ಗಡಿ ಬಿಕ್ಕಟ್ಟು, ಆರ್ಥಿಕ ಅಧೋಗತಿ, ಕೊರೊನಾ ಸಂಕಷ್ಟಕ್ಕೆ ಮೋದಿಯವರ ಆಡಳಿತ ವೈಫಲ್ಯವೇ ಕಾರಣ: ಸೋನಿಯಾ ಗಾಂಧಿ
ಭಾರತವು ಇಂದು ಉದ್ವಿಗ್ನಗೊಂಡಿರುವ ಗಡಿ ಸಮಸ್ಯೆಯನ್ನು ಎದುರಿಸುತ್ತಿದೆ. ಆರ್ಥಿಕತೆ ಹಳ್ಳಹಿಡಿದಿದ್ದು ಬಿಕ್ಕಟ್ಟಿಗೆ ಸಿಲುಕಿದೆ. ಕೊರೊನಾ ವೈರಸ್ ತನ್ನ ಆಕ್ರಮಣವನ್ನು ಹೆಚ್ಚಿಸಿದ್ದು, ದೇಶದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆಲ್ಲ ಪ್ರಧಾನಿ ಮೋದಿಯವರ ಅಧಿಕಾರ ದುರುಪಯೋಗ, ಸ್ವ ಹಿತಾಸಕ್ತಿ ಹಾಗೂ ತಪ್ಪು ನೀತಿ ನಿರ್ಧಾರಗಳೇ ಕಾರಣ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಕಾರ್ಯಕಾರಣಿ ಸಭೆ ಉದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ, ಸದ್ಯ ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ನರೇಂದ್ರ ಮೋದಿ ಸರ್ಕಾರದ ಆಡಳಿತ ವೈಖರಿ ಮತ್ತು ವೈಫಲ್ಯಗಳೇ ಕಾರಣ. ಚೀನಾದೊಂದಿಗೆ ಗಡಿಯಲ್ಲಿ ಬಿಕ್ಕಟ್ಟು ಆರಂಭವಾಗಿದೆ. ಕೇಂದ್ರ ಸರ್ಕಾರ ಈ ಸಮಸ್ಯೆಯನ್ನು ಆದಷ್ಟು ಬೇಗ ಸಮರ್ಥವಾಗಿ ನಿಭಾಯಿಸುತ್ತದೆ ಮತ್ತು ದೇಶದ ಸಮಗ್ರತೆ ಕಾಪಡುತ್ತದೆ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಲಾಕ್ಡೌನ್ ಮತ್ತು ಕೊರೋನಾ ಕಷ್ಟಕ್ಕೆಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಆರ್ಥಿಕ ಪ್ಯಾಕೇಜ್ ನಲ್ಲಿ ಏನೇನೂ ಇಲ್ಲ. ಜನರ ಕೈಗೆ ಹಣ ನೀಡಬೇಕಾಗಿತ್ತು. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ನೆರವಾಗಬೇಕಿತ್ತು. ಬೇಡಿಕೆ ಹೆಚ್ಚಿಸುವ ಪ್ರಯತ್ನ ಮಾಡಬೇಕಿತ್ತು. ಆದರೆ ಯಾವ ರೀತಿಯಲ್ಲೂ ಉಪಯೋಗಕ್ಕೆ ಬಾರದ ನಾಮಕಾವಸ್ತೆ ಪ್ಯಾಕೇಜ್ ಮಾಡಲಾಗಿದೆ ಎಂದು ಆರೋಪಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲ ಬೆಲೆ ಗಣನೀಯ ಇಳಿಕೆಯಾಗಿದೆ. ಆದರೆ ನರೇಂದ್ರ ಮೋದಿ ಸರ್ಕಾರ ನಿರಂತರವಾಗಿ 17 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಸುತ್ತಿದೆ. ಇದು ಸಂಕಷ್ಟದಲ್ಲಿರುವ ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.

