ಸದ್ಯದಲ್ಲೆ ರಾಜ್ಯಕ್ಕೆ ಅಮಿತ್ ಶಾ ಭೇಟಿ, ಸಂಪುಟಕ್ಕೆ ಮೇಜರ್ ಸರ್ಜರಿ ಸಾಧ್ಯತೆ!

2023 ರಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಸದ್ಯದಲ್ಲೇ ಸಚಿವ ಸಂಪುಟ ಪುನರ್‍ ರಚನೆಗೆ ಮುಂದಾಗಿದೆ ಎಂದು ಹೇಳಲಾಗಿದೆ. ಇದರ ಜೊತೆಜೊತಗೆ ಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆಯ ಬಗ್ಗೆಗಿನ ಸುದ್ದಿಗಳು ಕೂಡಾ ಬಿಜೆಪಿ ವಲಯದಲ್ಲಿ ಹರಿದಾಡುತ್ತಿದೆ.

ಹೊಸ ಸಚಿವ ಸಂಪುಟದಲ್ಲಿ 10ಕ್ಕೂ ಹೆಚ್ಚು ಹೊಸ ಮತ್ತು ಯುವ ಮುಖಗಳಿಗೆ ಅವಕಾಶ ಕಲ್ಪಿಸಲು ಚಿಂತಿಸಲಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಡೆಕ್ಕನ್‌ ಹೆರಾಲ್ಡ್‌ ವರದಿ ಮಡಿದೆ. ಬಿಜೆಪಿಯು ಇದೇ ತಂತ್ರವನ್ನು ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಅನುಸರಿಸಿತ್ತು.

ಮೂಲಗಳ ಪ್ರಕಾರ, ಈ ವಾರದ 8-9 ಕ್ಕೆ ಗೃಹ ಸಚಿವ ಅಮಿತ್‌ ಶಾ ರಾಜ್ಯಕ್ಕೆ ಭೇಟಿ ನೀಡುವ ಬಗ್ಗೆ ನಿಗದಿಯಾಗಿತ್ತು. ಆದರೆ ಇದೀಗ ಅದು ರದ್ದಾಗಿದ್ದು, ಜನವರಿ 18-19 ರ ವೇಳೆಗೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ಭೇಟಿಯಲ್ಲಿ ಪ್ರಮುಖ ಮೂರು ವಿಚಾರಗಳ ಬಗ್ಗೆ ಅವರು ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

“ಅಮಿತ್‌ ಶಾ ಅವರ ಸಭೆಯಲ್ಲಿ ಪ್ರಮುಖ ಮೂರು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಮೊದಲನೆಯದಾಗಿ ಸಂಪುಟ ಪುನರ್‍ ರಚನೆ, ಎರಡನೆಯದ್ದಾಗಿ ಮುಖ್ಯಮಂತ್ರಿ ಬದಲಾವಣೆ, ಮೂರನೆಯದ್ದಾಗಿ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ. ಈ ಸಭೆಯಲ್ಲಿ ಸಂಪುಟ ಪುನರ್‍ ರಚನೆ ಬಗ್ಗೆ ಒಪ್ಪಿಗೆ ಸಿಕ್ಕರೆ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಇಲ್ಲವೆಂದರೆ ಮುಖ್ಯಮಂತ್ರಿ ಬಲದಲಾವಣೆ ಸಾಧ್ಯತೆ ಇದೆ” ಎಂದು ಮೂಲವೊಂದು ಹೇಳಿದೆ.

ಒಟ್ಟಿನಲ್ಲಿ ಬಿಜೆಪಿಯ ಎಲ್ಲಾ ರಾಜಕೀಯ ಬದಲಾವಣೆಗಳು ಸಂಕ್ರಾಂತಿ ಹಬ್ಬದ ನಂತರ ನಿರೀಕ್ಷಿಸಲಾಗಿದೆ. ಒಂದು ವೇಳೆ ಸಚಿವ ಸಂಪುಟ ಪುನರ್‍ ರಚನೆ ನಡೆದರೆ 2023 ರ ಚುನಾವಣೆಯವರೆಗೆ ಬೊಮ್ಮಾಯಿ ಅವರ ಸ್ಥಾನ ಭದ್ರವಾಗಿ ಇರಲಿದೆ ಎಂದು ಮೂಲಗಳು ಹೇಳುತ್ತವೆ. ರಾಜ್ಯದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆ ಮತ್ತು ಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗಿರುವ ಹಿನ್ನಲೆಯಲ್ಲಿ ಈ ಎಲ್ಲಾ ಬೆಳವಣಿಗೆ ನಡೆಯುತ್ತಿದೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಪಕ್ಷದ ಸಂಘಟನೆ ಬಗ್ಗೆ ನಿಷ್ಕ್ರಿಯವಾಗಿರುವ ಸಚಿವರನ್ನು ವಜಾಗೊಳಿಸಲು ಬಿಜೆಪಿ ಕೇಂದ್ರ ನಾಯಕತ್ವ ಮುಂದಾಗಿದೆ. ಸಿಎಂ ವಿರುದ್ಧ ಇರುವ ಕೆಲವು ಹಿರಿಯ ಸಚಿವರನ್ನೂ ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ ಎಂದು ಡೆಕ್ಕನ್‌ ಹೆರಾಲ್ಡ್‌ ಹೇಳಿದೆ.

ಇತ್ತೀಚೆಗೆ ನಡೆದ ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲೂ ಒಬ್ಬ ಹಿರಿಯ ಸಚಿವನಿಗೆ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರಿಗೆ ದೂರು ನೀಡಿದ್ದರು. ಇಷ್ಟೇ ಅಲ್ಲದೆ ವಿರೋಧ ಪಕ್ಷದ ನಾಯಕರೊಂದಿಗೆ ‘ಹೊಂದಾಣಿಕೆ’ ಇರುವ ಮಂತ್ರಿಗಳ ಬಗ್ಗೆ ಕೂಡ ಕೇಂದ್ರ ನಾಯಕತ್ವವು ಅತೃಪ್ತಿಯಲ್ಲಿದೆ ಎಂದು ಮೂಲಗಳು ಹೇಳುತ್ತಿವೆ ಎಂದು ವರದಿ ಮಾಡಿದೆ.

“ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕೊನೆವರೆಗೂ ಯಾರೂ ಬಿಟ್ಟುಕೊಡುವುದಿಲ್ಲ. ಯಾಕೆಂದರೆ ಒಂದು ವೇಳೆ ಅದು ಬಹಿರಂಗವಾದರೆ ಆಡಳಿತ ಯಂತ್ರ ಕುಸಿದು ಬಿದ್ದು, ಮುಖ್ಯಮಂತ್ರಿಯ ಅಧಿಕಾರಕ್ಕೆ ಮನ್ನಣೆ ಸಿಗುವುದಿಲ್ಲ, ಹೀಗಾಗಿ ಕೊನೆವರೆಗೂ ಅದನ್ನು ಬಹಿರಂಗವಾಗಿ ಹೇಳುವುದಿಲ್ಲ. ಕಳೆದ ಬಾರಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವಾಗ ಕೂಡಾ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಕೊನೆವರೆಗೂ ಸಿಎಂ ಬದಲಾವಣೆ ಇಲ್ಲ ಎಂದೇ ಹೇಳಿದ್ದರು. ಆದರೆ ಕೊನೆಗೆ ಸಿಎಂ ಬದಲಾವಣೆ ಆಗಿತ್ತಲ್ಲವೇ” ಎಂದು ರಾಜಕೀಯ ವಿಶ್ಲೇಷಕರೊಬ್ಬರು ಹೇಳಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಪಕ್ಷವು ತನ್ನ ಸ್ಥಾನವನ್ನು ಹೆಚ್ಚಿಸಲು ಉತ್ಸುಕವಾಗಿರುವುದರಿಂದ, ಪ್ರಾದೇಶಿಕ ಅಸಮತೋಲನದ ಬಗ್ಗೆ ಎದ್ದಿರುವ ಆರೋಪಗಳನ್ನು ಪರಿಹರಿಸಲು ಸಂಪುಟ ಪುನರ್‍ ರಚನೆಗೆ ಪ್ರಯತ್ನಿಸುತ್ತಿದೆ. ಇದಲ್ಲದೆ, ಸತತ ಚುನಾವಣೆಗಳಲ್ಲಿ ಬಿಜೆಪಿಯನ್ನು ಬೆಂಬಲಿಸಿದ ಸಮುದಾಯಗಳ ಪ್ರತಿನಿಧಿಗಳಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗುವುದು ಎಂಬ ಸುದ್ದಿಯು ಕೆಲವು  ಮೂಲಗಳಿಂದ ತಿಳಿದು ಬಂದಿದೆ.

****

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights