ಬೆಂಗಳೂರಿನ ಇತಿಹಾಸದಲ್ಲಿ ದಾಖಲೆ ಬರೆದ ಮಳೆಯ ಪ್ರಮಾಣ 185.5 ಮಿ.ಮೀ!

ರಾಜ್ಯದ ರಾಜಧಾನಿ ಬೆಂಗಳೂರು ಪ್ರತಿ ವರ್ಷವೂ ಮಳೆಗಾಲದಲ್ಲಿ ತೋಯ್ತು ಹೋಗುತ್ತದೆ. ಧಾರಾಕಾರವಾಗಿ ಸುರಿಯುವ ಮಳೆಯ ಅಬ್ಬರಕ್ಕೆ ಮರಗಳು, ಕಂಬಗಳಷ್ಟೇ ಅಲ್ಲದೆ ಕಟ್ಟಡಗಳೂ ನೆಲ ಕಚ್ಚುತ್ತವೆ. ಪ್ರತಿದಿನ ಸಂಗ್ರಹವಾಗುವ ಕಸದ ರಾಶಿಯಿಂದ ವಾಸನೆಯ ಗಬ್ಬು ಕೂಡ ಅದೇ ರೀತಿಯಲ್ಲಿ ನಗರವನ್ನು ಆವರಿಸುತ್ತದೆ.

ಇಷ್ಟೆಲ್ಲಾ ಆದರೂ, ನಿನ್ನೆ ಮಾತ್ರ ಬೆಂಗಳೂರಿನಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ನಿನ್ನೆ ದಾಖಲೆಯ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಹಿಂದೆ 2017 ಆಗಸ್ಟ್ 15ರಂದು 182 ಮಿ.ಮೀ. ದಾಖಲೆಯ ಮಳೆಯಾಗಿತ್ತು. ಆದರೆ, ನಿನ್ನೆ ಒಂದೇ ದಿನ ನಗರದಲ್ಲಿ 185.5 ಮಿ.ಮೀಟರ್‌ ಮಳೆಯಾಗುವ ಮೂಲಕ ಹಳೆಯ ಎಲ್ಲಾ ದಾಖಲೆಗಳು ಇದೀಗ ಇತಿಹಾಸದ ಪುಟ ಸೇರಿವೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ನಿನ್ನೆ ಬೆಂಗಳೂರು ಸೇರಿದಂತೆ ಹಲವೆಡೆ ಭಾರೀ ಪ್ರಮಾಣದಲ್ಲಿ ಮಳೆಯಾಗಿತ್ತು. ಕೆಂಗೇರಿ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿತ್ತು. ಆದರೆ, ಇಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್ ಶ್ರೀನಿವಾಸ ರೆಡ್ಡಿ ಮಾಹಿತಿ ನೀಡಿದ್ದು, “ಒಂದೇ ದಿನ ಬೆಂಗಳೂರಿನಲ್ಲಿ ಇಷ್ಟು ಪ್ರಮಾಣದಲ್ಲಿ ಮಳೆಯಾಗಿಲ್ಲ” ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇನ್ನು ಮುಂದಿನ  3-4 ದಿನಗಳ ಕಾಲ ಬೆಂಗಳೂರಿನಲ್ಲಿ ಸಂಜೆ ವೇಳೆ ಭಾರಿ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಬೆಂಗಳೂರಿನ ಜನ ಸಂಜೆ ವೇಳೆಯಲ್ಲಿ ಎಚ್ಚರಿಕೆಯಿಂದ ರಸ್ತೆಗೆ ಇಳಿಯುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಇದಲ್ಲದೆ, “ಜೂನ್. 29 ರಿಂದ ಮತ್ತೆ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಮಳೆಯಾಗಿಲ್ಲ. ಉತ್ತರ ಒಳನಾಡಿನಲ್ಲಿ ಮಳೆ ಪ್ರಮಾಣ ಅಧಿಕವಾಗಿದೆ. ನಿನ್ನೆ ಪ್ರಮಾಣ ನೋಡಿದಾಗ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಹೆಚ್ಚು ಪ್ರಮಾಣದಲ್ಲಿ ‌ಮಳೆಯಾಗಿಲ್ಲ. ಈ ಭಾಗದಲ್ಲಿ ಇದೇ 29 ರ ನಂತರ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ

ಮುಂದಿನ ಒಂದು ವಾರ ರಾಜ್ಯದಲ್ಲಿ ಅಲ್ಲಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ
ಸಂಜೆ ವೇಳೆ ಹೆಚ್ಚಾಗಿ‌ ಮಳೆ ಬರಲಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೂ ಮಾಹಿತಿ ಕೊಟ್ಟಿದ್ದೇವೆ. ಮಳೆ ಬಂದ ಸಂದರ್ಭದಲ್ಲಿ ಜನ ಎಚ್ಚರದಿಂದ ಇರಬೇಕಾಗುತ್ತದೆ.

ಮುಂಗಾರು ಮಳೆಯಲ್ಲಿ ಗಾಳಿಯ ತೀವ್ರತೆ ಕಡಿಮೆ ಇರಲಿದೆ” ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights