FACT CHECK | ಮತಾಂತರ ಮಾಡುವ ಉದ್ದೇಶದಿಂದ ಹಿಂದೂ ವಿದ್ಯಾರ್ಥಿಗಳಿಗೆ ನಮಾಜ್‌ ಮಾಡಿಸಿದ್ರಾ ಮುಸ್ಲಿಮರು?

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಪ್ರಸಾರವಾಗುತ್ತಿದ್ದು, ವ್ಯಕ್ತಿಯೋಬ್ಬ ಬಾಗಿಲು ತೆಗೆದು ಶಾಲೆಯ ಕೊಠಡಿಯೊಳಗೆ ಪ್ರವೇಶಿಸಿದಾಗ, ಕೆಲ ಬುರ್ಖಾ ಧರಿಸಿರುವ ವಿದ್ಯಾರ್ಥಿನಿಯರು ನಮಾಜ್ ಮಾಡುತ್ತಿರುವ ದೃಶ್ಯಗಳು ಪ್ರಸಾರವಾಗುತ್ತಿದೆ. ಇದು ತೆಲಂಗಾಣದಲ್ಲಿ ನಡೆದ ಘಟನೆ ಎನ್ನಲಾಗುತ್ತಿದ್ದು, ಇಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಂದೂ ವಿದ್ಯಾರ್ಥಿನಿಯರಿಗೆ ನಮಾಜ್ ಮಾಡಲು ಕಲಿಸಿ ಮತಾಂತರ ಮಾಡುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಶ್ರೀ ರಾಮ ಸೇನೆ ಉಡುಪಿ ಎಂಬ ಫೇಸ್​ಬುಕ್ ಖಾತೆಯಲ್ಲಿ ಸೆಪ್ಟೆಂಬರ್ 12, 2024 ರಂದು ಈ ವೀಡಿಯೊ ಅಪ್ಲೋಡ್ ಮಾಡಲಾಗಿದೆ. ಜೊತೆಗೆ ‘ತೆಲಂಗಾಣದಲ್ಲಿ ಶಾಲೆಯಲ್ಲಿ ಇಸ್ಲಾಂ ಮತಾಂತರ ಯತ್ನ. ಮುಚ್ಚಿದ ಬಾಗಿಲುಗಳ ಹಿಂದೆ, ಕ್ಲಾಸ್ ನಂತರ ಹಿಂದೂ ಹುಡುಗಿಯರಿಗೆ ಪ್ರಾರ್ಥನೆ ಕಲಿಸಿದ ಮುಸ್ಲಿಂ ಹುಡುಗಿಯರ ಬಂಧನ. ವಿದ್ಯಾರ್ಥಿ_ಜಿಹಾದ್’ ಎಂದು ಬರೆದುಕೊಂಡಿದ್ದಾರೆ.

ಹಾಗೆಯೆ ತಾತವಮ್‌ ಅಸಿ  ಎಂಬ ಎಕ್ಸ್ ಖಾತೆಯಲ್ಲಿ ಇಂತಹದ್ದೇ ವಿಡಿಯೋವನ್ನು ಹಂಚಿಕೊಂಡಿದ್ದು, ‘ತೆಲಂಗಾಣದ ಶಾಲೆಯೊಂದರಲ್ಲಿ ಇಸ್ಲಾಮಿಕ್ ಮತಾಂತರದ ಆಚರಣೆಗಳು. ಮುಸ್ಲಿಂ ಹುಡುಗಿಯರು ಹಿಂದೂ ಹುಡುಗಿಯರಿಗೆ ತರಗತಿಗಳ ನಂತರ ಮುಚ್ಚಿದ ಬಾಗಿಲುಗಳ ಹಿಂದೆ ಪ್ರಾರ್ಥನೆ ಮಾಡಲು ಕಲಿಸುತ್ತಿರುವುದು ಕಂಡುಬಂದಿದೆ.’ ಎಂದು ಶೀರ್ಷಿಕೆ ನೀಡಿದ್ದಾರೆ. ಹಾಗಿದ್ದೆರ ವಿಡಿಯೋದಲ್ಲಿ ಮಾಡಲಾದ ಪ್ರತಿಪಾದನೆಯಂತೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಂದೂ ವಿದ್ಯಾರ್ಥಿನಿಯರಿಗೆ ನಮಾಜ್ ಕಲಿಸಿಕೊಡುತ್ತಿದ್ದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 27 ಆಗಸ್ಟ್‌, 2024 ರಂದು ಸಿಯಸತ್ ವೆಬ್ಸೈಟ್​ನಲ್ಲಿ ಪ್ರಕಟವಾದ ವರದಿಯೊಂದು ಲಭ್ಯವಾಗಿದೆ. ‘ಶಾಲೆಯಲ್ಲಿ ನಮಾಜ್ ಮಾಡಿದ್ದಕ್ಕೆ ತೆಲಂಗಾಣ ಹುಡುಗಿಯರನ್ನು ಬಜರಂಗದಳದವರು ಥಳಿಸಿದ್ದಾರೆ: ಅಮ್ಜೆದ್ ಉಲ್ಲಾ’ ಎಂದು ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟಿಸಿದೆ.

ವರದಿಯ ಪ್ರಕಾರ, ವನಪರ್ತಿಯ ಚಾಣಕ್ಯ ಪ್ರೌಢಶಾಲೆಯಲ್ಲಿ ಮುಸ್ಲಿಂ ಬಾಲಕಿಯರು ನಮಾಜ್ ಸಲ್ಲಿಸುತ್ತಿರುವಾಗ ಬಜರಂಗದಳದ ಸದಸ್ಯರು ಬಲವಂತವಾಗಿ ಶಾಲೆಯ ಆವರಣಕ್ಕೆ ನುಗ್ಗಿ ಮುಸ್ಲಿಂ ಹುಡುಗಿಯರ ಗುಂಪನ್ನು ಬೆದರಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಹುಡುಗಿಯರು ಪ್ರಾರ್ಥನೆ ಮಾಡಲು ಶಾಲೆಯಿಂದ ಅನುಮತಿ ಪಡೆದಿದ್ದರೂ ಸಹ ಕಾರ್ಯಕರ್ತರು ಆವರಣಕ್ಕೆ ಪ್ರವೇಶಿಸಿ ವಿದ್ಯಾರ್ಥಿಗಳನ್ನು ಬೆದರಿಸಿದ್ದಾರೆ. ಇಂತಹ ಆಚರಣೆಗಳ ಬಗ್ಗೆ ಕಾರ್ಯಕರ್ತರು ಶಾಲಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.

ಘಟನೆಗೆ ಸಂಬಂಧಿಸಿದಂತೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಮಜ್ಲಿಸ್ ಬಚಾವೋ ತೆಹ್ರೀಕ್ (ಎಂಬಿಟಿ) ಪಕ್ಷವು ಮಧ್ಯಪ್ರವೇಶಿಸಿದ್ದು, ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ಪತ್ರ ಬರೆದಿದೆ. ಪಕ್ಷವು ವನಪರ್ತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಸಮಗ್ರ ತನಿಖೆಗೆ ವಿನಂತಿಸಿದೆ, ಭಾಗಿಯಾದವರನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಿಯಸತ್ ಯೂಟ್ಯೂಬ್ ಚಾನೆಲ್​ನಲ್ಲೂ ಈ ವೀಡಿಯೊ ಅಪ್ಲೋಡ್ ಮಾಡಲಾಗಿದೆ.

ಈ ಘಟನೆ ಬಗ್ಗೆ ವರದಿ ಮಾಡಿದೆ. ‘ತೆಲಂಗಾಣದ ವನಪರ್ತಿ ಪಟ್ಟಣದ ಚಾಣಕ್ಯ ಪ್ರೌಢಶಾಲೆಯಲ್ಲಿ ಶಾಲಾ ಆವರಣದಲ್ಲಿ ನಮಾಜ್ ಮಾಡುತ್ತಿದ್ದ ಕೆಲವು ಮುಸ್ಲಿಂ ಬಾಲಕಿಯರ ಮೇಲೆ ಬಜರಂಗದಳ ಸದಸ್ಯರು ಹಲ್ಲೆ ನಡೆಸಿದ್ದಾರೆ ಎಂದು ABP Live  ಮಾಡಿರುವ ವರದಿಯೊಂದು ಲಭ್ಯವಾಗಿದೆ. ಈ ಘಟನೆಯನ್ನು ಬಹಿರಂಗಪಡಿಸಿದ ಮಜ್ಲಿಸ್ ಬಚಾವೋ ತೆಹ್ರೀಕ್ (ಎಂಬಿಟಿ) ವಕ್ತಾರ ಅಮ್ಜೆದ್ ಉಲ್ಲಾ ಖಾನ್, ಭಾಗಿಯಾದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ’ ಎಂದು ಹೇಳಲಾಗಿದೆ.

ಈ ಕುರಿತು ಇನ್ನಷ್ಟು ಖಚಿತ ಮಾಹಿತಿಗಾಗಿ ನ್ಯೂಸ್‌ ಮೀಟರ್ ರ್ಫಯಾಕ್ಟ್‌ಚೆಕ್ ತಂಡ ವನಪರ್ತಿ ಟೌನ್ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಪಡೆದಿದೆ. ಈ ಘಟನೆ ಬಗ್ಗೆ ಮಾಹಿತಿ ನೀಡಿದ ಅವರು, ‘ಶಾಲೆಯ ಒಳಗೆ ನಮಾಜ್ ಮಾಡಿದ್ದು ಮುಸ್ಲಿಂ ವಿದ್ಯಾರ್ಥಿನಿಯರು. ಅವರು ಶಾಲೆಯ ಆಡಳಿತ ಮಂಡಳಿಯಿಂದ ಅನುಮತಿ ಪಡೆದುಕೊಂಡಿದ್ದರು. ಇದರಲ್ಲಿ ಯಾವುದೇ ಹಿಂದೂ ವಿದ್ಯಾರ್ಥಿನಿಯರು ಭಾಗವಹಿಸಿಲ್ಲ ಮತ್ತು ಮತಾಂತರ ಮಾಡಿಸುವಂತಹ ಯಾವುದೇ ಘಟನೆ ನಡೆದಿಲ್ಲ’ ಎಂದು ಹೇಳಿದ್ದಾರೆ.

ನಮಾಜ್ ಮಾಡುತ್ತಿದ್ದ ಕೆಲವು ಮುಸ್ಲಿಂ ಬಾಲಕಿಯರ ಮೇಲೆ ಬಜರಂಗದಳ ಸದಸ್ಯರು ಹಲ್ಲೆ ನಡೆಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಇದೇ ವೀಡಿಯೊವನ್ನು ಮಾಧ್ಯಮಗಳು ಪ್ರಸಾರ ಮಾಡಿರುವುದನ್ನು ನೀವು ಇಲ್ಲಿಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ತೆಲಂಗಾಣದ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಹಿಂದೂ ಹುಡುಗಿಯರ ಮತಾಂತರಕ್ಕೆ ಯತ್ನಿಸಿ, ನಮಾಜ್ ಮಾಡಲು ಕಲಿಸುತ್ತಿದ್ದಾರೆ ಎಂದು ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮುಸ್ಲಿಂ ವೃದ್ದನ ಮೇಲೆ ಹಲ್ಲೆ ಮಾಡಲಾಗುತ್ತಿದೆ ಎಂಬ ವೈರಲ್ ವಿಡಿಯೋ ಭಾರತದ್ದಲ್ಲ! ಮತ್ತೆಲ್ಲಿಯದ್ದು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights