ಟೊಯೊಟಾ ಕಾರ್ಮಿಕರ ಪರ ಕಣ್ಣು‌ ತರೆದ ವಿರೋಧ ಪಕ್ಷ; ಸರ್ಕಾರ ತೆರೆಯುವುದು ಯಾವಾಗ?

ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಬಿಡದಿಯ ಟೊಯೋಟಾ ಕಿರ್ಲೋಸ್ಕರ್‌ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದಾರೆ. ಮೊನ್ನೆಯಷ್ಟೇ ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಇದಾದ ನಂತರ ಕಾರ್ಮಿಕರ ಪರವಾಗಿ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಮಾತನಾಡಿದ್ದಾರೆ. ಕಾರ್ಮಿಕರು-ಸಂಸ್ಥೆಯ ಮುಖ್ಯಸ್ಥರ ನಡುವಿನ ವ್ಯವಸ್ಥಾಪಕರ ಭಿನ್ನಾಭಿಪ್ರಾಯಗಳು, ಪ್ರತಿಷ್ಠೆ, ಸರ್ಕಾರದ ನಿರ್ಲಕ್ಷ್ಯವೂ ಇದಕ್ಕೆ ಕಾರಣವಾಗಿರಬಹುದು. ರಾಜ್ಯದ ಔದ್ಯಮಿಕ ಪ್ರಗತಿ ದೃಷ್ಟಿಯಿಂದ ಈ ಸಮಸ್ಯೆಗೆ ಅಂತ್ಯ ಹಾಡುವುದು ಈಗಿನ ಅಗತ್ಯ ಎಂದು ಹೆಚ್‌ಡಿಕೆ ಹೇಳಿದ್ದಾರೆ.

ಟೊಯೊಟಾ ಕಿರ್ಲೋಸ್ಕರ್‌‌ ಕಂಪೆನಿಯ ಆಡಳಿತ ಮಂಡಳಿಯ ದುರ್ವರ್ತನೆ ವಿರುದ್ದ ಕಾರ್ಮಿಕರು ನಡೆಸುತ್ತಿರುವ ಹೋರಾಟ ಇಂದಿಗೆ 42 ನೇ ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರದಂದು ಕಾರ್ಮಿಕ ಸಂಘಟನೆಗಳು ರೈತ-ದಲಿತ-ಕನ್ನಡಪರ ಸಂಘಟನೆಗಳ ಬೆಂಬಲದಲ್ಲಿ ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದರು.

ಬಿಡದಿಯಲ್ಲಿ ನಡೆಯುತ್ತಿರುವ ಕಾರ್ಮಿಕರ ಹೋರಾಟದ ಬಗ್ಗೆ ಇಂದು ಸರಣಿ ಟ್ವೇಟ್ ಮಾಡಿರುವ ಕುಮಾರಸ್ವಾಮಿ, ” ವ್ಯವಸ್ಥಾಪಕರ ಮಾತು ಕೇಳಿಯೋ, ಕಾರ್ಮಿಕರ ಮೇಲಿನ ಕ್ಷುಲ್ಲಕ ಆರೋಪಗಳಿಗೋ ಸಂಸ್ಥೆ 3000 ಕಾರ್ಮಿಕರನ್ನು ಬೀದಿಗೆ ತಳ್ಳಿದೆ. ನಮ್ಮ ನೆಲ, ಜಲ, ಗಾಳಿ, ಸೌಕರ್ಯ ಬಳಸಿಕೊಂಡು ನಡೆಯುತ್ತಿರುವ ಸಂಸ್ಥೆಗಳೂ ನಮ್ಮವರ ವಿಷಯದಲ್ಲಿ ಇಷ್ಟು ಕ್ರೂರವಾಗಿರುವುದು ಸರಿಯಲ್ಲ. ಸಂಸ್ಥೆ ಮುಖ್ಯಸ್ಥರು ಪ್ರತಿಷ್ಠೆ ಪಕ್ಕಕ್ಕಿಟ್ಟು ಮಾನವೀಯವಾಗಿ ವರ್ತಿಸಬೇಕು” ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ದರ್ಪ ಬಿಡದ ಟೊಯೊಟಾ ಕಂಪನಿ; 39 ದಿನಗಳಿಂದ ನಿರಂತರ ಹೋರಾಟ; ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ!

“ಕಾರ್ಮಿಕರ ಸಮಸ್ಯೆ ಬಗೆಹರಿಸುವ ದೃಷ್ಟಿಯಿಂದ ಸ್ವತಃ ನಾನೇ ಹಲವು ಸಭೆಗಳನ್ನು ನಡೆಸಿದ್ದೇನೆ. ಕಾರ್ಮಿಕರು-ಸಂಸ್ಥೆಯ ಮುಖ್ಯಸ್ಥರ ನಡುವೆ ಇರುವ ವ್ಯವಸ್ಥಾಪಕ ವರ್ಗ ಗೊಂದಲ ಸೃಷ್ಟಿ ಮಾಡುತ್ತಿರುವುದು ನನಗೆ ಮೇಲ್ನೋಟಕ್ಕೆ ಗೊತ್ತಾಗಿದೆ. ಈ ವ್ಯವಸ್ಥಾಪಕ ವರ್ಗ ಸಾಮಾನ್ಯವಾಗಿ ಈ ಪ್ರದೇಶ, ಪ್ರಾಂತ್ಯದವರಾಗಲಿ, ರಾಜ್ಯದವರಾಗಲಿ ಅಲ್ಲ ಎಂಬುದು ಗಮನಾರ್ಹ” ಎಂದುಅವರು ಹೇಳಿದ್ದಾರೆ.

“ಕೋಲಾರದ ‘ವಿಸ್ಟ್ರಾನ್‌’ ಘಟನೆಗೆ ಸಂಸ್ಥೆಯ ವ್ಯವಸ್ಥಾಪನೆಯಲ್ಲಿ ಆಗಿದ್ದ ಲೋಪವೇ ಕಾರಣ ಎಂದೂ, ಕಾರ್ಮಿಕರು, ನೌಕರರನ್ನು ಘನತೆಯಿಂದ ಕಾಣುವುದಾಗಿಯೂ ಆಪಲ್‌ ಸಂಸ್ಥೆ ಹೇಳಿದೆ. ವಿಸ್ಟ್ರಾನ್‌ ಕಂಪನಿಯೂ ತನ್ನ ಉಪಾಧ್ಯಕ್ಷನನ್ನು ಇದೇ ಉದ್ದೇಶಕ್ಕೆ ಕಿತ್ತು ಹಾಕಿದೆ. ಟೊಯೋಟಾ ಕೂಡ ತನ್ನ ಆಂತರಿಕ ವಿಚಾರಗಳ ಬಗ್ಗೆ ಒಮ್ಮೆ ಪಾರಾಮರ್ಶೆ ಮಾಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಟೊಯೊಟಾ ಬೆನ್ನಲ್ಲೇ ಮತ್ತೊಂದು ಕಂಪನಿ ಲಾಕೌಟ್: ಬೀದಿಗೆ ಬಿದ್ದ ಕಾರ್ಮಿಕರು!

“ಸಮಸ್ಯೆಯನ್ನು ಸರ್ಕಾರವೂ ಆದ್ಯತೆ ಮೇಲೆ ಬಗೆಹರಿಸಲು ಮುಂದಾಗಬೇಕು. ಅದರಿಂದ ರಾಜ್ಯಕ್ಕೂ ಲಾಭವಿದೆ ಎಂಬುದನ್ನು ಸರ್ಕಾರ ಗಮನಿಸಬೇಕು. ಕಾರ್ಮಿಕರ ಪ್ರತಿಭಟನೆ, ದಾಂಧಲೆ, ಮುಷ್ಕರಗಳಂಥ ಘಟನೆಗಳು ಹೂಡಿಕೆದಾರರಲ್ಲಿ ಅಪನಂಬಿಕೆ ಹುಟ್ಟು ಹಾಕಲು ಕಾರಣವಾಗುತ್ತದೆ. ರಾಜ್ಯದಲ್ಲಿ ಸುಲಲಿತ ಉದ್ದಿಮೆ ನಡೆಸಲು ಅವಕಾಶಗಳಿಲ್ಲ ಎಂಬ ಭಾವನೆ ಮೂಡಿಸುತ್ತವೆ” ಎಂದಿದ್ದಾರೆ.

“ಈ ಎಲ್ಲ ಕಾರಣಗಳಿಂದಾಗಿ ಸರ್ಕಾರವೂ ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ನಾನು ಒತ್ತಾಯಿಸುತ್ತೇನೆ. ಸಂಸ್ಥೆಯ ಪ್ರತಿಭಟನಾ ನಿರತ ಕಾರ್ಮಿಕರು, ಸಂಸ್ಥೆಯ ಮುಖ್ಯಸ್ಥರನ್ನು ನೇರಾನೇರವಾಗಿ ಸಂಧಾನಕ್ಕೆ ಕೂರಿಸಬೇಕು. ಈ ವಿಚಾರದಲ್ಲಿ ಸರ್ಕಾರ ಸಂಪರ್ಕ ಸೇತುವಾಗಿ ನಡೆದುಕೊಳ್ಳಬೇಕು. ರಾಜ್ಯದ ಔದ್ಯಮಿಕ ಭವಿಷ್ಯದ ದೃಷ್ಟಿಯಿಂದ ಇದು ಅನಿವಾರ್ಯ ಕೂಡ” ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ಪ್ರತಿಭಟನೆ ಪೆಂಡಾಲ್‌ ಕಿತ್ತೆಸೆದು ಟೊಯೊಟಾ ಕಂಪನಿ ದರ್ಪ; ಛತ್ರಿ ಚಳುವಳಿ ಆರಂಭಿಸಿದ ಕಾರ್ಮಿಕರು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಟೊಯೊಟಾ ಕಾರ್ಮಿಕರ ಪರ ಕಣ್ಣು‌ ತರೆದ ವಿರೋಧ ಪಕ್ಷ; ಸರ್ಕಾರ ತೆರೆಯುವುದು ಯಾವಾಗ?

  • December 20, 2020 at 8:18 pm
    Permalink

    ಸಂಜಯ್ ರಾವತ್ ಒಬ್ಬ ಲೋಫರ್ ಬಡ್ಡಿ ಮಗ.ಎಲ್ಲಾ ಸಂಸದರು ಒಪ್ಪಿರುವಾಗ ಇವನು ಕೇಂದ್ರ ಸರ್ಕಾರದ ಮೇಲೆ ಆಪಾದನೆ ಮಾಡ್ತಾ ನೆ ಅಯೋಗ್ಯ.
    ಆ ಕಾನೂನು ಗಳಲ್ಲಿ ರೈತ ವರೋಧಿ ಅಂಶ ಯಾವುದು ಇದೆ ತೋರಿಸಲಿ.?

    Reply

Leave a Reply

Your email address will not be published.

Verified by MonsterInsights