ಮಸ್ಕಿ ಉಪಚುನಾವಣೆಗೆ ಕಾಂಗ್ರೆಸ್‌ ಹೊಸ ತಂತ್ರ; ಸಿದ್ದರಾಮಯ್ಯ ನೇತೃತ್ವದಲ್ಲಿ ಅಖಾಡಕ್ಕಿಳಿದ ಕಾಂಗ್ರೆಸ್‌!

ಮೈತ್ರಿ ಸರ್ಕಾರ ಪತನಗೊಂಡ ನಂತರ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ ಭಾರಿ ಸೋಲು ಕಂಡಿದೆ. ಸದ್ಯ ಇನ್ನೂ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ಮತ್ತು ಒಂದು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ. ಈ ಮೂರು ಉಪಚುನಾವಣೆಯಲ್ಲಾದರೂ ಕಾಂಗ್ರೆಸ್‌ ಗೆಲುವಿನ ನಗೆ ಬೀರಲೇಬೇಕು ಎಂದು ಪಣ ತೊಟ್ಟಿದೆ. ಇದಕ್ಕಾಗಿ ಈಗಾಗಲೇ ಸಿದ್ದತೆ ಆರಂಭಿಸಿದ್ದು, ಹೊಸ ತಂತ್ರಗಳನ್ನು ಎಣೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಈ ಕ್ಷೇತ್ರಗಳಲ್ಲಿ ಪ್ರವಾಸ ಕೈಕೊಂಡಿದ್ದು, ಕಾರ್ಯಕರ್ತರನ್ನು ಹುರಿದುಂಬಿಸುವ ಪ್ರಯತ್ನದಲ್ಲಿದ್ದಾರೆ. ನಿನ್ನೆ (ಭಾನುವಾರ) ಮಸ್ಕಿಯಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಬಿಜೆಪಿಯಲ್ಲಿದ್ದ ಬಸನಗೌಡ ತುರ್ವಿಹಾಳ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು, ಉಪಚುನಾವಣೆಗೆ ಅವರೇ ಕಾಂಗ್ರೆಸ್‌ ಅಭ್ಯರ್ಥಿ ಎಂಬುದು ಬಹುತೇಕ ಖಚಿತವಾಗಿದೆ.

ಕಳೆದ ಚುನಾವಣೆಯಲ್ಲಿ ಮಸ್ಕಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ ವಿರುದ್ದ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ತುರವಿಹಾಳ, ಕೇವಲ 213 ಮತಗಳ ಅಂತರದಿಂದ ಸೋಲನುಭವಿಸಿದ್ದರು. ಆದರೆ, ಪ್ರತಾಪಗೌಡ ಪಾಟೀಲ್‌ ಕಾಂಗ್ರೆಸ್‌ಗೆ ಟಾಟಾ-ಬೈಬೈ ಹೇಳಿ ಬಿಜೆಪಿ ಸೇರಿದ್ದಾರೆ. ಹಾಗಾಗಿ ಬಿಜೆಪಿಯಿಂದ ಪ್ರತಾಪಗೌಡ ಸ್ಪರ್ಧಿಸಲಿದ್ದು, ಬಸನಗೌಡಗೆ ಬಿಜೆಪಿ ಟಿಕೆಟ್‌ ಸಿಗಲ್ಲ ಎಂಬ ಕಾರಣದಿಂದಾಗಿ ತನ್ನ ಪ್ರಭಾವ ಉಳಿಸಿಕೊಳ್ಳಲು ಬಸನಗೌಡ ಕಾಂಗ್ರೆಸ್‌ ಸೇರಿದ್ದಾರೆ. ಉಪಚುನಾವಣೆಯಲ್ಲಿ ಇಬ್ಬರೂ ಕಣಕ್ಕಿಳಿಯುತ್ತಿದ್ದು, ಪಕ್ಷಗಳು ಮಾತ್ರ ಅದಲು ಬದಲಾಗಲಿವೆ.

ಮಸ್ಕಿಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆಯಲ್ಲಿ ಎದುರಿಸಲು ನಿರ್ಧರಿಸಲಾಗಿದ್ದು, ಸಿದ್ದರಾಮಯ್ಯ ಕೂಡ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ನಿನ್ನೆ ಸಮಾವೇಶದಲ್ಲಿ ಮಾಡಿದ ಸಿದ್ದರಾಮಯ್ಯ, “ರಾಜ್ಯದಲ್ಲಿ ಬಿಜೆಪಿ ಯಾವಾಗಲೂ ಜನರಿಂದ ಬಹುಮತದಿಂದ ಆಯ್ಕೆಯಾಗಿಲ್ಲ, ದೇಶದಲ್ಲಿಯೇ ಆಪರೇಷನ್ ಕಮಲ ಎಂಬುವುದನ್ನು ತಂದಿದ್ದಾರೆ. ಕೋಟಿ ಕೋಟಿ ಹಣ ಕೊಟ್ಟು ಶಾಸಕರನ್ನು ಖರೀದಿಸಿದ್ದಾರೆ. ಈ ಹಿಂದೆ ಯಡಿಯೂರಪ್ಪ ಚೆಕ್ ಮೂಲಕ ಹಣ ಪಡೆದಿದ್ದರು. ಈಗ ಅವರ ಮಗ ಆರ್​ಟಿಜಿಎಸ್ ಮೂಲಕ ಹಣ ಪಡೆಯುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: BJP ಆಡಳಿತ ನಡೆಸಲು ವಿಫಲವಾದರೂ ಚುನಾವಣೆಗಳನ್ನು ಗೆಲ್ಲುತ್ತದೆ! ಹೇಗೆ ಗೊತ್ತೇ?!

“ಕೊರೋನಾ ಸಂದರ್ಭದಲ್ಲಿ ಸಾಮಾಗ್ರಿಗಳನ್ನು ಖರೀದಿಯಲ್ಲಿ 2000 ಕೋಟಿ ರೂಪಾಯಿ ಹಣ ಹೊಡೆದಿದ್ದಾರೆ. ಯಡಿಯೂರಪ್ಪ ರಿಗೆ ನಾಚಿಗೆಯಾಗಬೇಕು. ಇನ್ನೂ ಕೊರೋನಾದಂಥ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೊರೋನಾ ಔಷಧಿ ತಯಾರಿಕೆ ಹಾಗೂ ಸೋಂಕನ್ನು ತಡೆಯುವ ಕುರಿತು ಕ್ರಮ ಕೈಗೊಳ್ಳದೇ ದೀಪ ಹಚ್ಚಿ, ಚಪ್ಪಾಳೆ ಬಡಿಯಿರಿ ಎಂದು ತಮಾಷೆ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.

“ಕಾಂಗ್ರೆಸ್ಸಿನಿಂದ ಗೆದ್ದಿದ್ದ ಪ್ರತಾಪಗೌಡ ಪಾಟೀಲ ಪಕ್ಷಕ್ಕೆ ದ್ರೋಹ ಬಗೆದು ಹೋಗಿದ್ದಾರೆ, ಮೊದಲು ಬಾರಿ ಬಿಜೆಪಿಯಿಂದ ಗೆದ್ದಿದ್ದು ನಂತರ ಕಾಂಗ್ರೆಸ್ ಸೇರಲು ಬಂದಾಗ ವಿಭೂತಿ ಹಚ್ಚಿಕೊಂಡು ಬಂದಿದ್ದ, ಈ ಬಿಜೆಪಿಯವರನ್ನು ಹೇಗೆ ನಂಬೋದು ಎಂಬ ಅನುಮಾನವಿತ್ತು. ಆದರೆ, ಈಗ ಮತ್ತೆ ಪಕ್ಷಕ್ಕೆ ದ್ರೋಹ ಬಗೆದು ತಮ್ಮ ಅನುಮಾನವನ್ನು ಸಾಬೀತು ಮಾಡಿದ್ದಾರೆ” ಎಂದಿದ್ದಾರೆ.

“ಕಾಂಗ್ರೆಸ್ ಮುಳುಗುವ ಹಡಗು ಎನ್ನುತ್ತಾರೆ. ಹಾಗದರೆ ನಮ್ಮ ಪಕ್ಷದಿಂದ ಗೆದ್ದವರನ್ನು ಹೇಗೆ ಸೇರಿಸಿಕೊಂಡಿರಿ. ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ ಹೇಗೆ ಮಾಡಿದಿರಿ. ಪ್ರತಾಪಗೌಡ ಪಾಟೀಲ ಈಗ ಬಿಜೆಪಿ ಸೇರಿದ್ದಾರೆ. ಅವರೊಂದಿಗೆ ಕೆಲವು ಕಾಂಟ್ರಕ್ಟರಗಳು ಹೋಗುತ್ತಾರೆ. ಈ ಚುನಾವಣೆಯಲ್ಲಿ ಬಸನಗೌಡ ತುರ್ವಿಹಾಳ 20 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ” ಎಂದು ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಬಸವಕಲ್ಯಾಣ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಮೇಲೂ ಹೆಚ್ಚು ಒತ್ತು ಕೊಟ್ಟಿರುವ ಕಾಂಗ್ರೆಸ್‌, ಸಕ್ರಿಯವಾಗಿ ಸಂಘಟನೆ ಕಟ್ಟಲು ಮುಂದಾಗಿದೆ. ಡಿಕೆ ಶಿವಕುಮಾರ್ ಈ ಕ್ಷೇತ್ರಗಳಲ್ಲಿ ಓಡಾಟ ಆರಂಭಿಸಿದ್ದು, ಸ್ಥಳೀಯ ನಾಯಕರನ್ನೇ ಗುರುತಿಸಿ ಚುನಾವಣಾ ಉಸ್ತುವಾರಿ ನೀಡಲಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಸ್ಥಳೀಯ ನಾಯಕರಿಗೆ ಉಸ್ತುವಾರಿ ವಹಿಸಲಾಗುತ್ತಿದೆ. ಬೂತ್ ಮಟ್ಟದಲ್ಲಿನ ಕಾರ್ಯಕರ್ತರನ್ನು ಹೆಚ್ಚು ಸಕ್ರಿಯಗೊಳಿಸಲಾಗುತ್ತಿದೆ. ಭಾವನಾತ್ಮಕ ವಿಚಾರಗಳು ಬಂದಾಗ ಅವನ್ನು ಸಮರ್ಥವಾಗಿ ಹೆದರುರಿಸಲು ಚಿಂತಕರ ಚಾವಡಿ ರಚಿಸಲಾಗುತ್ತಿದೆ. ಜೊತೆ ಬೇರೆ ಬೇರೆ ರೀತಿಯ ಕಾರ್ಯತಂತ್ರಗಳ ಮೂಲಕ ಈ ಬಾರಿ ಬಿಜೆಪಿಯನ್ನು ಮಣಿಸಿ ಶಿರಾ ಮತ್ತು ರಾಜರಾಜೇಶ್ವರಿನಗರ ಸೋಲಿನ ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್ ತಯಾರಿ ನಡೆಸಿದೆ.


ಇದನ್ನೂ ಓದಿ: ಆಂಧ್ರ ಜನರಿಂದ ಬಿಜೆಪಿ ಸಂಸದ ತೇಜಸ್ವಿಸೂರ್ಯ ಟ್ರೋಲ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights