ರಸ್ತೆ ಅಪಘಾತದಲ್ಲಿ ಪತ್ರಕರ್ತ ಸಾವು: ಸಿಐಡಿ ತನಿಖೆಗೆ ಮುಖ್ಯಮಂತ್ರಿ ಅದೇಶ!
ಅಸ್ಸಾಂನ ಹಿರಿಯ ಗ್ರಾಮೀಣ ಪತ್ರಕರ್ತ ಮತ್ತು ಅಸ್ಸಾಂ ಮಾಜಿ ಸಚಿವ ಜಗದೀಶ್ ಭುಯಾನ್ ಅವರ ಸಹೋದರ ಪರಾಗ್ ಭುಯಾನ್ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಅವರ ಸಾವಿನ ಪ್ರಕರಣವನ್ನು ಸಿಐಡಿ ತನಿಖೆ ನಡೆಸುವಂತೆ ಅಸ್ಸಾಂ ಸಿಎಂ ಸರ್ಬಾನಂದ ಸೋನೊವಾಲ್ ಆದೇಶಿಸಿದ್ದಾರೆ.
ಪರಾಗ್ ಭುವನ್ ಅವರಿಗೆ ಅಸ್ಸಾಂನ ತಿನ್ಸುಕಿಯ ಜಿಲ್ಲೆಯಲ್ಲಿರುವ ತಮ್ಮ ಮನೆಯ ಬಳಿ ರಸ್ತೆ ಅಪಘಾತವಾಗಿತ್ತು. ಬುಧವಾರ ರಾತ್ರಿ ವೇಗವಾಗಿ ಬಂದ ವಾಹನವು ಅವರಿಗೆ ಗುದ್ದಿ, ಪೊಲೀಸ್ ಚೆಕ್ ಗೇಟ್ ಮೂಲಕ ತಪ್ಪಿಸಿಕೊಂಡಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆ ವಾಹನದ ಚಾಲಕನನ್ನು ಕೂಡ ಬಂಧಿಸಲಾಗಿದೆ.
ಘಟನೆ ನಡೆದು 15 ಗಂಟೆಗಳಾದ ಬಳಿಕ ಪೊಲೀಸರು ಅಪಘಾತ ಮಾಡಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆರಂಭಿಕವಾಗಿ ಪೊಲೀಸರು ನಡೆಸಿದ ತನಿಖೆ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅವರನ್ನು ಕೊಲೆ ಮಾಡಿರಬಹುದಾದ ಅನುಮಾನಗಳ ಆಧಾರದಲ್ಲಿ ಸಿಐಡಿ ತನಿಖೆಗೆ ಆದೇಶಿಸಲಾಗಿದೆ.
ಪರಾಗ್ ಅವರು ಸ್ಥಳೀಯವಾಗಿ ನಡೆಯುತ್ತಿದ್ದ ಭ್ರಷ್ಟಾಚಾರ ಮತ್ತು ಅಕ್ರಮ ಚಟುವಟಿಕೆಗಳನ್ನು ಸೆರೆಹಿಡಿದು, ಬಯಲು ಮಾಡಿದ್ದರು. ಅವನ್ನು ಕೊಲೆ ಮಾಡಲಾಗಿದೆ ಎಂದು ಚಾನೆಲ್ ಮುಖ್ಯಸ್ಥರು ಆರೋಪಿಸಿದ್ದರು. ಅಲ್ಲದೆ, ಅವವ ಕುಟುಂಬದವರೂ ಕೂಡ ಇದು ಆಕಸ್ಮಿಕವ ಸಾವಲ್ಲ, ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ಕುರಿತು ಸಿಐಡಿ ತನಿಖೆ ನಡೆಸುವಂತೆ ಅಸ್ಸಾಂ ಮುಖ್ಯಮಂತ್ರಿ ಆದೇಶಿಸಿದ್ದಾರೆ.
ಇದನ್ನೂ ಓದಿ: ಅರ್ನಬ್, ಅರ್ನಬ್, ಅರ್ನಬ್ ಎಂದೇ ಜಪಿಸುತ್ತಿದ್ದ ರಿಪಬ್ಲಿಕ್ ಟಿವಿ! 2 ದಿನಗಳಲ್ಲಿ ಮಾಡಿದ್ದೇನು ಗೊತ್ತಾ?

