ಸುಗಂಧಿ ಬೇರು-5: ಹಂಗಿನರಮನೆಯ ಹೊರಗೆ: ಒಳಿತು ಮತ್ತು ಕೇಡಿನ ನಡುವೆ ಸಂಘರ್ಷ

‘ಕಿಟಕಿಯ ಹೊರಗೆ ನೋಡಿದೆ. ಬೆಳಗಿನ ಶುಕ್ರ ಮೇಲೇರುತ್ತಿದ್ದ. ಪ್ರತಿದಿನ ಅವನು ನನ್ನಂತಹ ಎಷ್ಟು ಬಂಧಿಗಳನ್ನು ನೋಡುವನೋ. ನಾಲ್ಕು ಗೋಡೆಗಳ ಬಂಧನದಿಂದ ಹೊರಗೆ ಹೋದರೆ, ಬಯಲಿನಲ್ಲಿ ಹತ್ತು ದಿಕ್ಕುಗಳ ಬಂಧನ ಕಾದಿದೆ. ಭೂಮಿಯ ಮೇಲೆ ಹುಟ್ಟಿದ ಯಾರಿಗೂ ಈ ಹಂಗಿನರಮನೆಯ ಬಂಧನ ತಪ್ಪಿದ್ದಲ್ಲ. ಈ ಹಂಗಿನರಮನೆಯ ಹೊರಗೆ ಕ್ಷಿತಿಜದಾಚೆ ಏನಿದೆ ಎಂದು ನೋಡುವ ಹಂಬಲ, ನೋಡಲಾಗದಿದ್ದರೂ ನೋಡಿದವರನ್ನಾದರೂ ಕೇಳಬೇಕೆನ್ನುವ ಆಸೆ. ಈ ಭೂಮಿಯ ಗೋರಿಯ ಮೇಲೆ ಹೊದೆಸಿದ ಆಕಾಶದ ಪರದೆಯನ್ನು ಹರಿದು ಭೂಮವಾಗಿ ಬೆಳೆದು ನಿಲ್ಲುತ್ತೇನೆ ಒಮ್ಮೊಮ್ಮೆ. ಮರುಕ್ಷಣದಲ್ಲಿ ಧೂಳಿಯ ಕಣವಾಗುತ್ತದೆ ನನ್ನ ಅಸ್ತಿತ್ವ…’

 

‘ಯಾವ ಭಾವನೆಗಳನ್ನು ವ್ಯಕ್ತಪಡಿಸಿಯಾದರೂ ಪ್ರಯೋಜನವೇನು? ಸತ್ತು ಹೋದರಂತೂ ನನ್ನ ಬಯಕೆ ಈಡೇರಿದಂತಾಯಿತು. ಇಲ್ಲ ಬದುಕಿದೆನೆಂದರೆ… ಇಷ್ಟೇ, ಜೀವನವನ್ನು ಇನ್ನೂ ಅರ್ಥಪೂರ್ಣವಾಗಿ ಬದುಕಬೇಕು. ಜೀವನದ ಪ್ರತಿಯೊಂದು ಕ್ಷಣವನ್ನು ಬದುಕಬೇಕು. ಅಂದರೆ ನನ್ನಲ್ಲಿ ಬದುಕಬೇಕೆನ್ನುವ ಹಠವಿಲ್ಲ. ಸಾವಿನ ವಿಷಯವಾಗಿ ಜೀವಂತವಾಗಿದ್ದ ಇಷ್ಟು ದಿನಗಳೆಲ್ಲವೂ ವಿಚಾರ ಮಾಡಿದೆ. ಈಗ ಉಳಿದಿರುವ ಒಂದು ಕ್ಷಣ ಬದುಕಿನ ಬಗ್ಗೆ ಯೋಚಿಸಿದರೆ ಆಗುವುದಾದರೂ ಏನು?…’

ಈ ಪುಟ್ಟ ಪ್ಯಾರಾಗಳನ್ನು ಓದುತ್ತಿದ್ದಂತೆಯೇ, ಇದು  ಯಾವ ಕನ್ನಡದ ಪ್ರಸಿದ್ಧ ಸಣ್ಣ ಕತೆಯಲ್ಲಿ ಬರುವ ಪ್ರಧಾನ ಪಾತ್ರವೊಂದರ ಸ್ವಗತದ ಮಾತುಗಳಿವು ಎಂಬುದರ ಸುಳಿವು ನಿಮಗೆ ಸಿಕ್ಕಿರಬೇಕು. ಇದರಲ್ಲಿಯೇ ಆ ಕತೆಯ ಶೀರ್ಷಿಕೆಯು ಅಡಗಿರುವುದರಿಂದ ಪತ್ತೆ ಹಚ್ಚುವುದು ಸುಲಭವೇ. ಈ ಕತೆಯ ಹೆಸರು ‘ಹಂಗಿನರಮನೆಯ ಹೊರಗೆ’. ಇದನ್ನು ಬರೆದವರು ರಾಯಚೂರು ಜಿಲ್ಲೆಯ ರಾಜಶೇಖರ ನೀರಮಾನ್ವಿಯವರು. ಈ ಕತೆಯನ್ನು ಬರೆದ ನೀರಮಾನ್ವಿಯವರು ಕನ್ನಡ ಕಥಾಸಾಹಿತ್ಯದ ಮುಖ್ಯ ಕತೆಗಾರರ ಪಟ್ಟಿಯಲ್ಲಿ ಸೇರಿಬಿಟ್ಟರು. ಕಾಲಮಾನದ ದೃಷ್ಟಿಯಿಂದ ಈ ಕತೆಗೆ ಈಗ ಅರ್ಧ ಶತಮಾನ ಸಂದಿದೆ. ಇಂದಿಗೂ ನೀರಮಾನ್ವಿಯವರೆಂದರೆ ಈ ಕತೆಯೇ ನೆನಪಾಗುತ್ತದೆ. ಇದು ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದ ‘ಸಾಕ್ಷಿ’ (ಸಂಚಿಕೆ-4, 1968) ಪತ್ರಿಕೆಯಲ್ಲಿ ಮೊದಲು ಪ್ರಕಟವಾಯಿತು.

‘ಹಂಗಿನರಮನೆಯ ಹೊರಗೆ’ ಎಂಬ ಕತೆಯು ನೀರಮಾನ್ವಿಯವರನ್ನು ಕನ್ನಡದ ಸ್ಟಾರ್ ಕತೆಗಾರನನ್ನಾಗಿಸಿತು. ಎಪ್ಪತ್ತರ ದಶಕದಲ್ಲಿ ಜಿ.ಎಚ್. ನಾಯಕರು ನ್ಯಾಶನಲ್ ಬುಕ್ ಟ್ರಸ್ಟ್ ಗಾಗಿ ‘ಅಂತರ ಭಾರತೀಯ ಪುಸ್ತಕ ಮಾಲೆ’ಯಲ್ಲಿ ಸಂಪಾದಿಸಿದ ‘ಕನ್ನಡ ಸಣ್ಣ ಕತೆಗಳು’ ಪುಸ್ತಕದಲ್ಲಿ ಈ ಕತೆಯು ಸೇರಿಕೊಂಡಿತು. (ಕನ್ನಡದ ಸಣ್ಣ ಕತೆಗಳ ಅಂಥಾಲಜಿಗೆ ನಾಯಕರು ೨೫ ಕತೆಗಳಿಗೆ ಬರೆದ ಮೂವತ್ತು ಪುಟಗಳ ದೀರ್ಘ ಪ್ರಸ್ತಾವನೆಯು ಅತ್ಯುತ್ತಮ ಪ್ರವೇಶಿಕೆಯಾಗಿದೆ. ಹೀಗೆಯೇ ಲಂಕೇಶರು ತಾವು ಸಂಪಾದಿಸಿದ ‘ಅಕ್ಷರ ಹೊಸ ಕಾವ್ಯ’ಕ್ಕೆ ಬರೆದ ಅತ್ಯುತ್ತಮ ಪ್ರಸ್ತಾವನೆಯು ಇಲ್ಲಿ ನೆನಪಾಗುತ್ತಿದೆ) ನನ್ನ ಕಾಲೇಜು ದಿನಗಳಲ್ಲಿ ನಾನು ಈ ಅಂಥಾಲಜಿಯಲ್ಲಿಯೇ ಈ ಕತೆಯನ್ನು ಓದಿದ್ದು. ನನಗೆ ವೈಯಕ್ತಿಕವಾಗಿ ಮಾಸ್ತಿಯವರ ‘ಜೊಗ್ಯೋರ ಅಂಜಪ್ಪನ ಕೋಳಿಕತೆ’, ಭಾರತೀಪ್ರಿಯರ ‘ಮೋಚಿ’, ಯಶವಂತ ಚಿತ್ತಾಲರ ‘ಸೆರೆ’, ಶಾಂತಿನಾಥ ದೇಸಾಯಿಯವರ ‘ಕ್ಷಿತಿಜ’, ರಾಘವೇಂದ್ರ ಖಾಸನೀಸರ ‘ತಬ್ಬಲಿಗಳು’, ಲಂಕೇಶರ ‘ಮುಟ್ಟಿಸಿಕೊಂಡವನು’ ತೇಜಸ್ವಿಯವರ ‘ಅವನತಿ’, ದೇವನೂರ ಮಹಾದೇವರ ‘ಅಮಾಸ’ ಪ್ರಿಯವಾದ ಕತೆಗಳೇ ಆಗಿವೆ. ಈ ಪಟ್ಟಿಗೆ ‘ಹಂಗಿನರಮನೆಯ ಹೊರಗೆ’ ಕೂಡ ಸೇರುತ್ತದೆ. ಮುಂದೆ ಮಾಸ್ತಿಯವರ ಪ್ರಕಾಶನದ ಮೂಲಕ ಪ್ರಕಟವಾದ ‘ಕನ್ನಡದ ಅತ್ಯುತ್ತಮ ಹದಿನೈದು ಸಣ್ಣ ಕತೆಗಳು’ ಸಂಕಲನದಲ್ಲಿಯೂ ಈ ಕತೆ ಸ್ಥಾನವನ್ನು ಪಡೆದುಕೊಂಡಿತು. ಸಿನಿಮಾ ನಿರ್ದೇಶಕರಾದ ಬಸು ಚಟರ್ಜಿಯವರು ಎಪ್ಪತ್ತರ ದಶಕದಲ್ಲಿ ದೂರದರ್ಶನದ ಡಿಡಿ ನ್ಯಾಶನಲ್ ವಾಹಿನಿಗಾಗಿ ಕನ್ನಡ ಭಾಷೆಯ ಕತೆಯಾಗಿ ಇದನ್ನೇ ಆಯ್ಕೆ ಮಾಡಿಕೊಂಡಿದ್ದರು. ಇದು ಸುಮಾರು ಇಪ್ಪತ್ತೇಳು ಭಾರತೀಯ ಭಾಷೆಗಳಲ್ಲಿ ಪ್ರಸಾರವಾಗಿತ್ತು. ಎಸ್. ದಿವಾಕರ ಅವರ ಸಂಪಾದನೆಯ ‘ಶತಮಾನದ ಸಣ್ಣಕತೆ’ಯಲ್ಲಿಯೂ ಈ ಕತೆ ಸೇರಿದೆ. ಇತ್ತೀಚೆಗೆ ಬೆಂಗಳೂರಿನ ‘ನುಡಿ ಪ್ರಕಾಶನ’ದ ಮೂಲಕ ‘ಮರೆಯಲಾಗದ ಕತೆಗಳು’ ಮಾಲಿಕೆಯಲ್ಲಿ ನೀರಮಾನ್ವಿಯವರ ಕತೆಗಳು ಪ್ರಕಟವಾಗಿವೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನವರಾದ ನೀರಮಾನ್ವಿಯರು. (ಮಾನ್ವಿ ತಾಲೂಕು ಕನ್ನಡ ಕಥಾ ಸಾಹಿತ್ಯಕ್ಕೆ ಒಳ್ಳೆಯ ಕತೆಗಾರರನ್ನು ನೀಡಿದೆ. ಅಮರೇಶ ನುಗಡೋಣಿ, ಮಹಾಂತೇಶ ನವಲಕಲ್, ರಾಜಶೇಖರ ಹಳೆಮನೆ, ಚಿದಾನಂದ ಸಾಲಿ-ಇವರೆಲ್ಲರೂ ಕನ್ನಡ ಕಥನ ಪರಂಪರೆಯನ್ನು ಹಿಗ್ಗಿಸಿದವರೇ ಆಗಿದ್ದಾರೆ.) ಕವಿಗಳಾದ ಕೆ.ಎಸ್. ನಿಸಾರ್ ಅಹಮದ್‌ರಂತೆಯೇ ಭೂಗರ್ಭಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಬಳ್ಳಾರಿಯಲ್ಲಿ ನೆಲೆಸಿರುವ ಇವರು ನಿವೃತ್ತರಾಗಿ ಒಂದುವರೆ ದಶಕವಾಗಿದೆ. ಈಗ ಎಪ್ಪತ್ತೆಂಟರ ಆಸುಪಾಸಿನಲ್ಲಿದ್ದಾರೆ. ಅರವತ್ತರ ದಶಕದ ಆರಂಭದಲ್ಲಿಯೇ ಸಣ್ಣ ಕತೆಗಳನ್ನು ಬರೆಯಲು ತೊಡಗಿದವರು. ಐದು ಕತೆಗಳನ್ನು ಒಳಗೊಂಡಿರುವ ತಮ್ಮ ಮೊದಲ ಕಥಾಸಂಕಲನ ‘ಹಂಗಿನರಮನೆಯ ಹೊರಗೆ’ (1978) ತಮ್ಮದೇ ಪ್ರತೀಕ ಪ್ರಕಾಶನದ ಮೂಲಕ ಪ್ರಕಟಿಸಿದವರು. ನೀರಮಾನ್ವಿಯವರು ಈ ಸಂಕಲನದಲ್ಲಿ “ಜೀವನದ ವೈಯಕ್ತಿಕ ಅನುಭವ, ಅನಿಸಿಕೆಗಳಿಗೆ ಅಕ್ಷರ ಮಾಧ್ಯಮದ ಅಭಿವ್ಯಕ್ತಿಯನ್ನು ಕೊಟ್ಟು ಸಾರ್ವತ್ರಿಕಗೊಳಿಸುವುದೇ ಸಾಹಿತ್ಯದ ಹೊಣೆ ಎಂದು ತಿಳಿದಿರುವವನು ನಾನು. ದೈನಂದಿನ ಜೀವನದಲ್ಲಿ ನಾವು ಸಾಧಿಸಬೇಕೆನ್ನುವುದನ್ನು, ಸಾಧಿಸಲಾಗದ್ದನ್ನು ಸಾಹಿತ್ಯದ ಮೂಲಕ ಸಹ ಜೀವಿಗಳೊಡನೆ ಹಂಚಿಕೊಳ್ಳುವ ಹಂಬಲ. ಅದೇ ಕಾರಣಕ್ಕಾಗಿ ಸಾಹಿತ್ಯದಲ್ಲಿ ಸಾಮಾಜಿಕ ಜವಾಬ್ದಾರಿ, ಜೀವನಮೌಲ್ಯಗಳ ಕಳಕಳಿ, ಮಂಥನ ಇದ್ದಾಗಲೇ ಅದಕ್ಕೊಂದು ಸಾರ್ಥಕತೆ” ಎಂದು ಹೇಳಿಕೊಂಡಿದ್ದಾರೆ. ಇದು ಸಾಹಿತ್ಯವನ್ನು ಕುರಿತು ನೀರಮಾನ್ವಿಯವರ ನಿಲುವು.

ಜೀವನಾನುಭವದ ಸರ್ವ ಸಂಗತಿಗಳೂ ಕತೆಯಾಗುವುದಿಲ್ಲ; ಬರಿ ಲೋಕಾನುಭವವಿದ್ದ ಮಾತ್ರಕ್ಕೂ ಕತೆಯೊಂದು ಹೊರಹೊಮ್ಮಲಾರದು. ಇವುಗಳ ಜೊತೆಯಲ್ಲಿಯೇ ಪ್ರಧಾನವಾಗಿ ಲೇಖಕನ ಸೃಷ್ಟಿಶೀಲ ಪ್ರತಿಭೆಯು ಕ್ರಿಯಾಶೀಲವಾಗುತ್ತದೆ; ಕಲಾ ಮಾಧ್ಯಮದಲ್ಲಿ ಸೃಜನಶೀಲತೆಯು ನಿಗೂಢವಾದದ್ದು; ಅದು ವಿವರಣೆಗೆ ನಿಲುಕುವುದಿಲ್ಲ; ಒಂದು ಒಳ್ಳೆಯ ಕತೆಯಲ್ಲಿ ಜೀವನಾನುಭವ, ಲೋಕಾನುಭವ, ಕಾಲ್ಪನಿಕತೆ-ಇವುಗಳನ್ನು ಬೇರ್ಪಡಿಸಿ ನೋಡುವುದು ದುಸ್ತರವೇ ಆಗಿರುತ್ತದೆ. ಇವುಗಳೆಲ್ಲ ಒಳಗೊಂಡು ಕತೆಯೊಂದನ್ನು ಸುಂದರ ಭಾಷೆಯಲ್ಲಿ ಕಡೆದಿಟ್ಟರೂ, ಅದು ಓದುಗರ ಮೇಲೆ ಯಾವುದೇ ಪರಿಣಾಮವನ್ನುಂಟುಮಾಡದೇ ಹೋಗಬಹುದು. ಕತೆಯ ವಸ್ತು ಮತ್ತು ಆಶಯಗಳೇ ಅದರ ನಿರೂಪಣೆಯ ಶೈಲಿಯನ್ನು ನಿರ್ಧರಿಸುತ್ತವೆ; ಕತೆಯನ್ನು ಹೇಳುವ ತಂತ್ರಗಾರಿಕೆಯ ವಿಧಾನವು ಕೂಡ ಅದರಲ್ಲಿಯೇ ಮಿಳಿತವಾಗಿರುತ್ತದೆ. ಕತೆಯೊಂದು ಯಾವ ಬಗೆಯ ಸಂವೇದನೆ ಮತ್ತು ಧೋರಣೆಗಳನ್ನು ಓದುಗರ ಮುಂದಿಡುತ್ತದೆ ಎನ್ನುವುದು ಅತ್ಯಂತ ಮುಖ್ಯವಾದ ವಿಚಾರವಾಗಿರುತ್ತದೆ. ಈ ಯಾವ ನಿಟ್ಟಿನಿಂದ ನೋಡಿದರೂ ಕೂಡ ನೀರಮಾನ್ವಿಯವರು ಓದುಗರ ಮನಸ್ಸನ್ನು ಹಿಡಿದಿಡುವಂತೆ ಕತೆಯನ್ನು ಹೇಳಬಲ್ಲವರಾಗಿದ್ದಾರೆ. ಅವರ ಕತೆಗಳು ಸಾಮಾಜಿಕ ವಾಸ್ತವತೆಯನ್ನು ಪ್ರಖರವಾಗಿಯೇ ಬಿಂಬಿಸಿದವು. ಮನುಷ್ಯ ಜೀವನದ ಕಷ್ಟಕೋಟಲೆಗಳ ಜೊತೆಯಲ್ಲಿಯೇ ಅದರೆಲ್ಲದರ ಸಂಕೀರ್ಣತೆಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡವು. ಮೊದಲ ಸಂಕಲನವು ನೀರಮಾನ್ವಿಯವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 1990ರಲ್ಲಿ ಪುನರ್ ಮುದ್ರಣಗೊಂಡಿತು; ಬಳ್ಳಾರಿಯ ಲೋಹಿಯಾ ಪ್ರಕಾಶನದ ಮೂಲಕ 1998ರಲ್ಲಿ ಮತ್ತೊಮ್ಮೆ ಹೊರ ಬಂದಿತು. ಈ ಸಂಕಲನವು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಠ್ಯವೂ ಆಗಿತ್ತು.

ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿಯೇ ಕತೆಗಳನ್ನು ಬರೆಯಲಾರಂಭಿಸಿದವರು, ಸಹಜವಾಗಿಯೇ ಆ ಕಾಲದ ನವ್ಯ ಪ್ರಭಾವಳಿಯಲ್ಲಿಯೇ ಬರೆಯುತ್ತಿದ್ದರು. ‘ಹಂಗಿನರಮನೆಯ ಹೊರಗೆ’ ಕತೆಯು ಅಸ್ತಿತ್ವವಾದಿ ನೆಲೆಯನ್ನು ಹೊಂದಿದೆ; ಇದರ ಅನಾಮಧೇಯ ಕಥಾನಾಯಕ ದ್ವಂದ್ವ ಮನೋಧರ್ಮದವನು ಎನ್ನುವುದು ಸ್ಪಷ್ಟವಾಗುತ್ತದೆ. ಆಸ್ಪತ್ರೆಯಲ್ಲಿ ಜೀವನ್ಮರಣದ ತೂಗುಯ್ಯಾಲೆಯಲ್ಲಿರುವ ಈ ವ್ಯಕ್ತಿಯು ತನ್ನ ಬದುಕನ್ನು ಪರಾಮರ್ಶಿಸಿಕೊಳ್ಳುತ್ತಾನೆ; ವ್ಯಕ್ತಿನಿಷ್ಠ ನಿಲುವು-ನಿರ್ಣಯಗಳು ವ್ಯಂಗ್ಯಾತ್ಮಕ ಧಾಟಿಯ ಭಾಷೆಯಲ್ಲಿವೆ. ಈ ಕತೆಯ ನಂತರದಲ್ಲಿ ತಮ್ಮನ್ನು ನವ್ಯದ ಪ್ರಭಾವದಿಂದ ಬಿಡಿಸಿಕೊಳ್ಳಲು ಲೇಖಕರು ಯತ್ನಿಸಿರುವುದು ನಿಜ. ಆದರೆ ನೀರಮಾನ್ವಿಯವರ ಬಹುತೇಕ ಕತೆಗಳ ನಾಯಕರು ಕೊಂಚ ದುರ್ಬಲ ಮನಸ್ಸಿನವರೇ ಎಂಬುದರಲ್ಲಿ ಸಂಶಯವೇ ಇಲ್ಲ. ಅವರು ನಿರ್ಣಾಯಕ ಗಳಿಗೆಯಲ್ಲಿ ಹಿಂಜರಿಯುವ ಮನೋಧರ್ಮದವರೇ ಆಗಿರುತ್ತಾರೆ.

ರಾಜಶೇಖರ ನೀರಮಾನ್ವಿಯವರ ಕತೆಗಳು ಉತ್ತರ ಕರ್ನಾಟಕದ ರಾಯಚೂರು ಜಿಲ್ಲೆಯ ಪರಿಸರದ ಒಳಗಿನಿಂದಲೇ ಹುಟ್ಟಿಕೊಂಡವುಗಳಾಗಿವೆ. ಗ್ರಾಮೀಣ ಜಗತ್ತಿನ ಜನಸಾಮಾನ್ಯರ ದಿನನಿತ್ಯದ ಸಂಕಟಗಳನ್ನು ತೆರೆದಿಟ್ಟಿವೆ. ಜಮೀನ್ದಾರಿಯ ವ್ಯವಸ್ಥೆ ತಂದೊಡ್ಡಿರುವ ಶೋಷಣೆಗಳನ್ನು ತಣ್ಣಗೆ ಓದುಗರಿಗೆ ದಾಟಿಸುತ್ತವೆ. ಕುಂವಿಯವರ ಕತೆಗಳಲ್ಲಿ ಉಪಮೆಗಳು ಹೇರಳವಾಗಿದ್ದರೆ ನೀರಮಾನ್ವಿಯವರ ಕತೆಗಳಲ್ಲಿ ಉಪಮೆಗಳೇ ಇರುವುದಿಲ್ಲ; ವಾಕ್ಯಗಳು ಕೂಡ ದೀರ್ಘವಾಗಲಿ, ಸಂಕೀರ್ಣವಾಗಲಿ ಇರುವುದಿಲ್ಲ. ಸಣ್ಣಸಣ್ಣ ವಾಕ್ಯಗಳಲ್ಲಿಯೇ ಅನುಭವ ದ್ರವ್ಯವನ್ನು ತುಂಬಿಕೊಂಡಿರುತ್ತವೆ. ರಾಯಚೂರಿನ ಭಾಷಿಕ ರೂಪ ಮತ್ತು ಗ್ರಾಂಥಿಕ ಕನ್ನಡವು ಹದವಾಗಿ ಬೆರೆತಿರುತ್ತದೆ. ಆದರೆ ನೀರಮಾನ್ವಿಯವರು, ಯಾವುದೋ ಒಂದು ಸಣ್ಣ ಸಮಸ್ಯೆಯನ್ನು ಇಡೀ ಕತೆಯ ವಸ್ತುವಿಗೆ ರೂಪಕವಾಗುವಂತೆ ಮಾಡಬಲ್ಲರು; ಈ ದೃಷ್ಟಿಯಿಂದ ‘ದುರಸ್ತಿ’ ಕತೆಯಲ್ಲಿ ಸೈಕಲ್‌ರಿಕ್ಷಾ ಓಡಿಸುವ ತಿಮ್ಮನಿಗೆ ಆಗಾಗ ಪ್ರಿವೀಲ್ ಸಮಸ್ಯೆಯಾಗುತ್ತಿರುತ್ತದೆ. ಆದರೆ ಅದರ ದುರಸ್ತಿಗೆ ಅಷ್ಟು ಗಮನವೇ ಕೊಡುವುದಿಲ್ಲ. ಎಲ್ಲರನ್ನೂ ಸರಿಪಡಿಸುವ ಉಮೇದಿನಲ್ಲಿರುತ್ತಾನೆ. ಆದರೆ ತನ್ನ ಕಣ್ಣೆದುರಿನಲ್ಲೇ ಸಂಬಂಧಗಳು ಹದಗೆಡುವುದನ್ನು ನೋಡುತ್ತಾನೆ. ಇಡೀ ಕತೆಯು ಬೇರೆಯವರನ್ನು ದುರಸ್ತಿ ಮಾಡುವುದು ನಮ್ಮ ನಿಯಂತ್ರಣದಾಚೆಯ ಸಂಗತಿ ಎಂಬುದಕ್ಕೆ ಒಂದು ರೂಪಕವಾಗಿದೆ.

ನೀರಮಾನ್ವಿಯವರ ಕತೆಗಳ ಮತ್ತೊಂದು ಸ್ಥಾಯಿಗುಣವೆಂದರೆ, ಒಳಿತು ಮತ್ತು ಕೇಡಿನ ನಡುವಿನ ಸಂಘರ್ಷ. ಅದರಲ್ಲೂ ಕೇಡಿನಲ್ಲಿ ವ್ಯಕ್ತಿ ಮತ್ತು ಸಮಾಜದ ಪಾತ್ರವೇನು ಎಂಬುದರ ಹಿನ್ನೆಲೆಯಲ್ಲಿ ‘ವೃತ್ತ’ ಮತ್ತು ‘ಬಿಸಿಲುಗುದುರೆ’ ಕತೆಗಳನ್ನು ನೋಡಬಹುದು. ‘ವೃತ್ತ’ ಕತೆಯಲ್ಲಿ ಒಳಿತು ಮತ್ತು ಕೇಡನ್ನು ವ್ಯಕ್ತಿನಿಷ್ಠ ನೆಲೆಯಿಂದಲೇ ನೋಡಲಾಗಿದೆ. ‘ಬಿಸಿಲುಗುದುರೆ’ ಕತೆಯಲ್ಲಿ ಸಾಂಪ್ರದಾಯಿಕ ಸಮಾಜವು ಹೆಣ್ಣಿನ ನಡತೆಯಲ್ಲಿ ಯಾವುದನ್ನು ನೇತ್ಯಾತ್ಮಕವಾಗಿ ನೋಡುತ್ತದೆಯೋ ಅದನ್ನೇ ಸೋಮಶೇಖರ ಧನಾತ್ಮಕವಾಗಿ ನೋಡುತ್ತಾನೆ. ಅವನು ಆಧುನಿಕ ಮನೋಧರ್ಮದ ವಿಮಲೆಯಲ್ಲಿ ಸರ್ವಗುಣಗಳನ್ನೂ ಒಳಿತಿನ ದೃಷ್ಟಿಯಿಂದಲೇ ಸ್ವೀಕರಿಸುತ್ತಾನೆ. ಆದರೆ ಕತೆಯ ಕೊನೆಯಲ್ಲಿ ಜರುಗುವ ಅನಿರೀಕ್ಷಿತ ತಿರುವಿನಲ್ಲಿ ವಿಷಾದಿತನಾಗುತ್ತಾನೆ. ನೀರಮಾನ್ವಿಯವರ ಕತೆಗಳ ಬಹುತೇಕ ಗಂಡು ಪಾತ್ರಗಳು ಸ್ವಮರುಕದಲ್ಲಿಯೇ ಒದ್ದಾಡುತ್ತವೆ. ಗಂಡು ಪಾತ್ರಗಳು ಯಾವುದೋ ಒಂದು ಹೆಜ್ಜೆಯನ್ನು ಇಡುತ್ತವೆ; ಮರುಗಳಿಗೆಯಲ್ಲಿಯೇ ಅದರ ವ್ಯತಿರಿಕ್ತ ದಿಕ್ಕಿನಲ್ಲಿ ಯೋಚಿಸಲು ತೊಡಗುತ್ತವೆ.

ಕಳೆದೊಂದು ಶತಮಾನದಲ್ಲಿ ಕನ್ನಡ ಕಥಾ ಜಗತ್ತು ಅನೇಕ ಸ್ಥಿತ್ಯಂತರಗಳನ್ನು ಕಂಡಿದೆ. ಸಾಹಿತ್ಯದ ಪ್ರಕಾರಗಳಲ್ಲಿ ಕವಿತೆ ಮತ್ತು ಕಥಾ ಕ್ಷೇತ್ರಗಳು ಮೊದಲಿನಿಂದಲೂ ಹೆಚ್ಚು ಜನಪ್ರಿಯವಾಗಿವೆ. ಕವಿತೆಗಳ ಓದುಗರು ಕಡಿಮೆಯೇ; ಆದರೆ ಕತೆಗಳ ಓದುಗರ ಪ್ರಮಾಣ ಜಾಸ್ತಿಯಿದೆ. ಇಂದು ದಿನಪತ್ರಿಕೆಗಳ ಸಾಪ್ತಾಹಿಕ, ವಾರ ಪತ್ರಿಕೆ, ಮಾಸಿಕ ಪತ್ರಿಕೆ, ಸಾಹಿತ್ಯ ಪತ್ರಿಕೆಗಳಲ್ಲಿ ಕತೆಗಳಿಗೆ ಹೆಚ್ಚಿನ ಸ್ಪೇಸ್ ಇದ್ದೇ ಇರುತ್ತದೆ. ಆದ್ದರಿಂದಲೇ ಕನ್ನಡದಲ್ಲಿ ದೊಡ್ಡ ಪ್ರಮಾಣದಲ್ಲಿ ಕತೆಗಳು ಉತ್ಪಾದನೆಯಾಗುತ್ತಿವೆ. ಅದೇ ವಿಮರ್ಶೆ ಮತ್ತು ಸಂಶೋಧನೆಯ ಲೇಖನಗಳ ವಿಷಯದಲ್ಲಿ ಪತ್ರಿಕೆಗಳು ತಾರತಮ್ಯತೆಯ ಧೋರಣೆಯನ್ನು ಅನುಸರಿಸುತ್ತಿವೆ; ಇದೊಂದು ಸಾಂಸ್ಕೃತಿಕ ರಾಜಕಾರಣವಾಗಿದೆ. ಆದರೆ ಪತ್ರಿಕೆಗಳು ಇಂತಿಷ್ಟು ಪದಗಳಲ್ಲಿ ಕತೆಗಳಿರಬೇಕೆನ್ನುವ ನಿಯಮಗಳನ್ನು ಕಡ್ಡಾಯಗೊಳಿಸಿವೆ. ಈ ಚೌಕಟ್ಟಿಗೆ ಬಲಿಯಾಗುವ ಕತೆಗಾರರು ಯಾರದೋ ಅಳತೆಗೆ ತಕ್ಕಂತೆ ಕತೆಗಳನ್ನು ಬರೆದು ಕೊಡುತ್ತಾರೆ. ಕತೆಗಾರರ ಆಯ್ಕೆಯ ಸ್ವಾತಂತ್ರ್ಯಯವು ಹರಣಗೊಂಡಿದೆ. ಸಣ್ಣ ಕತೆಯೆಂದರೆ ಗಾತ್ರದ ದೃಷ್ಠಿಯಿಂದ ಎಷ್ಟು ಸಣ್ಣದೆನ್ನುವ ಯಾವುದೇ ನಿಯಮಗಳಿರುವುದಿಲ್ಲ; ಸಾದತ್ ಹಸನ್ ಮಾಂಟೋನ ಕತೆಗಳು ಎರಡು ಸಾಲು-ನಾಲ್ಕು ಸಾಲಿನ ಕತೆಗಳಿವೆ; ಸಣ್ಣ ಕತೆಯೊಂದು ಎಷ್ಟು ಪುಟಗಳಿಬೇಕೆನ್ನುವುದಕ್ಕೂ ನಿಯಮಗಳಿಲ್ಲ; ಅನಂತಮೂರ್ತಿ, ತೇಜಸ್ವಿ, ಶಾಂತಿನಾಥ ದೇಸಾಯಿಯರ ಅನೇಕ ಕತೆಗಳು ಐವತ್ತು ಪುಟಗಳನ್ನು ದಾಟುತ್ತವೆ; ಹಾಗೆಯೇ ನೀರಮಾನ್ವಿ, ಅಮರೇಶ ನುಗಡೋಣಿ, ಮಹಾಂತೇಶ ನವಲಕಲ್-ಇವರ ಕೆಲವು ಕತೆಗಳು ಕೂಡ ದೀರ್ಘವಾಗಿರುತ್ತವೆ.

ಕನ್ನಡದಲ್ಲಿ ನೂರಾರು ಕತೆಗಳನ್ನು ಬರೆದವರಿದ್ದಾರೆ; ಅದೇರೀತಿಯಲ್ಲಿ ಕೆಲವೇ ಕತೆಗಳನ್ನು ಬರೆದವರೂ ಇದ್ದಾರೆ. ಒಬ್ಬ ಕತೆಗಾರ ಎಷ್ಟೇ ಕತೆಗಳನ್ನು ಬರೆದರೂ ಸಹ ಕಾಲಪ್ರವಾಹದಲ್ಲಿ ನಿಲ್ಲುವಂಥವು ಕೆಲವೇ ಕತೆಗಳು ಎಂಬುದನ್ನು ಮರೆಯುವಂತಿಲ್ಲ. ರಾಘವೇಂದ್ರ ಖಾಸನೀಸ, ದೇವನೂರ ಮಹಾದೇವರಂತೆಯೇ ನೀರಮಾನ್ವಿಯವರು ಬೆರಳೆಣಿಕೆಯ ಕತೆಗಳನ್ನಷ್ಟೇ ಬರೆದವರು; ನೀರಮಾನ್ವಿಯವರು ‘ಹಂಗಿನರಮನೆಯ ಹೊರಗೆ’ ಮತ್ತು ‘ಕರ್ಪೂರದ ಕಾಯದಲ್ಲಿ’-ಎರಡೇ ಕಥಾಸಂಕಲನಗಳನ್ನು ಪ್ರಕಟಿಸಿದವರು; ಅವರ ಸಮಗ್ರ ಕತೆಗಳು ಹನ್ನೆರಡರ ಗಡಿಯನ್ನು ದಾಟುವುದಿಲ್ಲ. ಅವರು ತಮ್ಮ ಕೆಲವೇ ಕತೆಗಳ ಮೂಲಕ ಕನ್ನಡ ಓದುಗರ ಪ್ರೀತಿ, ಮೆಚ್ಚುಗೆ ಮತ್ತು ವಿಮರ್ಶೆಗೆ ಪಾತ್ರರಾಗಿದ್ದಾರೆ.

  • ಸುಭಾಷ್ ರಾಜಮಾನೆ, ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ  ಕೆಲಸ ನಿರ್ವಹಿಸುತ್ತಿರುವ ಸುಭಾಷ್ ಅವರು ಮೂಲತಃ ಬೆಳಗಾವಿಯವರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಕನ್ನಡ ವಿಮರ್ಶೆಯಲ್ಲಿ ಜಾತಿ ಆಯಾಮಗಳ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ.ಪದವಿ ಗಳಿಸಿದ್ದಾರೆ. ಕನ್ನಡ ಇಂಗ್ಲಿಷ್‌, ಮರಾಠಿ, ಹಿಂದಿ ಭಾಷೆಗಳನ್ನು ಬಲ್ಲ ಸುಭಾಷ್ ಅವರು ಸಿನೆಮಾ ವಿಮರ್ಶೆಗಳನ್ನು ಬರೆದಿದ್ದಾರೆ. ಅನುವಾದದಲ್ಲಿ ವಿಶೇಷ ಆಸಕ್ತಿ ಹೊಂದಿರುವ  ಅವರು ದಿ ಆರ್ಟಿಸ್ಟ್‌ ಸಿನಿಮಾದ ಚಿತ್ರಕತೆಯನ್ನು,  ವಿಕ್ಟರ್‌ ಫ್ರಾಂಕ್‌ಲ್ ನ ಮ್ಯಾನ್ ಸರ್ಚ್ ಫಾರ್ ಮೀನಿಂಗ್ ಕೃತಿಯನ್ನು ’ಬದುಕಿನ ಅರ್ಥವನು ಹುಡುಕುತ್ತ..’ಶೀರ್ಷಿಕೆಯ ಅಡಿಯಲ್ಲಿ, ಗ್ರೀಕ್ ಪಿಲಾಸಫರ್ ಎಪಿಕ್ಟೆಟಸ್ ಬರಹಗಳನ್ನು ಮತ್ತು ತಿಚ್ ನ್ಹಾತ್ ಹಾನ್ ನ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಳೆಯ, ಅಪರೂಪದ ಪುಸ್ತಕಗಳನ್ನು ಸಂಗ್ರಹಿಸಿ ಅವುಗಳ ಸಾಂಸ್ಕೃತಿಕ ಮಹತ್ವಗಳನ್ನು ಚರ್ಚಿಸುವುದು ಕೂಡ ಸುಭಾಷ್ ಅವರ ನೆಚ್ಚಿನ ಹವ್ಯಾಸ.
  • ನಿಮ್ಮ ಪ್ರತಿಕ್ರಿಯೆಗಳನ್ನು rajamanesubash98@gmail.com, ensuddii@gmail.comಇಲ್ಲಿಗೆ ಬರೆಯಿರಿ
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights