FACT CHECK | ತಂದೆ ಇಲ್ಲದ ಮಕ್ಕಳಿಗೆ 24 ಸಾವಿರ ಸ್ಕಾಲರ್‌ಶಿಪ್! ಇದು ನಿಜವೇ?

ವಿದ್ಯಾರ್ಥಿ ವೇತನ ( ಸ್ಕಾಲರ್‌ಶಿಪ್) ಕುರಿತಾದ ವಾಟ್ಸಾಪ್ ಸಂದೇಶ ಅಥವಾ ಪೇಸ್‌ಬುಕ್ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ. ಸಂದೇಶ ಈ ಕೆಳಗಿನಂತಿದೆ.

“ತಂದೆ ಇಲ್ಲದ ಮಕ್ಕಳ ಖಾತೆಗೆ ಒಂದು ವರ್ಷ 24,000 ರೂ.ಗಳ ಸ್ಕಾಲರ್ ಶಿಪ್ ಸೌಲಭ್ಯವಿದ್ದು, ಆದುದರಿಂದ ತಮಗೆ ಗೊತ್ತಿರುವ ಯಾರಾದರೂ ತಂದೆ ಇಲ್ಲದ ಮಗು ಇದ್ದಲ್ಲಿ ಅವರ ಪೋಷಕರಿಗೆ ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಿ. ಇದು ಆನ್ಲೈನ್ ಮೂಲಕ ಅಂದರೆ ಯಾವುದೇ ಸೈಬರ್ ಮೂಲಕ ಸಲ್ಲಿಕೆ ಇರುವುದಿಲ್ಲ. ಮಗುವಿಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸು ಇರಬೇಕು. ಅರ್ಜಿ ಫಾರಂನ್ನು ಖುದ್ದಾಗಿ ಡಿಸಿ ಕಛೇರಿಯಿಂದ ತಂದು ಬೇಕಾಗುವ ದಾಖಲೆಗಳನ್ನು ಇಟ್ಟು ಶಾಲೆ ಅಥವಾ ಕಾಲೇಜು ಮುಖ್ಯೋಪಾಧ್ಯಾಯ/ ಪ್ರಾಂಶುಪಾಲರ ಸಹಿ ಮತ್ತು ಸೀಲ್ ಮಾಡಿದ ಮೇಲೆ ಪುನಃ ಡಿಸಿ ಆಫೀಸಿಗೆ ಸಲ್ಲಿಸಬೇಕು. ನಂತರ ಅವರ ಸಿಬ್ಬಂದಿಗಳು ಮನೆ ಭೇಟಿ ನೀಡಿ ಪರಿಶೀಲನೆ ಮಾಡಿದ ಮೇಲೆ ಯೋಜನೆ ಪ್ರಾರಂಭವಾಗುತ್ತದೆ” ಎಂದು ಹಂಚಿಕೊಳ್ಳಲಾಗುತ್ತಿದೆ.

ಈ ವಾಟ್ಸಾಪ್‌ಸಂದೇಶದ ಸತ್ಯಾಸತ್ಯತೆಗಳನ್ನು ಪರಿಶೀಲಿಸುವಂತೆ ಏನ್‌ಸುದ್ದಿ.ಕಾಂಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿನಂತಿಸಿದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :  

ಸಾಮಾಜಿಕ ಮಾದ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀವರ್ಡ್ಗಳನ್ನು ಬಳಸಿ ಇಂಟರ್‌ನೆಟ್‌ ಸರ್ಚ್ ಮಾಡಿದಾಗ, ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಕರ್ನಾಟಕ ಸರ್ಕಾರದ ವಿವಿದ ಇಲಾಖೆಯ ವೆಬ್‌ಸೈಟ್‌ಗಳನ್ನು ಪರಿಶೀಲಿಸಿದಾಗಲೂ ಮಾಹಿತಿ ಲಭ್ಯವಾಗಿಲ್ಲ.

ತಂದೆ ಇಲ್ಲದ ಮಗುವಿಗೆ ವಾರ್ಷಿಕ 24 ಸಾವಿರ ಸ್ಕಾಲರ್‌ಶಿಪ್ ಸಿಗುತ್ತದೆ ಎಂಬ ಸಂದೇಶದ ವಾಸ್ತವವನ್ನು ತಿಳಿಯಲು ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಸ್ಪಷ್ಟ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ಮಾಹಿತಿ ಪ್ರಕಾರ, “ಕೇಂದ್ರ ಸರ್ಕಾರದ ಶೇ.60 ಅನುದಾನ ಮತ್ತು ರಾಜ್ಯ ಸರ್ಕಾರದ ಶೇ. 40 ಅನುದಾನೊಂದಿಗೆ ಪ್ರಾಯೋಜಕತ್ವ ಯೋಜನೆಯೊಂದು ಜಾರಿಯಲ್ಲಿದೆ. ಈ ಯೋಜನೆಯಡಿ ಅನಾಥ ಮಕ್ಕಳು, ಪೋಷಕರು ಜೈಲಿನಲ್ಲಿರುವ ಮಕ್ಕಳು, ಲೈಂಗಿಕ ಕಾರ್ಯಕರ್ತೆಯರು, ದೇವದಾಸಿ ಪದ್ದತಿಗೆ ಒಳಗಾಗಿರುವವ ಮಕ್ಕಳು, ಏಕ ಪೋಷಕ (ತಂದೆ ಅಥವಾ ತಾಯಿ) ಮಕ್ಕಳು, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಮಕ್ಕಳು, ಭಿಕ್ಷುಕರ ಮಕ್ಕಳು, ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಮಕ್ಕಳು ಮತ್ತು ಶಿರೂರು ದುರಂತದಂತಹ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವವರ ಮಕ್ಕಳಿಗೆ ಧನ ಸಹಾಯ ನೀಡಲಾಗುತ್ತದೆ. ಮೇಲೆ ಉಲ್ಲೇಖಿಸಿದ ಮಕ್ಕಳ ಶಿಕ್ಷಣ, ಆರೋಗ್ಯ ಸುಧಾರಣೆ ಮತ್ತು ಅವರನ್ನು ಬಾಲ ಕಾರ್ಮಿಕ ಪದ್ದತಿಯಿಂದ ತಡೆಯುವ ಉದ್ದೇಶದಿಂದ ಈ ಪ್ರಾಯೋಜಕತ್ವ ಯೋಜನೆ ರೂಪಿಸಲಾಗಿದೆ.

ವಾರ್ಷಿಕ 24 ಸಾವಿರ ಸ್ಕಾಲರ್‌ ಶಿಪ್ ಸಿಗುತ್ತಿದೆ ಎಂದೂ ವೈರಲ್ ಸಂದೇಶದಲ್ಲಿದೆ. ಆದರೆ, ಅದು ತಪ್ಪು ಮಾಹಿತಿ, ಅಧಿಕಾರಿಗಳು ಹೇಳಿರುವಂತೆ ಮಾಸಿಕ 4 ಸಾವಿರ ರೂಪಾಯಿಯಂತೆ ವಾರ್ಷಿಕ 48 ಸಾವಿರ ರೂಪಾಯಿ ಧನ ಸಹಾಯ ಸಿಗುತ್ತದೆ. 18 ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮಕ್ಕಳು ಈ ಯೋಜನೆಗೆ ಅರ್ಹರು. ಅರ್ಹರು ಅವರಾಗಿಯೇ ಅರ್ಜಿ ಸಲ್ಲಿಸಬಹುದು ಅಥವಾ ಸಿಬ್ಬಂದಿಯ ಮೂಲಕ ಇಲಾಖೆಯೇ ಅರ್ಹರನ್ನು ಪತ್ತೆ ಮಾಡುತ್ತದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | CPI(M) ನಾಯಕ ಸೀತಾರಾಮ್ ಯೆಚೂರಿ ಕ್ರಿಶ್ಚಿಯನ್ನರೇ? ಈ ಸ್ಟೋರಿ ಓದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights