ತಮಿಳುನಾಡು ಪೊಲೀಸ್‌ ಲಾಕಪ್‌ ಡೆತ್‌ ಪ್ರಕರಣ ಸಿಬಿಐ ತನಿಖೆಗೆ!

ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಪೊಲೀಸರಿಂದ ಚಿತ್ರಹಿಂಸೆಗೊಳಗಾಗಿ ಸಾವಿಗೀಡಾದರು ಎಂದು ಆರೋಪಿಸಲಾದ ತಂದೆ-ಮಗ ಜೋಡಿ ಲಾಕಪ್ ಡೆತ್ ಪ್ರಕರಣವದ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಭಾನುವಾರ ತಿಳಿಸಿದ್ದಾರೆ.

ಈ ವಿಷಯದ ಬಗ್ಗೆ ವಿಚಾರಣೆ ಕೈಗೆತ್ತಿಕೊಂಡಿರುವ ಮದ್ರಾಸ್ ಹೈಕೋರ್ಟ್‌ಗೆ ಸರ್ಕಾರದ ತೀರ್ಮಾನವನ್ನು ತಿಳಿಸಲಾಗುವುದು ಮತ್ತು ಪ್ರಕರಣವನ್ನು ಕೇಂದ್ರ ಸಂಸ್ಥೆಗೆ ವರ್ಗಾಯಿಸುವ ಮೊದಲು ಅದರ ಅನುಮೋದನೆಯನ್ನು ಪಡೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಲಾಕ್‌ಡೌನ್ ಉಲ್ಲಂಘಿಸಿದ ಆರೋಪದ ಮೇಲೆ ಪಿ ಜಯರಾಜ್ (59) ಮತ್ತು ಅವರ ಪುತ್ರ ಜೆ ಫೆನಿಕ್ಸ್ (31) ಅವರನ್ನು ಜೂನ್ 19 ರಂದು ಬಂಧಿಸಿ ಅವರನ್ನು ಕೋವಿಲ್ಪಟ್ಟಿ ಉಪ ಜೈಲಿಗೆ ಸ್ಥಳಾಂತರಿಸಲಾಗಿತ್ತು.

ಅವರು ಮೊಬೈಲ್ ಅಂಗಡಿಯ ಮಾಲೀಕರಾಗಿದ್ದರು.

ಜೂನ್ 22 ರಂದು, ಫೆನಿಕ್ಸ್ ಉಸಿರಾಟದ ಬಗ್ಗೆ ದೂರು ನೀಡಿದರು ಮತ್ತು ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸುವಲ್ಲಿ ವಿಫಲರಾದ ನಂತರ ರಾತ್ರಿ 9 ರ ಸುಮಾರಿಗೆ ನಿಧನರಾದರು. ಮರುದಿನ ಬೆಳಿಗ್ಗೆ, ಫೆನಿಕ್ಸ್ ತಂದೆ ಜಯರಾಜ್ ಕೂಡಾ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಅವರು ಅಲ್ಲಿ ಅವರು ನಿಧನರಾದರು ಎಂದು ಪೊಲೀಸ್ ವರದಿಯಲ್ಲಿ ತಿಳಿಸಲಾಗಿದೆ.

ಆದರೆ ಅವರ ಸಂಬಂಧಿಕರು ಅವರನ್ನು ಸಾಥಂಕುಲಂ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಗಳು ಥಳಿಸಿದ್ದರಿಂದ ಸಾವಿಗೀಡಾಗಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

“ಇದು ಡಬಲ್ ಕೊಲೆ! ನನ್ನ ತಂದೆ ಮತ್ತು ಸಹೋದರನನ್ನು ಪೊಲೀಸ್ ಕಸ್ಟಡಿಯಲ್ಲಿ ಕೊಲ್ಲಲಾಯಿತು. ನಾನು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ” ಮೃತ ಮೊಬೈಲ್ ಅಂಗಡಿ ಮಾಲೀಕರ ಮಗಳು ಪರ್ಸಿ ಆರೋಪಿಸಿದ್ದಾರೆ.

ಈ ಘಟನೆಯು ರಾಜ್ಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದ್ದು, ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಡಿಎಂಕೆ ಸೇರಿದಂತೆ ಇತರ ರಾಜಕೀಯ ಪಕ್ಷಗಳು ಎಐಎಡಿಎಂಕೆ ಸರ್ಕಾರವನ್ನು ತರಾಟೆಗೆ ಪಡೆದು, ಪೊಲೀಸ್ ಸಿಬ್ಬಂದಿಗೆ “ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು” ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights