‘ಮತ್ತೆ ಲಾಕ್ ಡೌನ್ ಆಗೋದು ಬೇಡ, ಕೊರೊನಾ ನಿಯಮ ಪಾಲಿಸಿ ‘- ನಟ ಶಿವರಾಜಕುಮಾರ್ ಮನವಿ
ಮತ್ತೆ ಲಾಕ್ ಡೌನ್ ಆಗೋದು ಬೇಡ, ಕೇರ್ ಫುಲ್ ಆಗಿದ್ರೆ ಲಾಕ್ ಡೌನ್ ಆಗೋದಿಲ್ಲ. ಕೊರೊನಾ ನಿಯಮ ನಿರ್ಲಕ್ಷ್ಯ ವಹಿಸದೇ ಎಲ್ಲರೂ ಪಾಲಿಸಿ ‘ ಎಂದು ನಟ ಶಿವರಾಜಕುಮಾರ್ ಮನವಿ ಮಾಡಿದ್ದಾರೆ.
ಇಂದು ವರನಟ ಡಾ. ರಾಜ್ ಕುಮಾರ್ ಅವರ 15ನೇ ವರ್ಷದ ಪುಣ್ಯ ಸ್ಮರಣೆ. ಈ ಹಿನ್ನೆಲೆಯಲ್ಲಿಕುಟುಂಬಸ್ಥರು ರಾಜ್ ಸಮಾಧಿ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ ಅಪ್ಪಾಜಿ ಅಗಲಿ 15 ವರ್ಷ ಆಯ್ತು. ಕಳೆದ ವರ್ಷವೂ ಕೊರೊನಾ ಇತ್ತು. ಈ ವರ್ಷವೂ ಅದೇ ತರ ಆಗಿದೆ. ಹೀಗಾಗಿ ಆಢಂಬರ ಬೇಡ. ಸರಳವಾಗಿ ಪೂಜೆ ಮಾಡಬೇಕು ಅಂತ ನಿರ್ಧಾರ ಆಗಿತ್ತು. ಅಭಿಮಾನಿಗಳು ಹುಷಾರಾಗಿರಬೇಕು” ಎಂದು ಹೇಳಿದರು.
ಜೊತೆಗೆ ” ಒಂದು ವರ್ಷ ಕೊರೊನಾ ದಿಂದ ಕಷ್ಟವಾಗಿದೆ. ಈಗ ಕಷ್ಟ ದೂರ ಆಗಬೇಕು. ಒಂದು ವರ್ಷ ಎಲ್ಲರೂ ಕಷ್ಟ ಪಟ್ಟಿದ್ದಾರೆ ಮತ್ತೆ ಕಷ್ಟ ಪಡೋದು ಬೇಡ. ಮೊಂಡು ಧೈರ್ಯ ಮಾಡಬಾರದು. ಕೇರ್ ಫುಲ್ ಆಗಿರೋದು ನಮ್ಮ ಜವಾಬ್ದಾರಿ. ನಾವು ಜವಬ್ದಾರಿಯಿಂದ ಜೀವನ ಮಾಡಿದರೆ ಖುಷಿ ಜೀವನ ನಮ್ಮದಾಗುತ್ತದೆ” ಎಂದಿದ್ದಾರೆ.
ಈಗಾಗಲೇ ಕೊರೊನಾ ಸೋಂಕಿತರ ಸಂಖ್ಯೆ ನಿತ್ಯ ಸಾವಿರ ಗಡಿ ದಾಟುತ್ತಿದೆ. ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದರೂ ಜನ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಬೆಂಗಳೂರು ಕೆಆರ್ ಮಾರ್ಕೇಟ್ ನಲ್ಲಿ ಜನ ಜಾತ್ರೆಯಂತೆ ಕೂಡಿ ಹಬ್ಬದ ತಯಾರಿ ಮಾಡುತ್ತಿದ್ದಾರೆ. ಜೊತೆಗೆ ನೆಲಮಂಗಲದಲ್ಲಿ ಜಾತ್ರೆಗೆಂದು ಸಾವಿರಾರು ಜನ ಸೇರಿದ್ದಾರೆ. ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಜನ ಕಿಕ್ಕಿರಿದು ಸೇರುತ್ತಿರುವುದು ಆತಂಕವನ್ನು ಹೆಚ್ಚಿಸಿದೆ.