ಡಿಜೆಹಳ್ಳಿ ಗಲಬೆಯ ಅಸಲಿಯತ್ತೇನು? ಪೊಲೀಸರು-ಸರ್ಕಾರ ಮಾಡಿದ್ದೇನು? ಸತ್ಯಶೋಧನಾ ವರದಿ!

ಪ್ರವಾದಿ ನಿಂದನೆಯ ಫೇಸ್ಬುಕ್ ಪೋಸ್ಟ್ ಮತ್ತು ಅದರಿಂದ ಪ್ರಚೋದಿತವಾದ ಹಿಂಸಾಚಾರಗಳು ಡಿಜೆಹಳ್ಳಿ – ಕೆಜೆಹಳ್ಳಿಯಲ್ಲಿ ನಡೆದು ಎರಡು ತಿಂಗಳಾಗುತ್ತಿದೆ. ಈ ಪ್ರಕರಣಕ್ಕೆ ಕಾರಣ, ಪರಿಣಾಮಗಳನ್ನು ಅರ್ಥ ಮಾಡಿಕೊಂಡು ದೀರ್ಘ ಕಾಲೀನ ಪರಿಹಾರಗಳನ್ನು ಹುಡುಕಬೇಕಿದ್ದ ಸರ್ಕಾರ ಸಂಘಪರಿವಾರದ ಕೈಗೊಂಬೆಯಾಗಿದೆ. ಮತ್ತೊಮ್ಮೆ ಮುಸ್ಲಿಂ ಸಮುದಾಯವನ್ನು ಅಪರಾಧೀಕರಿಸಲೂ, ದೇಶದ್ರೋಹಿ ಗಳೆಂದು ಪ್ರಚಾರ ಮಾಡಲು ಘಟನೆಯನ್ನು ಬಳಸಿಕೊಳ್ಳುತ್ತಿದೆ.

ಆದರೆ, ಬೆಂಗಳೂರಿನ ಹಲವಾರು ಜನಪರ ಸಂಘಟನೆಗಳೂ ಹಾಗೂ ವ್ಯಕ್ತಿ ಗಳು ಒಟ್ಟು ಸೇರಿ ಸತತ ಹನ್ನೊಂದು ದಿನಗಳ ಕಾಲ ಈ ಹಿಂಸಾಚಾರದ ಪೂರ್ವೋತ್ತರಗಳನ್ನು ಅಧ್ಯಯನ ಮಾಡಿ ಕೂಲಂಕಷವಾದ ವರದಿಯನ್ನು ನಾಗರಿಕ ಸಮಾಜದ ಮುಂದಿಟ್ಟಿದೆ.

ಪ್ರವಾದಿ ನಿಂದನೆ ಮತ್ತು ಬೆಂಗಳೂರು ಗಲಭೆಗಳು

ಅಧಿಕೃತ ಸತ್ಯಗಳು ಮತ್ತು ಅಸಲಿ ಸತ್ಯಗಳು

ಬೆಂಗಳೂರಿನಲ್ಲಿ ನವೀನ್ ಕುಮಾರ್ ಎಂಬ ಯುವಕ ಆಗಸ್ಟ್ 11 ರಂದು ಪ್ರವಾದಿಯನ್ನು ನಿಂದಿಸುವ ಫೇಸ್ಬುಕ್ ಪೋಸ್ಟ್ ಫಾರ್ವರ್‍ದ್ ಮಾಡಿದ್ದೂ ಹಾಗೂ ಅದರಿಂದ ಭುಗಿಲೆದ್ದ ಡಿ.ಜೆ.ಹಳ್ಳಿ, ಕೆ.ಜಿ. ಹಳ್ಳಿ ಹಾಗೂ ಕಾವಲ್ ಭೈರಸಂದ್ರ ಗಲಭೆಗಳು ನಡೆದು ಎರಡು ತಿಂಗಳಾಗುತ್ತಾ ಬಂದಿದೆ. ಪ್ರಕರಣದಲ್ಲಿ ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ನಾಲ್ವರು ಅಮಾಯಕ ಮುಸ್ಲಿಂ ಯುವಕರು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ. ಪ್ರವಾದಿ ನಿಂದನೆ ಪೋಸ್ಟ್ ಹಾಕಿದ ಸ್ಥಳೀಯ ಶಾಸಕರ ಸಂಬಂಧಿಕ ನವೀನ್ ಕುಮಾರನ ಜೊತೆಗೆ ನೂರಾರು ಮುಸ್ಲಿಮರು ಜೈಲು ಪಾಲಾಗಿದ್ದಾರೆ..ಈವರೆಗಿನ ಅಂದಾಜಿನ ಪ್ರಕಾರ ಐವತ್ತ್ತು ಲಕ್ಷಕ್ಕೂ ಹೆಚ್ಚು ಮೌಲ್ಯದ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿಗಳ ನಷ್ಟವಾಗಿದೆ. ದೇವರಜೀವನ ಹಳ್ಳಿ (ಡಿ.ಜೆ. ಹಳ್ಳಿ) ಹಾಗೂ ಕಾಡುಗೊಂಡನಹಳ್ಳಿ (ಕೆ.ಜಿ ಹಳ್ಳಿ) ಪೊಲೀಸ್ ಠಾಣೆಗಳ ಕೆಲಭಾಗಗಳು, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ನವೀನ್ ಕುಮಾರ್ ಅವರ ಮನೆಗಳೂ ಹಾಗು ಇತರ ಸಾರ್ವಜನಿಕರ ಹಾಗೂ ಖಾಸಗಿ ವ್ಯಕ್ತಿಗಳ ವಾಹನಗಳು ಬೆಂಕಿಗೆ ಆಹುತಿಯಾಗಿವೆ.

ವಿಚಾರಣೆಗೆ ಮುನ್ನವೇ ಶಿಕ್ಷೆ

ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರ ಮನವಿಗೆ ಓಗೊಟ್ಟು ಯಡಿಯೂರಪ್ಪನವರ ಸರ್ಕಾರ ಹತ್ತಾರು ಆರೋಪಿಗಳ ಮೇಲೆ ದೇಶದ್ರೋಹೀ ಭಯೋತ್ಪಾದನೆ ನಿಗ್ರಹಕ್ಕೆ ಬಳಸುವ UAPA ಕಾಯಿದೆಯನ್ನು ಬಳಸಿ ವಿಚಾರಣೆಗೆ ಮುನ್ನವೇ ಶಿಕ್ಷೆ ನೀಡಲು ಪ್ರಾರಂಭಿಸಿದೆ. ಈ ಪ್ರಕರಣದ ಬಗ್ಗೆ ದಾಖಲಾಗಿರುವ ಒಟ್ಟಾರೆ 68 FIR ಗಳಲ್ಲಿ ಎರಡು FIR ಗಳ ತನಿಖೆಯನ್ನು NIA ಗೆ ಒಪ್ಪಿಸಲಾಗಿದೆ. ಅದೇ ರೀತಿ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಗಲಭೆಯಿಂದ ಆದ ಆಸ್ತಿಪಾಸ್ತಿ ನಷ್ಟಗಳನ್ನು ಗಲಭೆಕೋರರಿಂದಲೇ ಭರ್ತಿಮಾಡಲು ಸರ್ಕಾರ ಕ್ಲೈಮ್ ಕಮಿಷನರ್ ಒಬ್ಬರನ್ನು ನೇಮಕ ಮಾಡಲು ಹೈಕೋರ್ಟನ್ನು ಕೋರಿದೆ. ಅದರಂತೆ ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣನವರನ್ನು ಹೈಕೋರ್ಟು ಕ್ಲೈಮ್ ಕಮಿಷನರಾಗಿ ನೇಮಕ ಮಾಡಿದೆ.

A timeline of the riots at DJ Halli and KG Halli - The Hindu

ಈ ಪ್ರಕರಣವನ್ನು ಕಾಂಗ್ರೆಸ್, ಜೆಡಿಎಸ್‌ಗಳಸ್ಥಳೀಯ ನಾಯಕರುಗಳು ತಮ್ಮ ತಮ್ಮ ಸ್ಥಳೀಯ ಹಾಗೂ ಪಕ್ಷದೊಳಗಿನ ವೈಷಮ್ಯಗಳನ್ನು ಬಲಿಹಾಕಲು ಬಳಸಿಕೊಳ್ಳುತ್ತಿದ್ದರೆ, ಬಿಜೆಪಿ ಪಕ್ಷ ಮಾತ್ರ ಇದನ್ನು ತನ್ನ ದ್ವೇಷಾಧಾರಿತ ಸೈದ್ಧಾಂತಿಕ ಅಜೆಂಡಾಗಳಿಗೆ ಪೂರಕವಾಗಿ ಬಳಸಿಕೊಳ್ಳುತ್ತಿದೆ. ಆ ಪ್ರದೇಶಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕುತ್ತಿರುವ ಬಹುಸಂಖ್ಯಾತ ದಲಿತ ಹಾಗೂ ಮುಸ್ಲಿಮರ ನಡುವೆ ಕಂದಕ ತಂದು ಶಾಶ್ವತ ಕೋಮು ಧ್ರೂವೀಕರಣ ಉಂಟುಮಾಡಲು ಪ್ರಯತ್ನಿಸುತ್ತಿದೆ. ಬಿಜೆಪಿಯ ಯುವಸಂಸದ ತೇಜಸ್ವಿ ಸೂರ್ಯ ಅವರಂತೂ ಬೆಂಗಳೂರು ಭಯೋತ್ಪಾದಕರ ಸ್ವರ್ಗವಾಗಿದೆ ಎಂದೂ, ಬೆಂಗಳೂರಿನಲ್ಲಿ NIA ಯ ದಕ್ಷಿಣ ಕಾರ್ಯಾಲಯ ಪ್ರಾಂಭಿಸಬೇಕೆಂದೂ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಡಿಜಿ ಹಳ್ಳಿ ದೇವಾಲಯ ರಕ್ಷಸಿದ ಮುಸ್ಲೀಂ ಯುವಕರು: ಯಾರು ಅವರು? ಅವರು ಹೇಳಿದ್ದೇನು?

ಅದರ ಜೊತೆಗೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳೂ ಕೂಡಾ ತಮ್ಮತಮ್ಮದೇ ಆದ ಸತ್ಯಶೋಧನಾ ಸಮಿತಿಗಳನ್ನು ಮಾಡಿಕೊಂಡು ಪ್ರಕರಣದ ಅಧ್ಯಯನ ಮಾಡಿವೆ. ಹಾಗೂ ಪೂರ್ವನಿರ್ಧರಿತವಾದ ಹಾಗೂ ತಮ್ಮತಮ್ಮ ಮೂಗಿನ ನೇರಕ್ಕೆ ಇರುವ ವರದಿಗಳನ್ನು ಪ್ರಕಟಿಸಿವೆ.

ಪ್ರಾಯೋಜಿತ ಸತ್ಯ

ಇದರೊಂದಿಗೆ ಮಾನವ ಹಕ್ಕುಗಳ ಹೋರಾಟದಲ್ಲಿ ಅತ್ಯಂತ ಪ್ರಖ್ಯಾತವಾದ ಸಿಟಿಜನ್ ಫಾರ್ ಡೆಮಾಕ್ರಸಿ ಎಂಬ ಸಂಘಟನೆಯ ಹೆಸರಿನಲ್ಲಿ ಕೆಲವು ನಿವೃತ್ತ ಅಧಿಕಾರಿಗಳು ಹಾಗೂ ಮಾಜಿ ಪತ್ರಕರ್ತರುಗಳು ಪ್ರಧಾನವಾಗಿ ಪತ್ರಿಕಾ ವರದಿಗಳನ್ನು ಆಧರಿಸಿದ ಅಧ್ಯಯನ ನಡೆಸಿ ಇದು ಭಯೋತ್ಪಾದನಾ ಕೃತ್ಯ ಎಂಬ ತೀರ್ಪು ನೀಡಿದ್ದಾರೆ.
ಆದರೆ ಸಿಟಿಜನ್ ಫಾರ್ ಡೆಮಾಕ್ರಸಿಯ ಕರ್ನಾಟಕದ ಮುಖ್ಯಸ್ಥರಾದ ಎಸ್. ಆರ್ ಹಿರೇಮಠರು ತಮ್ಮ ಸಂಘಟನೆಯ ಹೆಸರಲ್ಲಿ ಈವರದಿ ಮಾಡಿದ ಈ ಮಹಾಶಯರುಗಳು ಯಾರೂ ಸಿಟಿಜನ್ ಫಾರ್ ಡೆಮಾಕ್ರಸಿ ಸಂಘಟನೆಗೆ ಸೇರಿದವರೇ ಅಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಅಷ್ಟು ಮಾತ್ರವಲ್ಲ ಬಿಜೆಪಿ ಸರ್ಕಾರದಲ್ಲಿ ನಿನ್ನೆಯ ತನಕ ಮಂತ್ರಿಯಾಗಿದ್ದ ಸಿ.ಟಿ. ರವಿಯವರು ಸೆಪ್ಟೆಂಬರ್ 6 ರಂದು ಮಾಡಿದ ಅಧಿಕೃತ ಟ್ವೀಟಿನಲ್ಲಿ ಈ ತಂಡವನ್ನು ಸರ್ಕಾರವೇ ನೇಮಿಸಿದ್ದೆಂದು ಸ್ಪಷ್ಟಪಡಿಸಿದ್ದಾರೆ.

ಅನಾಥ ಸತ್ಯದ ಅನ್ವೇಷಕರು

ಅದೇನೇ ಇದ್ದರೂ ಒಂದು ಪ್ರಜಾತಾಂತ್ರಿಕ ಸಮಾಜದಲ್ಲಿ ನಿಜವಾದ ಹಾಗೂ ಸ್ವತಂತ್ರವಾದ ಮಾನವ ಹಕ್ಕು ಸಂಘಟನೆಗಳು ಇಂಥಾ ಸಂದರ್ಭಗಳಲ್ಲಿ ನಡೆಸುವ ಸತ್ಯ ಶೋಧನೆಗಳಿಗೆ ಹಾಗೂ ಅದನ್ನು ಆಧರಿಸಿ ಅವರು ತಲುಪುವ ಅಭಿಪ್ರಾಯಗಳು ಹಾಗೂ ಕೊಡುವ ಶಿಫಾರಸ್ಸುಗಳಿಗೆ ಅತ್ಯಂತ ಮಹತ್ವವಿದೆ.

ಏಕೆಂದರೆ ನಮ್ಮ ಸಮಾಜ ವರ್ಗ, ಜಾತಿ, ಧರ್ಮ ಹಾಗೂ ಲಿಂಗಾಧಾರಿತ ತಾರತಮ್ಯಗಳನ್ನು ಆಧರಿಸಿದ ವ್ಯವಸ್ಥೆಯಾಗಿದೆ. ಹೀಗಾಗಿ ಇಲ್ಲಿನ ಪ್ರಭುತ್ವವೂ ಈ ಸಮಾಜದ ಕೂಸೇ ಆಗಿದೆ. ಸಾಮಾನ್ಯವಾಗಿ ಸಮಾಜ ಹಾಗೂ ಸರ್ಕಾರಗಳು ಸತ್ಯವೆಂದು ಪರಿಭಾವಿಸುವ ಸಂಗತಿಗಳಲ್ಲೂ ಇದೇ ಬಗೆಯ ಪೂರ್ವಗ್ರಹಗಳು ಕೆಲಸ ಮಾಡುತ್ತಿರುತ್ತವೆ. ಹೀಗಾಗಿ ಅಧಿಕೃತ ಸತ್ಯಗಳನ್ನು ಯಥಾವತ್ ಒಪ್ಪಿಕೊಳ್ಳದೆ ಅಸಲಿ ಸತ್ಯವನ್ನು ಶೋಧಿಸುವ ಕೆಲಸವನ್ನು ಇಂಥಾ ಮಾನವ ಹಕ್ಕು ಸಂಘಟನೆಗಳು ಮಾಡುತ್ತವೆ.

DJ Halli Police: More than 200 people with lethal weapons had gathered near  MLA's house | Deccan Herald

ಅಧಿಕೃತ ಸತ್ಯಕ್ಕೂ ಹಾಗೂ ಅಸಲಿ ಸತ್ಯಕ್ಕೂ ಇರಬಹುದಾದ ವ್ಯತ್ಯಾಸಗಳಿಗೆ ಅತಿದೊಡ್ಡ ಉದಾಹರಣೆಯೆಂದರೆ 1919 ರಲ್ಲಿ ಬ್ರಿಟಿಷ್ ಸರ್ಕಾರ ಭಾರತೀಯರ ಮೇಲೆ ನಡೆಸಿದ ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ಬಗ್ಗೆ ಬ್ರಿಟಿಷ್ ಸರ್ಕಾರ ಮುಂದಿಟ್ಟ್ಟ ವರದಿಗೂ ಕಾಂಗ್ರೆಸ್ ಪಕ್ಷ ಸ್ವತಂತ್ರ ಅಧ್ಯಯನ ನಡೆಸಿ ಮುಂದಿಟ್ಟ ವರದಿಗೂ ಇದ್ದ ವ್ಯತ್ಯಾಸಗಳು.

ಈ ಅನುಭವದ ಹಿನ್ನೆಲೆಯಲ್ಲಿ 1936ರಲ್ಲಿ ನೆಹ್ರೂರವರ ನೇತೃತ್ವದಲ್ಲಿ ಇಂಡಿಯನ್ ಸಿವಿಲ್ ಲಿಬರ್ಟೀಸ್ ಯೂನಿಯನ್ (ICLU) ಸ್ಥಾಪನೆಯಾಗಿ ವಸಾಹತುಶಾಹಿ ಆಡಳಿತದ ಅಧಿಕೃತ ಸತ್ಯಗಳಲ್ಲಿದ್ದ ಸುಳ್ಳುಗಳನ್ನು ಬಯಲು ಮಾಡುತ್ತಾ ಬರುತ್ತದೆ. ಅದೇರೀತಿ ಸ್ವಾತಂತ್ರ್ಯಾ ನಂತರದಲ್ಲಿ ಇಂದಿರಾ ಗಾಂಧಿ ಹೇರಿದ ತುರ್ತುಪರಿಸ್ಥಿತಿಯ ಹಿನ್ನೆಲೆಯಲ್ಲಿ ಜಯಪ್ರಕಾಶ್ ನಾರಾಯಣರೇ ಹುಟ್ಟುಹಾಕಿದ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (PUCL) ಈಗಲೂ ಸಹ ಪ್ರಭುತ್ವದ ಹಾಗೂ ಪ್ರಬಲರ ದೌರ್ಜನ್ಯಗಳನ್ನು ಬಯಲುಗೊಳಿಸುತ್ತಾ ಈ ದೇಶದ ಪ್ರಜಾತಂತ್ರಕ್ಕೆ ದೊಡ್ಡ ಸೇವೆ ಸಲ್ಲಿಸುತ್ತದೆ.

ಅದೇ ಮಾರ್ಗದಲ್ಲಿ ದೇಶದಲ್ಲಿ ಪ್ರಖ್ಯಾತ ನಿವೃತ್ತ ನ್ಯಾಯಾಧೀಶರುಗಳು, ಪತ್ರಕರ್ತರು, ವಕೀಲರು, ಅಧ್ಯಾಪಕರು, ವೈದ್ಯರು ಹಾಗೂ ಇನ್ನಿತರ ಪ್ರಜ್ನಾವಂತ ಹಾಗೂ ಜವಾಬ್ದಾರಿಯುತ ಗಣ್ಯರನ್ನೊಳಗೊಂಡ PUCL, APCLC, PUDR, APDR, PDF ನಂತಹ ದೇಶದ ವಿವಿಧ ಭಾಗಗಳಲ್ಲಿ ಕೆಲಸಮಾಡುತ್ತಿರುವ ಹಲವಾರು ಮಾನವ ಹಕ್ಕು ಸಂಘಟನೆಗಳು ಪ್ರಜಾತಾಂತ್ರಿಕ ಪ್ರಕ್ರಿಯೆಗಳಿಗೆ ಅಭೂತಪೂರ್ವವಾದ ಕೊಡುಗೆಯನ್ನು ನೀಡುತ್ತಿವೆ.

ಏಕೆಂದರೆ, ಪ್ರಬಲರ ಸತ್ಯಗಳು ಸಾಬೀತು ಮಾಡುವುದು ಸುಲಭ. ಅವು ತಮಗೆ ಬೇಕಾದ ಸಾಕ್ಷಿ ಮತ್ತು ಪುರಾವೆಗಳನ್ನು ದಕ್ಕಿಸಿಕೊಳ್ಳುತ್ತವೆ. ನಿವೃತ್ತ ಅಧಿಕಾರಿಗಳ ಸರ್ಕಾರಿ ಪ್ರಾಯೋಜಿತ ಸತ್ಯ ಶೋಧನಾ ವರದಿ ಇದಕ್ಕೊಂದು ಉದಾಹರಣೆ.

ಇದನ್ನೂ ಓದಿ: Bangalore: ಗಲಭೆಕೋರರು ಹೊರಗಿನಿಂದ ಬಂದವರು; ನಾವು ಸೌಹಾರ್ದತೆ ಬಯಸುತ್ತೇವೆ: ಡಿಜಿಹಳ್ಳಿ ನಿವಾಸಿಗಳು

ಆದರೆ ಸತ್ಯ ಸುಳ್ಳಿನಷ್ಟು ಶಕ್ತಿಶಾಲಿಯಲ್ಲ. ದುರ್ಬಲರ ಸತ್ಯಗಳು ತನ್ನಂತೆ ತಾನೇ ಸಾಬೀತಾಗುವುದಿಲ್ಲ. ಅವು ಸಂತ್ರಸ್ತರ ಭೀತಿಯಲ್ಲಿ, ಸಂದರ್ಭದ ಮೌನದಲ್ಲಿ, ಧೂಳಿನಲ್ಲಿ, ದಫ್ತರಿನಲ್ಲಿ, ಮಾರ್ಚುರಿಯಲ್ಲಿ, ಒಂಟಿ ಓಣಿಗಳಲ್ಲಿ ಅನಾಥವಾಗಿ ಬಿದ್ದಿರುತ್ತವೆ. ಅವನ್ನು ಶ್ರಮಪಟ್ಟು ಹುಡುಕಿ ತೆಗೆಯಬೇಕಾಗುತ್ತದೆ.

ಅದು ಪ್ರಭುತ್ವ ಹಾಗೂ ಪ್ರಬಲರು ವಿದ್ಯಮಾನಗಳಬಗ್ಗೆ ಹರಿಬಿಡುವ ಅಧಿಕೃತ ಕಥನಗಳನ್ನು ಅನುಮಾನದಿಂದ ನೋಡುವುದರಿಂದ ಪ್ರಾರಂಭವಾಗಬೇಕಾಗುತ್ತದೆ. ಭೀತಿಯ ಬೂದಿಯಲ್ಲಿ ಬಚ್ಚಿಟ್ಟುಕೊಂಡಿರುವ ಸತ್ಯಗಳನ್ನು ತರ್ಕ-ಪುರಾವೆಗಳಿಂದ ತೊಳೆದು ಜನರ ಮುಂದಿಡುವ ಶ್ರಮ ಹಾಗೂ ಸಾಹಸಗಳು ಬೇಕಾಗುತ್ತವೆ.

ಅಸಲಿ ಸತ್ಯವನ್ನು ಬಿಚ್ಚಿಡುವ ವರದಿ

ಸದರಿ ಪ್ರಕರಣದ ಬಗ್ಗೆ ಅಂಥ ಒಂದು ಶ್ಲಾಘನೀಯ ಹಾಗೂ ಅಸಲೀ ಸತ್ಯ ಶೋಧನೆಯನ್ನು ಬೆಂಗಳೂರಿನ ಹಲವಾರು ಪ್ರಖ್ಯಾತ ಹಾಗೂ ಜನಪರ ಮಾನವ ಹಕ್ಕು ಸಂಘಟನೆಗಳು, ದಲಿತ ಹಾಗೂ ಮಹಿಳಾ ಪರ ಸಂಘಟನೆಗಳು, ವೃತ್ತಿಪರ ವಕೀಲರು, ಗಣ್ಯ ಪತ್ರಕರ್ತರನ್ನು ಒಳಗೊಂಡ ನಾಗರಿಕ ಸಂಘಟನೆಗಳ ತಂಡವು ಮಾಡಿದೆ.

ಈ ಸಂಘಟನೆಗಳಿಗೆ ಸೇರಿದ ಮತ್ತು ವ್ಯಕ್ತಿಗಳನ್ನೊಳಗೊಂಡ ಸುಮಾರು 24 ಜನರ ಸತ್ಯ ಶೋಧನಾ ತಂಡವು ಆಗಸ್ಟ್ 20 ರಿಂದ ಸೆಪ್ಟೆಂಬರ್ 1 ರ ತನಕ ಸತತ ಹನ್ನೊಂದು ದಿನಗಳ ಕಾಲ ನಿರಂತರವಾಗಿ ಈ ಪ್ರಕರಣದ ಸತ್ಯಶೋಧನೆಯನ್ನು ನಡೆಸಿದೆ. ಅದರ ಭಾಗವಾಗಿ ಎಲ್ಲಾ ಸಂತ್ರಸ್ತರನ್ನೂ, ಅವರ ಕುಟುಂಬದವರನ್ನೂ, ಪೊಲೀಸರನ್ನೂ, ಡಿಜೆ ಹಳ್ಳಿ, ಕೆ.ಜಿ.ಹಳ್ಳೀ, ಕಾವಲ್ ಭೈರಸಂದ್ರದ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಈIಖ ಪ್ರತಿಗಳನ್ನೂ, ಪ್ರತ್ಯಕ್ಷ ದರ್ಶಿಗಳನ್ನೂ, ಘಟನೆಯನ್ನು ವರದಿ ಮಾಡಿದ ಪತ್ರಕರ್ತರನ್ನೂ, ಸಂಬಂಧಪಟ್ಟ ಸ್ಥಳೀಯ ರಾಜಕೀಯ ಮುಖಂಡರುಗಳನ್ನೂ, ಇದಕ್ಕೆ ಸಂಬಂಧಪಟ್ಟ ಎಲ್ಲಾ ಮಾಧ್ಯಮ ವರದಿಗಳನ್ನೂ, ಆಸ್ಪತ್ರೆಯ ದಾಖಲಾತಿಗಳನ್ನೂ ವೃತ್ತಿಪರತೆಯಿಂದ ಕೂಲಂಕಷವಾಗಿ ಅಧ್ಯಯನ ಮಾಡಿದೆ. ಸರ್ಕಾರದ ಹಾಗೂ ಸರ್ಕಾರಿ ಸತ್ಯ ಶೋಧನಾ ವರದಿಯನೂ ಗಂಭೀರವಾಗಿ ಅಧ್ಯಯನ ಮಾಡಿದೆ.

ಇದನ್ನೂ ಓದಿ: ಡಿಜೆ ಹಳ್ಳಿ ಪ್ರಕರಣ: ಕೊತ್ತಂಬರಿ ತರುವುದು ಅಪರಾಧವೇ? ನೆಟ್ಟಿಗರದ್ದೇಕೆ ಇಷ್ಟೊಂದು ಅಪಹಾಸ್ಯ!

ಈ ಶ್ರಮ, ಸಾಹಸ, ಜನಪರತೆ ಹಾಗೂ ವೃತ್ತಿಪರತೆಗಳ ಭಾಗವಾಗಿ ಈ ಸತ್ಯ ಶೋಧನಾ ತಂಡವು ಸದರಿ ವಿದ್ಯಮಾನದ ಕುರಿತು ಸತ್ಯಕ್ಕೆ ಅತ್ಯಂತ ಸಮೀಪವಾಗಿರುವ ವರದಿಯನ್ನು ಬಿಡುಗಡೆ ಮಾಡಿದೆ.

Communalising Violence in DJ Halli- Report Of The Fact Finding Into The Violence And Its Aftermath at DJ Halli, KG Halli and Kaval Bhairsanadra by Bengaluru Civil Society Organisations (ಡಿ.ಜೆ.ಹಳ್ಳಿಯಲ್ಲಿ ನಡೆದ ಹಿಂಸಾಚಾರಗಳ ಕೋಮುವಾದೀಕರಣ- ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ ಭೈರಸಂದ್ರಗಳಲ್ಲಿ ನಡೆದ ಹಿಂಸಾಚಾರ ಹಾಗು ಆ ನಂತರದ ಬೆಳವಣಿಗೆಗಳ ಕುರಿತು ಬೆಂಗಳೂರಿನ ನಾಗರಿಕ ಸಮಾಜದ ಸಂಘಟನೆಗಳವರದಿ) ಎಂಬ ಈ 130 ಪುಟಗಳ ಈ ವರದಿಯು ಸದರಿ ಪ್ರಕರಣದ ಸಮಗ್ರ ಮಾಹಿತಿ ಹಾಗೂ ಅತ್ಯಂತ ಸಮಂಜಸವಾದ ವಿಶ್ಲೇಷಣೆ ಹಾಗೂ ಶಿಫಾರಸ್ಸುಗಳನ್ನು ನೀಡುತ್ತದೆ.

ಈ ವರದಿಯು ಕಂಡುಕೊಂಡಿರುವ ಕೆಲವು ಸತ್ಯಾಂಶಗಳು ಮತ್ತು ಶಿಫ಼ಾರಾಸುಗಳು ಕಣ್ಣು ತೆರೆಸುವಂತಿದೆ:

  1. ಒಟ್ಟಾರೆ ಪ್ರಕರಣ ಪ್ರಾರಂಭವಾಗಿದ್ದು ಆಗಸ್ಟ್ 11ರ ಸಂಜೆ 5.45ರ ಸುಮಾರಿಗೆ ಸ್ಥಳೀಯ ಶಾಸಕನ ಸೋದರಳಿಯ ಹಾಗೂ ಹಿಂದೂತ್ವ ಸಿದ್ಧಾಂತದ ಬಗ್ಗೆ ಇತ್ತೀಚಿನ ದಿನಗಳಲ್ಲಿ ವಿಶೇಷ ಒಲವು ಬೆಳೆಸಿಕೊಂಡಿದ್ದ ನವೀನ್ ಕುಮಾರ್ ತನ್ನ ಪೇಸ್ಬುಕ್ಕಿನಲ್ಲಿ ಪಾರ್ವರ್ಡ್ ಮಾಡಿದ ಪ್ರವಾದಿ ಮಹಮ್ಮದರನ್ನು ಅತ್ಯಂತ ಹೀನಾಯವಾಗಿ ನಿಂದಿಸುವ ಪೋಸ್ಟಿನಿಂದ..
  2. ಆನಂತರದ ಗಲಭೆಗಳಿಗೆ ಈ ಪೋಸ್ಟೇ ಕಾರಣವೆಂಬುದು ಸಾಬೀತಾಗತೊಡಗಿದೊಡನೆ ಬಿಜೆಪಿ ಸರ್ಕಾರದ ಮಂತ್ರಿಗಳನ್ನೂ ಒಳಗೊಂಡಂತೆ ಸಂಘಪರಿವಾರದ ಪ್ರಚಾರ ಬ್ರಿಗೇಡುಗಳು ನವೀನ್ ಕುಮಾರ್ ಅವರ ಪೋಸ್ಟು ಅದರ ಹಿಂದಿನ ದಿನ ಮುಸ್ಲಿಮರೊಬ್ಬರು ತಮ್ಮ ಫೇಸ್ಬುಕ್ಕಿನಲ್ಲಿ ಹಾಕಿದ ಹಿಂದೂ ದೇವತೆಗಳನ್ನು ಅವಹೇಳನ ಮಾಡುವ ಪೋಸ್ಟಿಗೆ ಪ್ರತಿಕ್ರಿಯೆಷ್ಟೇ ಆಗಿತ್ತು ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ವಾದದ ಬಗ್ಗೆಯೂ ಕೂಲಂಕಷ ಅಧ್ಯಯನ ಮಾಡಿರುವ ತಂಡವು ಸಂಬಂಧಪಟ್ಟ ಹಿಂದೂ ನಿಂದನಾ ಪೋಸ್ಟು ಎರಡು ವರ್ಷ ಹಳೆಯದಾಗಿದ್ದು ಆಗಲೇ ಅದು ಸಂಬಂಧಪಟ್ಟ ವ್ಯಕ್ತಿಯ ಫೇಸ್ಬುಕ್ ಅಕೌಂಟಿನಿಂದ ಡಿಲೀಟಾಗಿರುವುದಕ್ಕೂ ಪುರಾವೆಗಳನ್ನೂ ಒದಗಿಸುತ್ತದೆ.
  3. ಹೀಗಾಗಿ ನವೀನ್ ಕುಮಾರ್ ಪ್ರವಾದಿ ನಿಂದನೆ ಪೋಸ್ಟನ್ನು ಹಾಕಲೂ ಯಾವ ತುರ್ತು ಪ್ರಚೋದನೆಯೂ ಇರಲಿಲ್ಲವೆಂಬ ಮಹತ್ವದ ಅಂಶವನ್ನು ವರದಿಯು ಗಮನಕ್ಕೆ ತರುತ್ತದೆ. ಹಾಗೂ ನವೀನ್ ಕುಮಾರ್ ಯಾರೋ ಕಳಿಸಿದ ಪೋಸ್ಟನ್ನು ಅಂದು ಫಾರ್ವರ್ಡ್ ಮಾಡಿದ ಹಿನ್ನೆಲೆಯ ಬಗ್ಗೆಯೂ ತನಿಖೆಯು ವಿಸ್ತಾರಗೊಳ್ಳಬೇಕೆಂದು ವರದಿಯು ಆಗ್ರಹಿಸುತ್ತದೆ.
  4. ಈ ಪ್ರಚೋದನಾತ್ಮಕ ಪೋಸ್ಟಿನ ಬಗ್ಗೆ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಠಾಣೆಗಳಲ್ಲಿ ಕೇವಲ 5-10 ಜನರ ಗುಂಪು ಸಂಜೆ6.30-7.30ರ ವೇಳೆಗೆ ಬಂದು ದೂರುಕೊಡುತ್ತದೆ. ತಂಡದ ಪ್ರಕಾರ ಕೂಡಲೇ ಪೊಲೀಸರು ಕ್ರಮವನ್ನು ತೆಗೆದುಕೊಂಡಿದ್ದರೆ ಠಾಣೆಯ ಮುಂದೆ ಸೇರಿದ ಜನಸಂದಣಿ ಹೆಚ್ಚು ಸೇರುವ ಅಥವಾ ಆಕ್ರೋಶಗೊಳ್ಳುವ ಸಂಭವವೇ ಇರುತ್ತಿರಲಿಲ್ಲ.
  5. ಈ ನಿರ್ಲಕ್ಷ್ಯಕ್ಕೆ ಪುರಾವೆಯಾಗಿ ನವೀನ್ ಕುಮಾರ್ ಬಂಧನದ ರೀತಿ ಹಾಗೂ ಸಮಯದ ಬಗ್ಗೆ ಪೊಲೀಸರು ಹೇಳುತ್ತಿರುವ ಕಥನಕ್ಕೂ ನವೀನ್ ಕುಮಾರ್ ಮನೆಯವರು ಹಾಗೂ ಸ್ಥಳೀಯರು ಹೇಳುತ್ತಿರುವ ಕಥನಗಳಿಗೂ ಇರುವ ವ್ಯತ್ಯಾಸದ ಬಗ್ಗೆ ವರದಿ ಬೆಳಕು ಚೆಲ್ಲುತ್ತದೆ. ಹಾಗೆಯೇ ಪೊಲೀಸರು ದಾಖಲಿಸಿರುವ ದೂರುಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿರುವ ತಂಡವು ರಾತ್ರಿ 8.30ರ ನಂತರವೇ ಠಾಣೆಗಳ ಮುಂದೆ ಜನಸಂದಣಿ ಹೆಚ್ಚಾಗಿರುವುದನ್ನು ಗಮನಕ್ಕೆ ತರುತ್ತದೆ.
  6. ಅಷ್ಟು ಮಾತ್ರವಲ್ಲ. ಫೇಸ್ಬುಕ್ ಪೋಸ್ಟ್ ಸೃಷ್ಟಿಸಿದ ಉದ್ವಿಘ್ನ ಪರಿಸ್ಥಿತಿ ಹಾಗೂ ಸಂಭವನೀಯ ಶಾಂತಿಭಂಗಗಳಬಗ್ಗೆ ಪೊಲೀಸ್ ಇಂಟೆಲೆಜೆನ್ಸ್ ವೈಫಲ್ಯ ಹಾಗೂ ಜನಸಂದಣಿ ಹೆಚ್ಚಾಗುತ್ತಿದ್ದರೂ ಹೆಚ್ಚುವರಿ ಪೊಲೀಸ್ ಪಡೆಗಳು ಸರಿಯಾದ ಸಮಯಕ್ಕೆ ಬರದಿದ್ದದ್ದೂ ಸಹ ಹಿಂಸಾಚಾರಗಳು ನಿಯಂತ್ರಣವಾಗದಿರಲು ಕಾರಣವೆಂಬುದನ್ನು ವರದಿಯು ಪುರಾವೆಗಳ ಸಮೇತ ಸಾಬೀತು ಮಾಡುತ್ತದೆ.
  7. ಆನಂತರ ನಡೆದ ಹಿಂಸಾಚಾರಗಳನ್ನು ವರದಿಯು ಸ್ಪಷ್ಟ ಮಾತುಗಳಲ್ಲಿ ಖಂಡಿಸುತ್ತದೆ.
  8. ಆದರೆ ಆ ಹಿಂಸಾಚಾರಗಳು ಕೋಮುದ್ವೇಷದಿಂದ ಕೂಡಿತೆಂಬುದಕ್ಕೆ ಯಾವುದೇ ಪುರಾವೆಯಿಲ್ಲವೆಂದು ವರದಿಯು ಸ್ಪಷ್ಟಪಡಿಸುತ್ತದೆ. ಅದಕ್ಕೆ ಎಲ್ಲಾ ಸಮುದಾಯಗಳಿಗೆ ಸೇರಿದ ಹತ್ತಾರು ಪ್ರತ್ಯಕ್ಷದರ್ಶಿಗಳ ಜೊತೆ ನಡೆಸಿದ ಸಂದರ್ಶನಗಳನ್ನೂ, ಪೊಲೀಸ್ ದೂರುಗಳಲ್ಲಿರುವ ವಿವರಗಳನ್ನೂ ಮತ್ತು ಆಸ್ಪತ್ರೆಯ ದಾಖಲಾತಿಗಳನ್ನು ಪುರಾವೆಯಾಗಿ ಒದಗಿಸುತ್ತದೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ನವೀನ್ ಕುಮಾರ್ ಮನೆಗಳನ್ನು ನಿರ್ದಿಷ್ಟವಾಗಿ ಗುರಿಯಾಗಿರಿಸಿಕೊಂಡಿದ್ದು ಬಿಟ್ಟರೆ ಉಳಿದಂತೆ ನಡೆದ ಹಿಂಸಾಚಾರಗಳು ನಾಯಕತ್ವ ಹಾಗೂ ಗೊತ್ತುಗುರಿಯಿಲ್ಲದ ಮತ್ತ ಹಾಗೂ ಉನ್ಮತ್ತ ಗುಂಪು ನಡೆಸಿರುವ ಹಿಂಸಾಚಾರಗಳಾಗಿವೆ. ಉದಾಹರಣೆಗೆ ಈ ಹಿಂಸಾಚಾರಗಳಿಗೆ ಹಾಗೂ ಆಸ್ತಿಪಾಸ್ತಿ ನಷ್ಟಗಳಿಗೆ ಹೆಚ್ಚು ಬಲಿಯಾದವರು ಮುಸ್ಲಿಮರೇ ಆಗಿದ್ದಾರೆ.
  9. ಎಲ್ಲಕ್ಕಿಂತ ಹೆಚ್ಚಾಗಿ ಗಲಭೆಗಳು ನಡೆಯುತ್ತಿದ್ದಾಗ ಹಿಂದೂ ದೇವಾಲಯಗಳನ್ನೂ, ನವೀನ್ ಕುಮಾರ್ ಕುಟುಂಬವನ್ನೂ ಒಳಗೊಂಡಂತೆ ಹಲವಾರು ಹಿಂದೂ ಕುಟುಂಬಗಳನ್ನು ಸ್ಥಳೀಯ ಮುಸ್ಲಿಮ್ ಯುವಕರೇ ರಕ್ಷಿಸಿದ ಬಗ್ಗೆ ಹಲವಾರು ಹಿಂದೂ ಕುಟುಂಬಗಳು ಸ್ವಪ್ರೇರಣೆಯಿಂದ ನೀಡಿರುವ ಹೇಳಿಕೆಗಳನ್ನು ವರದಿಯು ದಾಖಲಿಸುತ್ತದೆ. ಹಾಗೂ ಠಾಣೆಯ ಮುಂದಿದ್ದ ಉದ್ರಿಕ್ತ ಜನರ ಗುಂಪನ್ನು ಸತತವಾಗಿ ಸಮಾಧಾನಗೊಳಿಸಲು ಎಸ್‌ಡಿಪಿಐ ಮುಖಂಡರನ್ನೂ ಒಳಗೊಂಡಂತೆ, ಹಲವಾರು ಮುಸ್ಲೀಮ್ ಮುಖಂಡರುಗಳು ನಿರಂತರವಾಗಿ ಪ್ರಯತ್ನಿಸುತ್ತಿದ್ದನ್ನು ವರದಿಯು ಪುರಾವೆ ಸಮೇತ ದಾಖಲಿಸಿದೆ. ಇದಲ್ಲದೆ ನೂರಾರು ಮುಸ್ಲಿಂ ಹಿರಿಯರು ಹಾಗೂ ಸ್ಥಳೀಯ ನಾಯಕರು ಸಾಮಾಜಿಕ ಜಾಲತಾನಗಳಲ್ಲಿ ನಿರಂತರವಾಗಿ ಶಾಂತಿ ಮತ್ತು ಸಮಾಧಾನ ಕಾಪಾಡಿಕೊಳ್ಳಲು ವಿನಂತಿ ಮಾಡುತ್ತಿದ್ದದ್ದನ್ನು ವರದಿ ಉಲ್ಲೇಖಿಸುತ್ತದೆ. ಈ ಎಲ್ಲಾ ಕಾರಣಗಳಿಂದ ಆಗಸ್ಟ್ ೧೧ ರಂದು ಸಂಭವಿಸಿದ ಹಿಂಸಾಚಾರಗಳನ್ನು ಯಾವ ದೃಷ್ಟಿಯಿಂದಲೂ ಕೋಮುಗಲಭೆಯೆನ್ನಲು ಸಾಧ್ಯವೇ ಇಲ್ಲವೆಂದು ಸತ್ಯಶೋಧನಾ ತಂಡವು ಖಚಿತವಾಗಿ ಅಭಿಪ್ರಾಯ ಪಡುತ್ತದೆ.
  10. ಹೀಗಾಗಿ ಗಲಭೆಗಳನ್ನು ಕೋಮುವಾದಿ ಹಾಗೂ ಇಸ್ಲಾಮಿಕ ಶಡ್ಯಂತ್ರ ಎಂದು ಸಾಧಿಸಲು ಪ್ರಯತ್ನಿಸಿದ ಮಾಧ್ಯಮಗಳ ಹಾಗೂ ಬಿಜೆಪಿ ಹಾಗೂ ಸಂಘಪರಿವಾರದ ಪ್ರಯತ್ನಗಳನ್ನು ಸತ್ಯಕ್ಕೆ ದೂರವಾದ ಅಪಾಯಕಾರಿ ಕೋಮು ಧೃವೀಕರಣದ ಹುನ್ನಾರವೆಂದು ತಂಡವು ಖಚಿತವಾಗಿ ಅಭಿಪ್ರಾಯ ಪಡುತ್ತದೆ. ಅದೇ ಸಮಯದಲ್ಲಿ ಇಂಥದೇ ಆರೋಪಗಳಿಗೆ ಗುರಿಯಾಗಿರುವ ಬಿಜೆಪಿ ನಾಯಕರ ಮೇಲಿದ್ದ 62 ಕೇಸುಗಳನ್ನು ವಾಪಸ್ ಪಡೆದಿರುವುದು ಸರ್ಕಾರದ ಕೋಮುವಾದಿ ಸ್ವಭಾವವನ್ನು ಬಯಲುಗೊಳಿಸುತ್ತದೆ. ಅದರ ಬಗ್ಗೆ ಮೌನವಾಗಿರುವ ಮಾಧ್ಯಮಗಳ ಇಬ್ಬಗೆಯ ನೀತಿಯನ್ನು ಖಂಡಿಸುವ ವರದಿಯು ಮಾಧ್ಯಮಗಳು ನಿಷ್ಪಕ್ಷಪಾತಿಯಾಗಿರಲು ಸ್ವನಿರ್ಬಂಧಗಳನ್ನು ಹಾಕಿಕೊಳ್ಳುವ ಹಾಗೂ ಸಂವಿಧಾನದ ಮೌಲ್ಯಗಳನ್ನು ಪ್ರತಿಪಾದಿಸುವ ಅಗತ್ಯವನ್ನು ಒತ್ತುಕೊಟ್ಟು ಹೇಳುತ್ತದೆ.
  11. ಹಿಂಸಾಚಾರದ ನಂತರದ ದಿನಗಳಲ್ಲಿ ಪೊಲೀಸರು ಇಡೀ ಪ್ರದೇಶದಲ್ಲಿ ಸೆಕ್ಷನ್ 144 ವಿಧಿಸಿದರು. ಮತ್ತು ರಾತ್ರೋರಾತ್ರಿ ಕಾರ್ಯಾಚರಣೆಗಳನ್ನು ನಡೆಸಿ ನೂರಾರು ಅಮಾಯಕ ಮುಸ್ಲಿಮ್ ಯುವಕರನ್ನು ಬಂಧಿಸುತ್ತಾ ಸೇಡಿನ ಕಾರ್ಯಾಚರಣೆಯನ್ನು ನಡೆಸುತಾ ಭೀತಿ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ಮತ್ತೊಂದು ಕಡೆ ಬಂಧನಗಳನ್ನು ಮಾಡುವಾಗ ಪೊಲೀಸರೂ ಯಾವುದೇ ನಿಯಮಗಳನ್ನು ಅನುಸರಿಸದಿರುವುದು, ಕಾರಣವೇ ಇಲ್ಲದೆ UAPA ಕಾಯಿದೆಯನ್ನು ಹೇರುತ್ತಿರುವುದೂ ಹಾಗೂ ಅವರನ್ನು ರಿಮ್ಯಾಂಡಿಗೆ ಕೊಡುವಾಗ ಮ್ಯಾಜಿಸ್ಟ್ರೇಟರು ಕೂಡಾ ಆರೋಪಿಗಳ ಹಕ್ಕುಗಳನ್ನು ಖಾತರಿಗಿಳಿಸದಿರುವುದು ಅತ್ಯಂತ ಕಳವಳಕಾರಿ ಸಂಗತಿಯೆಂದು ವರದಿಯು ಆತಂಕ ವ್ಯಕ್ತಪಡಿಸುತ್ತದೆ. ಆದ್ದರಿಂದ ಆರೋಪಿಗಳ ಮೇಲೆ ಹಾಕಿರುವ UAPA ಕಾಯಿದೆಯನ್ನು ಹಿಂತೆಗೆದುಕೊಳ್ಳಬೇಕೆಂದೂ, ಆರೋಪಿಗಳ ಹಕ್ಕುಗಳನ್ನು ಖಾತರಿಗೊಳಿಸಬೇಕೆಂದೂ ಆಗ್ರಹಿಸುತ್ತದೆ.
  12. ಹಿಂಸಾಚಾರದ ನಂತರದ ಸಂದರ್ಭವನ್ನು ಮಾಧ್ಯಮಗಳ ಬೆಂಬಲದೊಂದಿಗೆ ಬಿಜೆಪಿ ಮತ್ತು ಹಿಂದೂತ್ವವಾದಿ ಸಂಘಟನೆಗಳು ಕೋಮುವಾದಿ ಧೃವೀಕರಣಕ್ಕೆ ಬಳಸುತ್ತಿರುವುದು, ಸರ್ಕಾರಿ ಪ್ರಾಯೋಜಿತ ಸತ್ಯ ಶೋಧನೆಗಳನ್ನು ನಡೆಸಿ ಸುಳ್ಳುಗಳನ್ನು ಬಿತ್ತುತ್ತಾ ಮುಸ್ಲಿಂ ಸಮುದಾಯವನ್ನೇ ಅಪರಾಧೀಕರಿಸುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯೆಂದು ಕೂಡಾ ವರದಿ ಅಭಿಪ್ರಾಯ ಪಡುತ್ತದೆ.
  13. ಗಲಭೆ ನಡೆದ ಎಲ್ಲಾಪ್ರದೇಶಗಳು ಐತಿಹಾಸಿಕವಾಗಿ ಬಡ ಹಾಗೂ ಕೆಳಮಧ್ಯಮ ವರ್ಗದ ಮುಸ್ಲಿಮ್,ಹಿಂದೂ ಹಾಗೂ ಕ್ರಿಶ್ಚಿಯನ್ ಸಮುದಾಯದವರು ವಾಸಿಸುವ ಪ್ರದೇಶವಾಗಿದ್ದು, ಬದುಕಿನ ಎಲ್ಲಾ ಸೂಚ್ಯಂಕಗಳಲ್ಲೂ ಅತ್ಯಂತ ದಾರುಣ ಪರಿಸ್ಥಿತಿಯಲ್ಲಿದೆ. ಆದ್ದರಿಂದ ಸರ್ಕಾರ ಅಲ್ಲಿ ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳನ್ನೂ ತ್ವರಿತಗತಿಯಲ್ಲಿ ಕೈಗೊಳ್ಳಬೇಕೆಂದು ವರದಿ ಆಗ್ರಹಿಸುತ್ತದೆ. ಅದೇ ಸಮಯದಲ್ಲಿ ಎಲ್ಲಾ ಧಾರ್ಮಿಕ ಹಾಗೂ ರಾಜಕೀಯ ನಾಯಕರು ಜನರಲ್ಲಿ ಧರ್ಮದ ಬಗ್ಗೆ ವಿಮರ್ಶಾತ್ಮಕ ದೃಷ್ಟಿಕೋನವನ್ನು ಬೆಳೆಸಲು ಹಾಗೂ ಒಂದು ಆರೋಗ್ಯಕರ ಸಮಾಜಕ್ಕೆ ಬಹುತ್ವ ಹಾಗೂ ಸೌಹಾರ್ದ ಸಹಜೀವನದ ಅಗತ್ಯವನ್ನು ಮನವರಿಕೆ ಮಾಡಿಸಲು ಶ್ರಮಿಸಬೇಕೆಂದೂ ಸಹ ಒತ್ತಾಯಿಸುತ್ತದೆ.

(ವರದಿಯ ಪೂರ್ಣಪಾಠವನ್ನು ಓದಲು ಆಸಕ್ತರು ಇಲ್ಲಿ ನೋಡಿ: – http://bit.ly/DJHalliFFTReport )

– ಶಿವಸುಂದರ್


ಇದನ್ನೂ ಓದಿ: ಡಿಜೆ ಹಳ್ಳಿ ಗಲಬೆ ಪೂರ್ವ ನಿಯೋಜಿತ; ಎಸ್‌ಡಿಪಿಐ ಹಾಗೂ ಪಿಎಫ್ಐ ಬ್ಯಾನ್‌ಗೆ ಶಿಫಾರಸ್ಸು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights