“ಭಾರತ – ಚೀನಾ ಘರ್ಷಣೆಯ ಬಗ್ಗೆ ಮೋದಿ ಹೇಳಿಕೆ ಸರಿಯಾಗಿದೆ…ಆದರೆ ಮೋದಿ ಸರ್ಕಾರವೇ ಘರ್ಷಣೆ ಗೆ ಕಾರಣವೂ ಆಗಿದೆ”

“ಭಾರತ – ಚೀನಾ ನಡುವಿನ ಗಾಲ್ವಾನ್ ಘರ್ಷಣೆಯ ಬಗ್ಗೆ ಮೋದಿ ಹೇಳಿಕೆ ಸರಿಯಾಗಿದೆ…ಆದರೆ ಮೋದಿ ಸರ್ಕಾರವೇ ಘರ್ಷಣೆ ಗೆ ಕಾರಣ ವೂ ಆಗಿದೆ” ಎಂದು ದೇಶದ ಹಿರಿಯ ಪತ್ರಕರ್ತರಾದ  ಪ್ರೇಂ ಶಂಕರ್ ಝಾ ಅವರು ಹೇಳಿದ್ದಾರೆ.  ಭಾರತ-ಚೀನಾ ಗಡಿ ಉದ್ವಿಘ್ನತೆಯ ಹಿಂದಿನ ನಿಜವಾದ ಕಾರಣಗಳ ಬಗ್ಗೆ ನೀಡಿರುವ ಆಳವಾದ ಹಾಗೂ ವಸ್ತುನಿಷ್ಠವಾದ ವಿವರಣೆನ್ನೂ ಅವರು ತಮ್ಮ ವಿಡಿಯೋದಲ್ಲಿ ಹೇಳಿದ್ದು, ವಿಡಿಯೀ ಲಿಂಕ್‌ ಕೂಡ ಅಂಕಣದ ಕೊನೆಯಲ್ಲಿ ಇದೆ, ಅದನ್ನೂ ನೋಡಬಹುದು.

 ಭಾರತದ ಗಡಿಗಳನ್ನು ಯಾರು ಪ್ರವೇಶಿಸಿಲ್ಲ ಎಂದು ಹೇಳುವ ಮೂಲಕ ಮೋದಿಯವರು ಮೊದಲ ಬಾರಿಗೆ ಒಬ್ಬ ರಾಜಕಾರಣಿಯಾಗಿಯಲ್ಲದೆ ಮುತ್ಸದ್ಧಿ ರಾಜತಾಂತ್ರಿಕನಾಗಿ ಮಾತನಾಡಿದ್ದಾರೆ ಎಂದು ಝಾ ಅವರು ಅಭಿಪ್ರಾಯ ಪಡುತ್ತಾರೆ. ಅದೇ ಸಮಯದಲ್ಲಿ ಚೀನಾ ಗಡಿಯಲ್ಲಿ ನಡೆದ ಘರ್ಷಣೆಗೆ ಮೋದಿ ಸರ್ಕಾರ ಕಳೆದ ಆರು ವರ್ಷಗಳಿಂದ ಅನುಸರಿಸುತ್ತಾ ಬಂದ ಬೇಜವಾಬ್ದಾರಿ ಹಾಗು ಅಮೇರಿಕ ಪರ ನೀತಿಗಳ ಪ್ರಚೋದನೆಯೇ ಕಾರಣವೆಂದು ಅವರು ಈ ಸಂದರ್ಶನದಲ್ಲಿ ಎಳೆಎಳೆಯಾಗಿ ವಿವರಿಸುತ್ತಾರೆ.

ಭಾರತ ಮತ್ತು ಚೀನಾ ನಡುವೆ ಅಂತರರಾಷ್ಟ್ರೀಯ ಗಡಿಗಳು ಇನ್ನು ನಿಗದಿಯಾಗಿಲ್ಲ. ಆದರೆ ಎರಡು ದೇಶಗಳು ಒಪ್ಪಿಕೊಳ್ಳುವ ವಾಸ್ತವಿಕ ಹತೋಟಿ ರೇಖೆಗಳಿವೆ. ಹಾಗು ಎರಡು ದೇಶಗಳ ನಡುವೆ ವಿವಾದದಲ್ಲಿರುವ ಗಡಿ ಪ್ರದೇಶಗಳು ಇವೆ. ಮೋದಿ ಹೇಳಿಕೆಯ ಪ್ರಕಾರ ವಿವಾದಿತವಾದ ಗಡಿ ಪ್ರದೇಶದೊಳಗೆ ಅವರು ಬಂದಿಲ್ಲ. ಆದರೆ ಎರಡು ದೇಶಗಳು ತಮ್ಮದೆಂದು ಭಾವಿಸುವ ಪ್ರದೇಶಗಳಲ್ಲಿ ಘರ್ಷಣೆ ನಡೆದಿದೆ. ಎಂದು ಝಾ ಅವರು ವಿವರಿಸುತ್ತಾರೆ.

ಪ್ರೇಂ ಶಂಕರ್ ಝಾ ಅವರ ಪ್ರಕಾರ ಇದು ಹೊಸ ಬೆಳವಣಿಗೆಯೇ ಆಗಿದ್ದರೂ ಗಡಿ ಅತಿಕ್ರಮಗಳು ಮುಖಾಮುಖಿ ಘರ್ಷಣೆ ಯ ಅತಿರೇಕಕ್ಕೆ ಹೋಗಲು ಹಲವಾರು ಸೈನಿಕೇತರ ಕಾರಣಗಳಿವೆ.

ಘರ್ಷಣೆ ನಡೆದ ಗಾಲ್ವಾನ್ ಕಣಿವೆಯು ಚೀನಾ – ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ನ ಭಾಗವಾಗಿರುವ ಕಾರಾಕೋರಂ ಹೈವೇ ಗೆ ಸನಿಹವಿರುವ ಭೂ ಭಾಗವಾಗಿದೆ. ಆ ಪ್ರದೇಶದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾರಾಕೋರಂ ಪಾಸ್ ಗೆ ಕೇವಲ 18 ಕಿಮಿ ದೂರವಿರುವ ಭಾರತೀಯ ಪ್ರದೇಶವಾದ ದೌಲತ್ ಬೇಗ್ ಒಲ್ದಿ ತನಕ ಗಾಲ್ವಾನ್ ಕಣಿವೆಯುದ್ದಕ್ಕೂ ಹೆಚ್ಚಿಸಿರುವ ನಿರ್ಮಾಣ ಚಟುವಟಿಕೆಗಳು ಚೀನಾಗೆ ಗಂಭೀರ ವಾದ ಪ್ರಶ್ನೆಗಳನ್ನು ಹುಟ್ಟಿಸಿದೆ. ಇದರ ಜೊತೆಗೆ ಮೋದಿ ಸರ್ಕಾರ ಅಮೇರಿಕಾದ ಪರವಾಗಿ ಹೆಚ್ಚೆಚ್ಚು ವಾಲುತ್ತಾ ಏಷಿಯಾ ಪ್ರಾಂತ್ಯದಲ್ಲಿ ಚೀನಾ ವಿರೋಧಿ ಅಮೇರಿಕ ಮೈತ್ರಿಕೂಟದ ಭಾಗವಾಗುತ್ತಿರುವುದು ಗಡಿಭಾಗದಲ್ಲಿ ನಡೆಯುತ್ತಿರುವ ನಿರ್ಮಾಣಗಳ ಬಗ್ಗೆ ಚೀನಾಗೆ ಅನುಮಾನಗಳನ್ನು ಹೆಚ್ಚಿಸಿವೆ ಎಂಬುದು ಝಾ ಅವರ ವಿಶ್ಲೇಷಣೆ.

ಅದರ ಜೊತೆಗೆ ಗೃಹಮಂತ್ರಿ ಅಮಿತ್ ಶಾ ಅವರು ಈಗ ಚೀನಾದ ಭಾಗವಾಗಿರುವ ಅಕ್ಸಾಯ್ ಚಿನ್ ಪ್ರದೇಶವನ್ನು ಮತ್ತು ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಹೈವೇ ಹಾದುಹೋಗುವ ಮತ್ತು ಪಾಕಿಸ್ತಾನದ ನಿಯಂತ್ರಣದಲ್ಲಿರುವ ಗಿಲ್ಗಿಸ್ತಾನ್ ಮತ್ತು ಬಾಲ್ಟಿಸ್ತಾನ್ ಗಳನ್ನೂ ಭಾರತದ ವಶಕ್ಕೆ ತೆಗೆದುಕೊಳ್ಳುವುದಾಗಿ ಪದೇಪದೇ ನೀಡುತ್ತಿರುವ “ಬೇಜವಾಬ್ದಾರಿ” ಹೇಳಿಕೆಗಳು ಸಹ ಈ ಅನುಮಾನಕ್ಕೆ ಪುಷ್ಠಿಯೊದಗಿಸಿವೆ. ಹೀಗಾಗಿಯೇ ಎಂದು ಇಲ್ಲದ ರೀತಿ ಚೀನಾ ಸೇನೆಯು ಒಂದು ಎಸಳು ಗರಿಕೆ ಹುಲ್ಲು ಬೆಳೆಯದ ಈ ಪ್ರದೇಶದಲ್ಲಿ ಗಸ್ತನ್ನು ಹೆಚ್ಚಿಸಿದೆ ಹಾಗು ಸ್ಟ್ರಾಟೆಜಿಕ್ ಆದ ನಿರ್ಮಾಣಗಳನ್ನು ಮಾಡಿಕೊಳ್ಳಲು ಮುಂದಾಗಿದೆ.

ಝಾ ಅವರ ಪ್ರಕಾರ ಭಾರತ ಮತ್ತು ಚೀನಾ ಸಂಬಂಧಗಳು ಮೋದಿ ಸರ್ಕಾರ ಬರುವ ಮುನ್ನ ಸುಧಾರಣೆಯ ದಿಕ್ಕಿನಲ್ಲಿದ್ದವು. 1993ರಲ್ಲಿ ಗಡಿ ಭಾಗದಲ್ಲಿ ಮಾತುಕತೆಗಳು ಒಂದಷ್ಟು ಸ್ಥಿರತೆಯನ್ನು ಸಾಧಿಸಿದ್ದವು. 2009-14ರ ತನಕ ಭಾರತ ಮತ್ತು ಚೀನಾ ನಡುವೆ ನಡೆದ ಪರಸ್ಪರ ವಿಶ್ವಾಸ ವೃದ್ಧಿ ಮಾತುಕತೆಗಳು ಫಲಪ್ರದವಾಗಿತ್ತು. ಆದ್ದರಿಂದ ಭಾರತ ಚೀನಾ ಮೂಲದಿಂದ ಯಾವುದೇ ಆತಂಕವಿಲ್ಲದೆ ಮುಂದುವರೆಯುವಂತಾಗಿತ್ತು.

ಆದರೆ ಮೋದಿ ಸರ್ಕಾರ ಭಾರತದಲ್ಲಿ 2014ರಲ್ಲಿ ಅಧಿಕಾರಕ್ಕೆ ಬಂದಮೇಲೆ ಹಾಗು 2016ರಲ್ಲಿ ಅಮೇರಿಕಾದಲ್ಲಿ ಟ್ರಂಪ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಅಮೇರಿಕಾದ ಚೀನಾ ನೀತಿಗೆ ಪೂರಕವಾಗಿ ಭಾರತದ ಚೀನಾ ನೀತಿಗಳು ಸಹ ಬದಲಾಗತೊಡಗಿದವು. ಡೋಕ್ಲಾಮ್ ಬಿಕ್ಕಟ್ಟು ಅದಕ್ಕೆ ಒಂದು ಉದಾಹರಣೆ.ಡೋಕ್ಲಾಮ್ ಸಂದರ್ಭದಲ್ಲಿ ಒಂದು ಸಾರ್ವಭೌಮಿ ದೇಶವಾಗಿರುವ ಭೂತಾನ್ ಪ್ರದೇಶವನ್ನು ಅದರ ಒಪ್ಪಿಗೆಯಿಲ್ಲದೆ ಭಾರತ ತನ್ನ ಆಸಕ್ತಿಗಳನ್ನು ಕಾಪಾಡಿಕೊಳ್ಳಲು ಅತಿಕ್ರಮಿಸಿತು. ಮೋದಿ ಸರ್ಕಾರದ ಈ ದೊಡ್ಡಣ್ಣನ ನೀತಿಯಿಂದಾಗಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಭೂತಾನ್ ದೇಶವು ನೇರವಾಗಿ ಚೀನಾದೊಂದಿಗೆ ಸಂಬಂಧಗಳನ್ನು ಸ್ಥಾಪಿಸಿಕೊಳ್ಳಲು ಪ್ರಾರಂಭಿಸಿತು.

ಹೀಗಾಗಿ ಗಾಲ್ವಾನ್ ನಂತಹ ಘರ್ಷಣೆ ಗಳು ಮರುಕಳಿಸಬಾರದೆಂದರೆ ಮೋದಿ ಸರ್ಕಾರ ತನ್ನ ಚೀನಾ ನೀತಿಯೇನೆಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ ಎಂಬುದು ಝಾ ಅವರ ಸಲಹೆ.

ಈ ನಿಟ್ಟಿನಲ್ಲಿ ಭಾರತವು 1962ರಲ್ಲಿ ಚೀನಾ ವಿರುದ್ಧ ಸೋತದ್ದರಿಂದ ಸೃಷ್ಟಿಯಾಗಿರುವ ಕೀಳರಿಮೆಯಿಂದ ಹೊರಬರಬೇಕಿದೆ.

ಝಾ ಅವರ ಪ್ರಕಾರ 1962ರಲ್ಲೂ ಚೀನ ಭಾರತದೊಂದಿಗೆ ಯುದ್ಧ ಮಾಡವ ಧೋರಣೆಯನ್ನೇನು ಹೊಂದಿರಲಿಲ್ಲ. ಆದರೆ ಪ್ರತಿಷ್ಠೆ ಹಾಗು ತಪ್ಪು ಲೆಕ್ಕಾಚಾರಗಳಿಂದ ನೆಹರೂ ಸರ್ಕಾರ ತಾನೇ ಆ ಯುದ್ಧವನ್ನು ತನ್ನ ಮೇಲೆ ಎಳೆದುಕೊಂಡಿತು ಹಾಗು ಹೀನಾಯವಾಗಿ ಸೋತಿತು.

ಆದರೂ ಚೀನಾ ತಾನು ಗೆದ್ದಿದ್ದ ತವಾಂಗ್ ಪ್ರದೇಶವನ್ನು ಭಾರತಕ್ಕೆ ಮರಳಿಸಿ ತನಗೆ ಭಾರತದೊಂದಿಗೆ ಯುದ್ಧ ಬೇಕಿರಲಿಲ್ಲಎಂಬ ಸಂದೇಶವನ್ನು ಸ್ಪಷ್ಟವಾಗಿ ನೀಡಿತ್ತು.

ಚೀನಾದೊಂದಿಗೆ ಯುದ್ಧ ಮಾಡಬೇಕೆನ್ನುವವರು ಎಂದಿಗೂ ತಮ್ಮ ಜೀವನದಲ್ಲಿ ಗಡಿಗೆ ಹೋಗುವುದಿರಲಿ ಬಂದೂಕನ್ನು ಹಿಡಿದಿರಲಿಕ್ಕಿಲ್ಲ ಎಂದು ತೀಕ್ಷ್ಣವಾಗಿ ನುಡಿಯುವ ಝಾ ಅವರು ಚೀನಾ ಜೊತೆ ಯುದ್ಧ ಯಾವ ಕಾರಣಕ್ಕೆ ಕೂಡದು ಎಂಬ ಬಗ್ಗೆ ಮತ್ತೊಂದು ಘಟನೆಯನ್ನು ಉಲ್ಲೇಖಿಸುತ್ತಾರೆ.

ಹತ್ತು – ಹನ್ನೆರೆಡು ವರ್ಷಗಳ ಕೆಳಗೆ ಭಾರತಕ್ಕೆ ಸೇನಾ ಸಾಮಗ್ರಿಗಳ ಮಾರಾಟ ಒಪ್ಪಂದ ಕುದುರಿಸಲು ಬಂದಿದ್ದ ಅಮೇರಿಕಾದ ಸಹಾಯಕ ಕಾರ್ಯದರ್ಶಿಯೊಬ್ಬರು ಝಾ ಅವರನ್ನು ಭೇಟಿ ಮಾಡುತ್ತಾರೆ. ಝಾ ಜೊತೆ ಅವರು ಮಾತನಾಡುತ್ತಾ ” ಒಂದೊಮ್ಮೆ ಭಾರತವು ಚೀನಾದೊಡನೆ ಯುದ್ಧ ಮಾಡಿದ್ದೆ ಆದಲ್ಲಿ ಚೀನಾ ಸೈನ್ಯವು ತನ್ನ ಒಂದು ಕೈಯನ್ನು ಬೆನ್ನಿಗೆ ಕಟ್ಟಿಕೊಂಡು ಕೂಡ ಕೇವಲ ಎರಡೇ ದಿನಗಳಲ್ಲಿ ಭಾರತವನ್ನು ಸೋಲಿಸಬಲ್ಲದು” ಎಂದು ಹೇಳುತ್ತಾರೆ.

ಇದು 12 ವರ್ಷದ ಕೆಳಗಿನ ಮಾತು. ಈಗ ಚೀನಾ ಅಂದಿಗಿಂತ ಹಲವಾರು ಪಟ್ಟು ತಾಕತ್ತನ್ನು ಪಡೆದುಕೊಂಡಿದೆ.

ಆದ್ದರಿಂದ ನಮ್ಮ ಸೈನಿಕರಿಗೆ ರಾಜಕೀಯ ಪ್ರಭುಗಳು ಸಾಧ್ಯವಾಗುವ ಹಾಗು ವಾಸ್ತವಿಕ ಗುರಿಗಳನ್ನು ಕೊಡಬೇಕೇ ವಿನಾ ಕೇವಲ ಬಲಿಯಾಗುವ ಹೆಣಗಳನ್ನು ಹಾಗು ಹೀರೊಗಳನ್ನು ಮಾತ್ರ ಉತ್ಪಾದಿಸುವ ಘರ್ಷಣೆಗೆ ದೂಡಬಾರದೆಂದು ಕಟುವಾಗಿ ಆದರೆ ಸ್ಪಷ್ಟವಾಗಿ ಹೇಳುತ್ತಾರೆ.

ಈಗಲಾದರೂ ಪರಿಸ್ಥಿತಿ ಕೈಮೀರಿಲ್ಲ. ಆದ್ದರಿಂದ ಭಾರತವು ಚೀನಾದೊಂದಿಗೆ ಸ್ವತಂತ್ರ ವಿದೇಶಾಂಗ ಸಂಬಂಧಗಳನ್ನು ರೂಪಿಸಿಕೊಳ್ಳಬೇಕು ಹಾಗು ತನ್ನ ಆಂತರಿಕ ರಾಜಕಾರಣಕ್ಕಾಗಿ ಬೇಜವಾಬ್ದಾರಿ ವಿದೇಸಾಂಗ ನೀತಿಯನ್ನು ಅನುಸರಿಸಬಾರದೆಂದು ಈ ಹಿರಿಯ ಪತ್ರಕರ್ತರು ಆಗ್ರಹಿಸುತ್ತಾರೆ.

– ಶಿವಸುಂದರ್

 

ಪ್ರೇಮ್ ಶಂಕರ್ ಝಾ ಅವರು ಭಾರತದ ಅತ್ಯಂತ ಹಿರಿಯ ಹಾಗು ದೇಶಕಂಡ ಅತ್ಯಂತ ವಸ್ತುನಿಷ್ಠ – ಪ್ರಾಮಾಣಿಕ ಪತ್ರಕರ್ತರು. ವಿಶ್ವಸಂಸ್ಥೆ, ವಿಶ್ವಬ್ಯಾಂಕುಗಳಲ್ಲಿ ಅರ್ಥಶಾಸ್ತ್ರಜ್ಞರಾಗಿಯೂ ಕೆಲಸ ಮಾಡಿದ್ದ ಅವರು
Hindusthan Times, The Times Of India, The Economic Times, ಹಾಗೂ Financial Express ಪತ್ರಿಕೆಗಳ ಸಂಪಾದಕರಾಗಿದ್ದರು. Crouching Dragon, Hidden Tiger: Can China and India Dominate the West? ಎಂಬ ಪುಸ್ತಕವನ್ನು ಒಳಗೊಂಡಂತೆ ಭಾರತದ ಭವಿಷ್ಯದ ಬಗ್ಗೆ ಕಾಳಜಿ ಮತ್ತು ಕಳವಳ ಹಾಗು ವಸ್ತು ನಿಷ್ಠ ಸಲಹೆಗಳನ್ನು ಒದಗಿಸುವ ಹಲವಾರು ಪುಸ್ತಕಗಳನ್ನು ಸಹ ಬರೆದಿದ್ದಾರೆ. ವಿಪಿ. ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಅವರ ಪತ್ರಿಕಾ ಸಲಹೆಗಾರರಾಗಿಯೂ ಕೆಲಸ ಮಾಡಿದ್ದ ಝಾ ಅವರು ಈಗ ಘರ್ಷಣೆ ನಡೆದಿರುವ ಭಾರತ- ಚೀನಾ ಗಡಿಗಳ ಇಕ್ಕೆಲಗಳಿಗೂ ಹಲವಾರು ಸಾರಿ ಭೇಟಿ ಕೊಟ್ಟಿದ್ದರು.

ಈ ಎಲ್ಲಾ ಹಿನ್ನೆಲೆಯಲ್ಲಿ ಅವರು ಭಾರತ ಮತ್ತು ಚೀನಾ ನಡುವಿನ ಇಂದಿನ ಘರ್ಷಣೆಗಳನ್ನು ಇತಿಹಾಸ , ವರ್ತಮಾನ ಮತ್ತು ಭವಿಷ್ಯದ ದೃಷ್ಟಿಯಿಂದ ಅಧಿಕೃತವಾಗಿ ಮಾತನಾಡಬಲ್ಲವರಾಗಿದ್ದಾರೆ.

ದಯವಿಟ್ಟು ಬಿಡುವು ಮಾಡಿಕೊಂಡು  ಸಂದರ್ಶನವನ್ನು ಕೇಳಿ :


ಇದನ್ನೂ ಓದಿ: ಮೋದಿಯ ವಿದೇಶಾಂಗ ನೀತಿಯಲ್ಲಿ ಮೋದಿಗೆ ಮೊದಲ ಆದ್ಯತೆ; ಭಾರತಕ್ಕೆ ನಂತರದ್ದು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights