ವೋಟಿಗೆ ನೋಟು: ಸಂಸದೆ ಮಾಲೋತ್ ಕವಿತಾ ಅವರಿಗೆ 06 ತಿಂಗಳು ಜೈಲು, 10 ಸಾವಿರ ದಂಡ!

2019ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಮತದಾರರಿಗೆ ಮತ ಹಾಕುವಂತೆ ಹಣ ನೀಡಿದ ಆರೋಪದ ಮೇಲೆ ಟಿಆರ್‌ಎಸ್‌ ಪಕ್ಷದ ಸಂಸದೆ ಮಾಲೋತ್ ಕವಿತಾ ಮತ್ತು ಅವರ ಒಡನಾಡಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು 10,000 ರೂ.ಗಳ ದಂಡ ವಿಧಿಸಿ ನಾಂಪಲ್ಲಿ ವಿಶೇಷ ಸೆಷನ್ಸ್ ನ್ಯಾಯಾಲಯವು ತೀರ್ಪು ನೀಡಿದೆ.

ನಂತರ, ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಆರೋಪಿಗಳಿಗೆ ಜಾಮೀನು ನೀಡಲಾಗಿದೆ. ತಮ್ಮ ಶಿಕ್ಷೆಯ ವಿರುದ್ದ ಮಾಲೋತ್ ಕವಿತಾ ಅವರು ತೆಲಂಗಾಣ ಹೈಕೋರ್ಟ್‌ಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.

2019ರಲ್ಲಿ ಸಂಸದೆ ಮಾಲೋತ್ ಕವಿತಾ ಅವರ ಸಹಾಯಕ ಶೌಕತ್ ಅಲಿ ಅವರು ಮತದಾರರಿಗೆ 500 ರೂ. ನೀಡುತ್ತಿದ್ದ ವೇಳೆ ಬುರ್ಗಂಪಹಾದ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದರು.

ಶೌಕತ್ ಅಲಿಯನ್ನು ರೆಡ್‌ಹ್ಯಾಂಡ್‌ ಆಗಿ ಸೆರೆಹಿಡಿದ ಪೊಲೀಸರು, ಲಂಚ ಪ್ರಕರಣದಲ್ಲಿ ಅಲಿಯನ್ನು ಮೊದಲ ಆರೋಪಿ ಎಂದೂ, ಕವಿತಾ ಅವರನ್ನು ಎರಡನೇ ಆರೋಪಿ ಎಂದು ಹೆಸರಿಸಿದ್ದರು.

ಪೊಲೀಸರು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳನ್ನು ಮತ್ತು ಅವರ ವರದಿಗಳನ್ನು ವಿಚಾರಣೆಯ ಸಮಯದಲ್ಲಿ ಸಾಕ್ಷಿಯಾಗಿ ಹಾಜರುಪಡಿಸಿದರು. ವಿಚಾರಣೆ ವೇಳೆ ಅಲಿ ಕೂಡ ಈ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಮತ್ತು ಕವಿತಾ ತನಗೆ ನೀಡಿದ್ದ ಹಣವನ್ನು ವಿತರಿಸಿದ್ದಾಗಿ ಹೇಳಿಕೊಂಡಿದ್ದಾರೆ.

ವಿಶೇಷವೆಂದರೆ, ಅಪರಾಧ ಎಸಗಿದ ಸಂಸರಿಗೆ ವಿಶೇಷ ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು ಇದೇ ಮೊದಲೇನು ಅಲ್ಲ. ಈ ಹಿಂದೆ ಬಿಜೆಪಿ ಶಾಸಕ ರಾಜ ಸಿಂಗ್ ಮತ್ತು ಟಿಆರ್‌ಎಸ್‌ ಶಾಸಕ ದಾನಮ್ ನಾಗೇಂದರ್ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಬೊಲಾರಮ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ರಾಜಾ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದ್ದರೆ, ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ದಾನಮ್ ನಾಗೇಂದರ್ ಅವರಿಗೆ ಶಿಕ್ಷೆ ವಿಧಿಸಲಾಗಿತ್ತು.

ಇದನ್ನೂ ಓದಿ: ಮಗನ ಚಿಕಿತ್ಸೆಗಾಗಿ ಪ್ರತಿ ತಿಂಗಳು 400 ಕಿ.ಮೀ ಸೈಕಲ್‌ ತುಳಿಯುತ್ತಿದ್ದ ತಂದೆ; ಕೊನೆಗೂ ಸಿಕ್ಕಿತು ಸಹಾಯಾಸ್ತ!

Spread the love

Leave a Reply

Your email address will not be published. Required fields are marked *