ನಾಲ್ಕು ಬಾರಿ ರಾಜೀನಾಮೆ: ಪ್ರತಿ ಬಾರಿಯೂ ಬಿಎಸ್‌ವೈ ತಮ್ಮ ಅಧಿಕಾರವನ್ನು ಪೂರ್ಣಗೊಳಿಸಲಿಲ್ಲ!;

ಕರ್ನಾಟಕ ಬಿಜೆಪಿಯ ಅಂತ್ಯಂತ ವಿಶ್ವಾಸಾರ್ಹ ಪ್ರಬಲ ನಾಯಕ ಎಂದು ಕರೆಸಿಕೊಂಡಿದ್ದ ಬಿಎಸ್‌ ಯಡಿಯೂರಪ್ಪ ಅವರು ಎಂದಿಗೂ ಮುಖ್ಯಮಂತ್ರಿಯಾಗಿ ಐದು ವರ್ಷಗಳ ಕಾಲ ಅಧಿಕಾರ ನಡೆಸಲಿಲ್ಲ ಎಂಬುದು ವಿಪರ್ಯಾಸ. ಜುಲೈ 26ರಂದು ಅವರು ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ಧಾರೆ. ಅವರು ಈ ರೀತಿ ರಾಜೀನಾಮೆ ನೀಡಿರುವುದು ಇದೇ ಮೊದಲೇನೂ ಅಲ್ಲ.

ಕಳೆದ ಮೂರು ಬಾರಿ ಅವರು ಸಿಎಂ ಕುರ್ಚಿಗೆ ಕಸರತ್ತು ನಡೆಸಿದ್ದಾರೆ. ನಾಲ್ಕು ಬಾರಿಯೂ ಅಧಿಕಾರದ ಅವಧಿ ಪೂರ್ಣಗೊಳುವ ಮುನ್ನವೇ ರಾಜೀನಾಮೆ ನೀಡಿದ್ಧಾರೆ.

ಅವರು ನಾಲ್ಕು ಬಾರಿ ರಾಜೀನಾಮೆ ನೀಡಬೇಕಾದ ಸಂದರ್ಭಗಳನ್ನು ನೋಡೋಣ

19 ನವೆಂಬರ್, 2007: ಸಿಎಂ ಆಗಿ ಎಂಟು ದಿನಗಳು:

ಜೆಡಿಎಸ್ ತನ್ನ ಹಿಂದಿನ ಮಿತ್ರಪಕ್ಷವಾಗಿದ್ದ ಕಾಂಗ್ರೆಸ್‌ಗೆ ನೀಡಿದ್ದ ಬೆಂಬಲವನ್ನು 2006 ರ ಜನವರಿಯಲ್ಲಿ ಹಿಂತೆಗೆದುಕೊಂಡಿತು. ತರುವಾಯ, ಎಚ್.ಡಿ.ಕುಮಾರಸ್ವಾಮಿ ಸಿಎಂ ಆದರು ಮತ್ತು ಯಡಿಯೂರಪ್ಪ ಅವರ ಉಪ ಮುಖ್ಯಮಂತ್ರಿಯಾಗಿದ್ದರು. ಆಗ 20 ತಿಂಗಳ ನಂತರ ಕುಮಾರಸ್ವಾಮಿ ಅವರು ಯಡಿಯೂರಪ್ಪರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಒಪ್ಪಂದವಾಗಿತ್ತು.

ಅಕ್ಟೋಬರ್‌ನಲ್ಲಿ ಕುಮಾರಸ್ವಾಮಿ ಅವರ 20 ತಿಂಗಳ ಅಡಳಿತ ಮುಗಿಯುವ ವೇಳೆ, ಬಿಎಸ್‌ವೈಗೆ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದರು. ಕೋಪಗೊಂಡ ಯಡಿಯುರಪ್ಪ ತುಮಕೂರಿನಲ್ಲಿ ಸಿದ್ದಗಂಗಾ ಮಠಕ್ಕೆ ತೆರಳುತ್ತಿದ್ದಾಗ, ಅವರು ಸಿಎಂ ಆಗಲು ಜೆಡಿಎಸ್‌ ಬೆಂಬಲಿಸುತ್ತದೆ ಎಂದು ಕರೆ ಬಂದಿತು.

ಇದನ್ನೂ ಓದಿ: ವೋಟಿಗೆ ನೋಟು: ಸಂಸದೆ ಮಾಲೋತ್ ಕವಿತಾ ಅವರಿಗೆ 06 ತಿಂಗಳು ಜೈಲು, 10 ಸಾವಿರ ದಂಡ!

2007ರ ನವೆಂಬರ್‌ನಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಆದರೆ, ಯಡಿಯೂರಪ್ಪ ಅವರು ಸದನದಲ್ಲಿ ವಿಶ್ವಾಸ ಮತ ಚಾಯನೆ ಮಾಡಿಬೇಕಿದ್ದ ದಿನ, ಕುಮಾರಸ್ವಾಮಿ ತಮ್ಮ ಶಾಸಕರಿಗೆ ಬಿಎಸ್‌ವೈಗೆ ಬೆಂಬಲ ನೀಡಬಾರದೆಂದು ಸೂಚನೆ ನೀಡಿದ್ದರು. ಅದರಂತೆ ಬಿಎಸ್‌ವೈ ವಿಶ್ವಾಸ ಮತ ಗೆಲ್ಲಲಾಗದೇ 08 ದಿನಗಳಲ್ಲಿ ರಾಜೀನಾಮೆ ನೀಡಿದರು.

31 ಜುಲೈ, 2011: ಸಿಎಂ ಆಗಿ ಮೂರೂವರೆ ವರ್ಷ:

2011 ರಲ್ಲಿ, ಯಡಿಯುರಪ್ಪ ಅವರನ್ನು ಆಗಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಎನ್ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಕುರಿತ ದೋಷಾರೋಪಣೆ ವರದಿ ಸಲ್ಲಿಸಿದ್ದರು. ಹೀಗಾಗಿ ಬಿಎಸ್‌ವೈ ಸಿಎಂ ಖುರ್ಚಿಯಿಂದ ಕೆಳಗಿಳಿಯಬೇಕಾಯಿತು.

ವರದಿಯಲ್ಲಿ, ಯಡಿಯೂರಪ್ಪ ಮತ್ತು ಅವರ ಕೆಲವು ಕ್ಯಾಬಿನೆಟ್ ಸದಸ್ಯರು ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ 16,085 ಕೋಟಿ ರೂ. ಲೂಟಿ ಮಾಡಿದ್ದಾರೆ ಎಂದು ಹೇಳಾಗಿತ್ತು. ಅಂದಿನ ಗಣಿಗಾರಿಕೆ ಸಚಿವ ಜನಾರ್ಧನ ರೆಡ್ಡಿ ಮತ್ತು ಸಹೋದರರು, ಜಿ ಕರುಣಕರ ರೆಡ್ಡಿ, ಅವರ ಸಹವರ್ತಿ ಬಿ ಶ್ರೀರಾಮುಲು ಮತ್ತು ವಿ ಸೋಮಣ್ಣ ಅವರ ಹೆಸರುಗಳನ್ನು ಆರೋಪದಲ್ಲಿ ಹೆಸರಿಸಲಾಗಿತ್ತು. ಇವರೆಲ್ಲರೂ ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗಿದ್ದರು.

ಮಾಜಿ ಸಂಸದ ಅನಿಲ್ ಲಾಡ್ ಮತ್ತು ಪ್ರಸ್ತುತ ಬಿಜೆಪಿ ಸಚಿವ ಆನಂದ್ ಸಿಂಗ್ ಹೆಸರುಗಳು ಕೂಡ ವರದಿಯಲ್ಲಿದ್ದವು. ವರದಿಯ ಪ್ರಕಾರ, ಯಡಿಯೂರಪ್ಪ ಅವರ ಪುತ್ರರಾದ ಬಿ.ವೈ.ರಾಘವೇಂದ್ರ ಮತ್ತು ಬಿ.ವೈ.ವಿಜೇಂದ್ರ, ಮತ್ತು ಸೊಸೆ ಆರ್.ಎನ್.ಸೋಹನ್ ಕುಮಾರ್ ಅವರು ಗಣಿಗಾರಿಕೆ ಕಂಪನಿಗಳಿಂದ ದೇಣಿಗೆ ಮತ್ತು ಕಿಕ್‌ಬ್ಯಾಕ್ ರೂಪದಲ್ಲಿ ಲಂಚ ಪಡೆದಿದ್ದರು.

ಇದನ್ನೂ ಓದಿ: Big Breaking: ರಾಜೀನಾಮೆ ನೀಡುವುದಾಗಿ ಯಡಿಯೂರಪ್ಪ ಘೋಷಣೆ!

ಆರಂಭದಲ್ಲಿ, ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯಲು ನಿರಾಕರಿಸಿದ್ದರು, ವರದಿಯನ್ನು ತಳ್ಳಿಹಾಕಿದರು. ಆದರೆ ಬಿಜೆಪಿ ಹೈಕಮಾಂಡ್ ಅವರನ್ನು ಸಿಎಂ ಆಗಿ ಮುಂದುವರೆಸುವ ಮನಸ್ಥಿತಿಯಲ್ಲಿರಲಿಲ್ಲ.

ಯಡಿಯೂರಪ್ಪ ಅವರ ಕ್ರಮಗಳ ಬಗ್ಗೆ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದ ನಂತರ ಬಿಎಸ್‌ವೈಗೆ ರಾಜೀನಾಮೆ ನೀಡುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ.

ಆದರೆ, ಅವರು ಬಿಜೆಪಿ ಹೈಕಮಾಂಡ್ ಮುಂದೆ ಮೂರು ಷರತ್ತುಗಳನ್ನು ನೀಡಿದ್ದರು ಎಂದು ವರದಿಯಾಗಿದೆ. ಒಂದು, ಹೊಸ ಮುಖ್ಯಮಂತ್ರಿ ಅಭ್ಯರ್ಥಿಯು ತಮ್ಮ ಆಯ್ಕೆಯಾಗಿರಬೇಕು ಎಂದಿತ್ತು; ಅದರಂತೆ ಆರ್‌ಎಸ್‌ಎಸ್ ಪ್ರಬಲ ನಾಯಕ ಡಿ.ವಿ.ಸದಾನಂದ ಗೌಡ ಅವರನ್ನು ಆಯ್ಕೆ ಮಾಡಲಾಯಿತು. ಎರಡನೆಯದಾಗಿ, ಕ್ಯಾಬಿನೆಟ್ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲು ಅವರಿಗೆ ಅವಕಾಶ ನೀಡಬೇಕು. ಅಲ್ಲದೆ, ಅವರು ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿ ಮತ್ತೆ ಮುಂದುವರೆಯಲು ಬಯಸಿದ್ದರು.

19 ಮೇ, 2018: ಸಿಎಂ ಆಗಿ ಎರಡೂವರೆ ದಿನಗಳು:

2018ರಲ್ಲಿ ಒಟ್ಟು 224 ಸ್ಥಾನಗಳಲ್ಲಿ 222 ಸ್ಥಾನಗಳಿಗೆ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಚುನಾವಣಾ ಫಲಿತಾಂಶದಲ್ಲಿ ಯಾರಿಗೂ ಅಗತ್ಯ ಬಹುಮತ ದೊರೆತಿರಲಿಲ್ಲ. 104 ಶಾಸಕರನ್ನು ಪಡೆದು ಏಕೈಕ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿತ್ತು. ಕಾಂಗ್ರೆಸ್ 78 ಸ್ಥಾನಗಳನ್ನು ಮತ್ತು ಜೆಡಿಎಸ್‌ 38 ಸ್ಥಾನಗಳನ್ನು (ಚುನಾವಣಾ ಮುಂಚಿತ ಮೈತ್ರಿ ಪಕ್ಷ ಬಿಎಸ್‌ಪಿಯ ಒಬ್ಬ ಶಾಸಕ ಸೇರಿದಂತೆ) ಗೆದ್ದಿತ್ತು. ಎರಡು ಸ್ಥಾನಗಳಿಗೆ ಮತದಾನ ತಡೆಹಿಡಿಯಲಾಗಿತ್ತು.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣಾ ನಂತರ ಮೈತ್ರಿಯನ್ನು ರಚಿಸಿ, ಆಗಿನ ಕರ್ನಾಟಕ ರಾಜ್ಯಪಾಲ ವಾಜುಭಾಯ್ ಆರ್ ವಾಲಾ ಅವರಿಗೆ ತಿಳಿಸಿದ್ದರೂ, ರಾಜ್ಯಪಾಲರು ಯಡಿಯೂರಪ್ಪ ಅವರನ್ನು ಕರೆದು ಸರ್ಕಾರ ರಚಿಸಲು ಮತ್ತು 15 ದಿನಗಳಲ್ಲಿ ತಮ್ಮ ಬಹುಮತವನ್ನು ಸಾಬೀತುಪಡಿಸಲು ಅವಕಾಶ ನೀಡಿದರು.

ವಾಲಾ ಅವರ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಯಡಿಯುರಪ್ಪ ಅವರು ಕೇಳಿದ ಹದಿನೈದು ದಿನಗಳ ಬದಲು ಒಂದು ದಿನದ ಅವಕಾಶ ನೀಡಿ, ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡಿತು.

ಆದರೆ, ಯಡಿಯೂರಪ್ಪ ಅವರು ರಾಜ್ಯ ವಿಧಾನಸಭೆಯಲ್ಲಿ ತಮ್ಮ ಬಹುಮತವನ್ನು ಸಾಬೀತುಪಡಿಸಲು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲಾಗದೇ 19 ಮೇ 2018 ರಂದು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದರು. ಅವರು ಮುಖ್ಯಮಂತ್ರಿಯಾಗಿ ಎರಡೂವರೆ ದಿನಗಳನ್ನು ಮಾತ್ರ ಪೂರೈಸಿದ್ದರು.

“ನಾನು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಮತ್ತು ಈ ಪ್ರಜಾಪ್ರಭುತ್ವ ವಿರೋಧಿ ಮೈತ್ರಿ ಸರ್ಕಾರದ ವಿರುದ್ಧ ನ್ಯಾಯ ಕೋರಲು ಮತ್ತೆ ಜನರ ಮುಂದೆ ಹೋಗುತ್ತೇನೆ.”
 – 19 ಮೇ, 2018 ರಂದು ಬಿ.ಎಸ್.ಯಡಿಯುರಪ್ಪ

2018 ರಲ್ಲಿ ಅವರ ರಾಜೀನಾಮೆ ಬಿಜೆಪಿ ಕೇಂದ್ರ ನಾಯಕತ್ವಕ್ಕೆ ದೊಡ್ಡ ಮುಜುಗರವನ್ನುಂಟುಮಾಡಿತು, ಏಕೆಂದರೆ 112ರ ಸರಳ ಬಹುಮತಕ್ಕಾಗಿ ಇನ್ನೂ ಎಂಟು ಶಾಸಕರನ್ನು ಪಡೆಯುವ ವಿಶ್ವಾಸದಲ್ಲಿ ಹೈಕಮಾಂಡ್‌ ಇತ್ತು, ಆದರೆ, ಅದು ಸಾಧ್ಯವಾಗಲಿಲ್ಲ.

ಬಿಜೆಪಿ ನಾಯಕರು ತಮ್ಮ ಶಾಸಕರನ್ನು ಸಂಪರ್ಕಿಸಿ, ಅಪಾರ ಪ್ರಮಾಣದ ಹಣ ಮತ್ತು ಮಂತ್ರಿ ಸ್ಥಾನಗಳೊಂದಿಗೆ ಆಮಿಷ ಒಡ್ಡಿದ್ದಾರೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್‌ ಪಕ್ಷಗಳು ಆರೋಪಿಸಿದ್ದವು.

ಯಡಿಯೂರಪ್ಪ ಅವರು ಕೆಲವು ಶಾಸಕರನ್ನು ಸಂಪರ್ಕಿಸಿ ಅವರಿಗೆ ‘ಆಶ್ವಾಸನೆಗಳನ್ನು’ ನೀಡಿದ್ದಾಗಿ ಒಪ್ಪಿಕೊಂಡರು.

26 ಜುಲೈ, 2021: ಸಿಎಂ ಆಗಿ ಎರಡು ವರ್ಷಗಳು:

2018 ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಂತತ್ರ ಫಲಿತಾಂಶ ಬಂದಿತ್ತು.  ಬಿಜೆಪಿ 104, ಕಾಂಗ್ರೆಸ್ 80, ಮತ್ತು ಜೆಡಿಎಸ್ 36 ಸ್ಥಾನಗಳನ್ನು ಗೆದ್ದಿದ್ದವು.

ನಂತರ, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಹೆಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಇದಾದ, ಒಂದು ವರ್ಷದ ನಂತರ, ಬಿಜೆಪಿ ನಾಯಕರು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರಿಗೆ ಆಮಿಷವೊಡ್ಡಿ 17 ಶಾಸಕರನ್ನು ಬಿಜೆಪಿಗೆ ಕರೆತಂದು, ಮೈತ್ರಿ ಸರ್ಕಾರವನ್ನು ಕೆಡವಿ, ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು.

ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಭಿನ್ನಾಭಿಪ್ರಾಯಗಳು ಭುಗಿಲೆದ್ದವು. ಅರವಿಂದ್ ಬೆಲ್ಲದ್‌, ಬಸನಗೌಡ ಪಾಟೀಲ್ ಯಟ್ನಾಲ್ ಸೇರಿದಂತೆ ಬಿಜೆಪಿ ಶಾಸಕರು ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಕೊರೊನಾ ಬಿಕ್ಕಟ್ಟಿನ ನಿರ್ವಹಣೆ ಮತ್ತು ಅದರ ಹೆಸರಿನಲ್ಲಿ ನಡೆದ ದುರುಪಯೋಗದ ಆರೋಪಗಳು ಹೆಚ್ಚಾದವು. ಅಲ್ಲದೆ, ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರು ತೆರೆಮರೆಯಿಂದ ಸರ್ಕಾರವನ್ನು ನಡೆಸುತ್ತಿದ್ದಾರೆ ಎಂಬ ಆರೋಪಗಳು ಬಲವಾಗಿದ್ದವು.

ಜೂನ್ 2021 ರ ಹೊತ್ತಿಗೆ, ಬಿಜೆಪಿಯ ಕೇಂದ್ರ ನಾಯಕತ್ವವು ರಾಜ್ಯದಲ್ಲಿ ಬದಲಿ ನಾಯಕನನ್ನು ಹುಡುಕಲಾರಂಭಿಸಿತು. 30 ದಿನಗಳ ಊಹಾಪೋಹ ಮತ್ತು ನಿರಾಕರಣೆಯ ನಂತರ, ಯಡಿಯೂರಪ್ಪ ಅವರು ತಮ್ಮ ಆಡಳಿತವನ್ನು ಎರಡು ವರ್ಷ ಪೂರೈಸಿದ ವರ್ಷಾಚರಣೆಯ ದಿನದಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಕೆಳಗಿಳಿದ್ದಾರೆ.

ಸಿಎಂ ಆಗಿ ತಾವು ಎದುರಿಸುತ್ತಿದ್ದ ತೊಂದರೆಗಳ ಬಗ್ಗೆ ಅವರು ನಿಸ್ಸಂಶಯವಾಗಿ ಹೇಳುತ್ತಿದ್ದರೂ, ಪ್ರತಿ ಬಾರಿಯೂ ಅವರು ಈ ಹುದ್ದೆಯನ್ನು ಆಕ್ರಮಣಕಾರಿಯಾಗಿ ಪಡೆದುಕೊಂಡಾಗ ಕೇಂದ್ರ ನಾಯಕತ್ವಕ್ಕೆ ಧನ್ಯವಾದ ಅರ್ಪಿಸುತ್ತಿದ್ದರು.

ಮೂಲ: ದಿ ಕ್ವಿಂಟ್‌

ಕನ್ನಡಕ್ಕೆ: ಸೋಮಶೇಖರ್ ಚಲ್ಯ

ಇದನ್ನೂ ಓದಿ: ರಾಜ್ಯಕ್ಕೆ ಮುಂದಿನ ಸಿಎಂ ಮುರುಗೇಶ್‌ ನಿರಾಣಿ? ಡಿಸಿಎಂ ಸ್ಥಾನಕ್ಕೆ ಶ್ರೀರಾಮುಲು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights