ಬಿಜೆಪಿಯಲ್ಲಿ ಬಿಎಸ್‌ವೈ ನಿಷ್ಟರು- ಹೈಕಮಾಂಡ್‌ ನಿಷ್ಟರೆಂಬ ಎರಡು ಬಣ; ಯಾರಿಗೆ ಹೆಚ್ಚು ಸಚಿವ ಸ್ಥಾನ?

ರಾಜ್ಯ ಬಿಜೆಪಿಯಲ್ಲಿ ಬಣಗಳ ಸಂಖ್ಯೆಗೇನು ಕಡಿಮೆ ಇಲ್ಲ. ಕಾಲಕ್ಕೆ ತಕ್ಕಂತೆ ಬಣಗಳು ಬದಲಾಗುತ್ತಲೇ ಇವೆ. ಇದೂವರೆಗೂ ಆರ್‌ಎಸ್‌ಎಸ್‌ ಮೂಲದ ಬಿಜೆಪಿಗರು, ಮೂಲ ಬಿಜೆಪಿಗರು ಮತ್ತು ಬಿಎಸ್‌ವೈ ಬೆಂಬಲಿತ ಬಿಜೆಪಿಗರು ಎಂದು ಕರೆಯಲಾಗುತ್ತಿತ್ತು. ಕಳೆದ ವರ್ಷ ಮೈತ್ರಿ ಸರ್ಕಾರ ಪತನಗೊಂಡ ಮೇಲೆ, ವಲಸೆ ಬಿಜೆಪಿಗರು ಎಂಬ ಹೊಸ ಬಣ ಹುಟ್ಟಿಕೊಂಡಿತ್ತು. ಸದ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆಯಾಗಲಿದ್ದು, ಇದೀಗ ಬಿಎಸ್‌ವೈ ಬೆಂಬಲಿತ ಬಿಜೆಪಿಗರು ಮತ್ತು ಹೈಕಮಾಂಡ್‌ಗೆ ನಿಷ್ಟರಾಗಿರುವ ಬಿಜೆಪಿಗರು ಎಂಬ ಎರಡು ಬಣಗಳಾಗಿ ಮಾರ್ಪಟ್ಟಿವೆ.

ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಬಿಜೆಪಿ ವರಿಷ್ಠರು ಸಮ್ಮತಿ ಸೂಚಿಸಿಲ್ಲ. ನಾಯಕತ್ವ ಬದಲಾವಣೆಯತ್ತಲೇ ಅವರ ದೃಷ್ಟಿ ಇದ್ದಂತಿದೆ. ಈ ತಾಕಲಾಟಗಳು ಪಕ್ಷದ ಆಂತರಿಕ ಬೇಗುದಿಯನ್ನು ಹೆಚ್ಚಿಸಿವೆ.

ಮೇಲ್ನೋಟಕ್ಕೆ ಎಲ್ಲವೂ ಚೆನ್ನಾಗಿಯೇ ಇದೆ ಎಂಬಂತೆ ಬಿಜೆಪಿ ನಾಯಕರು ಹೇಳಿಕೆಗಳನ್ನು ಕೊಡುತ್ತಿದ್ದು, ನಾಯಕತ್ವ ಬದಲಾವಣೆಯ ಬಯಕೆ ಹಲವರಲ್ಲಿ ಮನೆ ಮಾಡಿದೆ ಎಂದು ಹೇಳಲಾಗಿದೆ. ಹಾಗಾಗಿಯೇ ಬಿಜೆಪಿಯೊಳಗೆ ವೈಮನಸ್ಸಿನ ಬೇಗುದಿ ಎದ್ದಿದ್ದು, ಸ್ಪೋಟಗೊಳ್ಳುವ ಸಾಧ್ಯತೆಯೂ ಇದೆ.

ಇದೆಲ್ಲದರ ನಡುವೆ ಸಚಿವ ಸಂಪುಟದಲ್ಲಿರುವ ಕೆಲವು ‘ನಿಷ್ಕ್ರಿಯ’ ಸಚಿವರನ್ನು ಕೈಬಿಡುವುದು, ಸಂಪುಟ ಪುನರಚನೆ ಮಾಡುವುದು ಯಡಿಯೂರಪ್ಪ ಇಂಗಿತ. ಸಂಪುಟ ಪುನಾರಚನೆ ಸಂಬಂಧ ಪಕ್ಷದ ವರಿಷ್ಠರಿಂದ ಯಾವುದೇ ಸೂಚನೆ ಬರದೇ ಇರುವುದರಿಂದ ತಾವು ಕೊಟ್ಟ ಮಾತು ಉಳಿಸಿಕೊಳ್ಳಲು ಮುಂದಾಗಿರುವ ಯಡಿಯೂರಪ್ಪ, ಮೈತ್ರಿ ಸರ್ಕಾರವನ್ನು ಪತನಗೊಳಿಸಿ ಬಿಜೆಪಿ ಸೇರಿ ಎಂಎಲ್‌ಎ, ಎಂಎಲ್‌ಸಿಗಳಾಗಿರುವವರಿಗೆ ಸಚಿವ ಸ್ಥಾನ ಪ್ರಾಪ್ತಿ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ವರಿಷ್ಠರಿಗೆ ಸೆಡ್ಡು ಹೊಡೆದು ನಿಷ್ಕ್ರಿಯರನ್ನು ಕೈಬಿಡಲು ಚಿಂತಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದಕ್ಕಾಗಿ ಇಂದು (ಶುಕ್ರವಾರ) ಸಂಪುಟ ಸಭೆಯನ್ನು ಕರೆದಿದ್ದಾರೆ. ಸಭೆಯಲ್ಲಿ ಹಲವರನ್ನು ಕೈಬಿಡುವ ಸಾಧ್ಯತೆಗಳಿವೆ ಎಂದು ಹೇಳಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಂಪುಟ ಸಭೆಯ ನಂತರ ರಾಜ್ಯದ ಸಂಸದರು ಮತ್ತು ರಾಜ್ಯಸಭಾ ಸದಸ್ಯರ ಸಭೆಯನ್ನೂ ಕರೆದಿದ್ದಾರೆ.

ಈ ಎರಡೂ ಸಭೆಗಳ ಮೂಲಕ ಆಪ್ತ ವಲಯ ದೃಢ ವಿಶ್ವಾಸಕ್ಕೆ ತೆಗೆದುಕೊಂಡು, ತಮ್ಮ ಬೆಂಬಲಿಗರ ಶಕ್ತಿಯನ್ನು ಹೈಕಮಾಂಡ್‌ಗೆ ರವಾನಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಲ್ಲದೆ,  ಮೂರರಿಂದ ನಾಲ್ಕು ದಿನಗಳೊಳಗೆ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಪೂರ್ಣಗೊಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೆಲ್ಲದಕ್ಕೂ ಇಂದಿನ ಸಭೆ ತೆರೆಯೆಳೆಯಲಿದೆ.


ಇದನ್ನೂ ಓದಿ: ಕಾರ್ಪೋರೇಷನ್‌ ಚುನಾವಣಾ ಪ್ರಚಾರಕ್ಕೂ ಪ್ರಧಾನಿ; ಮೋದಿ ಇಲ್ಲದೆ ಚುನಾವಣೆ ಗೆಲ್ಲುವುದಿಲ್ಲವಾ ಬಿಜೆಪಿ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights