FACT CHECK | ಮುಸ್ಲಿಂ ವೃದ್ದನ ಮೇಲೆ ಹಲ್ಲೆ ಮಾಡಲಾಗುತ್ತಿದೆ ಎಂಬ ವೈರಲ್ ವಿಡಿಯೋ ಭಾರತದ್ದಲ್ಲ! ಮತ್ತೆಲ್ಲಿಯದ್ದು?

ಮುಸ್ಲಿಂ ಹಿರಿಯ ನಾಗರಿಕರೊಬ್ಬರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ವೈರಲ್ ವಿಡಿಯೋದಲ್ಲಿ ಹಿರಿಯ ವ್ಯಕ್ತಿಯ ಕನ್ನಡಕವನ್ನು ಕಿತ್ತು ಬಿಸಾಕಿ, ಆತನ ದಾಡಿ ಎಳೆದು, ಟೋಪಿಯನ್ನು ಎಸೆಯುವುದನ್ನು ನೋಡಬಹುದು. ಕನ್ನಡಕವನ್ನು ತೆಗೆದುಕೊಳ್ಳಲು, ಮುದುಕ ಕೆಳಗೆ ಬಾಗಿದಾಗ ಬೆನ್ನಿಗೂ ಹೊಡೆಯುವುದನ್ನು ನೋಡಬಹುದು. ಈ ಘಟನೆ ಭಾರತದಲ್ಲಿ ನಡೆದಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಹಾಗಿದ್ದರೆ ಈ ಘಟನೆ ಭಾರತದಲ್ಲಿ ನಡೆದಿದೆಯೇ? ನಡೆದಿದ್ದರೆ ಯಾವ ಪ್ರದೇಶದಲ್ಲಿ ನಡೆದಿದೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 9 ಸೆಪ್ಟಂಬರ್‌ 2024ರಂದು ವಾಯ್ಸ್‌ 7 ನ್ಯೂಸ್‌ ಎಂಬ ಸುದ್ದಿ ತಾಣದಲ್ಲಿ ಪ್ರಕಟವಾದ ವರದಿಯೊಂದು ಲಭ್ಯವಾಗಿದೆ. ಮಾಜಿ ಸ್ವಾತಂತ್ರ್ಯ ಹೋರಾಟಗಾರನ ಮೇಲೆ ಹಲ್ಲೆ; ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಎಂಬ ಶೀರ್ಷಿಕೆಯೊಂದಿಗೆ ವರದಿಯನ್ನು ಹಂಚಿಕೊಳ್ಳಲಾಗಿದೆ.

ವರದಿಯ ಪ್ರಕಾರ, ಜಿಲ್ಲಾ ಮಾಜಿ ಸ್ವಾತಂತ್ರ್ಯ ಹೋರಾಟಗಾರ ಅಬ್ದುರ್ ರಶೀದ್ ಅವರ ಮೇಲೆ ಬರ್ಗುಣ ಜಿಲ್ಲಾಧಿಕಾರಿ ಕಚೇರಿ ಎದುರು ಇಫ್ತಿಕಾರ್ ಆಲಂ ಶಾನ್ ಮೊಲ್ಲಾ ಹಲ್ಲೆ ನಡೆಸುತ್ತಿರುವುದು ಕಂಡು ಬಂದಿದೆ. ಈ ಘಟನೆಯನ್ನು ವೈರಲ್ ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ ಎಂದಿದೆ.

ಮಾಜಿ ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರ ಕಮಾಂಡರ್ ಅಬ್ದುರ್ ರಶೀದ್ (ಕಲಾ ರಶೀದ್) ಮೇಲೆ ಇಫ್ತಿಕಾರ್ ಆಲಂ ಶಾನ್ ಮೊಲ್ಲಾ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾನುವಾರ (ಸೆಪ್ಟೆಂಬರ್ 8) ಸಾಮಾಜಿಕ ಮಾಧ್ಯಮಗಳಲ್ಲಿ ಈ ದೃಶ್ಯಾವಳಿಗಳು ಪ್ರಸರವಾಗುತ್ತಿದ್ದಂತೆ ಪ್ರಮುಖ ಚರ್ಚೆಯ ವಿಷಯವಾಗಿದೆ.

ಮಾಜಿ ಬಿಎನ್‌ಪಿ ಜಿಲ್ಲಾ ಸಂಚಾಲಕ ಮಹಬೂಬುಲ್ ಆಲಂ ಫರೂಕ್ ಮೊಲ್ಲಾ ಅವರ ಪುತ್ರ ಶಾನ್ ಮೊಲ್ಲಾ, ಬರ್ಗುನಾ ಜಿಲ್ಲಾಧಿಕಾರಿ (ಡಿಸಿ) ಕಚೇರಿಯ ಮುಂದೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರನ ಮೇಲೆ ಹಲ್ಲೆ ನಡೆಸುವುದನ್ನು ತೋರಿಸುತ್ತದೆ. 3-ನಿಮಿಷ ಮತ್ತು 42-ಸೆಕೆಂಡ್‌ಗಳ ಕ್ಲಿಪ್‌ನಲ್ಲಿ, ಶಾನ್ ಮೊಲ್ಲಾ “ಕಳ್ಳ” ಮತ್ತು “ದರೋಡೆಕೋರ” ಎಂದು ರಶೀದ್‌ನನ್ನು ನಿಂದಿಸುತ್ತಿರುವುದನ್ನು ಕಾಣಬಹುದು.

ಅವನು ಬಲವಂತವಾಗಿ ರಶೀದ್‌ನ ಕನ್ನಡಕವನ್ನು ತೆಗೆದು ನೆಲಕ್ಕೆ ಹೊಡೆಯುತ್ತಾನೆ. ರಶೀದ್ ತನ್ನ ಕನ್ನಡಕವನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಾಗ, ಶಾನ್ ಮೊಲ್ಲಾ ಅವನ ತಲೆ ಮತ್ತು ಕುತ್ತಿಗೆಗೆ ಕಪಾಳಮೋಕ್ಷ ಮಾಡುತ್ತಾನೆ. ಮಾಜಿ ಜಿಲ್ಲಾ ಕಮಾಂಡರ್ ಅಬ್ದುರ್ ರಶೀದ್, ”ವಯೋವೃದ್ಧನಾದ ನನಗೆ ಜಿಲ್ಲಾಧಿಕಾರಿ ಕಚೇರಿ ಎದುರು ಅವಮಾನ ಮಾಡಲಾಗಿದೆ, ನ್ಯಾಯಕ್ಕಾಗಿ ಅಲ್ಲಾಹನಿಗೆ ಬಿಟ್ಟಿದ್ದೇನೆ. ರಶೀದ್ ಕೇಂದ್ರ ಬಿಎನ್‌ಪಿ ಉಪಾಧ್ಯಕ್ಷ ಅಲ್ಹಾಜ್ ನೂರುಲ್ ಇಸ್ಲಾಂ ಮೋನಿ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಶಾನ್ ಮೊಲ್ಲಾ ಹೇಳಿದ್ದಾರೆ. ದಾಳಿಯ ವಿಡಿಯೋವನ್ನು ಇತರರು ತಮ್ಮ ಲಾಭಕ್ಕಾಗಿ ಬಳಸುತ್ತಿದ್ದಾರೆ ಎಂದು ಮೊಲ್ಲಾ ಆರೋಪಿಸಿದರು, ಯಾರೂ ಘಟನೆಯನ್ನು ಮೊದಲಿನಿಂದಲೂ ರೆಕಾರ್ಡ್ ಮಾಡಿಲ್ಲ ಎಂದು ಸೂಚಿಸಿದರು.

ಒಟ್ಟಾರೆಯಾಗಿ ಹೇಳುವುದಾದರೆ, ಮುಸ್ಲಿಂ ವೃದ್ದನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಭಾರತದ್ದಲ್ಲ. ಭಾರತಕ್ಕೂ ಈ ದೃಶ್ಯವಳಿಗೂ ಸಂಬಂಧವಿಲ್ಲ. ಈ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದ್ದು ಯಾವುದೇ ಕೋಮು ಆಯಾಮವಿಲ್ಲ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪಫಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರು ಬುರ್ಖಾ ಧರಿಸಿಲ್ಲ ಎಂದು ನಡು ರಸ್ತೆಯಲ್ಲಿ ಹಲ್ಲೆ ಎಂಬ ವಿಡಿಯೋದ ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights