ಪ್ರವಾಹ: ಕೇಂದ್ರದಿಂದ ಕರ್ನಾಟಕಕ್ಕೆ 577 ಕೋಟಿ ರೂ ಪರಿಹಾರ ಬಿಡುಗಡೆ!

ಈ ವರ್ಷದಲ್ಲಿ ಚಂಡಮಾರುತ, ಪ್ರವಾಹ, ಭೂಕುಸಿತದಿಂದ ಹಾನಿಗೊಳಗಾದ ಆರು ರಾಜ್ಯಗಳಿಗೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯಡಿ ಕೇಂದ್ರ ಸರ್ಕಾರದಿಂದ 4,381 ಕೋಟಿ ರೂಪಾಯಿಗಳ ಹೆಚ್ಚುವರಿ ಪರಿಹಾರ ನೀಡಲು ಕೇಂದ್ರದ ಉನ್ನತ ಮಟ್ಟದ ಸಮಿತಿ ಅನುಮೋದನೆ ನೀಡಿದೆ. ಇದರಲ್ಲಿ ಕರ್ನಾಟಕಕ್ಕೆ 577 ಕೋಟಿ ರೂ ನೀಡಲಾಗುವುದು ಎಂದು ಹೇಳಲಾಗಿದೆ.

ಅಮ್ಫಾನ್ ಚಂಡಮಾರುತದಿಂದ ತೀವ್ರ ನಷ್ಟ ಅನುಭವಿಸಿರುವ ಪಶ್ಚಿಮ ಬಂಗಾಳಕ್ಕೆ 2,707 ಕೋಟಿ ರೂ., ಮತ್ತು ಒಡಿಶಾಗೆ 128 ಕೋಟಿ ರೂ., ನಿಸರ್ಗಾ ಚಂಡಮಾರುತದಿಂದಾಗಿ ನಲುಗಿರುವ ಮಹಾರಾಷ್ಟ್ರಕ್ಕೆ 268 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಅನುಮೋದಿಸಲಾಗಿದೆ.

ನೈರುತ್ಯ ಮಾನ್ಸೂನ್ ಕಾಲದಲ್ಲಿ ಪ್ರವಾಹ ಮತ್ತು ಭೂಕುಸಿತಕ್ಕೆ ಒಳಗಾಗಿರುವ ಕರ್ನಾಟಕಕ್ಕೆ 577 ಕೋಟಿ ರೂಗಳನ್ನು, ಮಧ್ಯಪ್ರದೇಶಕ್ಕೆ 611 ಕೋಟಿ ರೂಪಾಯಿಗಳನ್ನು ಮತ್ತು ಸಿಕ್ಕಿಂಗೆ 87 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ.

ಕಳೆದ ಎರಡು ಮೂರು ತಿಂಗಳಲ್ಲಿ ಉತ್ತರ ಕರ್ನಾಟಕ ವಿಜಯಪುರ, ಕಲುಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ರಾಯಚೂರು ಭಾಗಗಳಲ್ಲಿ ಭಾರಿ ಮಳೆಯಾಗಿದ್ದು, ಸಾಕಷ್ಟು ಆಸ್ತಿ-ಪಾಸ್ತಿ ನಷ್ಟವಾಗಿತ್ತು. ಪ್ರವಾಹದಿಂದಾಗಿ 10.07 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಪಾರ ಬೆಳೆಗಳಿಗೆ ಹಾನಿಯುಂಟಾಗಿದ್ದು, ರೂ.9,952 ಕೋಟಿ ನಷ್ಟವಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದರು.


ಇದನ್ನೂ ಓದಿ: ಹಳ್ಳಿಹಕ್ಕಿ‌, ಎಂಟಿಬಿ, ಶಂಕರ್‌ಗೆ ಸಚಿವ ಸ್ಥಾನ; ಆಯ್ಕೆ ಕಡತಗಳನ್ನು ಸಲ್ಲಿಸುವಂತೆ ಹೈಕೋರ್ಟ್‌ ಸೂಚನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights