ಸಾರ್ವಜನಿಕರಿಗೆ ನೋ ಎಂಟ್ರಿ ಎಂದ ಪೊಲೀಸ್‌ ಠಾಣೆ: ಎಲ್ಲೆಲ್ಲಿ ಈ (ಅ)ವ್ಯವಸ್ಥೆ?

ರಾಜ್ಯಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಪೊಲೀಸರನ್ನೂ ಬೆಂಬಿಡದೆ ಕಾಡುತ್ತಿದೆ. ಇದರಿಂದ ಬಸವಳಿದಿರುವ ಪೊಲೀಸರು ಸಾರ್ವಜನಿಕರಿಂದಲೇ ದೂರವಿರಲು ನಿರ್ಧರಿಸಿದ್ದಾರೆ.  ಇದಕ್ಕಾಗಿ ಪೊಲೀಸ್‌ ಠಾಣೆಯ ಹೊರಭಾಗದಲ್ಲಿ ದೂರ ಸ್ವೀಕಾರ ಹಾಗೂ ಸ್ವೀಕೃತಿ ಪತ್ರ ವಿತರಣೆ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ.

ಪೊಲೀಸರು ಎಲ್ಲ ರೀತಿಯ ಜನರೊಂದಿಗೂ ವ್ಯವಹರಿಸಬೇಕಾಗುತ್ತದೆ. ದೂರು-ದುಮ್ಮಾನ ತೋಡಿಕೊಳ್ಳಲು ಠಾಣೆಗೆ ಬರುವವರನ್ನು ಹಾಗೆಯೇ ಕಳಿಸಲು ಸಾಧ್ಯವಿಲ್ಲ. ಠಾಣೆಗೆ ಬರುವವರೆಲ್ಲರ ಆರೋಗ್ಯ ತಪಾಸಣೆ ನಡೆಸಿ, ಶಂಕಿತರನ್ನು ಬರಿಗೈಲಿ ಕಳಿಸುವುದೂ ಸಾಧುವಲ್ಲ. ಆದ್ದರಿಂದ, ಠಾಣೆಗೆ ಬರುವ ಎಲ್ಲರ ಕೆಲಸವನ್ನೂ ಮಾಡಿಕೊಡಬೇಕು. ಇದರಿಂದ ಪೊಲೀಸರ ಆರೋಗ್ಯಕ್ಕೂ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಠಾಣೆಯ ಹೊರಭಾಗದಲ್ಲಿ ದೂರು ಸ್ವೀಕಾರ ಹಾಗೂ ಸ್ವೀಕೃತಿ ಪತ್ರ ವಿತರಣೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಸಾಮಾಜಿಕ ಅಂತರವನ್ನೂ ಕಾಪಾಡಿಕೊಳ್ಳಲಾಗುತ್ತಿದೆ.

ರಾಮನಗರ ಜಿಲ್ಲೆಯ ಕುದೂರು, ಮಾಗಡಿ, ತಾವರೆಕೆರೆ, ಚನ್ನಪಟ್ಟಣ ಹಾಗೂ ಕನಕಪುರದ ಠಾಣೆಗಳಲ್ಲಿ ಈಗಾಗಲೇ ಠಾಣೆಯ ಹೊರಗಡೆ ದೂರು ಸ್ವೀಕೃತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ ಠಾಣೆಗೆ ಭೇಟಿ ನೀಡುವವರು ಮಾಸ್ಕ್‌, ಸ್ಯಾನಿಟೈಸರ್‌ ಹಾಗೂ ಸಾಮಾಜಿಕ ಅಂತರ ಪಾಲಿಸುವುದನ್ನು ಕಡ್ಡಾಯ ಮಾಡಲಾಗಿದೆ.

ಠಾಣೆಗೆ ಅನವಶ್ಯಕವಾಗಿ ಭೇಟಿ ನೀಡುವವರ ಸಂಖ್ಯೆಯನ್ನು ಕಡಿತಗೊಳಿಸಲಾಗಿದ್ದು, ಅವಶ್ಯ ಕೆಲಸವಿದ್ದರೆ ಮಾತ್ರ ಠಾಣೆಗೆ ಬರುವಂತೆ ತಿಳಿಸಲಾಗಿದೆ. ಸುಖಾ ಸುಮ್ಮನೆ ಠಾಣೆಯ ಆವರಣದಲ್ಲಿ ಓಡಾಡುವವರಿಗೆ ಕಡಿವಾಣ ಹಾಕಲಾಗಿದೆ. ಎಲ್ಲೆಡೆ ಸೋಂಕು ಹರಡಿ ಪೊಲೀಸರೇ ಕರ್ತವ್ಯ ನಿರ್ವಹಿಸಲು ಹೆದರುವ ವಾತಾವರಣ ಉಂಟಾದ ಕಾರಣ ಹಲವೆಡೆ ಈ ಸ್ವಯಂ ತೀರ್ಮಾನವನ್ನು ಎಲ್ಲರ ಹಿತದೃಷ್ಟಿಯಿಂದ ಕೈ ಗೊಳ್ಳಲಾಗಿದೆ.

ಕೊರೊನಾ ಸೋಂಕು ತಡೆಗಟ್ಟುವ ಹಾಗೂ ನಮ್ಮ ಆರಕ್ಷಕರ ರಕ್ಷಣೆಯ ಹಿತದೃಷ್ಟಿಯಿಂದ ಠಾಣೆಯ ಹೊರಗೇ ದೂರು ಸ್ವೀಕಾರ ಕೇಂದ್ರವನ್ನು ತೆರೆಯಲಾಗಿದೆ. ಠಾಣೆಗೆ ಭೇಟಿ ನೀಡುವವರು ಕಡ್ಡಾಯವಾಗಿ ಮಾಸ್ಕ್‌ ಧರಿಸಿ, ಸ್ಯಾನಿಟೈಸರ್‌ ಬಳಸಬೇಕು. ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂದು ಕುದೂರು ಎಸ್‌ಐ ಮಂಜುನಾಥ್‌ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights