ಗಡಿ ಭಾಗದಿಂದ ಹಿಂದಿರುಗಲು ಭಾರತ-ಚೀನಾ ನಿರ್ಧಾರ; ಮುಂದೇನಾಗಲಿದೆ?

ಭಾರತ ಮತ್ತು ಚೀನಾ ನಡುವೆ ಲಡಾಖ್​ನ ಗಾಲ್ವನ್ ಕಣಿವೆಯಲ್ಲಿ ದಿನೇ ದಿನೇ ಉದ್ವಿಗ್ನ ಪರಿಸ್ಥಿತಿ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಶಾಂತಿ ಪಾಲನೆಗಾಗಿ ಭಾರತ ಮುಂದಾಗಿದೆ. ಇದೂವರೆಗೂ ಹಲವಾರು ಸಭೆಗಳನ್ನು ನಡೆಸಿದ್ದು, ಅಂತಿಮವಾಗಿ ನಿನ್ನೆ ನಡೆದ ಸುದೀರ್ಘ ಸಭೆಯಲ್ಲಿ ಎರಡೂ ರಾಷ್ಟ್ರಗಳು ಗಡಿ ಭಾಗದಿಂದ ಸೇನೆಯನ್ನು ಹಿಂಪಡೆದುಕೊಳ್ಳಲು ನಿರ್ಧರಿಸಿವೆ ಎಂದು ಭಾರತೀಯ ಸೇನೆ ತಿಳಿಸಿದೆ.

ಮೋಲ್ಡೋ ಪ್ರದೇಶದಲ್ಲಿ 11 ಗಂಟೆ ಕಾಲ ನಡೆದ ಉಭಯ ರಾಷ್ಟ್ರಗಳ ಹಿರಿಯ ಕಮಾಂಡರ್‌ ಮಟ್ಟದ ಸಭೆಯಲ್ಲಿ ಭಾರತ ಮತ್ತು ಚೀನಾ ರಾಷ್ಟ್ರಗಳ ಪರಸ್ಪರ ಶಾಂತಿ ಪಾಲನೆಗೆ ಮುಂದಾಗಿದ್ದು, ಈ ಮಾತುಕತೆ ಬಹಳ ಸಕರಾತ್ಮಕ ಮತ್ತು ಸೌಹಾರ್ದಯುತವಾಗಿತ್ತು. ಯಾವ ರೀತಿ ಸೇನೆಯನ್ನ ಹಿಂಪಡೆಯುವುದು ಎಂಬುದನ್ನು ಚರ್ಚಿಸಿ ನಿರ್ಧರಿಸಲಾಗಿದೆ. ಅದರಂತೆ ಈಗ ಎರಡೂ ರಾಷ್ಟ್ರಗಳೂ ನಿರ್ಧಾರವನ್ನು ಕಾರ್ಯಾನುಷ್ಠಾನಕ್ಕೆ ತರುತ್ತವೆ ಎಂದು ಸೇನೆ ಹೇಳಿದೆ.

ಚೀನಾದ ವಿದೇಶಾಂಗ ಇಲಾಖೆ ವಕ್ತಾರರೂ ಕೂಡ ಈ ಸಭೆಯಿಂದ ಸಕಾರಾತ್ಮಕ ಫಲಿತಾಂಶ ಬಂದಿದೆ ಎಂದು ಹೇಳಿದ್ಧಾರೆ.

ನಿನ್ನೆ ಎರಡೂ ಸೇನೆಗಳು ಲೆಫ್ಟಿನೆಂಟ್ ಜನರಲ್ ಮಟ್ಟದಲ್ಲಿ ಎರಡನೇ ಸಭೆ ನಡೆಸಿದವು. ಇಲ್ಲಿಯೂ ಪರಿಸ್ಥಿತಿ ತಿಳಿಗೊಳಿಸಲು ಅಗತ್ಯವಿದ್ದ ವಿಚಾರಗಳನ್ನ ಚರ್ಚಿಸಲಾಯಿತು. ಆದರೆ, ಜೂನ್ 6ರಂದು ನಡೆದಿದ್ದ ಇದೇ ಉನ್ನತ ಮಟ್ಟದ ಮೊದಲ ಸಭೆಯಲ್ಲೂ ಸೈನಿಕರನ್ನ ವಾಪಸ್ ಕರೆಸಿಕೊಳ್ಳುವುದೆಂದು ತೀರ್ಮಾನಿಸಲಾಗಿತ್ತು. ಆದರೆ, ಚೀನೀ ಸೈನಿಕರು  ಮತ್ತೆ ಟೆಂಟ್ ಹಾಕಿದ್ದರು. ಈ ವೇಳೆ ಮಾತುಕತೆಯಲ್ಲಿ ತೀರ್ಮಾನವಾಗಿದ್ದಂತೆ ಭಾರತೀಯ ಸೈನಿಕರು ಚೀನೀಯರ ಟೆಂಟನ್ನ ತೆಗೆದುಹಾಕಿದ್ದರು. ಇದು ಅಂತಿಮವಾಗಿ ಜೂನ್ 15ರಂದು ಚೀನೀ ಸೈನಿಕರ ದಿಢೀರ್ ದಾಳಿಗೆ ಕಾರಣವಾಗಿದೆ.

ಅನಿರೀಕ್ಷಿತವಾಗಿ, ಚೀನಾ ನಡೆಸಿದ ದಾಳಿಯಿಂದ  20 ಭಾರತೀಯ ಸೈನಿಕರು ಮೃತಪಟ್ಟಿದ್ದಾರೆ. ನಿನ್ನೆ ನಡೆದ ಮಾತುಕತೆಯಲ್ಲೂ ಈಗ ಸೈನಿಕರನ್ನ ಹಿಂಪಡೆಯಲು ನಿರ್ಧರಿಸಲಾಗಿದೆ. ನಿಗದಿಯಾಗಿರುವ ಸ್ಥಳದಿಂದ ಎರಡೂ ಕಡೆಯ ಸೈನಿಕರು ದೂರ ಹೋಗಬೇಕಾಗುತ್ತದೆ. ಆದರೆ, ಚೀನೀಯರು ಮಾತು ಉಳಿಸಿಕೊಳ್ಳುತ್ತಾರಾ ಇಲ್ಲವಾ ಎಂಬುದು ಗೊಂದಲವನ್ನು ಸೃಷ್ಟಿಸಿದೆ.

ಭಾರತೀಯ ವಾಯುಪಡೆಯು ಮುನ್ನೆಚ್ಚರಿಕೆಯಾಗಿ ತನ್ನ ಹಲವು ಫೈಟರ್ ವಿಮಾನ ಮತ್ತು ಹೆಲಿಕಾಪ್ಟರ್​ಗಳನ್ನ ಲಡಾಖ್​ನಲ್ಲಿ ನಿಯೋಜಿಸಿದೆ. ಯಾವುದೇ ರೀತಿಯಲ್ಲಿ ಎದುರಾಗಬಹುದಾದ ಸಂದರ್ಭವನ್ನು ಎದುರಿಸಲು ಸನ್ನದ್ಧವಾಗಿರುವುದಾಗಿ ವಾಯುಪಡೆ ಮುಖ್ಯಸ್ಥ ಏರ್ ಮಾರ್ಷಲ್ ಆರ್.ಎಸ್. ಭದೋರಿಯಾ ಹೇಳಿದ್ಧಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights