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನನ್ನ ರಾಜಕೀಯ ಅಭಿಪ್ರಾಯಗಳು ನನ್ನ ಸ್ಥಾನಮಾನಕ್ಕೆ ಸಂಬದ್ಧವಾಗಿಲ್ಲ ಎಂದು ಅವರು ಕಾರಣ ನೀಡಿದ್ದರು.

ನಿನ್ನೆ ರಾಜಸ್ಥಾನದಲ್ಲಿ ಸಂಚಲನ ಮೂಡಿಸಿದ್ದ ಸಚಿನ್ ಪೈಲಟ್ ಅವರನ್ನ ಸಮರ್ಥಿಸಿಕೊಂಡಿದ್ದ ಅವರು, ಬಹಳ ಪರಿಶ್ರಮ ವಹಿಸಿ ಪಕ್ಷವನ್ನು ಕಟ್ಟಿದವರಿಗೆ ಈ ಗತಿ ಬಂತಲ್ಲ ಎಂದು ಸಚಿನ್ ಪೈಲಟ್ ಅವರನ್ನ ಉಪಮುಖ್ಯಮಂತ್ರಿ ಸ್ಥಾನದಿಂದ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದಕ್ಕೆ ಪಕ್ಷದ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ, ಪಕ್ಷ ವಿರೋಧಿ ಚಟುವಟಿಕೆ ಹಾಗೂ ಶಿಸ್ತು ನಿಯಮ ಉಲ್ಲಂಘನೆ ಕಾರಣದಿಂದಾಗಿ ಸಂಜಯ್ ಝಾ ಅವರನ್ನು ಕಾಂಗ್ರೆಸ್ ಪಕ್ಷ ಅಮಾನತುಗೊಳಿಸಲು ನಿರ್ಧರಿಸಿದೆ ಎಂದು ಹೇಳಲಾಗಿದೆ.


ಇದನ್ನೂ ಓದಿ“ನಾನು ಇನ್ನೂ ಕಾಂಗ್ರೆಸ್ ಪಕ್ಷದ ಸದಸ್ಯನಾಗಿದ್ದೇನೆ”- ಸಚಿನ್ ಪೈಲಟ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.