ರಾಜ್ಯದಲ್ಲಿ ತ್ರಿವಳಿ ಲಾಕ್‌ಡೌನ್‌ಗೆ ತಜ್ಞರ ಸೂಚನೆ: ಏನಿದು ಟ್ರಿಪಲ್ ಲಾಕ್‌ಡೌನ್‌!

ದೇಶಾದ್ಯಂತ ಕೊರೊನಾ ವೈರಸ್‌ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಕರ್ನಾಟಕವೂ ಹೊರತಾಗಿಲ್ಲ. ಹಾಗಾಗಿ ರಾಜ್ಯದಲ್ಲಿ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವುದಕ್ಕಾಗಿ ತ್ರಿವಳಿ ಲಾಕ್‌ಡೌನ್‌ ಮಾದರಿಯನ್ನು ಅನುಸರಿಸಬೇಕು ಎಂದು ಆರೋಗ್ಯ ತಜ್ಞರು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಈ ಮಾದರಿಯು ಈಗಾಗಲೇ ಕೇರಳದಲ್ಲಿ ಯಶಸ್ವಿಯಾಗಿದೆ.

ತ್ರಿವಳಿ ಲಾಕ್‌ಡೌನ್ ಕಾರ್ಯರೂಪವು ಕೇರಳದ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಯಶಸ್ವಿಯಾಗಿದ್ದು,  ಕಾಸರಗೋಡು ಜಿಲ್ಲೆಯಲ್ಲಿ ಶೇ.94 ರಷ್ಟು ಸಕ್ರಿಯ ಪ್ರಕರಣಗಳ ಸಂಖ್ಯೆಯು ಮೂರು ವಾರಗಳಲ್ಲಿ ಕಡಿಮೆಯಾಗಿದೆ. ತಿರುವನಂತಪುರಂನಲ್ಲಿ ಕೂಡ ಜಾರಿಯಲ್ಲಿದೆ.

ಇದಷ್ಟೇ ಅಲ್ಲದೆ, ಅಂತರ್‌ ಜಿಲ್ಲೆ ಮತ್ತು ಅಂತರಾಜ್ಯಗಳಿಗೆ ಜನರ ಪ್ರಯಾಣವನ್ನು ನಿರ್ಬಂಧಿಸುವುದರ ಬಗ್ಗೆಯೂ ಯೋಚಿಸಿ, ಅಂತರರಾಜ್ಯ ಸಾರಿಗೆಯನ್ನು ನಿಲ್ಲಿಸಿ ಎಂದು ತಜ್ಞರು ಸರಕಾರಕ್ಕೆ ಸೂಚಿಸಿದ್ದಾರೆ.

ಈಗಾಗಲೇ ಕೇರಳದಲ್ಲಿ ಯಶಸ್ವಿಯಾಗಿರುವ ತ್ರಿವಳಿ ಲಾಕ್‌ಡೌನ್‌ ಮಾದರಿಯು ಕರ್ನಾಟಕದಲ್ಲಿಯೂ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಪ್ರಯತ್ನಿಸಬಹುದು ಎಂದು ಹೇಳಲಾಗಿದ್ದು. ವಿಶೇಷವಾಗಿ ಬೆಂಗಳೂರಿಗೆ ಮತ್ತು ಇತರ ಹಾಟ್‌ಸ್ಪಾಟ್‌ ಪ್ರದೇಶಗಳಿಗೆ ಉಪಯುಕ್ತವಾಗಲಿದೆ ಎಂದು ಕಾರ್ಯಾಚರಣೆಗಳ ನೋಡಲ್ ಅಧಿಕಾರಿ ಹೇಳಿದ್ದಾರೆ.

ಏನಿದು ತ್ರಿವಳಿ ಲಾಕ್‌ಡೌನ್‌:

ತ್ರಿವಳಿ ಲಾಕ್‌ಡೌನ್‌ ಅನ್ನು ಮೂರು ಹಂತಗಳಲ್ಲಿ ವಿಂಗಡಿಸಿ, ಜಾರಿಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ, ಕಂಟೈನ್‌ಮೆಂಟ್‌ ಝೋನ್‌ ಪ್ರದೇಶವನ್ನು ಗುರುತಿಸಿ. ಎಲ್ಲ ರಸ್ತೆಗಳನ್ನು ಬಂದ್‌ ಮಾಡಿ, ಪ್ರವೇಶ ಮತ್ತು ನಿರ್ಗಮನಕ್ಕಾಗಿ ಒಂದನ್ನು ಬಿಡಬೇಕು. ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಬೇಕಾಗಿದ್ದು. ಖಾಸಗಿ ವಾಹನಗಳಿಗೆ ತುರ್ತು ಸಂದರ್ಭಗಳಲ್ಲಿ ಮಾತ್ರ ಅನುಮತಿಸಬೇಕು.
ಎರಡನೇ ಹಂತದಲ್ಲಿ ಸೋಂಕಿತ ವ್ಯಕ್ತಿಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳು ವಾಸಿಸುವ ಕಂಟೈನ್ಮೆಂಟ್‌ ಝೋನ್‌ಗಳಲ್ಲಿ ಸಂಪೂರ್ಣ ನಿರ್ಬಂಧ ವಿಧಿಸಬೇಕು.
ಮೂರನೇ ಹಂತದಲ್ಲಿ ವೈರಸ್ ಹರಡುವ ಅಪಾಯವನ್ನು ಹೊಂದಿರುವ ಸೋಂಕಿತ ವ್ಯಕ್ತಿಗಳ ಕುಟುಂಬ ಸದಸ್ಯರು ಮನೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights