ಹೈದರಾಬಾದ್‌ನ ರಾಸಾಯನಿಕ ಸ್ಥಾವರದಲ್ಲಿ ಬೆಂಕಿ : 8 ಮಂದಿಗೆ ಗಾಯ!
ಹೈದರಾಬಾದ್‌ನ ಬೊಲಾರಂನ ಕೈಗಾರಿಕಾ ಅಭಿವೃದ್ಧಿ ಪ್ರದೇಶದ ರಾಸಾಯನಿಕ ಕಾರ್ಖಾನೆಯಲ್ಲಿ ಬೃಹತ್ ಪ್ರಮಾಣದ ಬೆಂಕಿ ಕಾಣಿಸಿಕೊಂಡು ಎಂಟು ಜನರು ಗಾಯಗೊಂಡಿದ್ದಾರೆ.
ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೈದರಾಬಾದ್‌ನ ಸಂಗರೆಡ್ಡಿ ಜಿಲ್ಲೆಯ ಬೋಲಾರಾಂ ಗ್ರಾಮದಲ್ಲಿರುವ ವಿಂಧ್ಯಾ ಆರ್ಗಾನಿಕ್ಸ್ ಖಾಸಗಿ ಲಿಮಿಟೆಡ್‌ನಲ್ಲಿ ಈ ಘಟನೆ ನಡೆದಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಕೆಲ ಕಾರ್ಮಿಕರು ಇನ್ನೂ ಸಿಕ್ಕಿಬಿದ್ದಿದ್ದಾರೆಂಬ ಭಯವಿದೆ.
ಐಡಿಎ ಬೊಲ್ಲಾರಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್, “ಕೆಲ ಕ್ರಿಯೆಗಾಗಿ ದ್ರಾವಕವನ್ನು ಇಡಲಾಗಿತ್ತು. ಅದು ಬೆಂಕಿಗೆ ಆಹುತಿಯಾಗಿದೆ. ಗಾಯಗೊಂಡ ಎಂಟು ಸದಸ್ಯರನ್ನು ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ” ಎಂದು ಹೇಳಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ಆದರೆ ಘಟನೆಗೆ ಕಾರಣವೇನು ಎನ್ನುವುದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ.