ಶುರುವಾಯ್ತು ವೀಕೆಂಡ್ ಕರ್ಫ್ಯೂ: ಮತ್ತಷ್ಟು ಟಫ್ ರೂಲ್ಸ್ ಜಾರಿ ಮಾಡಿದ ರಾಜ್ಯ ಸರ್ಕಾರ

ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ವಾರಾಂತ್ಯದ ಕರ್ಫ್ಯೂ ವಿಧಿಸಲು ಮಂಗಳವಾರ ನಿರ್ಧರಿಸಿದೆ. ಜೊತೆಗೆ ಈಗಾಗಲೇ ಜಾರಿಯಲ್ಲಿರುವ ನೈಟ್‌ ಕರ್ಫ್ಯೂ‌ ಅನ್ನು ಜನವರಿ 19 ರವರೆಗೆ ವಿಸ್ತರಿಸಲು ನಿರ್ಧರಿಸಿದೆ. ರಾಜ್ಯಾದ್ಯಂತ ಕರ್ಫ್ಯೂ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಜಾರಿಯಲ್ಲಿರುತ್ತದೆ.

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹಠಾತ್ ಏರಿಕೆಯಾಗಿರುವುದರಿಂದ ಮಂಗಳವಾರ ಸಂಜೆ ಸಭೆ ನಡೆಸಲಾಗಿತ್ತು. ಮಂಗಳವಾರದಂದು 2,479 ಪ್ರಕರಣಗಳು ದಾಖಲಾಗಿದ್ದು, ನಾಲ್ಕು ಸಾವುಗಳು ಸಂಭವಿಸಿವೆ ಎಂದು ವರದಿಯಾಗಿದೆ. ಜನವರಿ 1 ರಿಂದ ಬೆಂಗಳೂರಿನಲ್ಲಿ ಪ್ರತಿದಿನ 1,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ.

ಹೊಸ ನಿಯಮಗಳು ಹೇಗಿದೆ? ಯಾವುದಕ್ಕೆ ನಿರ್ಬಂಧ?

 • ಹೊಸ ಮಾರ್ಗಸೂಚಿ ಜನವರಿ 5 ರ ರಾತ್ರಿ 10 ಗಂಟೆಯಂದ 19 ರ ಬೆಳಿಗ್ಗೆ 5 ಗಂಟೆವರೆಗೆ ಇರಲಿದೆ.
 • ವೀಕೆಂಡ್‌ ಕರ್ಫ್ಯೂ‌ ಶುಕ್ರವಾರ ರಾತ್ರಿ 10 ಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಇರಲಿದೆ.
 • ರಾತ್ರಿ 10 ಗಂಟೆಯಿಂದ ಬೆಳಗ್ಗಿನ ಜಾವ 5 ಗಂಟೆವರೆಗೆ ನೈಟ್‌ ಕರ್ಫ್ಯೂ. ಇದು ಜನವರಿ 19ರ ವರೆಗೆ ಮುಂದುವರೆಯಲಿದೆ.
 • ಎಲ್ಲಾ ಕಚೇರಿಗಳು ಸೋಮವಾರದಿಂದ ಶುಕ್ರವಾರದವರೆಗೆ 5 ದಿನಗಳ ಕಾಲವಷ್ಟೇ ಕಾರ್ಯನಿರ್ವಹಣೆ.
 • ಸರ್ಕಾರಿ ಕಚೇರಿಗಳಲ್ಲಿ 50% ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಣೆ.
 • ವೀಕೆಂಡ್ ಕರ್ಫ್ಯೂ ಇದ್ದರೂ ಅಗತ್ಯಕ್ಕೆ ತಕ್ಕಂತೆ ಸಾರಿಗೆಗಳು ಕಾರ್ಯ ನಿರ್ವಹಣೆ.
 • ಬೆಂಗಳೂರು ನಗರದಲ್ಲಿ ಮಾತ್ರ ಜನವರಿ 6 ರಿಂದ ನರ್ಸಿಂಗ್, ವೈದ್ಯಕೀಯ, ಪ್ಯಾರಾ‌ಮೆಡಿಕಲ್, 10, 11, 12 ನೇ ತರಗತಿಗಳನ್ನು ಹೊರತುಪಡಿಸಿ ಶಾಲಾ-ಕಾಲೇಜುಗಳು ಬಂದ್‌.
 • ಉಳಿದ ತರಗತಿಗಳು ಜನವರಿ 6 ರಿಂದಲೇ ಆನ್ಲೈನ್ ಮೂಲಕ ನಡೆಸಲು ಅನುಮತಿ.
 • ಪಬ್, ಕ್ಲಬ್ ಹೊಟೇಲ್ ಗಳು, ಚಿತ್ರಮಂದಿರ, ರಂಗಮಂದಿರ, ಆಡಿಟೋರಿಯಂಗಳಿಗೆ 50% ಮಾತ್ರ ಅವಕಾಶ. ಈ ಹಿಂದಿನ ನಿಯಮದಂತೆ ಡಬಲ್ ಡೋಸ್ ಪಡೆದವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ.
 • ಹೊರಾಂಗಣ ಮದುವೆಗಳಿಗೆ 200 ಜನ ಮತ್ತು ಒಳಾಂಗಣ ಮದುವೆಗಳಿಗೆ 100 ಜನರಿಗಷ್ಟೇ ಅನುಮತಿ.
 • ಧಾರ್ಮಿಕ ಕೇಂದ್ರಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ. ಇತರೆ ಯಾವುದೆ ಸೇವೆಗಳಿಗೆ ಅವಕಾಶ ಇಲ್ಲ.
 • ವ್ಯಾಕ್ಸಿನ್‌ ಹಾಕಿಸಿಕೊಂಡ ವ್ಯಕ್ತಿಗಳಿಗೆ ಮಾತ್ರ ಧಾರ್ಮಿಕ ಕೇಂದ್ರಗಳಲ್ಲಿ ಅವಕಾಶವಿದ್ದು, ಅದು ಕೂಡಾ ಒಮ್ಮೆಗೆ 50 ಭಕ್ತರಿಗೆ ಮಾತ್ರ ಅವಕಾಶ.
 • ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಮಾಲ್, ಷಾಪಿಂಗ್ ಕಾಂಪ್ಲೆಕ್ಸ್, ಅಂಗಡಿ ಮುಂಗಟ್ಟುಗಳಿಗೆ ಅನುಮತಿ.
 • ಈಜುಕೊಳ, ಜಿಮ್‌ಗಳಲ್ಲಿ 50% ಸಾಮರ್ಥ್ಯದೊಂದಿಗೆ ಅನುಮತಿ ಇದ್ದು, ಎರಡು ಡೋಸ್ ಲಸಿಕೆ ಕಡ್ಡಾಯ ಪಡೆದಿರಬೇಕು.
 • ಯಾವುದೇ ರ್‍ಯಾಲಿ, ಪ್ರತಿಭಟನೆಗಳಿಗೆ ಅನುಮತಿಯಿಲ್ಲ.
 • ಸಭೆ, ಸಮಾರಂಭಗಳನ್ನು 50 ಜನರೊಂದಿಗೆ ಮಾತ್ರ ನಡೆಸಲು ಅನುಮತಿ.

 

ಈ ಮಧ್ಯೆ, ರಾಜ್ಯ ಸರ್ಕಾರವು ಕೇರಳ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಗಡಿಯಲ್ಲಿ ತೀವ್ರ ನಿಗಾ ಇಡಬೇಕು ಎಂದು ನಿರ್ದೇಶಿಸಿದೆ.

ರಾಜ್ಯ ಕಂದಾಯ ಸಚಿವ ಆರ್ ಅಶೋಕ ಮಾತನಾಡಿ, “ಹೊಸ ವರ್ಷದ ನಂತರ ಗೋವಾದಿಂದ ಹಿಂದಿರುಗಿದ ಅನೇಕ ಜನರಿಗೆ ಕೊರೊನಾ ಪಾಸಿಟಿವ್‌ ಆಗಿದೆ. ಜನವರಿ 1ರ ನಂತರ ಗೋವಾದಿಂದ ಹಿಂದಿರುಗಿದ ಪ್ರತಿಯೊಬ್ಬರನ್ನು ಪತ್ತೆಹಚ್ಚಲು ನಾವು ನೋಡುತ್ತಿದ್ದೇವೆ. ಅವರನ್ನು ಪರೀಕ್ಷಿಸಲಾಗುವುದು. ಹೆಚ್ಚಿನ ಅಪಾಯವಿರುವ ದೇಶಗಳ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ, RT-PCR ಪರೀಕ್ಷೆಯನ್ನು ಮಾಡಲಾಗುತ್ತದೆ” ಎಂದು ತಿಳಿಸಿದ್ದಾರೆ.

****

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.