ನೇಪಾಳ ಸರ್ಕಾರವನ್ನು ಉರುಳಿಸಲು ಭಾರತ ಯತ್ನಸುತ್ತಿದೆ: ನೇಪಾಳ ಪ್ರಧಾನಿ ಒಲಿ ಆರೋಪ!
ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದ ಇಬ್ಬರು ಅಧ್ಯಕ್ಷರಾದ ಪ್ರಧಾನಿ ಕೆ ಪಿ ಶರ್ಮಾ ಒಲಿ ಮತ್ತು ಪುಷ್ಪಾ ಕಮಲ್ ದಹಲ್ ನಡುವೆ ಭಿನ್ನಾಭಿಪ್ರಾಯಗಳು ಉಲ್ಬಣಗೊಳ್ಳುತ್ತಿದ್ದಂತೆ, ನೇಪಾಳ ಸರ್ಕಾರವನ್ನು ಉರುಳಿಸಲು ತನ್ನ ಪ್ರತ್ರಿ ಸ್ಪರ್ಧಿಗಳನ್ನು ಭಾರತವು ಪ್ರಚೋದಿಸುತ್ತಿದೆ ಎಂದು ಪ್ರಧಾನಿ ಒಲಿ ಆರೋಪಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಓಲಿ, ನೇಪಾಳ ತನ್ನ ನಕ್ಷೆಯಲ್ಲಿ ಕಲಾಪಣಿ, ಲಿಪುಲೆಖ್ ಮತ್ತು ಲಿಂಪಿಯಾಧುರಾ ಪ್ರದೇಶಗಳನ್ನು ಸೇರಿಸಲು ಸಂವಿಧಾನವನ್ನು ತಿದ್ದುಪಡಿ ಮಾಡುವ ನಿರ್ಧಾರಕ್ಕೆ ವಿರುದ್ಧವಾಗಿ ದೆಹಲಿಯಲ್ಲಿ “ಸಭೆಗಳನ್ನು” ಆಯೋಜಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
“ಇದು ಯೋಚಿಸಲಾಗದು… ಸಂವಿಧಾನದ ತಿದ್ದುಪಡಿಯ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಸಂಗತಿಗಳು… ಭಾರತದಲ್ಲಿ ಆಯೋಜಿಸಲಾಗುತ್ತಿರುವ ಸಭೆಗಳು… ದೆಹಲಿ ಮಾಧ್ಯಮಗಳನ್ನು ಆಲಿಸಿದರೆ, ನಮ್ಮ ಸರ್ಕಾರವನ್ನು ಉರುಳಿಸಲು ಸಂಚು” ತಿಳಿಯುತ್ತದೆ ಎಂದು ಓಲಿ ಆರೋಪಿಸಿದ್ದಾರೆ.
“ನೇಪಾಳದ ರಾಷ್ಟ್ರೀಯತೆ ದುರ್ಬಲವಲ್ಲ ಎಂದು ನೀವು ಎಲ್ಲರೂ ತಿಳಿದಿರಬೇಕು. ಇಲ್ಲದಿದ್ದರೆ ಹೊರಗಿನ ಶಕ್ತಿಗಳು ಅದನ್ನು ಉರುಳಿಸಲು ಪ್ರಯತ್ನಸುತ್ತವೆ” ಎಂದು ಅವರು ಹೇಳಿದ್ದಾರೆ.
“ಶಾಶ್ವತವಾಗಿ” ಹುದ್ದೆಯಲ್ಲಿರಲು ತನಗೆ ಯಾವುದೇ ಆಸೆ ಇಲ್ಲ. ಆದರೆ, ಈ ಸಮಯದಲ್ಲಿ ಅಧಿಕಾರ ತ್ಯಜಿಸುವ ಪ್ರಶ್ನೆಯೇ ಇಲ್ಲ. ಏಕೆಂದರೆ, ನಾನು ಅಧಿಕಾರ ತ್ಯಜಿಸಿದರೆ, ರಾಷ್ಟ್ರೀಯತೆ ಮತ್ತು ಪ್ರದೇಶದ ಸಮಸ್ಯೆಯನ್ನು ಹೆತ್ತಿಡಿಯುವ ನಾಯಕರು ಇರುವುದಿಲ್ಲ” ಎಂದು ಅವರು ಪಕ್ಷದೊಳಗಿನ ಭಿನ್ನಾಭಿಪ್ರಾಯಗಳ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಭಾರತದೊಂದಿಗಿನ ಪ್ರದೇಶಗಳನ್ನು ತಮ್ಮ ನಕಾಶೆಯಲ್ಲಿ ಒಳಗೊಂಡಿರುವ ದೇಶದ ಹೊಸ ನಕ್ಷೆಯನ್ನು ನೇಪಾಳ ತಯಾರಿಸಿದ್ದು, ಅದನ್ನು ಇತ್ತೀಚೆಗೆ ನೇಪಾಳ ಸಂವಿಧಾನ ತಿದ್ದುಪಡಿ ಮಸೂದೆಯ ಮೂಲಕ ಅನುಮೋದಿಸಿದೆ. ಇದರಿಂದಾಗಿ ಉಭಯ ದೇಶಗಳ ನಡುವಿನ ಗಡಿರೇಖೆಯಲ್ಲಿ ವಿವಾದ ಉಂಟಾಗಿದೆ.

