ಐಎಂಎ ಹಗರಣ: ಹಣ ವಾಪಸಾತಿಗೆ ನ.25 ರಿಂದ ಆನ್‌ಲೈನ್‌ ಅರ್ಜಿ ಆಹ್ವಾನ!

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಹಣ ಕಳೆದುಕೊಂಡವರಿಗೆ ಹಣ ವಾಪಸ್ ಕೊಡಿಸಲು ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ. ನ.25ರಿಂದ ಆನ್‍ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಐಎಂಎ (I Monetary Advisory)ಯಲ್ಲಿ ಹೂಡಿಕೆ ಮಾಡಿ ಕೈಸುಟ್ಟುಕೊಂಡಿರುವವರು ತಮ್ಮ ಹಣವನ್ನು ವಾಪಸ್‌ ಪಡೆಯಲು ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಿದೆ.

ಠೇವಣಿದಾರರು ನವೆಂಬರ್‌ 25ರಿಂದ ಡಿಸೆಂಬರ್ 24ರೊಳಗಾಗಿ ಬೆಂಗಳೂರು 1, ಕರ್ನಾಟಕ 1, ಅಟಲ್ ಜಿ ಜನಸ್ನೇಹಿ ಕೇಂದ್ರ ಅಥವಾ ಖುದ್ದಾಗಿ ತಾವೇ ಆನ್ಲೈ ನ್ ಅರ್ಜಿಗಳನ್ನು ಅರ್ಜಿ ಸಲ್ಲಿಸಬೇಕು. ಎರಡು ಹಂತದಲ್ಲಿ ಅರ್ಜಿ ಸಲ್ಲಿಕೆ ಅವಕಾಶವಿದ್ದು, ಮೊದಲ ಹಂತದಲ್ಲಿ ವೈಯಕ್ತಿಕ ವಿವರ, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆಗಳನ್ನು ನೀಡಬೇಕು.  2ನೇ ಹಂತದಲ್ಲಿ ಐಎಂಎಗೆ ಹಣ ಹೂಡಿದ ಮಾಹಿತಿ ಒದಗಿಸಬೇಕು ಎಂದು ಹೇಳಲಾಗಿದೆ.

ಸುಮಾರು ಒಂದು ಲಕ್ಷ ಠೇವಣಿದಾರರು 2,900 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಇದರಲ್ಲಿ 1500 ಕೋಟಿ ರೂ.ಗಳನ್ನು ಲಾಭಾಂಶದ ಮಾದರಿಯಲ್ಲಿ ಐಎಂಎ ಕಾಲಕಾಲಕ್ಕೆ ಠೇವಣಿದಾರರಿಗೆ ನೀಡುತ್ತಾ ಬಂದಿದೆ. 2012ರ ಆಜುಬಾಜಿನಲ್ಲಿ ಹೂಡಿಕೆ ಮಾಡಿರುವವರ ಪೈಕಿ ಬಹುತೇಕರಿಗೆ ತಮ್ಮ ಅಸಲಿಗಿಂತಲೂ ಹೆಚ್ಚಿನ ಹಣ ಸಂದಾಯವಾಗಿದೆ. ಇನ್ನು 1400 ಕೋಟಿ ರೂ.ಗಳನ್ನು ಠೇವಣಿದಾರರಿಗೆ ವಾಪಸ್ ಕೊಡಿಸಬೇಕಿದೆ ಎಂದು ಐಎಂಎ ಪ್ರಕರಣದ ವಿಶೇಷ ಅಧಿಕಾರಿ ಹರ್ಷಗುಪ್ತ ತಿಳಿಸಿದ್ದಾರೆ.

ಐಎಂಎ ಮುಖ್ಯಸ್ಥ ಮನ್ಸೂರ್ ಆಲಿಖಾನ್ ಮತ್ತು ಅವವ್ಯಹಾರದಲ್ಲಿ ಭಾಗಿಯಾಗಿರುವ ಸರ್ಕಾರಿ ಅಧಿಕಾರಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕಿ ಠೇವಣಿದಾರರಿಗೆ ಹಣ ವಾಪಸ್ ನೀಡಲು ನಿರ್ಧರಿಸಲಾಗಿದೆ.

ಅರ್ಜಿ ಸಲ್ಲಿಸುವವರ ಮಾಹಿತಿಗಳನ್ನು ಐಎಂಎ ಸಂಸ್ಥೆಯಲ್ಲಿರುವ ದತ್ತಾಂಶಗಳೊಂದಿಗೆ ಹೊಂದಾಣಿಕೆ ಮಾಡಲಾಗುವುದು. ಆಧಾರ್ ಕಾರ್ಡ್, ಇತರ ಮಾಹಿತಿಗಳನ್ನು ಸಮೀಕರಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಲಾಗುವುದು. ಒಂದು ವೇಳೆ ಫಲಾನುಭವಿಗಳು ಮೃತಪಟ್ಟಿದ್ದರೆ ಅಥವಾ ಕೋವಿಡ್ ನಂತಹ ಕಾಯಿಲೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರೆ ಠೇವಣಿದಾರರು ಸೂಚಿಸಿರುವ ನಾಮನಿರ್ದೇಶಿತ ವ್ಯಕ್ತಿಗಳು ಕ್ಲೈಮ್‍ ಗಾಗಿ ಅರ್ಜಿ ಸಲ್ಲಿಸಬಹುದು.

ನಾಮನಿರ್ದೇಶಿತ ವ್ಯಕ್ತಿಗಳು ಬದುಕಿಲ್ಲವೆಂದಾದರೆ ಅವರ ಕಾನೂನು ಬದ್ದ ಹಕ್ಕುದಾರರು ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ ಈ ಸಂದರ್ಭದಲ್ಲಿ ಸೂಕ್ತ ದಾಖಲಾತಿಗಳ ಅಗತ್ಯವಿದೆ. ಅವಧಿ ಮೀರಿ ಸಲ್ಲಿಕೆಯಾದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಹರ್ಷಗುಪ್ತ ತಿಳಿಸಿದ್ದಾರೆ.


ಇದನ್ನೂ ಓದಿ: ಲಾಕ್‌ಔಟ್‌ ಆಗಲಿದೆ ಟೊಯೊಟಾ ಕಾರ್‌ ಕಂಪನಿ? 3,500 ಕಾರ್ಮಿಕರಿಂದ ಆಹೋರಾತ್ರಿ ಪ್ರತಿಭಟನೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights