FACT CHECK | ‘ಮುಸ್ಲಿಂ’ ಪದವನ್ನು ಬಳಸಿಯೇ ಇಲ್ಲ ಎಂದು ನ್ಯೂಸ್ 18 ಸಂದರ್ಶನದಲ್ಲಿ ಸುಳ್ಳು ಹೇಳಿದ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ನ್ಯೂಸ್ 18 ಚಾನೆಲ್‌ನ ರುಬಿಕಾ ಲಿಯಾಕತ್‌ರವರಿಗೆ ಸಂದರ್ಶನ ನೀಡಿದರು. ಆಗ ಸಂದರ್ಶಕಿ, “ನೀವು ವೇದಿಕೆಯಲ್ಲಿ ಮುಸ್ಲಿಮರನ್ನು ಉಲ್ಲೇಖಿಸಿದಾಗ, ‘ಒಳನುಸುಳುಕೋರರು’ ಮತ್ತು ‘ಹೆಚ್ಚು ಮಕ್ಕಳನ್ನು ಸಂತಾನೋತ್ಪತ್ತಿ ಮಾಡುವವರು’ ಎಂದು ಹೇಳುವ ಅಗತ್ಯ ಏನಿತ್ತು?” ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, “ನನಗೆ ಆಘಾತವಾಗಿದೆ. ಹೆಚ್ಚು ಮಕ್ಕಳಿರುವವರ ಬಗ್ಗೆ ಮಾತನಾಡುವಾಗ, ನಾನು ಮುಸ್ಲಿಮರ ಬಗ್ಗೆ ಹೇಳುತ್ತಿದ್ದೇನೆಂದು ನಿಮಗೆ ಯಾರು ಹೇಳಿದರು? ಬಡ ಕುಟುಂಬಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಬಡತನ ಇರುವಲ್ಲಿ, ಹೆಚ್ಚು ಮಕ್ಕಳಿರುತ್ತಾರೆ. ಅವರು ತಮ್ಮ ಸಾಮಾಜಿಕ ಪರಿಸ್ಥಿತಿಯನ್ನು ಲೆಕ್ಕಿಸದೆ ಮಕ್ಕಳನ್ನು ಹೊಂದುತ್ತಾರೆ. ಸರ್ಕಾರ ತಮ್ಮ ಮಕ್ಕಳ ಕಾಳಜಿವಹಿಸಬೇಕೆಂದು ಬಯಸುತ್ತಾರೆ” ಎಂದು ಹೇಳಿದ್ದಾರೆ.

ಮುಂದುವರಿದು ನಾನು  ಹಿಂದೂ-ಮುಸ್ಲಿಂ ಎಂಬ ಪದವನ್ನೇ ಬಳಸಿಲ್ಲ. ನಾನು ಸಬ್ಕಾ ಸಾಥ್, ಸಬ್ಕಾ ವಿಕಾಸ್ʼಅನ್ನು ನಂಬುತ್ತೇನೆ. ನಾನು ‘ಹಿಂದೂ-ಮುಸ್ಲಿಂ’ ಎಂಬ ರಾಜಕೀಯ ಮಾಡಿದ ದಿನ ನಾನು ಸಾರ್ವಜನಿಕ ಜೀವನದಲ್ಲಿ ಉಳಿಯಲು ಅರ್ಹನಾಗುವುದಿಲ್ಲ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹಾಗಿದ್ದರೆ ಮೋದಿ ಮುಸ್ಲಿಂ ಪದ ಬಳಸಿಲ್ಲವೇ? ಬಿಜೆಪಿ ಹಿಂದೂ ಮುಸ್ಲಿಂ ಭೇದ ಮಾಡಿಲ್ಲವೇ ಎಂಬುದನ್ನು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ಪ್ರಧಾನಿ ಮೋದಿ ಹಿಂದೂ-ಮುಸ್ಲಿಂ ಎಂಬ ಪದವನ್ನೇ ಬಳಸಿಲ್ಲ ಎಂದು ನ್ಯೂಸ್ 18 ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿರುವ ಹಿನ್ನಲೆಯಲ್ಲಿ ಹಿಂದೆ ಅವರೇ ಮಾಡಿದ ಚುನಾವಣಾ ಭಾಷಣ ಕುರಿತು ಸರ್ಚ್ ಮಾಡಿದಾಗ,   ಏಪ್ರಿಲ್ 21, 2024 ರಂದು ಪ್ರಧಾನಿ ಮೋದಿಯವರ ಯೂಟ್ಯೂಬ್ ಚಾನೆಲ್‌ನಲ್ಲಿ ರಾಜಸ್ಥಾನದ ಬನ್ಸ್ವಾರಾದಲ್ಲಿ ಅವರು ಮಾಡಿದ ಭಾಷಣವನ್ನು ಅಪ್‌ಲೋಡ್‌ ಮಾಡಲಾದ  ವಿಡಿಯೋ ಲಭ್ಯವಾಗಿದೆ.

ಆ ವಿಡಿಯೋದ 36.50 ಟೈಮ್ ಸ್ಟ್ಯಾಂಪ್‌ನಲ್ಲಿ ಮೋದಿಯವರು, “ಯುಪಿಎ ಸರ್ಕಾರವನ್ನು ನಡೆಸುತ್ತಿದ್ದಾಗ, ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಅವರು ಹೇಳಿದ್ದರು. ಇದರರ್ಥ, ಜನರ ಆಸ್ತಿಯನ್ನು ಸಂಗ್ರಹಿಸಿದ ನಂತರ ಅವರು ಅವುಗಳನ್ನು ಯಾರಿಗೆ ವಿತರಿಸಲು ಹೊರಟಿದ್ದಾರೆ? ಅವರು ಅವುಗಳನ್ನು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ವಿತರಿಸುತ್ತಾರೆ. ಅವರು ಅವುಗಳನ್ನು ನುಸುಳುಕೋರರಿಗೆ ಹಂಚುತ್ತಾರೆ” ಎಂದು ಮೋದಿ ಹೇಳಿದ್ದಾರೆ. ಇಲ್ಲಿ ಮನಮೋಹನ್ ಸಿಂಗ್ ಹೀಗೆ ಹೇಳಿದ್ದರು ಎಂದು ಉಲ್ಲೇಖಿಸಿ ಮುಸ್ಲಿಂ ಎಂಬ ಪದವನ್ನು ಮೋದಿ ಬಳಸಿದ್ದಾರೆ.

ಮುಂದುವರಿದು ಮೋದಿ ವಿಡಿಯೋದ 37.20 ಟೈಮ್ ಸ್ಟ್ಯಾಂಪ್‌ನಲ್ಲಿ “ಕಾಂಗ್ರೆಸ್ ಪ್ರಣಾಳಿಕೆ ಹೇಳುವುದು ಇದನ್ನೇ, ಅವರು ತಾಯಿ ಮತ್ತು ಮಗಳ ಚಿನ್ನದ ಸಮೀಕ್ಷೆಯನ್ನು ಮಾಡುತ್ತಾರೆ, ಅವರ ಬಗ್ಗೆ ಮಾಹಿತಿ ಪಡೆಯುತ್ತಾರೆ, ಮತ್ತು ನಂತರ ಈ ಆಸ್ತಿಯನ್ನು  ಅವರಿಗೆ ವಿತರಿಸುತ್ತಾರೆ – ಮನಮೋಹನ್ ಸಿಂಗ್ ಸರ್ಕಾರವು  ಮುಸ್ಲಿಮರು ಸಂಪನ್ಮೂಲಗಳ ಮೊದಲ ಹಕ್ಕು ಹೊಂದಿದ್ದಾರೆ ಎಂದು ಹೇಳಿದ್ದರು” ಎಂದು ಮೋದಿ ಮಾತನಾಡಿದ್ದು ಇಲ್ಲಿಯೂ ಸಹ ಮುಸ್ಲಿಂ ಎಂಬ ಪದ ಉಲ್ಲೇಖಿಸಿರುವುದು ಸ್ಪಷ್ಟವಾಗಿದೆ.

ಮೋದಿಯವರ ಭಾಷಣಗಳಲ್ಲಿ ಹಿಂದೂ-ಮುಸ್ಲಿಂ ಧ್ರುವೀಕರಣದ ನಿದರ್ಶನ ಇದೊಂದೇ ಅಲ್ಲ. ಚುನಾವಣೆಗೆ ಮುನ್ನ ಬಾರ್ಮರ್ ಮತ್ತು ಅಜ್ಮೀರ್‌ನಲ್ಲಿ ಮಾಡಿದ ಭಾಷಣಗಳಲ್ಲಿ ಮೋದಿ ಅವರು ಕಾಂಗ್ರೆಸ್‌ನ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್‌ನಂತೆಯೇ ಇದೆ ಎಂದು ಉಲ್ಲೇಖಿಸಿದರು.

ಮೋದಿಯವರು ಭಾಷಣಗಳಿಂದ ಪ್ರೇರಿತವಾಗ ಬಿಜೆಪಿಯು ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ, “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಅದು ಮುಸ್ಲಿಮೇತರರಿಂದ ಎಲ್ಲಾ ಹಣ ಮತ್ತು ಸಂಪತ್ತನ್ನು ಕಸಿದುಕೊಳ್ಳುತ್ತದೆ ಮತ್ತು ಅವರ ನೆಚ್ಚಿನ ಸಮುದಾಯವಾದ ಮುಸ್ಲಿಮರಿಗೆ ಹಂಚುತ್ತದೆ.” ಎಂಬ ವಿಡಿಯೋ ಪ್ರಕಟಿಸಿತ್ತು. ಅದು ದ್ವೇಷದಿಂದ ಕೂಡಿದೆ ಎಂದು ಡಿಲೀಟ್ ಮಾಡಲಾಯಿತು. ಅದೇ ರೀತಿ ಕರ್ನಾಟಕದಲ್ಲಿ ಕಾಂಗ್ರೆಸ್ ಎಸ್‌ಸಿ, ಎಸ್‌ಟಿಗಳ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಹಂಚುತ್ತಿದೆ ಎಂಬ ವಿಡಿಯೋವನ್ನು ಕರ್ನಾಟಕ ಬಿಜೆಪಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟಿಸಿತ್ತು. ಚುನಾವಣಾ ಆಯೋಗವು ನೀತಿ ಸಂಹಿತೆ ಉಲ್ಲಂಘನೆಯ ಕಾರಣದಿಂದ ಅದನ್ನು ತೆಗೆಸಿತು. ಈ ಎರಡು ಉದಾಹರಣೆಗಳು ಬಿಜೆಪಿಯು ಮುಸ್ಲಿಮರನ್ನು ದ್ವೇಷಿಸಿ, ಕೀಳಾಗಿ ಕಾಣುತ್ತದೆ ಎಂಬುದಕ್ಕೆ ಉದಾಹರಣೆಯಾಗಿವೆ.

ಒಟ್ಟಾರೆಯಾಗಿ ಹೇಳುವುದಾದರೆ ಮೋದಿಯವರು “ಹೆಚ್ಚು ಮಕ್ಕಳಿರುವವರ ಬಗ್ಗೆ ಮಾತನಾಡುವಾಗ, ನಾನು ಮುಸ್ಲಿಮರ ಬಗ್ಗೆ ಹೇಳಿಲ್ಲ ಎಂಬುದು ಸುಳ್ಳಾಗಿದೆ. ಅವರು ಉದ್ದೇಶಪೂರ್ವಕವಾಗಿ ಮುಸ್ಲಿಮರನ್ನು ಗುರಿಯಾಗಿಸಿ ನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹೆರುವವರು ಎಂದು ಉಲ್ಲೇಖಿಸಿದ್ದಾರೆ. ಇನ್ನು ಅವರು ಹಿಂದೂ ಮುಸ್ಲಿಂ ಎಂದು ಭೇದ ಮಾಡುವುದಿಲ್ಲ ಎಂಬ ಹೇಳಿಕೆಯೂ ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪ್ರಧಾನಿ ಮೋದಿ ಗುರುದ್ವಾರದಲ್ಲಿ ಭಕ್ತರಿಗೆ ಊಟವನ್ನು ಬಡಿಸಿದಂತೆ ನಟಿಸಿದ್ದಾರೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights