ಅಮೆಜಾನ್‌ನಿಂದ ಕಾನೂನು ಉಲ್ಲಂಘನೆ; 1.44 ಲಕ್ಷ ಕೋಟಿ ರೂ ದಂಡ ವಿಧಿಸಲು ಸಿಎಐಟಿ ಆಗ್ರಹ!

ಅಮೆಜಾನ್‌ ಆನ್‌ಲೈನ್‌ ಮಾರಾಟ ಸಂಸ್ಥೆಯು‌ ಭಾರತದ ವ್ಯಾಪಾರ ಕಾನೂನುಗಳನ್ನು ಉಲ್ಲಂಘಿಸಿದೆ. ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಸಣ್ಣ ವ್ಯಾಪಾರಿಗಳಿಗೆ ಸಂಕಷ್ಟ ತಂದೊಡ್ಡಿದೆ ಎಂದು ಅಖಿಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ) ಆರೋಪಿಸಿದೆ. ಅಲ್ಲದೆ, ಅಮೆಜಾನ್‌‌ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. 1,44,500 ಕೋಟಿ ರೂ ದಂಡವನ್ನು ವಿಧಿಸಬೇಕು ಎಂದು ಒತ್ತಾಯಿಸಿ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದೆ.

ಭಾರತದಲ್ಲಿ ತನ್ನ ವ್ಯಾಪಾರ ಆರಂಭಿಸಿರುವ ಅಮೆಜಾನ್‌‌ ಪದೇ ಪದೇ ದೇಶದ ವ್ಯಾಪಾರ ಕಾನೂನು- ನಿಯಮಗಳನ್ನು ಉಲ್ಲಂಘಿಸಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಿಎಐಟಿ ಆರೋಪಿಸಿದೆ.

ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಅಮೆಜಾನ್‌ ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡು, ದೇಶದ ಏಳು ಕೋಟಿ ವ್ಯಾಪಾರಿಗಳು ಹಾಗೂ ಅವರ ಜೊತೆಗೆ ಕೆಲಸ ಮಾಡುವ ಕಾರ್ಮಿಕರಿಗೆ ಸಂಕಷ್ಟ ತಂದೊಡ್ಡಿದೆ. ದೇಶದ ಕಾನೂನು ಉಲ್ಲಂಘನೆಯ ಬಗ್ಗೆ ಎಲ್ಲಾ ರೀತಿಯ ಮಾಹಿತಿ ಮತ್ತು ದಾಖಲೆಗಳ ಸಮೇತ ಇಡಿ ಪತ್ರ ಬರೆದಿದ್ದೇವೆ ಎಂದು ಸಿಎಐಟಿ ಮಾಹಿತಿ ನೀಡಿದೆ.

ಅಮೆಜಾನ್‌ ಸಂಸ್ಥೆ ಮಾರುಕಟ್ಟೆ ಸ್ಥಳ ಆಧಾರಿತ ವ್ಯವಸ್ಥೆಯ (Marketplace based Model) ನೆಪದಲ್ಲಿ ಮಲ್ಟಿ ಬ್ರ್ಯಾಂಡ್ ರೀಟೇಲ್ ವ್ಯವಹಾರ ನಡೆಸುತ್ತಿದೆ. ಇದಕ್ಕಾಗಿ ಅಮೆಜಾನ್‌ ಸೆಲ್ಲರ್ ಸರ್ವಿಸಸ್ ಪ್ರೈ ಲಿ ಹಾಗೂ ತನ್ನ ಇತರ ಉಪಸಂಸ್ಥೆಗಳು ಮತ್ತು ಬೇನಾಮಿ ಸಂಸ್ಥೆಗಳನ್ನ ಅದು ಬಳಸಿಕೊಳ್ಳುತ್ತಿದೆ. ಇದು ಎಫ್​ಡಿಐ ನೀತಿ, ಫೆಮಾ ಕಾಯ್ದೆ, ನೀತಿ ನಿಬಂಧನೆಗಳ ಸಂಪೂರ್ಣ ಉಲ್ಲಂಘನೆ ಆಗಿದೆ. ಈ ಬಗ್ಗೆ ಎಲ್ಲಾ ರೀತಿಯ ಮಾಹಿತಿ-ದಾಖಲೆಗಳನ್ನು ಇಡಿ ಸಂಸ್ಥೆಗೆ ತಿಳಿಸಿರುವುದಾಗಿ ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಾಂಡೆಲ್​ವಲ್ ತಿಳಿಸಿದ್ದಾರೆ.

ಜಾರಿ ನಿರ್ದೇಶನಾಲಯ, ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಮತ್ತು ಡಿಪಿಐಐಟಿ ಸಂಸ್ಥೆಗಳೂ ಕೂಡ ಕೂಡಲೇ ಅಮೆಜಾನ್‌​ನ ಎಲ್ಲಾ ಒಪ್ಪಂದಗಳು ಹಾಗೂ ದಾಖಲೆಗಳನ್ನ ಪರಿಶೀಲಿಸಬೇಕು. ಕಾನೂನು, ನೀತಿ ನಿಯಮಗಳನ್ನ ಗಾಳಿಗೆ ತೂರಿರುವ ಆ ಸಂಸ್ಥೆಗೆ ದಂಡ ವಿಧಿಸಬೇಕು. ಅದರ ಅಕ್ರಮ ಹೂಡಿಕೆಯ ಮೊತ್ತವಾದ 48,500 ಕೋಟಿಯ ಮೂರು ಪಟ್ಟು ಮೊತ್ತವಾದ 1,44,500 ಕೋಟಿ ರೂ ದಂಡವನ್ನು ವಿಧಿಸಬೇಕು ಎಂದು ಸಿಎಐಟಿ ಆಗ್ರಹಿಸಿದೆ.

“ವಿದೇಶೀ ಇ-ಕಾಮರ್ಸ್ ದೈತ್ಯ ಸಂಸ್ಥೆಗಳಿಂದ ಆಗಿರುವ ಹಾನಿಯನ್ನು ಹಾಗೂ ಭಾರತದ ಚಿಲ್ಲರೆ ಮಾರಾಟಗಾರರ ಭಾವನೆಗಳನ್ನು ಗಮನಿಸಿದರೆ ತತ್​ಕ್ಷಣವೇ ಕ್ರಮ ಕೈಗೊಳ್ಳುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಸಹಾಯ ಕೋರಿ ಜಾರಿ ನಿರ್ದೇಶನಾಲಯಕ್ಕೆ ಮನವಿ ಮಾಡಲಾಗಿದೆ” ಎಂದು ಸಿಎಐಟಿ ಹೇಳಿದೆ.


ಇದನ್ನೂ ಓದಿ: India vs Australia: 2ನೇ ಟಿ-20 ಪಂದ್ಯದಲ್ಲಿ ಭರ್ಜರಿ ಗೆಲವು ಸಾಧಿಸಿದ ಭಾರತ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights