ರಾಜಧಾನಿಯಲ್ಲಿ ಭುಗಿಲೆದ್ದ ರೈತರ ಆಕ್ರೋಶ; ರಾಜಭವನಕ್ಕೆ ರೈತರ ಮುತ್ತಿಗೆ!

ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತರಲು ಮುಂದಾಗಿರುವ ಮತ್ತು ಅಧಿವೇಶನದಲ್ಲಿ ಅಂಗೀಕರಿಸಲ್ಪಟ್ಟಿರುವ ರೈತ ವಿರೋಧಿ ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಇಂದು ರೈತರು ಮತ್ತು ಹಲವಾರು ಸಂಘಟನೆಗಳು ರಾಜಭವನಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ.

ಈಗಾಗಲೇ ಬೆಂಗಳೂರಿನ ರೈಲು ನಿಲ್ದಾಣದ ಬಳಿ ನೂರಾರು ರೈತ ಹೋರಾಟಗಾರರು ಸೇರಿದ್ದು, ರಾಜಭನವದ ಕಡೆಗೆ ಹೋರಾಟದ ಹೆಜ್ಜೆಯನ್ನಿಡುತ್ತಿದ್ದಾರೆ.

ರಾಜ್ಯಪಟ್ಟಿ ಮತ್ತು ಸಮವರ್ತಿಪಟ್ಟಿಯಲ್ಲಿರುವ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಏಕಪಕ್ಷೀಯವಾಗಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕೆಲವು ಕಾಯ್ದೆಗಳನ್ನು ತಂದಿರುವುದನ್ನು ನಾವು ಖಂಡಿಸುತ್ತೇವೆ ಮತ್ತು ಕಳೆದ ಎರಡು ವಾರಗಳಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲಿಸಿ ರಾಜಭವನಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ ಎಂದು ಐಕ್ಯ ಹೋರಾಟ ಸಮಿತಿಯ ಮುಖಂಡರು ತಿಳಿಸಿದ್ದಾರೆ.

ತಿದ್ದುಪಡಿ ಮೂಲಕ ಭೂ ಸುಧಾರಣಾ ಕಾಯ್ದೆಯ ಜೀವಾಳ ವಾದ ಸೆಕ್ಷನ್ 79a,b ಗಳನ್ನು ತೆಗೆದು ಹಾಕಲಾಗಿದ್ದು, ರೈತರಿಗೆ ದ್ರೋಹವೆಸಗಲಾಗಿದೆ. ಅದೂ ಸಾಲದೆಂಬಂತೆ ಪಟ್ಟಣದ ಆಸಕ್ತರಿಗೆ ಕೃಷಿ ಮಾಡಲು ಅವಕಾಶ ಒದಗಿಸುತ್ತಿದ್ದೇವೆನ್ನುವ ಅಪ್ಪಟ ಸುಳ್ಳನ್ನು ಹೇಳುತ್ತಾ ಸಮಾಜಾಯಿಷಿ ಕೊಡಲು ಪ್ರಯತ್ನಿಸುತ್ತಿದ್ದಾರೆ. ಒತ್ತಡ ಮತ್ತು ಆಮಿಷಕ್ಕೆ ಒಳಗಾಗಿ ಒಮ್ಮೆ ಕೃಷಿ ಭೂಮಿ ಕಳೆದುಕೊಂಡ ರೈತರು ಮತ್ತೆಂದೂ ಭೂಮಿ ಕೊಳ್ಳುವುದು ಸಾಧ್ಯವೇ ಇಲ್ಲ.. ಶಾಶ್ವತವಾಗಿ ಭೂಹೀನರಾಗಿ ನಿರ್ಗತಿಕರಾಗುತ್ತಾರೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತ-ಕಾರ್ಮಿಕ ಹೋರಾಟಗಾರರ ಹಕ್ಕೊತ್ತಾಯಗಳು: 

1. ಕಳೆದ ವಿಧಾನ ಸಭೆಯಲ್ಲಿ ಅನುಮೋದನೆ ದೊರಕದಿದ್ದರೂ ಸುಗ್ರೀವಾಜ್ಞೆಗಳ ಮೂಲಕ ರಾಜ್ಯ ಸರ್ಕಾರ ರಾಜ್ಯದ ಜನರ ಮೇಲೆ ಹೇರಲು ಪ್ರಯತ್ನಿಸುತ್ತಿರುವ ಭೂಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ಮತ್ತು ವಿದ್ಯುತ್ ಖಾಸಗೀಕರಣ ಕಾಯ್ದೆಗಳನ್ನು ಕೈಬಿಡಬೇಕು.
2. ಕೇಂದ್ರ ಸರ್ಕಾರವು ಸರ್ವಾಧಿಕಾರಿ ರೀತಿಯಲ್ಲಿ ಜಾರಿಗೆ ತಂದಿರುವ, ಎಪಿಎಂಸಿಯನ್ನು ನಗಣ್ಯಗೊಳಿಸಿ ತಿದ್ದುಪಡಿ ಕಾಯ್ದೆ, ಕಾರ್ಪೊರೇಟ್ ಪರವಾದ ಕಾಂಟ್ರಾಕ್ಟ್ ಕೃಷಿ ಕಾಯ್ದೆ ಹಾಗೂ ಕೃಷಿ ಕಂಪನಿಗಳಿಗೆ ಆಹಾರ ಧಾನ್ಯಗಳ ಕಳ್ಳ ದಾಸ್ತಾನಿಗೆ ಅನುವು ಮಾಡಿಕೊಡುವ ಅಗತ್ಯ ಸರಕುಗಳ ಕಾಯ್ದೆಗಳನ್ನು ರಾಜ್ಯ ಸರ್ಕಾರ ಧಿಕ್ಕರಿಸಬೇಕು.
3. ದಶಕಗಳಿಂದ ಫಾರಂ ನಂ. 50-53 ಹಾಗೂ 94ಸಿ/94ಸಿಸಿ ಅರ್ಜಿ ಹಾಕಿಕೊಂಡು ಕಾಯುತ್ತಿರುವ ಬಡಜನರ ಭೂಮಿ ಮತ್ತು ಮನೆ/ನಿವೇಶನಗಳಿಗೆ ಕೂಡಲೇ ಹಕ್ಕುಪತ್ರ ನೀಡಬೇಕು. ಮತ್ತು ಗಂಡ-ಹೆಂಡತಿ ಇಬ್ಬರ ಹೆಸರಿಗೆ ಜಂಟಿ ಖಾತೆ ನೀಡಬೇಕು.
4. ಎಪಿಎಂಸಿಯನ್ನು ಭ್ರಷ್ಟಮುಕ್ತಗೊಳಿಸಿ ಬಲಪಡಿಸಬೇಕು.
5. ಸ್ವಾಮಿನಾಥನ್ ವರದಿಯನ್ನು ಜಾರಿಗೆ ತಂದು ರೈತರ ಬೆಳೆಗೆ ಸ್ಥಿರ ಮತ್ತು ನ್ಯಾಯಯುತ ಬೆಲೆ ಒದಗಿಸಬೇಕು.
6. ಕಾರ್ಮಿಕ ಕಾಯ್ದೆಗಳನ್ನು ಕಾರ್ಮಿಕರ ಪರವಾಗಿ ಬಲಪಡಿಸಬೇಕು; ಕಾರ್ಮಿಕವಿರೋಧಿ ತಿದ್ದುಪಡಿಗಳನ್ನು ಕೈಬಿಡಬೇಕು.
7. ದಲಿತ–ದಮನಿತರ ಅಭಿವೃದ್ಧಿಗೆ ಮೀಸಲಾಗಿರುವ ಎಲ್ಲಾ ಸಮಾಜ ಕಲ್ಯಾಣ ಯೋಜನೆಗಳನ್ನು ದುರ್ಬಲಗೊಳಿಸದೆ ಮುಂದುವರಿಸಬೇಕು.
8. ಕನ್ನಡ ಭಾಷೆ ಹಾಗೂ ಕರ್ನಾಟಕದ ನೆಲ-ಜಲ-ಶ್ರಮ-ಸಂಪನ್ಮೂಲಗಳ ನೈಜ ಅಭಿವೃದ್ಧಿಗೆ, ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು.


ಇದನ್ನೂ ಓದಿ: ಕರ್ನಾಟಕದ ರೈತ ಹೋರಾಟಗಾರರಿಂದ ಪ್ರಧಾನಿಗೆ ಪತ್ರ: ರೈತರು ಪತ್ರದಲ್ಲಿ ಹೇಳಿದ್ದೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights