ಸುಗಂಧಿ ಬೇರು- 08: ರಾಮಭಾವು ವಿಜಾಪುರೆ: ‘ಹೊಸ ಘರಾಣೆಗೆ ನಾಂದಿ ಹಾಡಿದ ಸಂಗೀತ ದಿಗ್ಗಜ’

“ನಿರ್ಜೀವವಾದ ಬಿದಿರಿನ ತುಂಡು ಕೃಷ್ಣನ ತುಟಿಗೆ ತಾಕಿದರೆ, ಕೊಳಲಾಗಿ ಮಾರ್ಪಟ್ಟು ಅದರ ನಾದದಿಂದ ಸಮಸ್ತ ಬ್ರಹ್ಮಾಂಡವೇ ಓಲಾಡುತ್ತದೆ. ಹಾಗೆಯೇ ನಿರ್ಜೀವವಾದ ಕಟ್ಟಿಗೆಯ ಪೆಟ್ಟಿಗೆಗೆ ವಿಜಾಪುರೆಯವರ ಕೈಯ ತಾಕಿದರೆ, ಅಲ್ಲಿ ನಾದ ಲೋಕವೇ ಸೃಷ್ಟಿಯಾಗುತ್ತದೆ. ತನ್ಮೂಲಕ ಪರಮಾತ್ಮನ ದರ್ಶನವಾಗುತ್ತದೆ. ಜೀವನ ಧನ್ಯವಾದಂಥ ಭಾವನೆ ಮನಸ್ಸನ್ನು ತುಂಬುತ್ತದೆ. ವಿಜಾಪುರೆಯವರು ಭೌತಿಕವಾಗಿ ಸಮಾನ್ಯರಂತೆ ಕಂಡರೂ ಅವರೊಬ್ಬ ಅಸಾಮಾನ್ಯರು. ಅತ್ಯಂತ ನಿಗರ್ವಿಗಳು. ಪ್ರಚಾರ ಪ್ರಿಯರಲ್ಲ; ಕಾಯಕ ಪ್ರಿಯರು. ಹಣಕ್ಕಾಗಿ ಗಂಟು ಬಿದ್ದವರಲ್ಲ. ಸಂಗೀತಕ್ಕೆ ಇನ್ನೊಂದು ಹೆಸರು ರಾಮಭಾವು ವಿಜಾಪುರೆ.”

ಹರ್ಮೋನಿಯಂ ವಾದಕರಾದ ರಾಮಭಾವು ವಿಜಾಪುರೆಯವರಿಗೆ 75 ವರ್ಷಗಳು ತುಂಬಿದ ಸಂದರ್ಭ. ಆಗ ಬೆಳಗಾವಿಯಲ್ಲಿ 1991ರಲ್ಲಿ ಗೌರವ ಸಮರ್ಪಣೆಯ ದೊಡ್ಡ ಕಾರ್ಯಕ್ರಮವನ್ನೇ ಹಮ್ಮಿಕೊಳ್ಳಲಾಯಿತು. ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ಚಂದ್ರಕಾಂತ ಕುಸನೂರ ಅವರು ಹೇಳಿದ ಮಾತುಗಳಿವು. ಇವು ವಿಜಾಪುರೆಯವರ ಜೀವನ ಮತ್ತು ವ್ಯಕ್ತಿತ್ವವನ್ನು ಧ್ವನಿಸುತ್ತವೆ. ಅದೇ ಸಂದರ್ಭದಲ್ಲಿ ವಿಜಾಪುರೆಯವರು ಪ್ರಾರಂಭಿಸಿದ ‘ಶ್ರೀರಾಮ ಸಂಗೀತ ವಿದ್ಯಾಲಯ’ಕ್ಕೆ ಐವತ್ತು ವರ್ಷಗಳ ಸುವರ್ಣ ಮಹೋತ್ಸವವನ್ನೂ ಆಚರಿಸಲಾಯಿತು. ರಾಮಭಾವು ವಿಜಾಪುರೆಯವರು(1917-2010) ಸುದೀರ್ಘವಾಗಿ ಹರ್ಮೋನಿಯಂ ವಾದನದ ಮೂಲಕ ಸಂಗೀತ ಪ್ರಿಯರ ಮನಸ್ಸನ್ನು ಸಂಪ್ರೀತಗೊಳಿಸಿದ್ದಾರೆ. ಗಾಯನ ಕಛೇರಿಗಳಲ್ಲಿ ಬರಿ ಪಕ್ಕವಾದ್ಯವಾಗಿಯಷ್ಟೇ ಬಳಕೆಯಾಗುತ್ತಿದ್ದ ಹರ್ಮೋನಿಯಂಗೆ ಹೆಗ್ಗುರುತನ್ನು ಒದಗಿಸಿಕೊಟ್ಟಿದ್ದಾರೆ. ಹರ್ಮೋನಿಯಂಗೆ ಸ್ವತಂತ್ರ ವ್ಯಕ್ತಿತ್ವ ಇರುವುದನ್ನು ಗುರುತಿಸಿದ್ದಾರೆ. ಅದಕ್ಕೆ ಸಾರ್ವಕಾಲಿಕ ಮಾನ್ಯತೆಯನ್ನು ಒದಗಿಸಿ ಕೊಟ್ಟಿದ್ದಾರೆ. ವಿಜಾಪುರೆಯವರು ತಮ್ಮ ಅದ್ಭುತ ಸಂಗೀತ ಪ್ರತಿಭೆ ಹಾಗೂ ಅಪಾರವಾದ ಸಂಗೀತ ಸ್ವರಾನುಭವದ ಮೂಲಕ ಹರ್ಮೋನಿಯಂ ಯಾನದಲ್ಲಿ ಹೊಸ ಶೈಲಿಗೆ ನಾಂದಿ ಹಾಡಿದ್ದಾರೆ. ಅವರ ಸತತ ಸಾಧನೆಯಿಂದ ಹರ್ಮೋನಿಯಂ ಸಂಗೀತದಲ್ಲಿ ಬಿಜಾಪುರೆ ಎಂಬ ಹೊಸದೊಂದು ಘರಾಣೆಯೇ ಜನ್ಮತಾಳಿದೆ. ಇಂತಹ ಅಪರೂಪದ ಸಂಗೀತಗಾರನ ಜೀವನಗಾಥೆಯನ್ನು ಶಿರೀಷ ಜೊಶಿಯವರು ‘ಸ್ವರಯಾನ’ ಎಂಬ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಕೃತಿಯು ಬೆಂಗಳೂರಿನಲ್ಲಿ ಸ್ಥಾಪನೆಯಾದ ‘ಬಿಜಾಪುರೆ ಹರ್ಮೋನಿಯಂ ಫೌಂಡೇಷನ್’ ಮೂಲಕ 2007ರಲ್ಲಿ ಪ್ರಕಟವಾಗಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕಾಗವಾಡದಲ್ಲಿ ಜನಿಸಿದ ವಿಜಾಪುರೆಯವರ ಬಾಲ್ಯದ ಜೀವನವು ಬಡತನದಿಂದ ಕೂಡಿತ್ತು. ಇವರ ತಂದೆ ಕಲ್ಲೋಪಂತ ವಿಜಾಪುರೆಯುವರು ಶಾಲಾ ಶಿಕ್ಷಕರಾಗಿದ್ದರು; ಸಾಹಿತ್ಯದಲ್ಲಿ ಆಸಕ್ತಿಯಿದ್ದ ಅವರು ಸಂಗೀತ ಪ್ರೇಮಿಗಳಾಗಿದ್ದರು. ಸಂಗೀತ ಕಲಿಯಲು ತಮ್ಮ ಮಗನಿಗೆ ಬಾಲ್ಯದಿಂದಲೇ ಪ್ರೋತ್ಸಾಹ ನೀಡಿದರು. ಕಲ್ಲೋಪಂತರು ಆಗ ಅಂಕಲಗಿಯ ಸಮೀಪದ ಅಕ್ಕತಂಗೇರಹಾಳ ಎಂಬ ಹಳ್ಳಿಯಲ್ಲಿ ವಾಸವಾಗಿದ್ದರು. ಬಾಲಕ ರಾಮಭಾವು ಜಾತ್ರೆಗಳಲ್ಲಿ ನಡೆಯುವ ನಾಟಕಗಳನ್ನು ನೋಡುತ್ತಿದ್ದ. ಅಂದಿನ ನಾಟಕಗಳಲ್ಲಿ ಹರ್ಮೋನಿಯಂ ಪ್ರಧಾನ ವಾದ್ಯವಾಗಿತ್ತು. ಹಣ್ಣೀಕೇರಿ ಮಲ್ಲಯ್ಯನವರಿಂದ ಬಿಜಾಪುರೆಯವರಿಗೆ ಮೊದಲ ಸಂಗೀತ ಪಾಠಗಳು ದೊರೆತವು. ನಂತರದಲ್ಲಿ ಕಲ್ಲೋಪಂತರು ಬೆಳಗಾವಿಗೆ ಬಂದು ನೆಲೆಸಿದರು. ಇದು ಬಿಜಾಪುರೆಯವರ ಸಂಗೀತ ಕಲಿಕೆಗೆ ಹೊಸ ಲೋಕವೇ ತೆರೆದಂತಾಯಿತು. ಬೆಳಗಾವಿಯ ಮಹಾದೇವ ಗಲ್ಲಿಯು ಸಂಗೀತಕ್ಕೆ ಪ್ರಸಿದ್ಧವಾಗಿತ್ತು. ಹಿಂದುಸ್ಥಾನಿ ಸಂಗೀತದ ದಿಗ್ಗಜರಾದ ಪಂಡಿತ ರಾಮಕೃಷ್ಣಬುವಾ ವಝೆ ಮತ್ತು ಅವರ ಮಗ ಪಂಡಿತ ಶಿವರಾಮಬುವಾ ವಝೆ ಅಲ್ಲಿಯೇ ನೆಲೆಸಿದ್ದರು. ಸವಾಯಿ ಗಂಧರ್ವರ ಶಿಷ್ಯರಾದ ಕಾಗಲಕರಬುವಾ ಅಲ್ಲಿದ್ದರು. ಇವರ ಗರಡಿಯಲ್ಲಿ ಬಿಜಾಪುರೆಯವರ ಸಂಗೀತಭ್ಯಾಸ ಶುರುವಾಯಿತು. ಪ್ರಸಿದ್ಧ ಹರ್ಮೋನಿಯಂ ವಾದಕರಾದ ಗೋವಿಂದರಾವ ಗಾಯಕವಾಡ, ರಾಮದುರ್ಗಬುವಾ ಅಲ್ಲಿದ್ದರು. ಸ್ವಾತಂತ್ರ್ಯ ಪೂರ್ವದ ಮೂವತ್ತರ ದಶಕದ ಆ ಕಾಲದಲ್ಲಿ ಬೆಳಗಾವಿಯು ಸಂಗೀತದ ವಾತಾವರಣಕ್ಕೆ ಪ್ರಖ್ಯಾತವಾಗಿತ್ತು. ಈ ಪರಿಸರವೇ ಬಿಜಾಪುರೆಯುವರ ಸಂಗೀತ ಕಲಿಕೆಗೆ ಪೂರಕವೂ ಪ್ರೇರಕವೂ ಆಗಿತ್ತು.

ಶಿರಹಟ್ಟಿ ವೆಂಕೋಬರಾಯರು ಬಾಲ್ಯದಲ್ಲಿಯೇ ರಾಮಭಾವು ಹುಡುಗನ ಹರ್ಮೋನಿಯಂ ವಾದನವನ್ನು ಮೆಚ್ಚಿಕೊಂಡು ತಮ್ಮ ನಾಟಕ ಕಂಪನಿಯಲ್ಲಿ ಸೇರಿಸಿಕೊಳ್ಳುತ್ತಾರೆ. ಆಗ ವೆಂಕೋಬರಾಯರ ಕಂಪನಿಯು ‘ಸಂಪೂರ್ಣ ರಾಮಾಯಣ’ ಮತ್ತು ‘ದಶಾವತಾರ’ದಂತಹ ಪೌರಾಣಿಕ ನಾಟಕಗಳನ್ನು ಪ್ರದರ್ಶಿಸುತ್ತಿತ್ತು. ಒಂದು ನಾಟಕದಲ್ಲಿ 20ರಿಂದ 30 ಹಾಡುಗಳಿರುತ್ತಿದ್ದವು. ಆಗೆಲ್ಲ ನಟ-ನಟಿಯರಿಗೂ ಹಾಡುವ ಪ್ರತಿಭೆ ಇರಬೇಕಾಗಿತ್ತು. ಆದ್ದರಿಂದ ನಾಟಕಗಳಿಗೆ ಹರ್ಮೋನಿಯಂ ನುಡಿಸುವವರಿಗೆ ಅಗ್ರಸ್ಥಾನವಿತ್ತು. ಬಿಜಾಪುರೆಯವರು ತಿಂಗಳಿಗೆ ಮೂವತ್ತು ರೂಪಾಯಿ ಸಂಬಳದಲ್ಲಿ ಹರ್ಮೋನಿಯಂ ವಾದಕರಾಗಿದ್ದರು. ಅವರಿಗೆ ತಾನು ಶೋಷಿತನಾಗುತ್ತಿರುವುದು ತಿಳಿದು, ಅದರಿಂದ ನೊಂದುಕೊಂಡು ಅಲ್ಲಿಂದ ಹೊರಬರುತ್ತಾರೆ. ಪುನಃ ಸಂಗೀತ ಕಲಿಕೆಯನ್ನು ಮುಂದುವರೆಸುತ್ತಾರೆ. ಸಂಗೀತ ಕಲಿಕೆಯ ಅದಮ್ಯ ದಾಹ ಮತ್ತು ಕುತೂಹಲವು ಅವರನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುತ್ತದೆ.

ಬೆಳಗಾವಿಯಲ್ಲಿ ಬಿಜಾಪುರೆಯವರ ಹರ್ಮೋನಿಯಂ ವಾದನವನ್ನು ಆಲಿಸಿದ ಬಾಲಗಂಧರ್ವರು ಅವರನ್ನು ಮನದುಂಬಿ ಮೆಚ್ಚಿಕೊಳ್ಳುತ್ತಾರೆ. ಪ್ರತಿಷ್ಠಿತ ಎಚ್.ಎಂ.ವಿ. ಕಂಪನಿಯು 1937ರಲ್ಲಿ ಹಾಡುಗಳ ಧ್ವನಿ ಮುದ್ರಣಕ್ಕಾಗಿ ಬೆಳಗಾವಿಗೆ ಬಂದಾಗ ಜಿಜಾಪುರೆಯವರನ್ನು ಹರ್ಮೋನಿಯಂ ವಾದಕರೆಂದು ನೇಮಿಸಿಕೊಳ್ಳುತ್ತದೆ. ಇವರ ಜೊತೆಯಲ್ಲಿ ನಾರಾಯಣರಾವ ಚಿಕ್ಕೋಡಿಯವರು ತಬಲಾ ವಾದಕರಾಗಿ, ಲಕ್ಷ್ಮಣಬುವಾ ವಝೆ (ರಾಮಕೃಷ್ಣಬುವಾ ವಝೆಯವರ ಮಗ) ಸಿತಾರ ವಾದಕರಾಗಿ ಸೇರಿಕೊಳ್ಳುತ್ತಾರೆ. ಬಿಜಾಪುರೆಯರ ಬೆರಳುಗಳು ಹರ್ಮೋನಿಯಂ ಕೀಗಳ ಮೇಲಾಡುವುದನ್ನು ಬೆಳಗಾವಿಗೆ ಬಂದಿದ್ದ ರಶಿಯನ್ ತಂಡದವರು ದೃಶ್ಯೀಕರಿಸಿಕೊಂಡು ಹೋಗುತ್ತಾರೆ. ಅವರು ಹರ್ಮೋನಿಯಂ ಕೀಗಳನ್ನು ತುಂಬ ಮೃದುವಾಗಿ ಸ್ಪರ್ಶಿಸುತ್ತಾರೆ. ಇದರಿಂದ ಅವರ ಬಹಳಷ್ಟು ಶಿಷ್ಯರು ಪ್ರಭಾವಿತರಾಗಿದ್ದಾರೆ. ಬಿಜಾಪುರೆಯವರು ರಾಗವನ್ನು ಪ್ರಸ್ತುತಿ ಮಾಡುವ ವಿಧಾನವು ವಿಶಿಷ್ಟವಾಗಿರುತ್ತದೆ. ಹರ್ಮೋನಿಯಂ ಭಾತೆಗೆ ಬಳಕೆಯಾಗುವ ಅವರ ಎಡಗೈ ಆಗಾಗ ರಾಗಕ್ಕೆ ತಕ್ಕಂತೆ ಗಾಳಿಯಲ್ಲಿ ತೇಲಾಡುತ್ತಿರುತ್ತದೆ. ಅವರು ಹರ್ಮೋನಿಯಂದೊಂದಿಗೆ ತನ್ಮಯತೆಯನ್ನು ಸಾಧಿಸುತ್ತಲೇ ಪ್ರೇಕ್ಷಕರೊಂದಿಗೂ ಮುಖಭಾವದ ಮೂಲಕ ಸಂವಾದವನ್ನು ನಡೆಸುತ್ತಾರೆ. ಅವರು ಸಂಗೀತ ಸಹೃದಯರಿಗೆ ಎಂದಿಗೂ ಬೇಸರಪಡಿಸಿದವರಲ್ಲ; ವಿಜಾಪುರೆಯವರ ಹರ್ಮೋನಿಯಂ ವಾದನವು ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಅವರು ಹೊಸ ನಾದ ಲೋಕವನ್ನೇ ಸೃಷ್ಟಿಸುತ್ತಾರೆ. ಲಹರಿ ಸಂಸ್ಥೆಯು ಇವರ ಹರ್ಮೋನಿಯಂ ವಾದನದ ‘ಮೇರು’ ಎಂಬ ಸಿ.ಡಿ.ಯನ್ನು ಹೊರತಂದಿದೆ. ಇದನ್ನು ಆಸ್ವಾದಿಸುವ ಆನಂದವೇ ಅದ್ಭುತವಾದದ್ದು.

ಬಿಜಾಪುರೆಯವರು ಲೆಕ್ಕವಿಲ್ಲದಷ್ಟು ಹರ್ಮೋನಿಯಂ ಸೊಲೋ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಐದು ತಲೆಮಾರುಗಳ ಗಾಯಕ-ಗಾಯಕಿಯರೊಂದಿಗೆ ಹರ್ಮೋನಿಯಂ ಸಾಥಿಯನ್ನು ನೀಡಿದ ಹೆಗ್ಗಳಿಗೆ ಅವರದ್ದಾಗಿದೆ. ತಮ್ಮ ಹದಿಹರೆಯದ ವಯಸ್ಸಿನಲ್ಲಿಯೇ ಕಿರಾಣಾ ಘರಾಣೆಯ ಸಂಗೀತ ಪ್ರವರ್ತಕರಾದ ಉಸ್ತಾದ್ ಅಬ್ದುಲ್ ಕರೀಂಖಾನ್‌ರಿಗೆ ಸಾಥಿ ನೀಡಿದ್ದಾರೆ; ಎರಡನೆಯ ತಲೆಮಾರಿನಲ್ಲಿ ಪಂಡಿತ ರಾಮಕೃಷ್ಣಬುವಾ ವಝೆ, ವಿಲಾಯತ ಹುಸೇನ್ ಖಾನ್, ಪಂಡಿತ ಅಮೀರಖಾನ್, ರೋಷನ್ ಆರಾ ಬೇಗಂ, ಸವಾಯಿ ಗಂಧರ್ವರ ಗಾಯನಗಳಿಗೆ ಹರ್ಮೋನಿಯಂ ಸಾಥಿ ನೀಡಿದ್ದಾರೆ; ಇವರೆಲ್ಲ ವಿಜಾಪುರೆಯವರಿಗಿಂತ ಹಿರಿಯರಾಗಿದ್ದರು. ಮೂರನೇ ತಲೆಮಾರಿನ ಗಾಯಕ-ಗಾಯಕಿಯರಲ್ಲಿ ಪಂಡಿತ ಶಿವರಾಮಬುವಾ ವಝೆ, ಪಂಡಿತ ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್ಲ, ಪಂಡಿತ ಕುಮಾರ ಗಂಧರ್ವ, ಪಂಡಿತ ಭೀಮಸೇನ ಜೋಶಿ, ಪಂಡಿತ ಬಸವರಾಜ ರಾಜಗುರು, ವಸಂತರಾವ ದೇಶಪಾಂಡೆ, ನಾರಾಯಣರಾವ ಮಜುಂದಾರ್, ಆರ್.ಎನ್. ಜೋಶಿ ಮೊದಲಾದವರಿದ್ದಾರೆ. ಇವರು ವಿಜಾಪುರೆಯವರ ಸಮಕಾಲೀನರು. ತಮಗಿಂತಲೂ ಕಿರಿಯರಾದ ನಾಲ್ಕನೇ ತಲೆಮಾರಿನಲ್ಲಿ ಪ್ರಭಾ ಅತ್ರೆ, ಮಾಧವ ಗುಡಿ, ಕಿಶೋರಿ ಅಮೋಣಕರ್, ಮಾಲಿನಿ ರಾಜೂರಕರ್, ಜಯಶ್ರೀ ಪಾಟಣೇಕರ್, ವೆಂಕಟೇಶ ಕುಮಾರ್, ಗಣಪತಿ ಭಟ್, ಅನಂತ ತೇರದಾಳ, ಜಾನಕಿ ಅಯ್ಯರ್-ಇವರ ಗಾಯನಕ್ಕೂ ಬಿಜಾಪುರೆಯವರು ಸಾಥಿಯಾಗಿದ್ದಾರೆ. ಐದನೇ ತಲೆಮಾರಿನಲ್ಲಿ ಶ್ರೀಧರ್ ಕುಲಕರ್ಣಿ, ಸಂಜೀವ ಅಭ್ಯಂಕರ್, ವೀರಭದ್ರಯ್ಯ ಯರಗಲ್ಲಮಠ ಮೊದಲಾದವರಿಗೂ ಸಾಥಿಯನ್ನು ನೀಡಿದ್ದಾರೆ. ಹೀಗೆ ಬಿಜಾಪುರೆಯವರು ತಮ್ಮ ತೊಂಬತ್ಮೂರು ವರ್ಷಗಳ ದೀರ್ಘ ಜೀವಮಾನದಲ್ಲಿ ಎಂಬತ್ತು ವರ್ಷಗಳ ಕಾಲ ಹರ್ಮೋನಿಯಂನೊಂದಿಗೆ ಒಡನಾಡಿದ್ದಾರೆ.

ಹರ್ಮೋನಿಯಂ ಮೂಲತಃ ಭಾರತೀಯ ವಾದ್ಯವಲ್ಲ; ಇದು 1840ರ ಸುಮಾರಿನಲ್ಲಿ ಫ್ರಾನ್ಸ್ ದೇಶದಲ್ಲಿ ಅಲೆಕ್ಸಾಂಡರ್-ದ-ಬೆ ಎಂಬಾತನಿಂದ ನಿರ್ಮಾಣಗೊಂಡಿತು. ಇದು ಟರ್ಕಿ ಮತ್ತು ಇರಾಣಗಳ ಮೂಖಾಂತರ ಭಾರತಕ್ಕೆ ಪ್ರವೇಶಿಸಿದ್ದು 1880ರ ಸುಮಾರಿನಲ್ಲಿ ಎಂದು ಹೇಳಲಾಗುತ್ತದೆ. ಆಗಿನ ಹರ್ಮೋನಿಯಂ ‘ಕಾಲು ಪೆಟ್ಟಿಗೆ’ಯ ಆಕಾರದಲ್ಲಿತ್ತು. ಇದು ಗಟ್ಟಿಯಾದ ಸ್ವರಗಳನ್ನು ದೂರದವರೆಗೂ ಕೇಳುವಂತೆ ಹೊರಡಿಸುತ್ತಿತ್ತು. ‘ಹರ್ಮೊನಿ’ ಎಂದರೆ ‘ಇಂಪು’ ಮತ್ತು ‘ಸ್ವರ ಸಂವಾದ’ ಎಂಬ ಅರ್ಥಗಳಿವೆ; ‘ಸಾಮರಸ್ಯ’ ಎಂಬರ್ಥವೂ ಇದೆ. ಈ ವಾದ್ಯವನ್ನು ಮೊದಲು ಕ್ರಿಶ್ಚಿಯನ್ ಮಿಶನರಿ ಮತ್ತು ಪಾರ್ಸಿ ನಾಟಕ ಕಂಪನಿಗಳು ಬಳಸಿಕೊಂಡವು. ಆದ್ದರಿಂದ ಈ ವಾದ್ಯವು ಕ್ಷಿಪ್ರವಾಗಿಯೇ ಹರಿಕತೆ, ಕೀರ್ತನೆ, ದೊಡ್ಡಾಟ, ನಾಟಕಗಳಲ್ಲಿ ಬಳಕೆಯಾಗಿ ಜನಪ್ರಿಯವಾಯಿತು. ಈ ದೊಡ್ಡ ಆಕಾರದ ಹರ್ಮೋನಿಯಂನ್ನು ‘ಡಿ.ಎಸ್. ರಾಮಸಿಂಗ್’ ಎಂಬ ಕಂಪನಿಯು ಇಂದಿನ ಚಿಕ್ಕಗಾತ್ರದ ವಾದ್ಯವನ್ನಾಗಿ ಪರಿವರ್ತಿಸಿತು. ಇದನ್ನು ಹಿಂದುಸ್ಥಾನಿ ಹಾಡುಗಾರಿಕೆಗೆ ಜೊತೆವಾದ್ಯವೆಂದು ಬಳಸುವ ಪ್ರಯತ್ನಗಳು ನಡೆದವು. ಆದರೆ ಇದನ್ನು ಹಿಂದುಸ್ಥಾನಿ ಸಂಗೀತಕ್ಕೆ ಮತ್ತು ಸೊಲೋ ನುಡಿಸಲು ಈ ವಾದ್ಯವು ಸರಿಹೊಂದುವುದಿಲ್ಲವೆಂಬ ವಿವಾದಗಳು ಎದ್ದವು; ಇದರ ಬಗ್ಗೆ ಅನೇಕ ಆಪಾದನೆಗಳನ್ನೂ ಮಾಡಲಾಯಿತು. ಈ ವಾದ್ಯವು ಭಾರತೀಯ ಮೂಲದ್ದಲ್ಲವೆಂಬ ಕಾರಣಕ್ಕೆ ರವೀಂದ್ರನಾಥ ಠಾಗೋರರು ಹರ್ಮೋನಿಯಂನ್ನು ವಿರೋಧಿಸಿದರು. ಇದು ಎಷ್ಟರಮಟ್ಟಿಗೆ ಎಂದರೆ ಠಾಗೋರರು, ಜವಾಹರಲಾಲ ನೆಹರು ಅವರ ಮುಖಾಂತರ ರೇಡಿಯೋದಲ್ಲಿ ಹರ್ಮೋನಿಯಂ ವಾದನವನ್ನು ನಿಷೇಧಿಸಿದರೆಂದು ಭಾಸ್ಕರ್ ಚಂದಾವರ್ಕರ್ ಹೇಳುತ್ತಾರೆ. ಇದರಿಂದಾಗಿ ಹರ್ಮೋನಿಯಂ 1970ರ ದಶಕದವರೆಗೂ ರೇಡಿಯೋದಲ್ಲಿ ನಿಷೇಧಗೊಂಡಿತ್ತು. ಇಷ್ಟೆಲ್ಲ ಅಪವಾದಗಳ ನಡುವೆಯೂ ಹರ್ಮೋನಿಯಂ ಜನಪ್ರಿಯ ವಾದ್ಯವಾಗಿಯೇ ಉಳಿದುಕೊಂಡಿದೆ. ವಿಜಾಪುರೆಯವರು ಇಂತಹ ಹರ್ಮೋನಿಯಂಗೆ ಘನತೆ ಮತ್ತು ಗೌರವದ ಸ್ಥಾನಮಾನವನ್ನು ದೊರಕಿಸಿಕೊಟ್ಟಿದ್ದಾರೆ. ಇಂದು ಭಾರತ ಮಾತ್ರವೇ ಹರ್ಮೋನಿಯಂಗೆ ಪೋಷಕ ದೇಶವಾಗಿದೆ.

ಬಿಜಾಪುರೆಯವರು 1938ರಲ್ಲಿ ‘ಶ್ರೀರಾಮ ಸಂಗೀತ ವಿದ್ಯಾಲಯ’ವನ್ನು ಪ್ರಾರಂಭಿಸಿದರು. ಈ ಶಿಕೋಣಿಯ ಮೂಲಕ ಬಿಜಾಪುರೆಯವರು ಸಾವಿರಾರು ಸಂಗೀತಾಸಕ್ತ ವಿದ್ಯಾರ್ಥಿಗಳಿಗೆ ಹರ್ಮೋನಿಯಂ ವಿದ್ಯೆಯನ್ನು ಹೇಳಿಕೊಟ್ಟಿದ್ದಾರೆ. ಆಗ ಒಬ್ಬರಿಗೆ ತಿಂಗಳಿಗೆ ಎರಡು ರೂಪಾಯಿ ಶುಲ್ಕವನ್ನು ನಿಗದಿ ಮಾಡಿದ್ದರು. ಆದರೆ ಬಡ ಮತ್ತು ಅಂಧ ವಿದ್ಯಾರ್ಥಿಗಳಿಗೆ ಉಚಿತವಾಗಿಯೇ ಸಂಗೀತವನ್ನು ಕಲಿಸಿದ್ದಾರೆ. ನಂತರದಲ್ಲಿ ಅವರು ಒಂದು ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ನೇಮಕಗೊಳ್ಳುತ್ತಾರೆ. ಆಗಲೂ ಅಷ್ಟೇ ಈ ಶಿಕೋಣಿಯನ್ನು ನಿಲ್ಲಿಸುವುದಿಲ್ಲ. ಬಿಜಾಪುರೆಯವರು ತಾವು ದೊಡ್ಡ ಸಂಗೀತಗಾರರಾಗಿ ಹೆಸರು ಪಡೆದಾಗಲೂ ಶಿಕೋಣಿಗೆ ವಿದಾಯ ಹೇಳಿದವರಲ್ಲ. ಅವರಿಗೆ ಸಂಗೀತದಲ್ಲಿನ ಹೊಸ ಸಂಗತಿಗಳನ್ನು ಕಲಿಯುವುದರ ಬಗ್ಗೆ ತೀವ್ರ ದಾಹವಿತ್ತು; ವಿದ್ಯಾರ್ಥಿಗಳನ್ನು ತಯಾರು ಮಾಡುವುದರ ಬಗ್ಗೆಯು ಅಷ್ಟೇ ಕಾಳಜಿಯಿತ್ತು. ಆದ್ದರಿಂದ ಇವರ ಕೈಯಲ್ಲಿ ಹರ್ಮೋನಿಯಂ ಕಲಿತ ಡಾ.ಸುಧಾಂಶು ಕುಲಕರ್ಣಿ, ರವೀಂದ್ರ ಮಾನೆ, ಡಾ.ರವೀಂದ್ರ ಕಾಟೋಟಿ, ದೀಪಕ ಮರಾಠೆ ಮೊದಲಾದವರು ಹರ್ಮೋನಿಯಂ ವಾದಕರಾಗಿ ಜನಪ್ರಿಯರಾಗಿದ್ದಾರೆ. ಇವರಲ್ಲಿ ರವೀಂದ್ರ ಕಾಟೋಟಿಯವರು ಬೆಂಗಳೂರಿನಲ್ಲಿ ‘ಬಿಜಾಪುರೆ ಹರ್ಮೋನಿಯಂ ಫೌಂಡೇಷನ್’ ಸ್ಥಾಪಿಸಿ ಗುರು ಪರಂಪರೆಯನ್ನು ಮುಂದುವರೆಸಿದ್ದಾರೆ. ಹಾಗಾಗಿ ರಾಮಭಾವುರವರ ಅನೇಕ ಶಿಷ್ಯರು ಬಿಜಾಪುರೆ ಘರಾನೆಯನ್ನು ಮುಂದುವರೆಸಿದ್ದಾರೆ. ಬಿಜಾಪುರೆಯವರಲ್ಲಿ ಕಲಿತ ಶ್ರೀಧರ ಕುಲಕರ್ಣಿ, ಮಧುಮಾಲತಿ ಧೂಪೇಶ್ವರಿ, ಅರ್ಚನಾ ಬೆಳಗುಂದಿ, ನೀಲಾ ದತ್ತಾತ್ರಯ ಖಂಡಕರ, ಕುಂದಾ ವೇಲಿಂಗ್, ಮಾಣಿಕ ಮೋಘೆ ಪಂಡಿತರಾವ, ಮಾಧುಲಿ ಭಾವೆ, ಚೈತನ್ಯ ಗೋಡಬೋಲೆ ಇನ್ನೂ ಅನೇಕರು ಪ್ರತಿಭಾವಂತ ಗಾಯಕ-ಗಾಯಕಿಯರಾಗಿ ಹೊರಹೊಮ್ಮಿದ್ದಾರೆ.

ಬೆಳಗಾವಿ ಜಿಲ್ಲೆಯವರಾದ ಶಿರೀಷ್ ಜೋಶಿಯವರು ರಾಮಭಾವು ವಿಜಾಪುರೆ ಮತ್ತು ಅವರ ಶಿಷ್ಯರುಗಳ ಮೂಲಕ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿ ‘ಸ್ವರಯಾನ’ ಕೃತಿಯನ್ನು ಬರೆದಿದ್ದಾರೆ. ಇಲ್ಲಿಯ ಮರಾಠಿ ಮಿಶ್ರಿತ ಕನ್ನಡ ಭಾಷೆಯು ವಿಶಿಷ್ಟವಾಗಿದೆ. ಈ ಕೃತಿಯಲ್ಲಿ ವಿಜಾಪುರೆಯವರ ಬದುಕು ಮತ್ತು ಸಾಧನೆಯನ್ನು ಭಾವುಕವಾದ ನೆಲೆಯಲ್ಲಿ ವಿವರಿಸುವ ಪ್ರಾಮಾಣಿಕ ಪ್ರಯತ್ನವಿದೆ. ಲೇಖಕರಿಗೆ ವಿಜಾಪುರೆಯವರ ಬಗ್ಗೆ ಅಗಾಧ ಅಭಿಮಾನ ಮತ್ತು ಆರಾಧನೆಯ ಭಾವವೂ ಇರುವುದರಿಂದ ಅವರನ್ನು ವಿಮರ್ಶಾತ್ಮಕ ನೆಲೆಯಿಂದ ನೋಡಲು ಅಡ್ಡಿಯಾಗಿದೆ. ಆದರೂ ಇದರಲ್ಲಿ ಹರ್ಮೋನಿಯಂ ಬಗ್ಗೆ ಸಾಕಷ್ಟು ಮಾಹಿತಿಯಿದೆ. ಜೋಶಿಯವರು ಈ ಮೊದಲು ಪಂಡಿತ ಕುಮಾರ ಗಂಧರ್ವರ ಜೀವನ ಚರಿತ್ರೆಯನ್ನೂ ಬರೆದಿದ್ದರು. ಜೊತೆಗೆ ಸಂಗೀತವನ್ನು ಕುರಿತು ಅನೇಕ ಕೃತಿಗಳನ್ನು ರಚಿಸಿದ್ದಾರೆ.

  • ಸುಭಾಷ್ ರಾಜಮಾನೆ, ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ  ಕೆಲಸ ನಿರ್ವಹಿಸುತ್ತಿರುವ ಸುಭಾಷ್ ಅವರು ಮೂಲತಃ ಬೆಳಗಾವಿಯವರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಕನ್ನಡ ವಿಮರ್ಶೆಯಲ್ಲಿ ಜಾತಿ ಆಯಾಮಗಳ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ.ಪದವಿ ಗಳಿಸಿದ್ದಾರೆ. ಕನ್ನಡ ಇಂಗ್ಲಿಷ್‌, ಮರಾಠಿ, ಹಿಂದಿ ಭಾಷೆಗಳನ್ನು ಬಲ್ಲ ಸುಭಾಷ್ ಅವರು ಸಿನೆಮಾ ವಿಮರ್ಶೆಗಳನ್ನು ಬರೆದಿದ್ದಾರೆ. ಅನುವಾದದಲ್ಲಿ ವಿಶೇಷ ಆಸಕ್ತಿ ಹೊಂದಿರುವ  ಅವರು ದಿ ಆರ್ಟಿಸ್ಟ್‌ ಸಿನಿಮಾದ ಚಿತ್ರಕತೆಯನ್ನು,  ವಿಕ್ಟರ್‌ ಫ್ರಾಂಕ್‌ಲ್ ನ ಮ್ಯಾನ್ ಸರ್ಚ್ ಫಾರ್ ಮೀನಿಂಗ್ ಕೃತಿಯನ್ನು ’ಬದುಕಿನ ಅರ್ಥವನು ಹುಡುಕುತ್ತ..’ಶೀರ್ಷಿಕೆಯ ಅಡಿಯಲ್ಲಿ, ಗ್ರೀಕ್ ಪಿಲಾಸಫರ್ ಎಪಿಕ್ಟೆಟಸ್ ಬರಹಗಳನ್ನು ಮತ್ತು ತಿಚ್ ನ್ಹಾತ್ ಹಾನ್ ನ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಳೆಯ, ಅಪರೂಪದ ಪುಸ್ತಕಗಳನ್ನು ಸಂಗ್ರಹಿಸಿ ಅವುಗಳ ಸಾಂಸ್ಕೃತಿಕ ಮಹತ್ವಗಳನ್ನು ಚರ್ಚಿಸುವುದು ಕೂಡ ಸುಭಾಷ್ ಅವರ ನೆಚ್ಚಿನ ಹವ್ಯಾಸ.
  • ನಿಮ್ಮ ಪ್ರತಿಕ್ರಿಯೆಗಳನ್ನು rajamanesubash98@gmail.com, ensuddii@gmail.comಇಲ್ಲಿಗೆ ಬರೆಯಿರಿ
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights