ಪುರಿ ಜಗನ್ನಾಥ ರಥಯಾತ್ರೆಗೆ ತಡೆಯಾಜ್ಞೆ ನೀಡಿದ ಸುಪ್ರೀಂಕೋರ್ಟ್‌; ಕಾರಣವೇನು?

ಜೂನ್ 23ರಿಂದ ಪ್ರಾರಂಭವಾಗಲಿರುವ ಹಾಗೂ ಜಗತ್ತಿನಾದ್ಯಂತ ಲಕ್ಷಾಂತರ ಜನರು ಭಾಗವಹಿಸಲಿರುವ ಪುರಿ ರಥಯಾತ್ರೆ ಮಹೋತ್ಸವಕ್ಕೆ ಸುಪ್ರೀಂ ಕೋರ್ಟ್‌ ತೆಡೆಯಾಜ್ಞೆ ಹೊರಡಿಸಿದೆ.

ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ಅಂತಹ ಕಾಯ್ದುಕೊಳ್ಳುವುದು ಅಗತ್ಯವಾಗಿದ್ದು, ರಥಯಾತ್ರೆಗೆ ಅನುಮತಿ ನೀಡಿದರೆ “ಪುರಿ ಜಗನ್ನಾಥ” ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಕೋರ್ಟ್‌ ಹೇಳಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಎ.ಎಸ್.ಬೋಪಣ್ಣ ಅವರ ನ್ಯಾಯಪೀಠವು ಸಾಂಕ್ರಮಿಕ ರೋಗ ಹರಡುತ್ತಿರುವ ಸಮಯದಲ್ಲಿ ಬೃಹತ್ ಮಹೋತ್ಸವ ನಡೆಯಲು ಸಾಧ್ಯವಿಲ್ಲ. ಸಾರ್ವಜನಿಕ ನ್ಯಾಯ ಮತ್ತು ನಾಗರಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಒಡಿಶಾದ ಪುರಿಯಲ್ಲಿ ನಡೆಯುವ ಈ ವರ್ಷದ ರಥಯಾತ್ರೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದೆ.

ಕರೋನವೈರಸ್ ಹರಡುವುದನ್ನು ತಪ್ಪಿಸಲು ಯಾತ್ರೆ ಅಥವಾ ತೀರ್ಥಯಾತ್ರೆ ಮತ್ತು ಸಂಬಂಧಿತ ಚಟುವಟಿಕೆಗಳನ್ನು ರಾಜ್ಯದಲ್ಲಿ ಎಲ್ಲಿಯೂ ಅನುಮತಿಸಬಾರದು ಎಂದು ನ್ಯಾಯಪೀಠ ಒಡಿಶಾ ಸರ್ಕಾರಕ್ಕೆ ತಿಳಿಸಿದೆ.

ಲಕ್ಷಾಂತರ ಜನರೊಂದಿಗೆ 10-12 ದಿನಗಳವರೆಗೆ ನಡೆಯುವ ರಥಯಾತ್ರೆ ಉತ್ಸವವನ್ನು ಜೂನ್ 23 ರಂದು ನಿಗದಿಪಡಿಸಲಾಗಿದ್ದು, ಜುಲೈ 01 ರಂದು‘ಬಹುದಾ ಜಾತ್ರಾ’ (ರಿಟರ್ನ್ ಕಾರ್ ಫೆಸ್ಟಿವಲ್) ಮಹೋತ್ಸವನ್ನು ಹಮ್ಮಿಕೊಳ್ಳಲಾಗಿತ್ತು.

ಪುರಿಯಲ್ಲಿನ ಭಗವಾನ್ ಜಗನ್ನಾಥ್, ಭಗವಾನ್ ಬಲಭದ್ರ ಮತ್ತು ದೇವಿ ಸುಭದ್ರಾ ಅವರ ಮೂರು ಮರದ ರಥಗಳನ್ನು ಎಳೆಯುವ ಸಾಂಪ್ರದಾಯಿಕ ಉತ್ಸವವಾಗಿದ್ದು, ರಥಗಳನ್ನು ಒಂಬತ್ತು ದಿನಗಳ ಕಾಲ ಮೂರು ಕಿಲೋಮೀಟರ್ ದೂರದವರೆಗೆ ಸಾವಿರಾರು ಭಕ್ತರು ಸಾಂಪ್ರದಾಯಿಕವಾಗಿ ಎಳೆಯುತ್ತಾರೆ.

Puri Jagannath Rath Yatra begins: 7 key attractions that you must know

ರಥ ಯಾತ್ರೆಯನ್ನು ಅನುಮತಿಸಿದರೆ, ಉತ್ಸವದಲ್ಲಿ ಬೃಹತ್‌ ಸಂಖ್ಯೆಯಲ್ಲಿ ಜನರು ನೆರೆಯುತ್ತಾರೆ. ಇದು ಕೊರೊನಾ ಸೋಂಕು ಹೆಚ್ಚಾಗಲು ಕಾರಣವಾಗುತ್ತದೆ ಎಂದು ಅರ್ಜಿದಾರರ ಪರವಾದ ವಕೀಲರಾದ ಮುಕುಲ್ ರೋಹಟ್ಗಿ ಹೇಳಿದ್ದು, ಇದು ಗಂಭೀರ ವಿಷಯ ಎಂದು ನ್ಯಾಯಪೀಠ ಹೇಳಿದೆ.

ಈ ವರ್ಷದ ರಥಯಾತ್ರೆಯನ್ನು ರದ್ದುಗೊಳಿಸಬೇಕು ಅಥವಾ ಮುಂದೂಡಬೇಕೆಂದು ಕೋರಿ ಒಡಿಶಾ ಮೂಲದ ‘ಒಡಿಶಾ ವಿಕಾಸ್ ಪರಿಷತ್’ ಎಂಬ ಎನ್‌ಜಿಒ ಸಲ್ಲಿಸಿದ ಪಿಐಎಲ್‌ ಸಲ್ಲಿಸಿದ್ದು, ಧಾರ್ಮಿಕ ಸಭೆ ಅಥವಾ ಸಮಾರಂಭಗಳನ್ನು ನಡೆಸಲು ಅನುಮತಿ ನೀಡಿದರೆ, ಜೂನ್ 23 ರಂದು ‘ರಥಯಾತ್ರೆ’ ನಡೆಯಲು ಅವಕಾಶವಿದ್ದರೆ, ದೇಶಾದ್ಯಂತ ಲಕ್ಷಾಂತರ ಭಕ್ತರು ಭಗವಾನ್  ಜಗನ್ನಾಥನ ‘ದರ್ಶನ’ಕ್ಕಾಗಿ ಒಟ್ಟುಗೂಡಲಿದ್ದಾರೆ. ಇದರಿಂದ ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಿಲ್ಲವಾದ್ದರಿಂದ ಕೊರೊನಾ ಸೋಂಕು ವ್ಯಾಪಕವಾಗಿ ಹರಡುವ ಭೀತಿಯಿದೆ ಎಂದು ಪಿಐಎಲ್‌ನಲ್ಲಿ ಹೇಳಿದೆ.

ಜೂನ್ 9 ರಂದು, ಹೈಕೋರ್ಟ್‌ನಲ್ಲಿ ಸಲ್ಲಿಸಿದ ಪಿಐಎಲ್ ಕುರಿತು “ಕೋವಿಡ್ -19 ಮಾರ್ಗಸೂಚಿಗಳಿಗೆ ಅನುಗುಣವಾಗಿ ಪುರಿಯಲ್ಲಿ ‘ರಥಯಾತ್ರೆ’ ಉತ್ಸವವನ್ನು ನಡೆಸಲು ಅವಕಾಶ ವಿದೆ. ಆ ಸಂದರ್ಭದಲ್ಲಿ ರಥಗಳನ್ನು ಎಳೆಯಲು ಯಂತ್ರೋಪಕರಣಗಳನ್ನು ಬಳಸಬೇಕು ಅಥವಾ ಆನೆಗಳಂತಹ ಇತರ ವಿಧಾನಗಳನ್ನು ನಿಯೋಜಿಸಬೇಕು” ಎಂದು ಒಡಿಶಾ ಹೈಕೋರ್ಟ್ ಹೇಳಿತ್ತು.

ಹೈಕೋರ್ಟ್‌ ಅದೇಶವನ್ನು ಒಪ್ಪಿಕೊಳ್ಳದ ಎನ್‌ಜಿಓ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಮನವಿ ಆಲಿಸಿ ಸುಪ್ರೀಂ ಪುರಿ ರಥೋತ್ಸವಕ್ಕೆ ತಡೆ ನೀಡಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights