ಕನ್ನಡ ಚಿತ್ರರಂಗದಲ್ಲಿ ಶುರುವಾಗುತ್ತಿದೆ ಹೊಸ ಅಲೆ; ಚಿತ್ರರಂಗದ ಚಹರೆ ಬದಲಿಸುವುದೇ FUC

ಸ್ಯಾಂಡಲ್‍ವುಡ್ ಸಿನಿಮಾರಂಗ ಒಂದನ್ನು ಹೊರತು ಪಡಿಸಿ ಉಳಿದೆಲ್ಲಾ ಸಿನಿಮಾ ಉದ್ದಿಮೆಗಳು ಹೊಸ ತರದ ಸಿನಿಮಾ ನಿರ್ಮಾಣಕ್ಕೆ ತೆರೆದುಕೊಂಡಿವೆ. ಆದರೆ, ಸ್ಯಾಂಡಲ್‍ವುಡ್ ಮಾತ್ರ ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬಿದ್ದಿದೆ. ಸಿನಿಮಾ ನಾಯಕ-ನಾಯಕಿಯರ ಪ್ರಣಯ, ರೌಡಿಸಂ, ಇಲ್ಲದೇ ಇರೋ ಬಿಲ್ಡಪ್‍ಗಳು ಇವೇ ಇಂದಿಗೂ ಕನ್ನಡ ಸಿನಿಮಾ ಇಂಡಸ್ಟ್ರಿಯ ಬಹುಸಂಖ್ಯಾತ ಚಲನಚಿತ್ರಗಳ ಕತೆಗಳಾವೆ. ಹೊಸ ಪ್ರಯೋಗಗಳಿಲ್ಲ, ಸಿನಿಮಾದಲ್ಲಿ ಹೊಸತನವಿಲ್ಲ ಎಂಬುದು ಹಲವಾರು ಕನ್ನಡ ಸಿನಿ ಅಭಿಮಾನಿಗಳ ಆರೋಪ.

ಇಂತಹ ಆರೋಪಗಳಿಂದ ಕನ್ನಡ ಚಿತ್ರರಂಗವನ್ನು ಮುಕ್ತಗೊಳಿಸಲು ಒಂದು ತಂಡ ಮುಂದಾಗಿದೆ. ಕನ್ನಡ ಪಿಲ್ಮ್‍ಮೇಕರ್ಸ್ ಯುನೈಟೆಡ್ ಕ್ಲಬ್ (ಎಫ್‍ಯುಸಿ) ಅಂತಹ ಹೊಸ ಚಿಂತನೆಗಳಿಗೆ ವೇದಿಕೆಯಾಗಿದೆ. ಕೊರೊನಾ ಲಾಕ್‍ಡೌನ್ ಸಂದರ್ಭವನ್ನು ಸಿನಿಮಾ ಕ್ಷೇತ್ರದ ಕೆಲವರು ಹೊಸ ರೀತಿ ಪ್ರಯೋಗಾತ್ಮಕ ಚಿಂತನೆಗೆ ಬಳಸಿಕೊಂಡಿದ್ದಾರೆ.

ಕನ್ನಡ ಚಿತ್ರರಂದಲ್ಲಿ ಇದೂವರೆಗರೂ ರೀಚ್ ಆಗಿರದಂತಹ, ಕೊಂಡುಕೊಳ್ಳಲು ಸಾಧ್ಯವಾಗದೇ ಇರುವ ವಿಚಾರಗಳನ್ನು ಅನ್ವೇಷಿಸುವ ತುಡಿತ ಉಳ್ಳಂತಹ ನಿರ್ದೇಶಕರಿಗೆ ಈ ವೇದಿಕೆ ತೆರೆದುಕೊಂಡಿದೆ. ಜೊತೆಗೆ ಪ್ರೇಕ್ಷಕರು ಕೇಲವ ಥಿಯೇಟರ್‍ಗಳಲ್ಲಿ ಸಿನಿಮಾಗಳನ್ನು ನೋಡಿ ಶಿಳ್ಳೆ ಹೊಡೆಯುದಕ್ಕೇ ಸೀಮಿತವಾಗಿರಬಾರದು, ಸಿನಿಮಾ ನಿರ್ಮಾಣದಲ್ಲಿ ಪ್ರೇಕ್ಷಕರ ಪಾತ್ರವೂ ಇರಬೇಕು ಎಂಬ ಕಾರಣಕ್ಕಾಗಿ ಸದಭಿರುಚಿಯ ಸಿನಿಮಾಗಳ ನಿರ್ಮಾಣಕ್ಕೆ ಪ್ರೇಕ್ಷಕರ ಸಲಹೆ, ಅಭಿಪ್ರಾಯಗಳನ್ನು ಪಡೆದುಕೊಳ್ಳುವ, ಅವರನ್ನೂ ಭಾಗಿಯಾಗಿಸಿಕೊಳ್ಳುವ ಒತ್ತಾಸೆಯನ್ನೂ ಎಫ್‍ಯುಸಿ ಹೊಂದಿದೆ.

ಕನ್ನಡ ಚಿತ್ರರಂದಲ್ಲಿ ಹೊಸ ಮಜಲು ಸೃಷ್ಟಿಯಾಗಬೇಕು. ಆದರೆ, ಸಿನಿಮಾ ನಿರ್ದೇಶಕರು ತಮ್ಮ ಸೃಜನಶೀಲತೆಗೆ ತಕ್ಕಂತೆ ಸಿನಿಮಾ ಮಾಡುವುದು ಇಂದಿನ ಕಾಲಘಟ್ಟದಲ್ಲಿ ಕೊಂಚ ಸವಾಲೇ ಆಗಿದೆ. ಬಹುತೇಕ ಸಿನಿಮಾಗಳಲ್ಲಿ ಬಂಡವಾಳ ಹೂಡುವ ನಿರ್ಮಾಪಕರ ಅಭಿರುಚಿಗೆ ತಕ್ಕಂತೆ ಅಥವಾ ಸಿನಿಮಾ ಖರೀದಿಸುವ ಕಾರ್ಪೊರೇಟ್‌ ಟಿವಿ ವಾಹಿನಿಗಳ ಒತ್ತಾಯದಂತೆ ಸಿನಿಮಾ ಕತೆ ಅಥವಾ ನಿರ್ದೇಶನವಿರುತ್ತದೆ. ಇಂತಹ ಸಂದರ್ಭದಲ್ಲಿ ನಿರ್ದೇಶಕನ ಸೃಜನಶೀಲತೆಗೆ ಹೆಚ್ಚಿನ ಮಹತ್ವ ಸಿಗಲಾರದು ಎಂಬುದು ಎಫ್‍ಯುಸಿ ಕಟ್ಟಲು ಹೊರಟಿರುವವರ ವಾದ. ಅದು ಸತ್ಯವೂ ಹೌದು.

ಆ ಕಾರಣಕ್ಕಾಗಿಯೇ, ನಿರ್ಮಾಪಕರ ಸಿನಿಮಾ ಅಭಿರುಚಿಯನ್ನೂ ಮೀರಿ ಪ್ರೇಕ್ಷಕರನ್ನು ತಲುಪಲು, ಪ್ರೇಕ್ಷಕರಿಗೆ ಹೊಸ ಬಗೆಯ ಚಿತ್ರಗಳ ಬಗೆಗೆ ಅರಿವು ಮತ್ತು ಸದಭಿರುಚಿಯನ್ನು ಬೆಳೆಸಲು ಎಫ್‍ಯುಸಿ ಮುಂದಾಗಿದೆ.

ಎಫ್‍ಯುಸಿಯಲ್ಲಿ ಕೇವಲ ಸಿನಿಮಾ ಇಂಡಸ್ಟ್ರಿಯ ನಿರ್ದೇಶಕರು, ನಿರ್ಮಾಪಕರು ಹಾಗೂ ಕಲಾವಿದರಿಗಷ್ಟೇ ಅಲ್ಲದೆ, ಪ್ರೇಕ್ಷಕರಿಗೂ ಸದಸ್ಯತ್ವವನ್ನು ನೀಡಲಾಗುತ್ತಿದ್ದು, ಪ್ರೇಕ್ಷಕರೂ ಇದು ತಮ್ಮದು ಎಂದು ಭಾವಿಸಬೇಕು; ನಿರ್ಮಾಣವಾಗುವ ಸಿನಿಮಾಗಳು ತಮ್ಮದೆಂದು ಭಾವಿಸಬೇಕು; ಪ್ರೇಕ್ಷಕರು ಸಿನಿಮಾಗಳಿಗೆ ಸಪೋರ್ಟ್‌ ಮಾಡಬೇಕು; ಪ್ರೇಕ್ಷಕರ ಹೊಸ ಅಭಿರುಚಿಗೆ ಹಾಗೂ ಸಾಮಾಜಿಕ ಸದಭಿರುಚಿಯ ಕತೆ ಬರೆಯುವುದರಲ್ಲಿ ಅವರೂ ಪಾಲುದಾರರಾಗಬೇಕು; ಎಂಬ ಧೋರಣೆಯನ್ನು ಎಫ್‍ಯುಸಿ ತನ್ನದಾಗಿಸಿಕೊಂಡಿದೆ.

ಇದರಿಂದಾಗಿ ಸಿನಿಮಾ ಕ್ಷೇತ್ರದಲ್ಲಿ ಹೊಸ ಭರವಸೆಯನ್ನು ಕಟ್ಟಿಕೊಡಲು ಸಾಧ್ಯವಾಗುತ್ತದೆ. ಟಿವಿ, ಥಿಯೇಟರ್‍ಗಳ ಮಾಲೀಕರ ಕಮರ್ಷಿಯಲ್ ಬೇಡಿಕೆಯೂ ಸಾಮಾಜಿಕ ಸದಭಿರುಚಿಯೊಂದಿಗೆ ಬೆಸೆದುಕೊಳ್ಳುತ್ತದೆ. ಚಿತ್ರರಂಗ ಮತ್ತು ಸಿನಿಪ್ರಿಯರ ನಡುವಿನ ಮತ್ತೊಂದು ಹಂತದ ಸಂಬಂಧ ಕಟ್ಟಿಕೊಳ್ಳಬಹುದು ಎಂಬುದನ್ನು ಎಫ್‍ಯುಸಿ ಸಾರಲು ಮುಂದಾಗಿದೆ.

ಈಗಾಗಲೇ ಕೆಲವು ನಿರ್ದೇಶಕರು ವಿಭಿನ್ನ ರೀತಿಯಲ್ಲಿ ಎಕ್ಸ್ಪೆರಿಮೆಂಟಲ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಜಯತೀರ್ಥ ನಿರ್ದೇಶನದ ಬೆಲ್‍ಬಾಟಮ್, ಮನ್ಸೊರೆಯವರ ನಾತಿಚರಾಮಿ, ಸತ್ಯಪ್ರಕಾಶ್ ಅವರ ರಾಮರಾಮರೇ, ಆದರ್ಶ್ ಈಶ್ವರಪ್ಪನವರ ಶುದ್ದಿ, ಅಭಯ್ ಸಿಂಹರ ಪಡ್ಡಾಯ್ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂದದಲ್ಲಿ ಮೂಡಿದ ಹೊಸಬಗೆಯ ಸಿನಿಮಾಗಳು. ಇಂತಹ ನಿರ್ದೇಶಕರ ಅಭಿರುಚಿಗೆ ತಕ್ಕಂತ ಸಿನಿಮಾಗಳನ್ನು ಮಾಡುವ ಉದ್ದೇಶದಿಂದ ಎಫ್‍ಯುಸಿವಿನಲ್ಲಿ ಹೊಸದೊಂದು ಪ್ರೋಸೆಸ್ ಆರಂಭವಾಗಿದೆ.

ಆರಂಭವಾಗಿರುವ ಈ ಪ್ರೋಸೆಸ್‌ನಲ್ಲಿ ಸದಭಿರುಚಿಯುಳ್ಳ ಪ್ರಯೋಗಾತ್ಮಕ ನಿರ್ಮಾಪಕ-ನಿರ್ದೇಶಕರೂ ಜೊತೆಗೂಡುತ್ತಿದ್ದಾರೆ. ಪವನ್ ಕುಮಾರ್, ಯೋಗರಾಜ್ ಭಟ್, ಅರವಿಂದ್ ಶಾಸ್ತ್ರಿ, ಆದರ್ಶ್ ಈಶ್ವರಪ್ಪ, ಕವಿತಾ ಲಂಕೇಶ್, ಶಶಾಂಕ್, ಎಎಂಆರ್ ರಮೇಶ್ ಮತ್ತು ಜಯತಿರ್ಥರನ್ನೊಳಗೊಂಡು ಆರಂಭವಾದ ಎಫ್‍ಯುಸಿಯಲ್ಲಿ ಸದ್ಯಕ್ಕೆ 25 ನಿರ್ದೇಶಕರು ಜೊತೆಗೂಡಿದ್ದಾರೆ.

ಕನ್ನಡ ಇಂಡಸ್ಟ್ರಿಯನ್ನು ಗಮನದಲ್ಲಿಟ್ಟುಕೊಂಡು ಆರಂಭವಾದ ಎಫ್‍ಯುಸಿಗೆ ಕಾಲಿವುಡ್‍ನ ಜಲ್ಲಿಕಟ್ಟು ಸಿನಿಮಾದ ನಿರ್ದೇಶಕ ಲಿಜೊ ಜೋಸ್ ಪೆಲ್ಲಿಸ್ಸೆರಿ ಅವರಂತಹ ಅನ್ಯ ಭಾಷಾ ಸಿನಿಮಾ ನಿರ್ದೇಶಕರೂ ಜೊತೆಗೂಡುತ್ತಿರುವುದು ವಿಶೇಷ.

www.thefuc.in ಹೆಸರಿನಲ್ಲಿ ವೆಬ್ ಸೈಟ್ ಆರಂಭಿಸಿದ್ದು, ವೆಬ್‍ಸೈಟ್ ಮೂಲಕ ಜನರಿಗೆ ಸಿನಿಮಾ, ಸ್ಕ್ರೀನ್ ಪ್ಲೆ, ಸ್ಕ್ರಿಪ್ಟ್ ಕಂಟೆಂಟ್ ಎಂದರೇನು, ಸಿನಿಮಾ ಮತ್ತು ನಾಟಕ ವ್ಯತ್ಯಾಸ, ಕತೆ, ಜಾಗತಿಕ ಮಟ್ಟದಲ್ಲಿ ಸಿನಿಮಾಗಳ ಹೇಗೆ ಬರುತ್ತಿವೆ ಇತ್ಯಾದಿ ವಿಷಯಗಳನ್ನು ಚರ್ಚೆ ಮಾಡಿ ಅರ್ಥ ಮಾಡಿಸುವ ಹೊಸ ಪ್ರಯೋಗವನ್ನೂ ಎಫ್‍ಯುಸಿ ಮಾಡುತ್ತಿದೆ.

“ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್‍ಟಿಐಐ) ಸಿನೆಮಾ ಅಧ್ಯಯನ ಮಾಡಲು ಹೆಸರಾಂತ ಸಂಸ್ಥೆಯಾಗಿದೆ. ಅದೇ ರೀತಿಯಲ್ಲಿ ಸಣ್ಣ ಪ್ರಮಾಣದಲ್ಲಿ ಸಿನಿಮಾ ಸಂಬಂಧಿಸಿದ ಸೃಜನಶೀಲ, ತಾಂತ್ರಿಕ ಮತ್ತು ವ್ಯವಹಾರದ ಅಂಶಗಳ ಬಗ್ಗೆ ಕಲಿಯಲು ಯುವಕರಿಗೆ ಎಫ್‍ಯುಸಿ ಸಹಾಯ ಮಾಡಲು ಮುಂದಾಗಿದೆ ಎಂದು ಎಫ್‍ಯುಸಿ ತಂಡ ಹೇಳುತ್ತಿದೆ. ಇದರೊಂದಿಗೆ ಒಂದು ನಿರ್ದಿಷ್ಟ ಗುರಿಯಲ್ಲಿ ಕೆಲಸ ಮಾಡುವವರನ್ನು ಉತ್ತೇಜಿಸಲು ಉತ್ಸುಕವಾಗಿದೆ.

ಉತ್ತಮ ಆಲೋಚನೆ ಮತ್ತು ಸೃಜನಶೀಲತೆಯೊಂದಿಗೆ ಆರಂಭವಾಗಿರುವ ಎಫ್‍ಯುಸಿ ಬಹಳ ದೂರ ಸಾಗಬೇಕಿದೆ. ಅದು ಸಾಗಬೇಕಾದರೆ ಸದಸ್ಯರಿಂದ ನಿರಂತರ ಬದ್ಧತೆ ಮುಖ್ಯ. ಅದಕ್ಕೆ ತಕ್ಕಂತೆ ಸಿನಿಪ್ರೇಮಿಗಳ ಬೆಂಬಲವೂ ಅಗತ್ಯ. ಹಾಗೆಯೇ ನಾಡು, ನುಡಿ, ಸಾಮಾಜಿಕ ಘರ್ಷಣೆಗಳು, ಸಮಾನತೆ, ಪ್ರತಿನಿಧಿತ್ವ ಮುಂತಾದ ಪ್ರಸಕ್ತ ಕಾಡುತ್ತಿರುವ ಸಂಗತಿಗಳನ್ನೂ ಈ ತಂಡ ಅಧ್ಯಯನದ ಭಾಗವನ್ನಾಗಿಸಿಕೊಳ್ಳುವುದು ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಅತ್ಯವಶ್ಯಕ. ನೆರೆಯ ತಮಿಳು ನಾಡಿನ ಪ ರಂಜಿತ್, ವೆಟ್ರಿಮಾರನ್ ನಂತಹ ಹಲವಾರು ಸಾಮಾಜಿಕ ಬದ್ಧತೆಯ ನಿರ್ದೇಶಕರನ್ನೂ ಜೊತೆಗೂಡಿಸಿಕೊಂಡರೆ ಒಟ್ಟಿಗೆ ಬೆಳೆಯುವ ಸಾಧ್ಯತೆ ಕೂಡ ಇದೆ. ಇವುಗಳೆಲ್ಲದರ ಜೊತೆಗೆ ಇನ್ನಷ್ಟು ಸಮಸ್ಯೆ, ಸವಾಲುಗಳನ್ನೂ ಎದುರಿಸಬೇಕಾಗಬಹುದು. ಇದೆಲ್ಲವನ್ನೂ ಫೇಸ್ ಮಾಡಿ ಪರಸ್ಪರ ಸಹಕಾರ ಮತ್ತು ಸ್ಪೂರ್ತಿಯೊಂದಿಗೆ ಮುನ್ನಡೆದರೆ ಎಫ್‍ಯುಸಿ ಯಶಸ್ಸು ಸಾಧಿಸಬಲ್ಲದು. ಏನೇ ಇರಲಿ, ಕನ್ನಡ ಚಿತ್ರರಂಗದಲ್ಲಿ ಪಾರಂಪರಿಕ ರೀತಿಯ ಮರ ಸುತ್ತುವ ಸಿನಿಮಾಗಳ ಮಧ್ಯೆ ಹೊಸ ಪ್ರಯೋಗ ಆರಂಭವಾಗಿರುವುದು ಹೊಸ ಭರವಸೆಯನ್ನು ಹುಟ್ಟುಹಾಕಿದೆ.

– ಸೋಮಶೇಖರ್ ಚಲ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights