ಜನ ಹೇಳಿದರೆ ರಾಜೀನಾಮೆಗೆ ಸಿದ್ದ: ಅಮಿತ್ ಶಾ
ಪಶ್ಚಿಮ ಬಂಗಾಳದಲ್ಲಿ ನಡೆದ ನಾಲ್ಕನೇ ಹಂತದ ಮತದಾನದ ವೇಳೆ ಸಿಐಎಸ್‌ಎಫ್ ಪಡೆ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ಕು ಜನರು ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬಂಗಾಳದ ಜನರು ಹೇಳಿದರೆ ತಾವು ರಾಜೀನಾಮೆಗೆ ಸಿದ್ದ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕೂಚ್ ಬಿಹಾರ್ ಜಿಲ್ಲೆಯ ಸೀತಾಲಕುಚಿ ಕ್ಷೇತ್ರದ 126ನೇ ಸಂಖ್ಯೆಯ ಮತಗಟ್ಟೆಯಲ್ಲಿ ಮತದಾನದ ವೇಳೆ ಗಲಾಟೆ ನಡೆದಿತ್ತು. ಈ ವೇಳೆ ಕೇಂದ್ರ ಸಿಐಎಸ್‌ಎಫ್ ಪಡೆ ಗುಂಡಿನ ದಾಳಿ ನಡೆಸಿತು. ಗುಂಡಿಗೆ ನಾಲ್ವರು ಮತದಾರರು ಮೃತ ಪಟ್ಟಿದ್ದಾರೆ. ಈ ಘಟನೆಗೆ ಗೃಹ ಸಚಿವ ಅಮಿತ್ ಶಾ ನೇರ ಹೊಣೆ. ಹೀಗಾಗಿ ಅವರು ರಾಜೀನಾಮೆ ನೀಡಬೇಕು ಎಂದು ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದರು.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಮಿತ್ ಶಾ, “ದೀದಿ (ಮಮತಾ) ನನ್ನ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಪಶ್ಚಿಮ ಬಂಗಾಳದ ಜನ ಹೇಳಿದರೆ ನಾನು ರಾಜೀನಾಮೆ ನೀಡುತ್ತೇನೆ. ಆದರೆ, ಮಮತಾ ಅವರು ಮೇ 2ರಂದು ಸ್ಥಾನ ತ್ಯಜಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ಸೋಲನುಭವಿಸಲಿದೆ. ಮೇ 2ರಂದು ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಒದಿ: ವಿದ್ಯಾರ್ಥಿಗಳ ನೃತ್ಯವನ್ನು ‘ಡಾನ್ಸ್ ಜಿಹಾದ್’ ಎಂದ ಸಂಘಿಗಳು; ಕೇರಳ ತಿರುಗೇಟು ಕೊಟ್ಟಿದ್ದು ಹೀಗೆ!

