ಕಾರ್ಮಿಕರ ಭವಿಷ್ಯಕ್ಕೆ ಬರೆ ಹಾಕಿದ ಮೋದಿ ಸರ್ಕಾರ; ಭವಿಷ್ಯ ನಿಧಿ ಬಡ್ಡಿದರ ಕಡಿತ!

ಒಂದೆಡೆ ಕೊರೊನಾ ವೈರಸ್‌ ಹರಡುವಿಕೆಯಿಂದ ಜನರು ಆರೋಗ್ಯದ ಜೊತೆಗೆ ಬದುಕನ್ನೂ ಕಳೆದುಕೊಂಡು ಪರದಾಡುತ್ತಿದ್ದಾರೆ. ಮತ್ತೊಂದೆಡೆ ದೇಶದ ಆರ್ಥಿಕತೆ ಅಧೋಗತಿಗೆ ಕುಸಿದಿದೆ. ಲಾಕ್‌ಡೌನ್‌ ನಂತರದಲ್ಲಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡು ಜೀವನ ನಿರ್ವಹಣೆಗೆ ಹರಸಾಹಸ ಪಡುತ್ತಿದ್ದಾರೆ. ಇದೆಲ್ಲದರ ನಡುವೆ ಕೇಂದ್ರ ಸರ್ಕಾರ, ಕಾರ್ಮಿಕರ ಭವಿಷ್ಯಕ್ಕೇ ಬರೆ ಎಳೆಯಲು ಮುಂದಾಗಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ ಕಾರ್ಮಿಕರ ಪಿಎಫ್ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡಲು ಮತ್ತೊಮ್ಮೆ ಮುಂದಾಗಿದೆ ಎಂಬ ವರದಿಗಳು ಹೇಳುತ್ತಿವೆ.

ಹೂಡಿಕೆ ಮೇಲಿನ ಆದಾಯ ಕ್ಷೀಣಿಸುತ್ತಿರುವ ಕಾರಣದಿಂದಾಗಿ ಪಿಎಫ್ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡುವ ಅನಿವಾರ್ಯ ಎದುರಾಗಿದೆ ಎಂದು ಹೇಳಲಾಗುತ್ತಿದೆ. 2019-20 ರ ಆರ್ಥಿಕ ವರ್ಷದಲ್ಲಿ ಪಿಎಫ್ ಮೇಲಿನ ಬಡ್ಡಿದರವನ್ನು ಶೇ.8.65 ರಿಂದ ಶೇ.8.55 ಕ್ಕೆ ಇಳಿಸಲಾಗಿದೆ. ಆದರೆ, ಇದನ್ನು ಹಣಕಾಸು ಸಚಿವಾಲಯ ಇನ್ನೂ ಅನುಮೋದಿಸಿಲ್ಲ. ಹಣಕಾಸು ಸಚಿವಾಲಯ ಅನುಮೋದನೆ ನೀಡಿದ ನಂತರ ಕಾರ್ಮಿಕ ಸಚಿವಾಲಯ ನೂತನ ಬಡ್ಡಿ ದರವನ್ನು ಜಾರಿಗೆ ತರಲಿದೆ.

ಎಕನಾಮಿಕ್ ಟೈಮ್ಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಪಿಎಫ್ ಮೇಲಿನ ಬಡ್ಡಿದರಗಳ ಬಗ್ಗೆ ನಿರ್ಧರಿಸಲು ಇಪಿಎಫ್ಒ ಶೀಘ್ರದಲ್ಲೇ ಹಣಕಾಸು ಇಲಾಖೆ, ಹೂಡಿಕೆ ಇಲಾಖೆ ಮತ್ತು ಲೆಕ್ಕಪರಿಶೋಧನಾ ಸಮಿತಿಯೊಂದಿಗೆ ಸಭೆ ನಡೆಸಲಿದೆ.

ಈ ಸಭೆಯು ಪಿಎಫ್‌ನಲ್ಲಿ ಪಾವತಿಸಲು ಇಪಿಎಫ್ಒ ನೀಡಬಹುದಾದ ಬಡ್ಡಿದರಗಳ ಬಗ್ಗೆ ನಿರ್ಧರಿಸುತ್ತದೆ. ಅಸಲಿಗೆ ಇಪಿಎಫ್ಒ ತನ್ನ ಒಟ್ಟು ನಿಧಿಯ ಶೇ.85ರಷ್ಟನ್ನು ಸಾಲ ಮಾರುಕಟ್ಟೆಯಲ್ಲಿ (ಬಾಂಡ್‌ಗಳು) ಹೂಡಿಕೆ ಮಾಡಿದ್ದರೆ, ಉಳಿದ ಶೇ.15 ರಷ್ಟು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಇಟಿಎಫ್ ಮೂಲಕ ಹೂಡಿಕೆ ಮಾಡಿದೆ.

ಕಳೆದ ವರ್ಷದ ಮಾರ್ಚ್ ಅಂತ್ಯದ ವೇಳೆಗೆ, ಇಪಿಎಫ್ಒ ಷೇರುಗಳಲ್ಲಿ ಒಟ್ಟು ಹೂಡಿಕೆ 74,324 ಕೋಟಿ ಆಗಿತ್ತು ಮತ್ತು ಈ ಹೂಡಿಕೆಯ ಮೇಲೆ ಇಪಿಎಫ್‌ಒ ಶೇ. 14.74 ರಷ್ಟು ಲಾಭವನ್ನು ಗಳಿಸಿತ್ತು.

ಇಪಿಎಫ್ಒ ಲಾಭದಲ್ಲಿದ್ದರೂ ಬಡ್ಡಿದರಗಳನ್ನು ಏಕೆ ಕಡಿಮೆ ಮಾಡಲಾಗುತ್ತದೆ? ಎಂಬುದು ಪ್ರಮುಖ ಪ್ರಶ್ನೆ. ಅಸಲಿಗೆ ಇಪಿಎಫ್ಒ 18 ಲಕ್ಷ ಕೋಟಿಗಿಂತ ಹೆಚ್ಚು ಹೂಡಿಕೆ ಮಾಡಿದೆ. ಈ ಮೊತ್ತದಲ್ಲಿ ಎನ್‌ಬಿಎಫ್‌ಸಿಗಳಾದ ದಿವಾನ್ ಹೌಸಿಂಗ್ ಮತ್ತು ಐಎಲ್ ಆಂಡ್ ಎಫ್ಎಸ್‌ನಲ್ಲಿ 4,500 ಕೋಟಿ ರೂ ಹೂಡಿಕೆ ಮಾಡಿದೆ.

ಇನ್ನೂ ಡಿಎಚ್ಎಫ್ಎಲ್ ದಿವಾಳಿತನ ಪರಿಹಾರ ಪ್ರಕ್ರಿಯೆಯ ಮೂಲಕ ಸಾಗುತ್ತಿದ್ದರೆ, ಐಎಲ್ ಮತ್ತು ಎಫ್ಎಸ್ ಉಳಿಸಲು ಸರ್ಕಾರ ಸಕಲ ಪ್ರಯತ್ನಗಳನ್ನು ಮಾಡುತ್ತಿದೆ. ಆದ್ದರಿಂದ ಇಪಿಎಫ್ಒನ ದೊಡ್ಡ ಪ್ರಮಾಣದ ನಿಧಿ ಈ ಎರಡು ಕಂಪನಿಗಳಲ್ಲಿ ಸಿಲುಕಿಕೊಂಡಿದೆ. ಇದೇ ಕಾರಣಕ್ಕೆ ಕಾರ್ಮಿಕರ ಪಿಎಫ್‌ ಬಡ್ಡಿ ದರದಲ್ಲಿ ಕಡಿತ ಮಾಡಲು ಉದ್ದೇಶಿಸಲಾಗಿದೆ ಎನ್ನಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights