ರಾಜ್ಯಕ್ಕೆ ಮುಂದಿನ ಸಿಎಂ ಮುರುಗೇಶ್‌ ನಿರಾಣಿ? ಡಿಸಿಎಂ ಸ್ಥಾನಕ್ಕೆ ಶ್ರೀರಾಮುಲು!

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಈ ಬೆನ್ನಲ್ಲೇ, ಇದೀಗ ಮುಂದಿನ ಸಿಎಂ ಯಾರಾಗ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಸದ್ಯ, ಮುಂದಿನ ಸಿಎಂ ಯಾರು ಎಂಬ ರೇಸ್‌ನಲ್ಲಿ ಮುರುಗೇಶ್‌ ನಿರಾಣಿ, ಬಸವರಾಜ್‌ ಬೊಮ್ಮಾಯಿ, ಪ್ರಹ್ಲಾದ್‌ ಜೋಷಿ ಇದ್ದಾರೆ ಎಂದು ಹೇಳಲಾಗಿದ್ದು, ಈ ಪೈಕಿ ಮುರುಗೇಶ್‌ ನಿರಾಣಿ ಅವರನ್ನು ಮುಂದಿನ ಸಿಎಂ ಅಗಿ ಬಿಜೆಪಿ ಹೈಕಮಾಂಡ್‌ ಘೋಷಿಸುವ ಸಾಧ್ಯತೆ ಎಂದು ತಿಳಿದು ಬಂದಿದೆ.

ಅಲ್ಲದೆ, ಉಪ ಮುಖ್ಯಮಂತ್ರಿಯಾಗಿ ಶ್ರೀರಾಮುಲು ಮತ್ತು ಇನ್ನೊಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆಯೂ ಇದೆ.

ಮುರುಗೇಶ್‌ ನಿರಾಣಿ ಅವರು ಯಡಿಯೂರಪ್ಪ ಸರ್ಕಾರದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವರಾಗಿದ್ದಾರೆ. ಶ್ರೀರಾಮುಲು ಅವರು ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದಾರೆ.

ಮುರುಗೇಶ್‌ ನಿರಾಣಿ 2004ರಲ್ಲಿ ಮೊದಲ ಬಾರಿಗೆ ಬೀಳಗಿ ಕ್ಷೇತ್ರದಿಂದ ಚುನಾವಣೆ ಎದುರಿಸಿ ಗೆಲುವು ಸಾಧಿಸಿದರು. 2008ರಲ್ಲಿ ಮತ್ತೆ ಆಯ್ಕೆಯಾದ ನಿರಾಣಿ, ಯಡಿಯೂರಪ್ಪ ಸರಕಾರದಲ್ಲಿ ಸಚಿವರಾದರು. 2008 ರಿಂದ 2014ರವರೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾಗಿ ಬಿಜೆಪಿ ಸರಕಾರದಲ್ಲಿ ಕಾರ್ಯನಿರ್ವಹಿಸಿದ್ದ ನಿರಾಣಿ, ಸಚಿವರಾಗಿದ್ದೂ 2014ರಲ್ಲಿ ಸೋಲುಂಡಿದ್ದ ಅವರು, 2018ರಲ್ಲಿ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರು ಬಿಎಸ್‌ವೈ ಸರ್ಕಾರದಲ್ಲಿ ಎರಡನೇ ಬಾರಿ ಸಚಿವರಾಗಿ ಯಡಿಯೂರಪ್ಪ ಸಂಪುಟಕ್ಕೆ ಎಂಟ್ರಿ ಪಡೆದಿದ್ದರು.

ಯಡಿಯೂರಪ್ಪ ಅವರು ದೆಹಲಿ ಭೇಟಿ ಮುಗಿಸಿ ಬಂದ ಬಳಿಕ, ನಿರಾಣಿ ದೆಹಲಿಯಲ್ಲಿ ಬೀಡು ಬಿಟ್ಟಿದ್ದರು. ಸಿಎಂ ಸ್ಥಾನಕ್ಕಾಗಿ ಬಿಜೆಪಿ ಹೈಕಮಾಂಡ್‌ ಮುಂದೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿತ್ತು.

ಈ ಮಧ್ಯೆ, ಬಿಜೆಪಿಯಲ್ಲೇ ಇದ್ದುಕೊಂಡು, ಬಿಜೆಪಿ ನಾಯಕರ ವಿರುದ್ದವೇ ಸದಾ ಬುಸುಗುಡುತ್ತಿರುವ ಶಾಸಕ ಬಸನಗೌಡ ಯತ್ನಾಳ್‌, ಸಿಎಂ ಸ್ಥಾನಕ್ಕೆ ನಿರಾಣಿ ಭಾರೀ ಲಾಬಿ ನಡೆಸುತ್ತಿದ್ಧಾರೆ ಎಂದು ಆರೋಪಿಸಿದ್ದರು.

“ಬಿಜೆಪಿ ಪಕ್ಷದ 120 ಶಾಸಕರೆಲ್ಲರೂ ಸಿಎಂ ಹುದ್ದೆಗೆ ಅರ್ಹತೆ ಹೊಂದಿದ್ದಾರೆ. ನಿರೀಕ್ಷೆಯಿಲ್ಲದೆ ಪಕ್ಷ ನನಗೆ ಹಲವು ಜವಾಬ್ದಾರಿ ನೀಡಿದೆ. ಮೊದಲ ಬಾರಿ ಶಾಸಕನಾದಾಗಲೇ ಹೈಕಮಾಂಡ್ ನನ್ನನ್ನು ಸಚಿವನನ್ನಾಗಿ ಮಾಡಿದೆ. ಈಗಲೂ ಮಹತ್ವದ ಜವಾಬ್ದಾರಿ ಕೊಟ್ಟಿದೆ. ಹಿಂದೆಯೂ ನಾನು ಯಾವುದೇ ಹುದ್ದೆ ಅಪೇಕ್ಷೆ ಮಾಡಿದವನಲ್ಲ, ಈಗಲೂ ಮಾಡುವುದಿಲ್ಲ” ಎಂದು ನಿರಾಣಿ ಭಾನುವಾರ ಹೇಳಿದ್ದಾರೆ.

“ನಾನು ಮುಖ್ಯಮಂತ್ರಿ ಸ್ಥಾನಕ್ಕೆ ವರಿಷ್ಠರ ಬಳಿ ಯಾವುದೇ ರೀತಿಯ ಲಾಬಿ ನಡೆಸಿಲ್ಲ. ಹೈಕಮಾಂಡ್ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ನಾವೆಲ್ಲರೂ ಬದ್ದರಾಗಿರುತ್ತೇವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Big Breaking: ರಾಜೀನಾಮೆ ನೀಡುವುದಾಗಿ ಯಡಿಯೂರಪ್ಪ ಘೋಷಣೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights