ಸುಗಂಧಿ ಬೇರು – 15: ‘ಯಶೋಧರೆ ಮಲಗಿರಲಿಲ್ಲ’: ಹೆಣ್ಣಿನ ಅಸ್ಮಿತೆಯನ್ನು ಶೋಧಿಸುವ ಕಿರುನಾಟಕ

ಎರಡು ಸಾವಿರದ ಐನೂರು ವರ್ಷಗಳ ಹಿಂದೆ ಜೀವಿಸಿದ್ದ ಬುದ್ಧನ ಬದುಕನ್ನು ಆಧರಿಸಿ ಕನ್ನಡದಲ್ಲಿ ಬಂದಿರುವ ನಾಟಕಗಳಲ್ಲಿ ಮಾಸ್ತಿಯವರ ‘ಯಶೋಧರಾ’, ಕುವೆಂಪರವರ ‘ಮಹಾರಾತ್ರಿ’, ಪ್ರಭುಶಂಕರ ಅವರ ‘ಅಂಗುಲಿಮಾಲ’ ಹಾಗೂ ‘ಆಮ್ರಪಾಲಿ’ ಮುಖ್ಯವಾಗಿವೆ. ಈ ನಾಟಕ ಪರಂಪರೆಯಲ್ಲಿ ಕಲಾವಿದರಾದ ಎಂ.ಎಸ್. ಮೂರ್ತಿಯವರ ‘ಯಶೋಧರೆ ಮಲಗಿರಲಿಲ್ಲ’(2007) ಎಂಬ ನಾಟಕವು ಭಿನ್ನವಾದ ಸ್ವರೂಪವನ್ನು ಹೊಂದಿದೆ. ಇದೊಂದು ಕಿರುನಾಟಕ; ಇದರಲ್ಲಿ ಬರಿ ನಾಲ್ಕು ದೃಶ್ಯಗಳಿವೆ; ಪುಟಗಳ ದೃಷ್ಟಿಯಿಂದ ಇದು ತುಂಬ ಕಿರಿದಾಗಿದ್ದರು ಕೂಡ ಈ ನಾಟಕವು ಹೊಮ್ಮಿಸುವ ಒಳನೋಟಗಳು ವಿಶಿಷ್ಟವಾಗಿವೆ. ಇದು ಬೆಂಗಳೂರು ಆಕಾಶವಾಣಿಯಿಂದ ‘ಪ್ರಾದೇಶಿಕ ಉತ್ತಮ ನಾಟಕ’ ಎಂಬ ಪ್ರಶಸ್ತಿಗೆ ಪಾತ್ರವಾಗಿದೆ. ಮರಾಠಿ, ಹಿಂದಿ, ತಮಿಳು ಸೇರಿದಂತೆ ಐದು ಭಾಷೆಗಳಿಗೆ ಅನುವಾದಗೊಂಡಿದೆ.

‘ಯಶೋಧರೆ ಮಲಗಿರಲಿಲ್ಲ’ ಎಂಬ ಶೀರ್ಷಿಕೆಯು ನಾಟಕದ ಆಶಯದ ದೃಷ್ಟಿಯಿಂದ ಧ್ವನಿಪೂರ್ಣವಾಗಿದೆ. ಇದು ಯಶೋಧರೆಯ ದೃಷ್ಟಿಕೋನದಿಂದ ಸಿದ್ಧಾರ್ಥನ ಬದುಕನ್ನು ಶೋಧಿಸುವ ನಾಟಕ. ಆಕೆಯ ಅಂತರಂಗದಲ್ಲಿ ಎದ್ದೇಳುವ ಪ್ರಶ್ನೆಗಳೇ ಈ ನಾಟಕದ ವಿನ್ಯಾಸವನ್ನು ರೂಪಿಸಿದೆ. ಸಿದ್ಧಾರ್ಥ ಅರಮನೆಯಿಂದ ಹೊರಟು ಹೋದ ಮೇಲೆ ಯಶೋಧರೆ ‘ನಾನಿಲ್ಲದೆ ಯಾವ ಹೊಸ ಲೋಕವನ್ನು ಕಾಣುತ್ತಾನೆ ಇವನು…’ ಎನ್ನುತ್ತಾಳೆ. ಆ ಸಂದರ್ಭದಲ್ಲಿ ಆಕೆ ಸಹಜವಾಗಿಯೇ ದುಃಖಿತಳಂತೆ ಕಾಣುತ್ತಾಳೆ. ಆದರೆ ಎಲ್ಲೂ ಹತಾಶಳಾಗಿ ರೋದಿಸುವುದಿಲ್ಲ; ನಿರಾಶಳಾಗಿ ಸಿದ್ಧಾರ್ಥನ ನೆನಪುಗಳಲ್ಲಿ ಬಂಧಿಯಾಗುವುದಿಲ್ಲ; ಸಿನಿಕಳಾಗಿ ಕೊರಗಿನಲ್ಲಿಯೇ ಮೈಮರೆಯುವುದಿಲ್ಲ. ಯಶೋಧರೆಯ ಆತ್ಮಸ್ಥೈರ್ಯವು ಸಿದ್ಧಾರ್ಥನ ಬದುಕಿಗೆ ಹೊಸ ದಾರಿಯನ್ನು ತೋರಿಸುವಷ್ಟು ಗಟ್ಟಿಯಾಗಿದೆ. ಸಿದ್ಧಾರ್ಥನ ಯಶೋಗಾಥೆಯಷ್ಟೇ ಯಶೋಧರೆಯ ಅಸ್ಮಿತೆಯ ಪ್ರಶ್ನೆಯೂ ಅಷ್ಟೇ ಮುಖ್ಯವಾಗಿದೆ.

ಎಲ್ಲರಿಗೂ ತಿಳಿದಿರುವಂತೆ ಸಿದ್ಧಾರ್ಥ ಅರಮನೆಯನ್ನು ತೊರೆದ ನಂತರ ಹಲವು ವರ್ಷಗಳ ತಿರುಗಾಟ, ತಪಸ್ಸು, ಧ್ಯಾನದ ಬಳಿಕ ತನ್ನ ಅಪೂರ್ವ ಅರಿವಿನಿಂದ ಲೋಕವನ್ನು ಬೆಳಗುವ ಬುದ್ಧನಾಗುತ್ತಾನೆ. ಕಾರುಣ್ಯಮಯ ಪ್ರೀತಿ, ಸರಳ ಜೀವನ ಹಾಗೂ ಉಪದೇಶಗಳಿಂದ ಜನರ ಹೃದಯ ಪರಿವರ್ತನೆಗೆ ಕಾರಣನಾಗುತ್ತಾನೆ. ಸರ್ವಪರಿತ್ಯಾಗ ಮಾಡಿದ ಬುದ್ಧ, ತನ್ನ ಕೈಯಲ್ಲಿ ಭಿಕ್ಷಾಪಾತ್ರೆಯನ್ನು ಹಿಡಿದು ಕಪಿಲವಸ್ತುವಿಗೂ ಬರುತ್ತಾನೆ. ಈಗ ಬಂದವನು ಬುದ್ಧ; ಈ ಮುಂಚಿನ ಸಿದ್ಧಾರ್ಥನಲ್ಲ. ಬುದ್ಧ ಬಂದಿರುವ ಸಂಗತಿಯನ್ನು ಯಶೋಧರೆಯು ತನ್ನ ಗೆಳತಿಯಿಂದ ತಿಳಿದಾಗಲೂ ಆತನನ್ನು ಭೇಟಿಯಾಗಲು ಕಾತರಿಸುವುದಿಲ್ಲ. ಇಲ್ಲಿ ಯಶೋಧರೆ ಕೂಡ ಮೊದಲಿನ ಯಶೋಧರೆ ಅಲ್ಲ. ಬುದ್ಧನಂತೆ ಆಕೆಯಲ್ಲೂ ಬದಲಾವಣೆ, ಪರಿವರ್ತನೆಗಳು ಘಟಿಸಿರುತ್ತವೆ. ಮನುಷ್ಯನ ಪ್ರಜ್ಞೆಯು ಎಂದಿಗೂ ಸ್ಥಿರವಾಗಿರುವುದಿಲ್ಲ; ಅದು ನಿರಂತರವಾದ ಸ್ಥಿತ್ಯಂತರಗಳಿಗೆ ಒಳಪಡುತ್ತಲೇ ಇರುತ್ತದೆ; ಯಶೋಧರೆಯು ಬುದ್ಧನನ್ನು ಕಾಣುವುದರಲ್ಲಿ ಅಥವಾ ಆತನ ಉಪದೇಶವನ್ನು ಕೇಳುವುದರಲ್ಲಿ ಆಸಕ್ತಿ ತೋರಿಸುವುದಿಲ್ಲ. ಯಶೋಧರೆಯ ಈ ನಿರಾಕರಣೆಯೇ ಆಕೆಯ ಸ್ವತಂತ್ರ ವ್ಯಕ್ತಿತ್ವದ ಸಂಕೇತವಾಗಿದೆ; ಆಕೆ ತನ್ನ ಅಸ್ತಿತ್ವವನ್ನು ಧ್ಯಾನಿಸಿದ ದಿಟ್ಟ ಮಹಿಳೆಯಾಗಿ ಗೋಚರಿಸುತ್ತಾಳೆ.

ಯಶೋಧರೆಯು ತನ್ನನ್ನು ತಾನು ಬುದ್ಧನ ಹೆಂಡತಿ ಎಂದಾಗಲಿ ಆತನ ಶಿಷ್ಯಳು ಎಂದಾಗಲಿ ಗುರುತಿಸಿಕೊಳ್ಳಲು ಇಚ್ಛಿಸುವುದಿಲ್ಲ. ಯಶೋಧರೆಯು ತನ್ನ ಅಸ್ಮಿತೆಯನ್ನು ಸ್ವ-ಪ್ರಜ್ಞೆಯಿಂದಲೇ ಕಟ್ಟಿಕೊಳ್ಳಲು ಬಯಸುತ್ತಾಳೆ. ಇದು ಮೂರ್ತಿಯವರು ಯಶೋಧರೆಯನ್ನು ಕಟ್ಟಿಕೊಟ್ಟಿರುವ ಬಗೆ. ಅವರು ನಾಟಕದ ಪ್ರಸ್ತಾವನೆಯಲ್ಲಿ “ಮೌನವಾಗಿ ಎಲ್ಲವನ್ನೂ ನೋಡುತ್ತಾ, ಆಲಿಸುತ್ತಾ, ಜನಾಂಗದಿಂದ ಜನಾಂಗಕ್ಕೆ ತಮ್ಮ ಪ್ರೀತಿ-ವಾತ್ಸಲ್ಯದ ತಂಪೆರೆದು, ಪೊರೆಯುತ್ತಿರುವ ನನ್ನ ನೆಲದ ‘ಯಶೋಧರೆ’ಯರು ನನಗೆ ಈವತ್ತಿನ ಸ್ತ್ರೀವಾದದ ಸಂದರ್ಭದಲ್ಲಿ ಮತ್ತೆ ಮತ್ತೆ ನೆನಪಾಗುತ್ತಾರೆ. ಯಾಕೆಂದರೆ ನನ್ನ ತಾಯಿ ಮಹಿಳೆ-ನಾನು ಪುರುಷ ಎಂಬ ವಿಭಿನ್ನ ನೆಲೆಯಿಂದ ಒಂದು ಜೀವವನ್ನು ವಿಂಗಡಿಸಿ ನೋಡುವ ಕ್ರಮವೇ ನನಗೆ ಅಸಂಗತವಾಗಿ ತೋರುತ್ತದೆ” ಎಂದು ಬರೆಯುತ್ತಾರೆ. ಮೇಲ್ನೋಟಕ್ಕೆ ಗಂಡು-ಹೆಣ್ಣಿನ ನಡುವೆ ಜೈವಿಕವಾಗಿ ಭಿನ್ನತೆಯಿರುವುದು ನಿಜ. ಪುರುಷ ತನ್ನನ್ನು ಎಷ್ಟೇ ಧೀರೋದಾತ್ತನೆಂದು ಭಾವಿಸಿಕೊಂಡರು ಆತನಲ್ಲೂ ಹೆಣ್ಣಿನ ಗುಣಗಳಿರುತ್ತವೆ; ಹಾಗೆಯೇ ಹೆಣ್ಣಿನಲ್ಲೂ ಗಂಡಿನ ಗುಣಗಳಿರುತ್ತವೆ. ಮೂರ್ತಿಯವರು ಹೆಣ್ಣನ್ನು ಲಿಂಗ ತಾರತಮ್ಯದ ನೆಲೆಯಲ್ಲಿ ನೋಡುವುದಿಲ್ಲ ಎಂಬುದೇ ಇಲ್ಲಿ ಮುಖ್ಯವಾಗಿದೆ. ಇದರಿಂದಾಗಿಯೇ ಸದರಿ ನಾಟಕವು ಭಿನ್ನವಾದ ಸ್ವರೂಪವನ್ನು ಪಡೆದುಕೊಂಡಿದೆ. ಗತಕಾಲದ ಚರಿತ್ರೆಯನ್ನು ಈ ಕಾಲದ ಸಮಾನತೆಯ ಮೌಲ್ಯಗಳಿಗೆ ಒಗ್ಗಿಸಿಕೊಳ್ಳುವ ಕ್ರಮವಿದು. ಚಾರಿತ್ರಿಕ ಮೌಲ್ಯಗಳು ಸ್ಥಿರವಾಗಿರಲ್ಲ; ಅವು ಅಧಿಕಾರದೊಂದಿಗೆ ತಳಕು ಹಾಕಿಕೊಂಡು ಯಜಮಾನಿಕೆಯನ್ನು ನಡೆಸುತ್ತಿರುತ್ತವೆ. ಬದಲಾಗುವ ಕಾಲಮಾನದೊಂದಿಗೆ ಈ ಮೌಲ್ಯಗಳು ಚಲನಶೀಲತೆಯನ್ನು ಪಡೆದುಕೊಳ್ಳುವುದು ಅನಿವಾರ್ಯವೇ ಆಗಿರುತ್ತದೆ.

ಈ ಲೇಖನದ ಆರಂಭದಲ್ಲಿಯೇ ಪ್ರಸ್ತಾಪಿಸಲಾದ ಮಾಸ್ತಿಯವರ ‘ಯಶೋಧರಾ’ (1933) ನಾಟಕವು ಯಶೋಧರೆಯನ್ನು ಕೇಂದ್ರವಾಗಿಟ್ಟುಕೊಂಡು ರಚನೆಯಾಗಿದೆ. ಮಾಸ್ತಿಯವರ ನಾಟಕದಲ್ಲಿ ಯಶೋಧರೆಯು ತನ್ನನ್ನು ನಡು ರಾತ್ರಿಯಲ್ಲಿ ಬಿಟ್ಟು ಹೋದ ಸಿದ್ಧಾರ್ಥನನ್ನು ಮತ್ತೆ ಮತ್ತೆ ಶಪಿಸುತ್ತಾಳೆ; ಸಿದ್ಧಾರ್ಥನಿಲ್ಲದ ತನ್ನ ಬದುಕು ಮರೀಚಿಕೆಯಾಯ್ತು ಎಂದು ಪರಿತಪಿಸುತ್ತಾಳೆ; ಯಶೋಧರೆ ತನಗಾದ ದುಃಖವನ್ನು ಗೆಳತಿ ಅಂಬಿಕೆಯಲ್ಲಿ ಪರಿಪರಿಯಾಗಿ ತೋಡಿಕೊಳ್ಳುತ್ತಾಳೆ. ಬುದ್ಧ ಕೆಲವು ವರ್ಷಗಳ ನಂತರ ಕಪಿಲವಸ್ತುವಿಗೆ ಬಂದಾಗ ಯಶೋಧರೆಯು ಆತನನ್ನು ಭೇಟಿಯಾಗಲು ತೀವ್ರವಾಗಿ ಹಂಬಲಿಸುತ್ತಾಳೆ. ಅದಕ್ಕಾಗಿ ಬುದ್ಧನನ್ನು ಅರಮನೆಗೆ ಆಹ್ವಾನಿಸಲು ಅಂಬಿಕೆ ಹಾಗೂ ರಾಹುಲನನ್ನು ಶ್ರಾವಸ್ಥಿಗೆ ಕಳಿಸುತ್ತಾಳೆ. ಅರಮನೆಯಲ್ಲಿ ಪರಸ್ಪರರು ಮುಖಾಮುಖಿಯಾದಾಗ ಯಶೋಧರೆಯು ತನ್ನನ್ನು ಅಗಲಿ ಹೋದದ್ದರಿಂದ ಹಿಡಿದು ಮೋಕ್ಷದವರೆಗೂ ಹತ್ತಾರು ಬಗೆಯಲ್ಲಿ ಪ್ರಶ್ನಿಸುತ್ತಾಳೆ. ಬುದ್ಧ ಶಾಂತಚಿತ್ತದಿಂದ ಅವುಗಳಿಗೆಲ್ಲ ಉತ್ತರಿಸುತ್ತಾನೆ. ಜತೆಯಲ್ಲಿ ಉಪದೇಶವನ್ನೂ ನೀಡುತ್ತಾನೆ. ಕೊನೆಯಲ್ಲಿ ಯಶೋಧರೆ ಮತ್ತು ರಾಹುಲ – ಇಬ್ಬರೂ ಬುದ್ಧನ ಶಿಷ್ಯತ್ವವನ್ನು ಪಡೆಯುವುದರೊಂದಿಗೆ ನಾಟಕ ಮುಗಿಯುತ್ತದೆ. ಮಾಸ್ತಿಯವರ ನಾಟಕದಲ್ಲಿ ಯಶೋಧರೆಯು ಎಷ್ಟೇ ಪ್ರಶ್ನೆಗಳನ್ನು ಕೇಳಿದರು ಕೂಡ ಆಕೆ ಸಾಂಪ್ರದಾಯಕ ಮೌಲ್ಯಗಳನ್ನು ದಾಟದ ಹೆಣ್ಣಾಗಿಯೇ ಉಳಿಯುತ್ತಾಳೆ. ಆಕೆ ಪುರುಷ ಪ್ರಧಾನ ವ್ಯವಸ್ಥೆಯನ್ನು ಒಪ್ಪಿದವಳೇ. ಬುದ್ಧನ ಶಿಷ್ಯಳಾಗುವುದೇ ತನ್ನ ಬದುಕಿನ ಸಾರ್ಥಕತೆ ಎಂದು ಗಟ್ಟಿಯಾಗಿ ನಂಬಿದವಳೇ ಆಗಿದ್ದಾಳೆ. ಮಾಸ್ತಿಯವರ ಸಾಂಪ್ರದಾಯಿಕ ಮನಸ್ಸು ಯಶೋಧರೆಗೆ ಸ್ವತಂತ್ರ ವ್ಯಕ್ತಿವಿರುವುದನ್ನು ಗುರುತಿಸಿಲ್ಲ. ಹೆಣ್ಣೊಬ್ಬಳು ಹೆಂಡತಿಯಾದ ನಂತರದಲ್ಲೂ ಹಾಗೂ ಗಂಡನ ಅನುಪಸ್ಥಿತಿಯಲ್ಲೂ ಆತನ ಅಧೀನಳಾಗಿಯೇ ಮುಂದುವೆಯುವ ಮೌಲ್ಯವನ್ನು ಮಾಸ್ತಿಯವರ ನಾಟಕವು ಪ್ರತಿನಿಧಿಸುತ್ತದೆ.

ಇಂದಿನ ಸ್ತ್ರೀವಾದಿ ನಿಟ್ಟಿನಿಂದ ಗಮನಿಸಿದರೆ ಎಂ.ಎಸ್. ಮೂರ್ತಿಯವರ ನಾಟಕವು ಮಾಸ್ತಿಯವರ ‘ಯಶೋಧರಾ’ ನಾಟಕಗಿಂತ ಭಿನ್ನವಾದ ಆಶಯ ಹೊಂದಿದೆ. ಇದಕ್ಕೆ ವರ್ತಮಾನದ ಕಾಲಘಟ್ಟದಲ್ಲಿ ಪಲ್ಲಟಗೊಂಡಿರುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳು ಕಾರಣವಾಗಿವೆ. ಸ್ತ್ರೀವಾದದ ನೆಲೆಯಿಂದ ಈ ನಾಟಕದ ಅಂತರಂಗವನ್ನು ಪ್ರವೇಶಿಸುವವರಿಗೆ, ನಿಸ್ಸಂದೇಹವಾಗಿ ಇದು ಬೇರೆಯೇ ಒಳನೋಟಗಳನ್ನು ದಕ್ಕುವಂತೆ ಮಾಡುತ್ತದೆ. ಶಾಲಾ ಕಾಲೇಜುಗಳ ಬಹುತೇಕ ಪಠ್ಯ ಪುಸ್ತಕಗಳಲ್ಲಿ ಬುದ್ಧ ತನ್ನ ಹೆಂಡತಿ, ಮಗ, ಅರಮನೆ, ರಾಜ್ಯ – ಇವನ್ನೆಲ್ಲ ‘ತ್ಯಾಗ’ ಮಾಡಿದನೆಂದೇ ವೈಭವೀಕರಿಸುತ್ತವೆ. ಆದರೆ ಲೋಕಕ್ಕೆ ಯಶೋಧರೆಯ ‘ತ್ಯಾಗ’ವೇಕೆ ಕಾಣಿಸುವುದಿಲ್ಲ? ಯಶೋಧರೆ ಹೆಣ್ಣೆಂಬ ಕಾರಣವೇ? ಭಾರತೀಯ ಪರಂಪರೆಯಲ್ಲಿ ಯಶೋಧರೆಯನ್ನು ಒಬ್ಬ ಹೆಂಡತಿಯಾಗಿ ಹಾಗೂ ತಾಯಿಯಾಗಿ ನೋಡಿರುವುದನ್ನು ಸದರಿ ನಾಟಕವು ನಿರಾಕರಿಸಿ ಆಕೆಯನ್ನು ಒಬ್ಬ ಧೀಮಂತ ಮಹಿಳೆಯನ್ನಾಗಿ ಗ್ರಹಿಸುವಂತೆ ಪ್ರೆರೇಪಿಸುತ್ತದೆ. ಈ ನಾಟಕವನ್ನು ಶೋಭಾ ನಾಯಿಕ ಅವರು ಮರಾಠಿ ಭಾಷೆಗೆ ಅನುವಾದಿಸಿರುವ ‘ಯಶೋಧರಾ ಝೊಪಲಿ ನಹತಿ’ಯ (2014) ಪ್ರಸ್ತಾವನೆಯಲ್ಲೂ ಈ ಸಂಗತಿಯನ್ನು ಗುರುತಿಸಿದ್ದಾರೆ.

ಯಶೋಧರೆಯು ಅಂದು ರಾತ್ರಿ ಸಿದ್ಧಾರ್ಥನನ್ನು ತಾನೇ ತ್ಯಜಿಸಿದ್ದೇನೆಂದು ಹೇಳಿಕೊಳ್ಳುತ್ತಾಳೆ. ಯಶೋಧರೆಯು ಬುದ್ಧನ ದರ್ಶನದಿಂದ ವಂಚಿತಳಾದಳೆಂದು ಆಕೆಯ ಸಖಿಯು ನೊಂದುಕೊಳ್ಳುತ್ತಾಳೆ. ಬುದ್ಧ ಅರಮನೆಯಿಂದ ನಿರ್ಗಮಿಸುವಾಗ ಆ ಸಖಿಯು ಪರಿಪರಿಯಾಗಿ ದುಃಖಿಸುತ್ತಾಳೆ. ಆಗ ಯಶೋಧರೆಯು ‘ನಮ್ಮ ಮನದ ನೆಮ್ಮದಿಯ ನಿರುಮ್ಮಳತೆಯ ಸ್ವರೂಪನಾದ ‘ಬುದ್ಧ’ ಎಲ್ಲಿಯೂ ಹೋಗಿಲ್ಲ… ನಮ್ಮೊಳಗಿನ ಬೆಳಕಾಗಿ ಇಲ್ಲಿಯೇ ಇದ್ದಾನೆ’ ಎಂದು ತನ್ನ ಸಖಿಯನ್ನು ಸಂತೈಸುತ್ತಾಳೆ. ಇಂತಹ ಸದಾ ಎಚ್ಚರಿಕೆಯ ಪ್ರಜ್ಞೆಯೇ ‘ಬುದ್ಧತ್ವ’ ಅಲ್ಲವೇ? ಯಶೋಧರೆಯು ತಂದೆಯಿಂದ ದೂರವಾದ ಸ್ಥಿತಿಯಲ್ಲೂ ರಾಹುಲನನ್ನು ಪೊರೆಯುತ್ತಾಳೆ; ದುಃಖಿಸುವ ಸಖಿಯಲ್ಲಿ ಅರಿವಿನ ಬೆಳಕನ್ನು ಮೂಡಿಸುತ್ತಾಳೆ. ಇದು ಬರಿ ಯಶೋಧರೆಯೊಬ್ಬಳ ಚೈತನ್ಯವಲ್ಲ; ಯಾವುದೇ ಹೆಣ್ಣಿನ ನಿಜವಾದ ಚೈತನ್ಯವಾಗುತ್ತದೆ. ಆದ್ದರಿಂದ ಈ ನಾಟಕವು ಆಧುನಿಕ ಕಾಲದ ಸ್ತ್ರೀ ಸಂವೇದನೆಯನ್ನು ಒಳಗೊಂಡಿದೆ.

ಬುದ್ಧನ ಅಥೆಂಟಿಕ್ ಜೀವನ ಚರಿತ್ರೆಯನ್ನು ಮರಾಠಿಯಲ್ಲಿ ಬರೆದಿರುವ ಪ್ರಖ್ಯಾತ ವಿದ್ವಾಂಸರಾದ ಧರ್ಮಾನಂದ ಕೊಸಾಂಬಿಯವರು ‘ಬೋಧಿಸತ್ವ’ (ಅನು: ಡಾ. ಗೀತಾ ಶೆಣೈ, ನವಕರ್ನಾಟಕ ಪ್ರಕಾಶನ, 2016) ಎಂಬ ಮಹತ್ವಪೂರ್ಣ ನಾಟಕವನ್ನು ರಚಿಸಿದ್ದಾರೆ. ಆಸಕ್ತರು ಇದನ್ನು ಗಮನಿಸಬಹುದು. ಈ ನಾಟಕವು ಸಿದ್ಧಾರ್ಥನಿಗೆ ಸಂಬಂಧಿಸಿದ ಹಲವು ಚಾರಿತ್ರಿಕ ಸತ್ಯಾಂಶಗಳನ್ನು ತೆರೆದಿಡುತ್ತದೆ. ಕೊಸಾಂಬಿಯವರು ತಮ್ಮ ನಾಟಕದಲ್ಲಿ ಸಿದ್ಧಾರ್ಥ ಏಕಾಏಕಿಯಾಗಿ ಯಶೋಧರೆಯನ್ನು ತೊರೆದು ಹೋದವನಲ್ಲ ಎಂಬುದನ್ನು ಸಾಕಷ್ಟು ಚಾರಿತ್ರಿಕ ಪುರಾವೆಗಳ ಸಮೇತ ದಾಖಲಿಸಿದ್ದಾರೆ. ತರುಣ ಸಿದ್ಧಾರ್ಥ ಹಾಗೂ ತರುಣಿ ಯಶೋಧರೆ – ಇಬ್ಬರ ಮಧ್ಯೆ ಹೊಸ ಅಧ್ಯಾತ್ಮಿಕ ಹುಡುಕಾಟದ ಸಂವಾದ ನಡೆಯುತ್ತಿತ್ತು; ಯಶೋಧರೆಯಂತಹ ಚಿಂತನಶೀಲ ಹೆಂಡತಿಯನ್ನು ಸಿದ್ಧಾರ್ಥ ಪ್ರಶಂಸಿಸುತ್ತಾನೆ. ಆತನ ಲೋಕಸಂಚಾರಕ್ಕೆ ಹಾಗೂ ಹೊಸ ತಿಳಿವಿನ ಹುಡುಕಾಟಕ್ಕೆ ಯಶೋಧರೆಯ ಅನುಮತಿಯು ಇತ್ತೆಂಬುದನ್ನು ಕೊಸಾಂಬಿಯವರು ಆ ಕಾಲದ ಹಲವು ಆಕರಗಳನ್ನು ಈ ನಾಟಕಕ್ಕೆ ಬಳಸಿಕೊಂಡಿದ್ದಾರೆ. ಈ ಸಂಗತಿಗಳು ವಾಸ್ತವಕ್ಕೆ ಕನ್ನಡಿ ಹಿಡಿದಿವೆ ಎಂದು ತೋರುತ್ತದೆ.

ಮೂರ್ತಿಯವರ ‘ಯಶೋಧರೆ ಮಲಗಿರಲಿಲ್ಲ’ ನಾಟಕದ ನಿರೂಪಣೆಯಲ್ಲಿ ತೀರ ವಿಭಿನ್ನವಾದ ತಂತ್ರವೇನಿಲ್ಲ. ಆದರೆ ನಾಟಕದುದ್ದಕ್ಕೂ ಜೆನ್ ತತ್ವಜ್ಞಾನದ ತಾತ್ವಿಕತೆಯನ್ನು ಕಾಣುತ್ತೇವೆ. ಇಡೀ ನಾಟಕದಲ್ಲಿ ಯಶೋಧರೆ ಹಾಗೂ ಬುದ್ಧ -ಒಂದು ಸಲವು ಎದುರುಗೊಳ್ಳುವುದಿಲ್ಲ; ಆದರೂ ಅವರು ಒಬ್ಬರನ್ನೊಬ್ಬರು ಅರಿತವರಂತೆ ಗೋಚರಿಸುತ್ತಾರೆ. ಇಂತಹ ನಿರೂಪಣೆಯ ಶೈಲಿಯಿಂದಲೇ ಪಾತ್ರಗಳ ಮಾನಸಿಕ ಒಳತೋಟಿಯು ಓದುಗರನ್ನು ತೀವ್ರವಾಗಿ ತಟ್ಟುತ್ತದೆ. ಇದರಲ್ಲಿ ನಾಲ್ಕು ಅಂಕಗಳಿಗಾಗುವಷ್ಟು ವಸ್ತು ಹಾಗೂ ಆಶಯವನ್ನು ಹೊಂದಿದ್ದರೂ ಕೇವಲ ನಾಲ್ಕು ದೃಶ್ಯಗಳಲ್ಲಿ ಹರಳುಗಟ್ಟುವಂತೆ ಮಾಡಿರುವುದರಲ್ಲಿ ನಾಟಕದ ಹೆಗ್ಗಳಿಕೆಯಿದೆ. ಆದರೆ ಇದೇ ಅದರ ಮಿತಿಯೂ ಆಗಿದೆ ಎಂಬುದನ್ನು ಮರೆಯುಂತಿಲ್ಲ. ಈ ಕಾರಣದಿಂದಲೇ ಮೂರ್ತಿಯವರ ನಾಟಕವು ದೊಡ್ಡ ಕಲಾಕೃತಿಯಾಗುವ ಸಾಧ್ಯತೆಯಿಂದ ತಪ್ಪಿಸಿಕೊಂಡಂತಾಗಿದೆ.

  • ಸುಭಾಷ್ ರಾಜಮಾನೆ, ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ  ಕೆಲಸ ನಿರ್ವಹಿಸುತ್ತಿರುವ ಸುಭಾಷ್ ಅವರು ಮೂಲತಃ ಬೆಳಗಾವಿಯವರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಕನ್ನಡ ವಿಮರ್ಶೆಯಲ್ಲಿ ಜಾತಿ ಆಯಾಮಗಳ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ.ಪದವಿ ಗಳಿಸಿದ್ದಾರೆ. ಕನ್ನಡ ಇಂಗ್ಲಿಷ್‌, ಮರಾಠಿ, ಹಿಂದಿ ಭಾಷೆಗಳನ್ನು ಬಲ್ಲ ಸುಭಾಷ್ ಅವರು ಸಿನೆಮಾ ವಿಮರ್ಶೆಗಳನ್ನು ಬರೆದಿದ್ದಾರೆ. ಅನುವಾದದಲ್ಲಿ ವಿಶೇಷ ಆಸಕ್ತಿ ಹೊಂದಿರುವ  ಅವರು ದಿ ಆರ್ಟಿಸ್ಟ್‌ ಸಿನಿಮಾದ ಚಿತ್ರಕತೆಯನ್ನು,  ವಿಕ್ಟರ್‌ ಫ್ರಾಂಕ್‌ಲ್ ನ ಮ್ಯಾನ್ ಸರ್ಚ್ ಫಾರ್ ಮೀನಿಂಗ್ ಕೃತಿಯನ್ನು ’ಬದುಕಿನ ಅರ್ಥವನು ಹುಡುಕುತ್ತ..’ಶೀರ್ಷಿಕೆಯ ಅಡಿಯಲ್ಲಿ, ಗ್ರೀಕ್ ಪಿಲಾಸಫರ್ ಎಪಿಕ್ಟೆಟಸ್ ಬರಹಗಳನ್ನು ಮತ್ತು ತಿಚ್ ನ್ಹಾತ್ ಹಾನ್ ನ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಳೆಯ, ಅಪರೂಪದ ಪುಸ್ತಕಗಳನ್ನು ಸಂಗ್ರಹಿಸಿ ಅವುಗಳ ಸಾಂಸ್ಕೃತಿಕ ಮಹತ್ವಗಳನ್ನು ಚರ್ಚಿಸುವುದು ಕೂಡ ಸುಭಾಷ್ ಅವರ ನೆಚ್ಚಿನ ಹವ್ಯಾಸ.
  • ನಿಮ್ಮ ಪ್ರತಿಕ್ರಿಯೆಗಳನ್ನು [email protected][email protected]ಇಲ್ಲಿಗೆ ಬರೆಯಿರಿ
Spread the love

Leave a Reply

Your email address will not be published. Required fields are marked *