ರೈಲ್ವೇ ಖಾಸಗೀಕರಣ: ಸರ್ಕಾರದ ವಿರುದ್ಧ ಆನ್ಲೈನ್ ಸಹಿ ಸಂಗ್ರಹ ಅಭಿಯಾನ
ಕೇಂದ್ರ ಸರ್ಕಾರವು ಭಾರತೀಯ ರೈಲ್ವೇಯನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಸರ್ಕಾರದ ಈ ನಡೆಯವನ್ನು ವಿರೋಧಿಸಿ ದೇಶದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರೈಲ್ವೇ ಖಾಸಗೀಕರಣದ ವಿರುದ್ಧ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಅಭಿಯಾನಕ್ಕೆ ಬೆಂಬಲ ನೀಡುವವರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.
ಈ ದೇಶದ ಪ್ರಮುಖ ಸಾರ್ವಜನಿಕ ಸಾರಿಗೆ ಒಡೆತನವಾದ ಭಾರತೀಯ ರೈಲ್ವೆಯಲ್ಲಿ ಖಾಸಗಿ ಹೂಡಿಕೆಗೆ ಕೇಂದ್ರ ಸರ್ಕಾರ ಅವಕಾಶ ನೀಡಿರುವ ನಿರ್ಧಾರವು ಅತ್ಯಂತ ಜನ ವಿರೋಧಿ ಮತ್ತು ಕಾರ್ಮಿಕ ವಿರೋಧಿಯಾದದ್ದು. ಜನಸಾಮಾನ್ಯರ ತೆರಿಗೆ ಮೊತ್ತ ಹಾಗೂ ರೈಲ್ವೆ ಕಾರ್ಮಿಕರು ಸುರಿಸಿದ ರಕ್ತ ಮತ್ತು ಬೆವರಿನ ಶ್ರಮದಿಂದ ಸ್ಥಾಪಿತವಾದ ಮತ್ತು ಅಭಿವೃದ್ಧಿಗೊಂಡ ಭಾರತಿಯ ರೈಲ್ವೆಗೆ ಸೇರಿದ ರೈಲ್ವೆ ಮಾರ್ಗಗಳನ್ನು, ನಿಲ್ದಾಣಗಳನ್ನು, ರೈಲ್ವೆ ಕೈಗಾರಿಕೆಗಳು ಹಾಗೂ ಇತರ ಮೂಲಸೌಕರ್ಯಗಳನ್ನು ಕಾರ್ಪೋರೇಟ್ ಕಂಪೆನಿಗಳಿಗೆ ಬರೀ ಪುಡಿಗಾಸಿಗೆ ನೀಡಲಾಗುತ್ತಿದ್ದು, ಆ ಮೂಲಕ ಸಾಮಾನ್ಯ ಜನರನ್ನು ಲೂಟಿ ಮಾಡಲು ಖಾಸಗೀಯವರಿಗೆ ಅವಕಾಶ ನೀಡುವುದು ಇದರ ಉದ್ದೇಶವಾಗಿದೆ.
ಜುಲೈ 1 ರಂದು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೇಂದ್ರ ಸರ್ಕಾರ 109 ಕ್ಕೂ ಹೆಚ್ಚು ಪ್ರಯಾಣಿಕರ ರೈಲು ಸೇವೆಗಳ ಮಾರ್ಗಗಳಲ್ಲಿ ಸರ್ಕಾರದ ಜೊತೆಗೆ ಭಾಗವಹಿಸಲು ಇಚ್ಚಿಸುವ ಅರ್ಹ ಖಾಸಗಿ ಕಂಪೆನಿಗಳಿಗೆ ರೈಲ್ವೆ ಇಲಾಖೆಯಲ್ಲಿ ಹೂಡಿಕೆ ಮಾಡಲು ಮುಕ್ತ ಆಹ್ವಾನ ನೀಡಿದೆ. ಅಲ್ಲದೆ, 30,000 ಕೋಟಿ ರೂ. ವರೆಗೆ ಖಾಸಗಿ ಹೂಡಿಕೆಗೆ ಅವಕಾಶ ಕಲ್ಪಿಸಿದೆ. ಈ ಮೂಲಕ ಐತಿಹಾಸಿಕ ಭಾರತೀಯ ರೈಲ್ವೆಯನ್ನೂ ಖಾಸಗೀಕರಣ ಮಾಡಲು ಹೊರಟಿದೆ.
ಬೆಂಕಿಯಿಂದ ಬಾಣಲೆಗೆ;
ಈಗಾಗಲೇ ಖಾಸಗೀ ಶಾಲೆಗಳು, ಖಾಸಗೀ ಆಸ್ಪತ್ರೆಗಳು, ಖಾಸಗೀ ವಿಮಾನಗಳು ಹೀಗೆ ಖಾಸಗಿಕರಣದಿಂದ ಬಳಲಿಹೋಗಿರುವ ಜನಕ್ಕೆ ಸರ್ಕಾರ ಮತ್ತೊಂದು ಹೊಡೆತ ನೀಡಿದೆ.
ಭಾರತೀಯ ರೈಲ್ವೆಯಿಂದ ಸುಮಾರು 12 ಲಕ್ಷ ರೈಲ್ವೆ ಸಿಬ್ಬಂದಿ ಜೀವನ ರೂಪಿಸಿಕೊಂಡಿದ್ದಾರೆ. ಇದೀಗ ಖಾಸಗಿ ರೈಲುಗಳ ಸಂಚಾರದಿಂದ ಮುಂದಿನ ವರ್ಷಗಳಲ್ಲಿ ಈ 12 ಲಕ್ಷ ನೌಕರರ ಜೀವನೋಪಾಯದ ಪ್ರಶ್ನೆ ಎದುರಾಗುತ್ತದೆ. ಹಲವು ವಲಯಗಳಲ್ಲಿ ಖಾಸಗೀಕರಣದಿಂದ ಸಾವಿರಾರು ಸರ್ಕಾರಿ ಉದ್ಯೋಗ ನಷ್ಟ ಆದ ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಇವೆ. ಇನ್ನು ಖಾಸಗಿ ಪ್ಯಾಸೆಂಜರ್ ರೈಲು ಓಡುವುದರಿಂದ ಮಾಸಿಕ ಪಾಸ್ ಸೇರಿದಂತೆ ಸರ್ಕಾರ ನೀಡುತ್ತಿದ್ದ ರಿಯಾಯ್ತಿ ಟಿಕೆಟ್ಗಳಿಗೆ ಕೂಡ ಕುತ್ತು ಬೀಳಲಿದೆ.
ಇದನ್ನೂ ಓದಿ: ರೈಲ್ವೇಯನ್ನೂ ಖಾಸಗಿ ಒಡೆತನಕ್ಕೆ ಮಾರಿದ ಮೋದಿ ಸರ್ಕಾರ: 2023ಕ್ಕೆ ಹಳಿ ಏರಲಿವೆ ಖಾಸಗೀ ರೈಲುಗಳು!
ಮೊದಲಿಗೆ ಸಣ್ಣ ಪ್ರಮಾಣದಲ್ಲಿ ಆರಂಭವಾಗಲಿರುವ ಖಾಸಗಿ ರೈಲು ಸಂಚಾರ, ತದನಂತರ ರೈಲ್ವೆ ಇಲಾಖೆಯ ರೈಲುಗಳು ಸರಿಯಾದ ಸಮಯಕ್ಕೆ ದೊರಕದಿರುವುದು ಸೇರಿದಂತೆ ಸಾಕಷ್ಟು ಸಮಸ್ಯೆಗಳು ಉದ್ಭವಿಸಲಿದ್ದು (ಈಗ ಇರುವ ಸಣ್ಣ ಸಮಸ್ಯೆಗಳನ್ನು ಮಾಧ್ಯಮಗಳ ಮೂಲಕ ಬೃಹತ್ತಾಗಿ ಬಿಂಬಿಸಿ) ಪ್ರಯಾಣಿಕರು ಖಾಸಗಿ ರೈಲುಗಳಲ್ಲಿ ಸಂಚಾರ ಮಾಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿಮಾಡಲಾಗುತ್ತದೆ. ಬಹುತೇಕ ಮಾರ್ಗಗಳಿಗೆ ಕೇವಲ ಖಾಸಗಿ ರೈಲುಗಳನ್ನು ಬಿಡುವ ಮೂಲಕ, ಪ್ರಯಾಣಿಕರಿಗೆ ಹೊರೆಯಾದರೂ ಖಾಸಗಿ ಬಂಡವಾಳದಾರರಿಗೆ ಅನುಕೂಲ ಮಾಡಿಕೊಡುವ ಸಂದರ್ಭ ಬರಬಹುದು. ಟಿಕೆಟ್ ದರ ನಿಗದಿ ಮಾಡಲು ಸರ್ವಸ್ವತಂತ್ರರು ಎಂದು ಈಗಾಗಲೇ ತಿಳಿಸಲಾಗಿದೆ. ಅಂದರೆ ಪೆಟ್ರೋಲ್, ಡೀಸೆಲ್ ದರ ಏರಿಕೆಯನ್ನು ಒಮ್ಮೆ ಜ್ಞಾಪಕ ಮಾಡಿಕೊಂಡರೆ ಮುಂದಿನ ದಿನಗಳ ಪರಿಸ್ಥಿತಿ ಹೇಗಿರಲಿದೆ ಎನ್ನುವ ಲೆಕ್ಕಾಚಾರ ಕಣ್ಣ ಮುಂದೆ ಹಾದು ಹೋಗುತ್ತದೆ.
ರೈಲು, ಬಡವರ ಸಂಚಾರಕ್ಕೆ ಹೇಳಿ ಮಾಡಿಸಿದ್ದ ಸಂಚಾರ ವ್ಯವಸ್ಥೆ. ಆದರೆ ಮುಂದಿನ ದಿನಗಳಲ್ಲಿ ಮಾಸಿಕ ಪಾಸ್ ಅಷ್ಟೇ ಅಲ್ಲ, ಬೇರೆ ಎಲ್ಲಾ ಸೌಲಭ್ಯಗಳಿಗೂ ಕತ್ತರಿ ಬೀಳಲಿದೆ. ಜೊತೆಗ ಖಾಸಗಿ ಬಸ್ ಲಾಬಿ ನಡೆಯುವ ರೀತಿಯಲ್ಲೇ ಮುಂದಿನ ದಿನಗಳಲ್ಲಿ ಖಾಸಗಿ ರೈಲು ಕಂಪನಿಗಳ ಲಾಬಿ ನಡೆಯಲಿದೆ. 30 ವರ್ಷದ ತನಕ ಹೆದ್ದಾರಿಯನ್ನು ನಿರ್ವಹಣೆ ಮಾಡಬೇಕು ಎಂದು ಒಪ್ಪಂದ ಮಾಡಿಕೊಂಡು ಜೀವನ ಪರ್ಯಂತ ಟೋಲ್ ಸಂಗ್ರಹಿಸುವ ಖಾಸಗಿ ಕಂಪನಿಗಳಂತೆಯೇ ಸುಲಿಗೆ ಮಾಡುವುದು ಶತಸಿದ್ಧ ಎನ್ನಬಹುದು.
ಇನ್ನು, ಕಡಿಮೆ ನಿರ್ವಹಣೆ, ಕಡಿಮೆ ಸಾಗಣೆ ಸಮಯ, ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುವುದು, ಸುರಕ್ಷತೆ ಹಾಗೂ ಪ್ರಯಾಣಿಕರಿಗೆ ವಿಶ್ವ ದರ್ಜೆಯ ಪ್ರಯಾಣದ ಅನುಭವವನ್ನು ಒದಗಿಸುವ ಸಲುವಾಗಿ ಖಾಸಗಿ ಹೂಡಿಕೆದಾರರಿಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿಕೊಂಡು ಪ್ರಧಾನಿ ನರೇಂದ್ರ ಮೋದಿ ಅತ್ಯಾಪ್ತ ಬಳಗದ ಉದ್ಯಮಿಗಳೇ ಸರ್ಕಾರ ಘೋಷಿಸಿರುವ ಈ ಬಿಡ್ಡಿಂಗ್ ಪಡೆಯುವ ಎಲ್ಲಾ ಸಾಧ್ಯತೆಗಳಿವೆ ಅಥವಾ ಆ ಬಿಡ್ಡಿಂಗ್ನಲ್ಲಿ ಬಿಜೆಪಿಗೆ ಆಪ್ತರಾಗಿರುವ ಉದ್ಯಮಿಗಳು ಷೇರು ಪಡೆಯುವ ಸಾಧ್ಯತೆಯೂ ಇದೆ. ಖಾಸಗೀಕರಣ ಎಂದರೆ ಅಲ್ಲಿ ಲಾಭವಿಲ್ಲದೇ ಯಾವ ಉದ್ಯಮಿಯೂ ಏನೂ ಮಾಡಲಾರ. ಹಾಗಾಗಿ “ರೈಲ್ವೇ ಸರ್ವೀಸಿನಿಂದ ರೈಲ್ವೇ ಬಿಜಿನೆಸ್” ಆಗುವುದರಲ್ಲಿ ಅನುಮಾನವಿಲ್ಲ.
ಇದನ್ನೂ ಓದಿ: ಚೀನಾ ಕಂಪನಿಗೆ ನೀಡಲಾಗಿದ್ದ ಗುತ್ತಿಗೆಯನ್ನು ರದ್ದು ಪಡಿಸಿದ ಭಾರತೀಯ ರೈಲ್ವೇ!
ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು, ವಿಶ್ವದರ್ಜೆ ರೈಲಿನಲ್ಲಿ ಸಂಚಾರ ಮಾಡಬಹುದು ಎಂದು ಬೀಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಸಾಮಾನ್ಯ ಜನರ ಬದುಕು ಈಗಾಗಲೇ ಇರುವ ಸಮಸ್ಯೆಗಳೊಟ್ಟಿಗೆ ಇದೂ ಸೇರಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುತ್ತದೆ. ಬದುಕು ದುಬಾರಿಯಾಗುತ್ತದೆ.
ಯಾವ ಕಾಲದಲ್ಲೂ ಪ್ರಭುತ್ವಗಳಿಗೆ ಜನಸಾಮಾನ್ಯರ ಚಿಂತೆ ಇದ್ದಂತಿಲ್ಲ. ಹಾಗಾಗಿಯೇ ತಾವು ವಿರೋಧ ಪಕ್ಷದಲ್ಲಿದ್ದಾಗ ಆಡಳಿತ ಪಕ್ಷ ಜಾರಿಗೆ ತರುವ ಕಾನೂನು-ಕಾಯ್ದೆಗಳ ಬಗ್ಗೆ ಅಸಹಕಾರ ತೋರಿ, ಪ್ರತಿಭಟಿಸುತ್ತಿದ್ದವರು, ತಾವು ಅಧಿಕಾರಕ್ಕೆ ಬಂದ ನಂತರ ಅದೇ ಕೆಲಸವನ್ನ ಇನ್ನೂ ಅಚ್ಚುಕಟ್ಟಾಗಿ ಮಾಡುತ್ತಾರೆ. 15 ವರ್ಷಗಳ ಹಿಂದೆಯೇ ರೈಲ್ವೇ ಖಾಸಗೀಕರಣದ ಕೆಲಸ ನಡೆದಾಗ ಇದೇ ಬಿಜೆಪಿ ಪಕ್ಷ ವಿರೋಧಿಸಿತ್ತು. ಆದರೆ ಈಗ ಬಿಜೆಪಿ ಅಧಿಕಾರದ ಗದ್ದುಗೆ ಏರಿದ್ದು ಗಾಯದ ಮೇಲೆ ಬರೆ ಎಳೆಯುತ್ತಿದೆ. ಅದರಲ್ಲೂ 2014 ರಿಂದ ಈಚೆಗೆ ಸರ್ಕಾರಿ ಒಡೆತನದ ಉದ್ಯಮಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿರುವುದು ಹೆಚ್ಚಾಗುತ್ತಲೇ ಇದೆ. ಇನ್ನೂ ಕಳವಳಕಾರಿಯಾದ ವಿಷಯವೆಂದರೆ ರೈಲ್ವೇ ಇಲಾಖೆಯಲ್ಲಿ ಈಗಾಗಲೇ ದುಡಿಯುತ್ತಿರುವವರಿಗೆ ಇದರ ಪರಿವೆಯೇ ಇಲ್ಲದಿರುವುದು. ಇಷ್ಟು ದೊಡ್ಡ ಮತ್ತು ಲಾಭದಾಯಕ ರೈಲ್ವೇ ಸೇವೆಯನ್ನು ಖಾಸಗೀಕರಣಗೊಳಿಸುವ ಉದ್ದೇಶವಾದರೂ ಏನು? ಇದರ ವಿರುದ್ಧ ಸಾಕಷ್ಟು ಹೋರಾಟಗಳೂ ನಡೆದಿವೆಯಾದರೂ ಅವು ದೇಶದಾದ್ಯಂತ ಸಂಘಟಿತವಾಗಿ ಆಗಿಲ್ಲ. ಎಲ್ಲಿಯವರೆಗೆ ದೇಶದ ಮತ್ತು ಸಾಮಾನ್ಯ ಜನರ ಸಮಸ್ಯೆ ನಮ್ಮದಲ್ಲ ಎಂದು ಈ ನಾಗರಿಕ ಸಮಾಜ ಸುಮ್ಮನಿರುತ್ತದೆಯೋ ಅಲ್ಲಿಯವರೆಗೂ ಇಂತಹ ದಬ್ಬಾಳಿಕೆಗಳಿಗೆ ಕೊನೆಯಿಲ್ಲ.
ಹಾಗಾಗಿ, ರೈಲ್ವೇ ಖಾಸಗೀಕರಣದ ವಿರುದ್ಧದ ಅಭಿಯಾನ ಸಮಿತಿಯೊಂದು ರಚನೆಯಾಗಿದ್ದು, ಆನ್ಲೈನ್ನಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಇದಕ್ಕೆ ನಿಮ್ಮ ಸಮ್ಮತಿಯಿದ್ದರೆ, ನೀವೂ ಈ ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗವಹಿಸಬಹುದು.
ಇದರಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ರೈಲ್ವೇ ಪ್ಲಾಟ್ಫಾರ್ಮ್ ಟಿಕೆಟ್ ದರ: 10 ರೂನಿಂದ 50 ರೂಗೆ ಏರಿಸಿದ ಮೋದಿ ಸರ್ಕಾರ!

