ರೈಲ್ವೇ ಪ್ಲಾಟ್‌ಫಾರ್ಮ್‌ ಟಿಕೆಟ್‌ ದರ: 10 ರೂನಿಂದ 50 ರೂಗೆ ಏರಿಸಿದ ಮೋದಿ ಸರ್ಕಾರ!

ಕೊರೊನಾ ವೈರಸ್ ದೃಷ್ಟಿಯಿಂದ ರೈಲ್ವೇ ನಿಲ್ದಾಣದಲ್ಲಿ ಜನ ಸಂದಣಿಯನ್ನು ನಿಯಂತ್ರಿಸಿ, ಜನರು ಒಟ್ಟುಗೂಡುವುದನ್ನು ಕಡಿಮೆಗೊಳಿಸುವ ಉದ್ದೇಶದಲ್ಲಿ ರೈಲ್ವೇ ನಿಲ್ದಾಣಗಳಲ್ಲಿ 10 ರೂ ಇದ್ದ ಪ್ಲಾಟ್‌ಫಾರ್ಮ್ ಟಿಕೆಟ್‌ ಶುಲ್ಕವನ್ನು 50 ರೂ.ಗೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ರೈಲ್ವೆ ವಲಯದ ಆರು ವಿಭಾಗಗಳಾದ ಮುಂಬೈ, ವಡೋದರಾ, ಅಹಮದಾಬಾದ್, ರತ್ನಂ, ರಾಜ್‌ಕೋಟ್, ಭಾವನಗರ ಸೇರಿದಂತೆ ಸುಮಾರು 250 ರೈಲ್ವೆ ನಿಲ್ದಾಣಗಳಲ್ಲಿ ಈ ಶುಲ್ಕ ಅನ್ವಯವಾಗಲಿ.

ಕೇಂದ್ರ ವಲಯದಲ್ಲಿ ಮುಂಬೈ (ಸಿಎಸ್‌ಟಿ), ಭೂಸಾವಲ್, ನಾಗ್ಪುರ, ಸೋಲಾಪುರ, ಪುಣೆ – ಐದು ವಿಭಾಗಗಳನ್ನು ಒಳಗೊಂಡ – ಎಲ್ಲಾ ನಿಲ್ದಾಣಗಳಲ್ಲಿ ಬೆಲೆಗಳನ್ನು ಹೆಚ್ಚಿಸಲಾಗಿದೆ.

ದಕ್ಷಿಣ ರೈಲ್ವೆ ವಲಯದಲ್ಲಿ, ಚೆನ್ನೈನಲ್ಲಿ ಮಾತ್ರ ಪ್ಲಾಟ್‌ಫಾರ್ಮ್ ಟಿಕೆಟ್‌ನ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ರಾಜ್ಯ ರಾಜಧಾನಿ ಬೆಂಗಳೂರಿನ ಪ್ರಮುಖ ರೈಲ್ವೆ ನಿಲ್ದಾಣಗಳಾದ, “ಸಂಗೊಳ್ಳಿ ರಾಯಣ್ಣ ಮೆಜೆಸ್ಟಿಕ್‌, ಯಶವಂತಪುರ ಮತ್ತು ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್‌ ಫಾರಂ ಟಿಕೆಟ್‌ ದರವನ್ನು 10 ರಿಂದ 50 ರೂ ಗೆ ಏರಿಸಲಾಗಿದೆ.

ಕೊರೊನಾ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಜನಸಂದಣಿಯನ್ನು ನಿಯಂತ್ರಿಸಲು ಪ್ಲಾಟ್‌ಫಾರ್ಮ್ ಟಿಕೆಟ್ ಶುಲ್ಕವನ್ನು ಹೆಚ್ಚಿಸಲಾಗಿದೆ ಎಂದು ಪ್ರತಿಪಾದಿಸಿದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದೇಶದಲ್ಲಿ ಪ್ರತಿದಿನ ಏರಿಕೆಯಾಗುತ್ತಿರುವ ಕೊರೊನಾ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು, ರೈಲ್ವೇ ನಿಲ್ದಾಣಗಳಲ್ಲಿ ಜನಸಾಂದ್ರತೆ ಕಡಿಮೆಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ಈ ಹಿಂದೆ, 2015ರ ಮಾರ್ಚ್‌ನಲ್ಲಿ 5 ರೂ ಇದ್ದ ಪ್ಲಾಟ್‌ಫಾಂ ಟಿಕೆಟ್‌ ದರವನ್ನು 10ರೂ ಏರಿಸಲಾಗಿತ್ತು.

ಟಿಕೆಟ್‌ ದರ ಏರಿಕೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು, ಈಗ ಬಾಲ್ಕಾನಿಯಲ್ಲಿ ನಿಂತು ತಟ್ಟೆ ಬಾರಿಸಿ ಸರ್ಕಾರಕ್ಕೆ ಧನ್ಯವಾದ ಹೇಳೋಣ ಬನ್ನಿ ಎಂದು ಟೀಕಿಸಲಾಗುತ್ತಿದೆ.


ಇದನ್ನೂ ಓದಿ:  14 ರಾಜ್ಯಗಳಿಗೆ 6,195 ಕೋಟಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights