ಬಿಜೆಪಿ ಅಜೆಂಡಾ ಸಾಧನೆಗಾಗಿ ಕೊರೊನಾ ನಿಯಮಗಳ ದುರುಪಯೋಗ: ತೀಸ್ತಾ ಸೆಟಲ್ವಾಡ್‌

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಗಣಿಗಾರಿಕೆ ಮತ್ತು ಖನಿಜ ಕಾನೂನುಗಳು, ಹೊಸ ಕಾರ್ಮಿಕ ಕಾನೂನುಗಳು, ರೈತ ಮಸೂದೆಗಳನ್ನು ಅಂಗೀಕರಿಸಲು ಹಾಗೂ ಮೂಲಭೂತ ಸ್ವಾತಂತ್ರ್ಯ ಮತ್ತು ಪತ್ರಿಭಟನೆಗಳನ್ನು ಹತ್ತಿಕ್ಕಲು ಸಾಂಕ್ರಮಿಕ ರೋಗಗಳ ಕಾಯ್ದೆಯ ನೆಪದಲ್ಲಿ ಸೆಕ್ಷನ್‌ 144 ಅನ್ನು ದುರುಪಯೋಗ ಮಾಡಿಕೊಂಡಿದೆ ಎಂದು ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ ಆರೋಪಿಸಿದ್ದಾರೆ.

144 ಸೆಕ್ಷನ್‌ಅನ್ನು ಶಾಶ್ವತವಾಗಿ ಹೇರುವ ಮೂಲಕ ಬಿಜೆಪಿಯ ನೀತಿಗಳನ್ನು ವಿರೋಧಿಸದಂತೆ ಹಾಗೂ ಪ್ರತಿಭಟಸದಂತೆ ತಡೆಯಲು ದುರುಪಯೋಗ ಮಾಡಿಕೊಂಡಿದೆ. ಈ ಮೂಲಕ ತನ್ನ ಅಜೆಂಡಾಗಳನ್ನು ಕಾರ್ಯಗತಗೊಳಿಸಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

ಮಾನವ ಹಕ್ಕು ವೇದಿಕೆ(ಎಚ್‌ಆರ್‌ಎಫ್‌)ಯ ಸಂಸ್ಥಾಪಕ ಕೆ ಬಾಲಗೋಪಾಲ್‌ ಅವರ ಹತ್ತನೇ ವರ್ಷದ ನೆನಪಿನ ಭಾಗವಾಗಿ ಎಚ್‌ಆರ್‌ಎಫ್‌ ಆಯೋಚಿಸಿದ್ದ ‘ಸ್ಟೇಟ್ ಆಫ್ ಅವರ್ ರಿಪಬ್ಲಿಕ್’ ಎಂಬ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರವು ಅಘೋಷಿತ ತುರ್ತು ಪರಿಸ್ಥಿತಿಯನ್ನು ದೇಶಾದ್ಯಂತ ಹೇರಿದೆ ಎಂದು ಹೇಳಿದ್ದಾರೆ.

ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಬಾಬ್ರಿ ಮದೀಸಿ ತೀರ್ಪಿನ ಬಗ್ಗೆ ಮಾತನಾಡಿದ ಅವರು, ಬಿಜೆಪಿಯ ಸಿದ್ಧಾಂತವು ಅಸಮಾನ ಪೌರತ್ವ, ತಾರತಮ್ಯದ ಕಾನೂನು, ಜಾತಿವಾದ, ಪಿತೃಪ್ರಭುತ್ವ ಮತ್ತು ಕೋಮುವಾದವನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಿದರು.

ಸಂವಿಧಾನ ರಚನೆ ಮತ್ತು ನೈತಿಕತೆಯ ಬುನಾಧಿಯನ್ನು  ಕೆಡವಲು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಬಿಜೆಪಿ ಮುಂದಾಗಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮತ್ತು ಯುಪಿ ಮುಖ್ಯಮಂತ್ರಿಯನ್ನು ಟೀಕಿಸಿದ್ದಕ್ಕಾಗಿ ಮುಸ್ಲಿಮರ ವಿರುದ್ಧ ಪೊಲೀಸ್‌ ದೂರುಗಳು ದಾಖಲಾಗುತ್ತಿವೆ. ದಾಖಲಾಗುತ್ತಿರುವ ಪ್ರಕರಣಗಳಿಗೆ ಅಂತ್ಯವೇ ಇಲ್ಲದಂತಾಗಿದೆ.  ದೆಹಲಿ ಗಲಭೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಯುಎಪಿಎ ಅಡಿಯಲ್ಲಿ 19 ಜನರ ಮೇಲೆ ದೂರು ದಾಖಲಿಸಿದ್ದಾರೆ. ಆ 19 ಜನರೂ ಮುಸ್ಲಿಮರಾಗಿದ್ದಾರೆ ಎಂದು ಹೇಳಿದ್ದಾರೆ.

ಸಿಎಎ, ಎನ್‌ಸಿಆರ್‌ ಮೂಲಕ ಅಸ್ಸಾಂನಲ್ಲಿ 19 ಲಕ್ಷ ಜನರನ್ನು ಮೂಲಭೂತ ಸೌಕರ್ಯಗಳೂ ಇಲ್ಲದಂತೆ ಹೊರಗಿಡಲಾಗಿದೆ. ಆ ಜನರು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆ ಎಂದು ತಿಳಿಸಿದರು.


ಇದನ್ನೂ ಓದಿ: ಮೋದಿ ಸರ್ಕಾರಕ್ಕೆ ಮುಖಭಂಗ: ಕಾರ್ಮಿಕ ಹಕ್ಕುಗಳನ್ನು ರಕ್ಷಿಸುವಲ್ಲಿ ಭಾರತ 151ನೇ ಸ್ಥಾನಕ್ಕೆ ಕುಸಿತ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights