ಭ್ರಷ್ಟಾಚಾರ: ಉತ್ತರಾಖಂಡ್‌ ಬಿಜೆಪಿ ಸಿಎಂ ತ್ರಿವೇಂದ್ರ ಸಿಂಗ್‌ ವಿರುದ್ಧ ತನಿಖೆಗೆ ಹೈಕೋರ್ಟ್‌ ಆದೇಶ!

ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ವಿರುದ್ಧ ಭ್ರಷ್ಟಾಚಾರ ಆರೋಪಗಳು ದಾಖಲಾಗಿದ್ದು, ಸಿಎಂ ವಿರುದ್ಧ ತನಿಖೆ ನಡೆಸುವಂತೆ ಕೇಂದ್ರ ತನಿಖಾ ದಳ(ಸಿಬಿಐ)ಕ್ಕೆ ಉತ್ತರಾಖಂಡ ಹೈಕೋರ್ಟ್ ಆದೇಶಿಸಿದೆ.

ಗೋ ಸೇವಾ ಅಯೋಗದ ಮುಖ್ಯಸ್ಥರ ನೇಮಕಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಡೆದಿದೆ ಎಂದು ಸಿಎಂ ವಿರುದ್ಧ ಆರೋಪಿಸಿ ದೂರು ನೀಡಿದ್ದ ಪತ್ರಕರ್ತರಾದ ಉಮೇಶ್ ಶರ್ಮಾ ಮತ್ತು ಶಿವ ಪ್ರಸಾದ್ ಅವರು ಸಿಬಿಐ ತನಿಖೆ ಕೋರಿ ಎರಡು ಪ್ರತ್ಯೇಕ ಅರ್ಜಿಗಳನ್ನು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವೀಂದ್ರ ಮೈಥಾನಿ ಅವರು, ಈ ಸಂಬಂಧ ರಾವತ್ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ನಡೆಸುವಂತೆ ಡೆಹ್ರಾಡೂನ್ ಸಿಬಿಐ ಪೊಲೀಸ್ ಅಧೀಕ್ಷಕರಿಗೆ ನಿರ್ದೇಶಿಸಿದ್ದಾರೆ.

“ರಾಜ್ಯದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ವಿರುದ್ಧದ ಆರೋಪಗಳ ಸ್ವರೂಪವನ್ನು ಪರಿಗಣಿಸಿ, ಸತ್ಯವನ್ನು ಬಿಚ್ಚಿಡುವುದು ಸೂಕ್ತವೆಂದು ಈ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಇದು ರಾಜ್ಯದ ಹಿತದೃಷ್ಟಿಯಿಂದ ಮತ್ತು ಅನುಮಾನಗಳನ್ನು ನಿವಾರಿಸಲು ತನಿಖೆ ಅಗತ್ಯ ಇದೆ. ಹೀಗಾಗಿ ನ್ಯಾಯಾಲಯ ಸಿಬಿಐ ತನಿಖೆಗೆ ಆದೇಶಿಸುತ್ತದೆ” ಎಂದು ನ್ಯಾಯಮೂರ್ತಿ ಮೈಥಾನಿ ಅವರು ತಿಳಿಸಿದ್ದಾರೆ.

ಇದಾದ ನಂತರ, ಬೇರೊಂದು ಪ್ರಕರಣದಲ್ಲಿ ದೇಶದ್ರೋಹದ ಆರೋಪದ ಮೇಲೆ ಈ ಇಬ್ಬರೂ ಪತ್ರಕರ್ತರ ವಿರುದ್ಧ ಜುಲೈ 2020ರಲ್ಲಿ  ಎಫ್‌ಐಆರ್ ಅನ್ನು ದಾಖಲಿಸಲಾಗಿದ್ದು, ಆ ಎಫ್‌ಐಆರ್‌ಅನ್ನು ರದ್ದುಗೊಳಿಸುವಂತೆ ನ್ಯಾಯಾಲಯ ಆದೇಶಿಸಿದೆ.


ಇದನ್ನೂ ಓದಿ: ಕಲ್ಲಿದ್ದಲು ಹಗರಣ; ಬಿಜೆಪಿ ಮಾಜಿ ಸಚಿವ ದಿಲೀಪ್‌ ರೇ ಶಿಕ್ಷೆ ಅಮಾನತು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights