ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಸ್ತಾಪ ನಿಜ ಎಂದು ಒಪ್ಪಿಕೊಂಡ ಸಚಿವ ಈಶ್ವರಪ್ಪ!

ರಾಜ್ಯದಲ್ಲಿ ನಾಯಕತ್ವ ಬದಲಾವಣೆಗಾಗಿ ಕೆಲವರು ಪ್ರಸ್ತಾಪವಿರುವುದು ನಿಜ. ಈ ಬಗ್ಗೆ ನಮ್ಮಲ್ಲಿ ಇನ್ನೂ ಗೊಂದಲವಿದೆ. ಹಾಗಾಗಿ ಅದನ್ನು ಸರಿಪಡಿಸುವುದಕ್ಕಾಗಿಯೇ ಅರುಣ್‌ ಸಿಂಗ್‌ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಒಪ್ಪಿಕೊಂಡಿದ್ದಾರೆ.

ಅರುಣ್ ಸಿಂಗ್ ಬಂದ ಬಳಿಕ ಏನು ಬೇಕಾದರೂ ಆಗಬಹುದು, ರಾಷ್ಟ್ರೀಯ ನಾಯಕರು ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾಯಕತ್ವ ಬದಲಾವಣೆಯಾಗುತ್ತಾ, ಇಲ್ಲವಾ ಎಂಬುದರ ಬಗ್ಗೆ ನನಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.

ಅರುಣ್‌ ಸಿಂಗ್‌ ಅವರ ನೇತೃತ್ವದಲ್ಲಿ ಇಂದಿನ ಸಭೆ ನಡೆಯಲಿದೆ. ಸಭೆಯಲ್ಲಿ ಯಡಿಯೂರಪ್ಪ ಇರುತ್ತಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ನಾಳೆ ಎಲ್ಲರ ವೈಯಕ್ತಿಕ ಅಭಿಪ್ರಾಯಕ್ಕೆ ಅವಕಾಶವಿದೆ. ಎಲ್ಲರೂ ಮುಕ್ತವಾಗಿ ಅವರ ಅಭಿಪ್ರಾಯಗಳನ್ನು ಹೇಳಿದ ಬಳಿಕ, ನಿರ್ಧಾರ ಹೈಕಮಾಂಡ್‌ನದ್ದು ಎಂದು ಅವರು ಹೇಳಿದ್ದಾರೆ.

ಬಿಜೆಪಿಯಲ್ಲಿ ಗೊಂದಲ ಇರುವುದನ್ನು ನಾನು ಒಪ್ಪುತ್ತೇನೆ. 17 ಮಂದಿ ಕಾಂಗ್ರೆಸ್, ಜೆಡಿಎಸ್‌ನಿಂದ ಬಂದವರಿಂದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅವರಿಂದ ಗೊಂದಲ ಆಗಿದೆ ಎಂದು ನಾನು ಹೇಳಲ್ಲ, ರಾಜ್ಯದ ಜನ ಬಹುಮತ ನಮಗೆ ಕೊಡಲಿಲ್ಲ ಎಂದು ಅವರು ವಿವರಿಸಿದ್ದಾರೆ.

ಕೆಲವರು ಮುಖ್ಯಮಂತ್ರಿ ಬದಲಾವಣೆ ಬೇಕು ಎಂದು ಹೇಳಿದ್ದಾರೆ, ಕೆಲವರು ದೆಹಲಿಗೆ ಹೋಗಿ ಬಂದಿದ್ದಾರೆ, ನಾನು ಬಹಿರಂಗ ಹೇಳಿಕೆ ಕೊಡಬೇಡಿ ಎಂದು ಹೇಳಿದ್ದೆ, ನಾಲ್ಕು ಗೋಡೆ ಮಧ್ಯೆ ಚರ್ಚೆಯಾಗಬೇಕು ಎಂದು ಕೂಡ ಹೇಳಿದ್ದೆ. ಆದರೆ ಅದು ಬಿಟ್ಟು ಹೊರಗಡೆ ಚರ್ಚೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಳೆ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಸಂಸದರನ್ನು ಒಳಗೊಂಡ ಸಭೆ ಕರೆದಿದ್ದಾರೆ. ಬಳಿಕ ನಾಡಿದ್ದು ಕೋರ್ ಕಮಿಟಿ ಸಭೆ ಇದೆ. ಕೋರ್ ಕಮಿಟಿ ಸಭೆಯಲ್ಲಿ ಎಲ್ಲವೂ ಚರ್ಚೆಯಾಗಲಿದೆ. ನಂತರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಚೆಸ್‌ ಚಾಂಪಿಯನ್‌ ವಿಶ್ವನಾಥ್‌ ಆನಂದ್‌ಗೆ ಮೋಸ ಮಾಡಿದ್ರಾ ನಟ ಸುದೀಪ್‌? ಚೆಸ್‌ ಕೋಚ್‌ ಹೇಳಿದ್ದೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights