IPL 2020: ದೆಲ್ಲಿ ವಿರುದ್ಧ ಕಪ್‌ ಗೆದ್ದ ಮುಂಬೈ ಇಂಡಿಯನ್ಸ್‌!

ಕೊರೊನಾ ನಡುವೆಯೂ ಯುಎಇಯಲ್ಲಿ ನಡೆದ ಐಪಿಎಲ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಐದನೆ ಬಾರಿಗೆ ಕಪ್‌ ಗೆದ್ದುಕೊಂಡಿದೆ.

ನಿನ್ನೆ ರಾತ್ರಿ ನಡೆದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಐಪಿಎಲ್‌ 2020ರ ಫೈನಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಜಯಭೇರಿ ಭಾರಿಸಿದೆ.

ಅಂತಿಮ ಫೈನಲ್ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, ನಾಯಕ ಶ್ರೇಯಸ್ ಅಯ್ಯರ್ (ಅಜೇಯ 65) ಹಾಗೂ ರಿಷಭ್ ಪಂತ್ (56) ಅವರ ಉತ್ತಮ ಜೊತೆಯಾಟದ ನೆರವಿನಿಂದ 20 ಓವರ್​ಗಳಲ್ಲಿ 156 ರನ್ ಗಳಿಸಿತು.

ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಮುಂಬೈ, ನಾಯಕ ರೋಹಿತ್ ಶರ್ಮಾ ಅವರ 68 ಹಾಗೂ ಇಶಾನ್ ಕಿಶನ್ ಅವರ ಅಜೇಯ 33 ರನ್​ಗಳ ನೆರವಿನಿಂದ 18.4 ಓವರ್​ನಲ್ಲೇ ಗೆಲುವಿನ ನಗೆ ಬೀರಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 5ನೇ ಬಾರಿಗೆ ಟ್ರೋಫಿ ಗೆಲ್ಲುವ ಮೂಲಕ ಈವರೆಗೆ ಯಾರೂ ಮಾಡಿರದ ಸಾಧನೆ ಮಾಡಿತು. ಜೊತೆಗೆ ಸತತ ಎರಡನೇ ಬಾರಿ ಕಪ್ ಗೆದ್ದ ಎರಡನೇ ತಂಡವಾಗಿದೆ. ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ 2010 ಹಾಗೂ 2011 ರಲ್ಲಿ ಸತತವಾಗಿ ಪ್ರಶಸ್ತಿ ಗೆದ್ದಿತ್ತು.

ಇನ್ನೂ ಮುಂಬೈ ನಾಯಕ ರೋಹಿತ್ ಶರ್ಮಾ ಐಪಿಎಲ್ ಫೈನಲ್​ನಲ್ಲಿ 200ನೇ ಪಂದ್ಯವನ್ನಾಡಿದ ಸಾಧನೆ ಮಾಡಿದರು. ಧೋನಿ ನಂತರ ಈ ಮೈಲುಗಲ್ಲು ತಲುಪಿದ ಮೊದಲ ಆಟಗಾರನಾಗಿದ್ದಾರೆ.

2008ರಲ್ಲಿ ಡೆಕ್ಕನ್​ ಚಾರ್ಜಸ್​ ಪರ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದ ರೋಹಿತ್, 2009ರಲ್ಲಿ ಆ ತಂಡ ಚಾಂಪಿಯನ್ ಆಗಲು ಪ್ರಮುಖ ಪಾತ್ರವಹಿಸಿದ್ದರು. ನಂತರ 2011ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್​ ತಂಡ ರೋಹಿತ್​ರನ್ನು ಖರೀದಿಸಿತ್ತು. ರೋಹಿತ್ ಮುಂಬೈ ತಂಡದಲ್ಲಿ ನಾಯಕನಾಗಿ ಸದ್ಯ 5 ಬಾರಿ ಟ್ರೋಫಿ ಎತ್ತಿ ಹಿಡಿದಿದ್ದಾರೆ. ಜೊತೆಗೆ ರೋಹಿತ್ ಶರ್ಮಾ ತಾನಾಡಿದ 50ನೇ ಪಂದ್ಯ, 100ನೇ, 150ನೇ ಹಾಗೂ 200ನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ವಿಶೇಷ ದಾಖಲೆ ಬರೆದರು.

ಇತ್ತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ತಂಡ ಕೊರೋನಾ ವೈರಸ್ ನಡುವೆ ಐಪಿಎಲ್ ರದ್ದು ಮಾಡದೆ ದೂರದ ಯುಎಇನಲ್ಲಿ ಆಯೋಜಿಸಿ ಇದರಲ್ಲಿ ಯಶಸ್ವಿಯಾಗಿದೆ.


ಇದನ್ನೂ ಓದಿ: ವಿಧಾನ ಪರಿಷತ್‌ ಚುನಾವಣೆಯಲ್ಲಿಯೂ ಬಿಜೆಪಿ ಗೆಲುವು: 3 ಕ್ಷೇತ್ರಗಳು ಬಿಜೆಪಿ ತೆಕ್ಕೆಗೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights