ದರ್ಪ ಬಿಡದ ಟೊಯೊಟಾ ಕಂಪನಿ; 39 ದಿನಗಳಿಂದ ನಿರಂತರ ಹೋರಾಟ; ನಾಳೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ!

ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್‌‌ ಆಡಳಿತ ಮಂಡಳಿಯ ದುರ್ವರ್ತನೆ ವಿರುದ್ದ ಅಲ್ಲಿನ ಕಾರ್ಮಿಕರ ಹೋರಾಟ ಇಂದಿಗೆ 39 ನೇ ದಿನಕ್ಕೆ ಕಾಲಿಟ್ಟಿದೆ. ಆದರೂ, ಸರ್ಕಾರ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಮ್ಮ ಸಮಸ್ಯಗೆ ಸ್ಪಂದಿಸದೇ ಇರುವುದರಿಂದ ಟೊಯೋಟಾ ಕಾರ್ಮಿಕರು ನಾಳೆ ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.

ನಾಳೆಯ ಕಾರ್ಮಿಕರ ಹೋರಾಟಕ್ಕೆ ಕಾರ್ಮಿಕ, ರೈತ, ದಲಿತ, ಹಾಗೂ ಕನ್ನಡಪರ ಸಂಘಟನೆಗಳು ಬೆಂಬಲ ನೀಡಲಿವೆ ಎಂದು ಕಾರ್ಮಿಕ ಮುಖಂಡ ಗಂಗಾಧರ್‌ ಹೇಳಿದ್ದಾರೆ.

“ನಾಳೆ ಬೆಳಿಗ್ಗೆ 10:30 ರಾಮನಗರ ಜಿಲ್ಲಾಧಿಕಾರಿ ಕಚೇರಿಯನ್ನು ಮುತ್ತಿಗೆ ಹಾಕಲಿದ್ದೇವೆ. ನಮ್ಮ ಹೋರಾಟವನ್ನು ಇದುವರೆಗೂ ಬೆಂಬಲಿಸಿದ ಕಾರ್ಮಿಕ ಸಂಘಟನೆಗಳ ಒಕ್ಕೂಟ, ದಲಿತ, ರೈತ, ಕನ್ನಡ ಪರ ಸಂಘಟನೆಗಳು ನಮ್ಮೊಂದಿಗೆ ಸೇರಲಿದ್ದಾರೆ. ಇಂದು ಕೂಡಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆದಿದ್ದು ಅದೇನು ಫಲಕಾರಿಯಾಗುವ ಬಗ್ಗೆ ವಿಶ್ವಾಸವಿಲ್ಲ” ಎಂದು ಟೊಯೋಟಾ ಕಾರ್ಮಿಕ ಸಂಘಟನೆಯ ಮುಖಂಡ ಗಂಗಾಧರ್‌ ತಿಳಿಸಿದ್ದಾರೆ.

Read also: ಲಾಕ್‌ಔಟ್‌ ಆಗಲಿದೆ ಟೊಯೊಟಾ ಕಾರ್‌ ಕಂಪನಿ? 3,500 ಕಾರ್ಮಿಕರಿಂದ ಆಹೋರಾತ್ರಿ ಪ್ರತಿಭಟನೆ!

ಡಿಸೆಂಬರ್‌ 10 ರಂದು ಕಂಪೆನಿಯ ಗೇಟ್ ಮುಂಬಾಗ ಪ್ರತಿಭಟನಾ ನಿರತ ಕಾರ್ಮಿಕರು ಹಾಕಿದ್ದ ಪೆಂಡಾಲನ್ನು ಪೊಲೀಸರು ತೆರವುಗೊಳಿಸಿದ್ದರು. ಕಾರ್ಮಿಕ ಸಂಘಟನೆಯು ಕಂಪೆನಿಯೂ ತಮ್ಮ ಪೆಂಡಾಲ್‌ ಅನ್ನು ಕುತಂತ್ರದಿಂದ ತೆರವುಗೊಳಿಸಿದೆ ಎಂದು ಆರೋಪಿಸಿ ಕಾರ್ಮಿಕರು ವಿನೂತನ “ಛತ್ರಿ ಚಳುವಳಿ” ಆರಂಭಿಸಿದ್ದರು.

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಆಡಳಿತ ಮಂಡಳಿ ತಮ್ಮ ಮೇಲೆ ನಡೆಸಿದ ದೌರ್ಜನ್ಯವನ್ನು ಪ್ರಶ್ನಿಸಿದ ಕಾರಣಕ್ಕಾಗಿ, ಕಂಪೆನಿಯು ಕಾರ್ಮಿಕರು ಮುಷ್ಕರ ಹೂಡಿದ್ದಾರೆ ಎಂದು ಆರೋಪಿಸಿ ಲಾಕೌಟ್ ಘೋಷಿಸಿತ್ತು. ಕಂಪೆನಿಯು ಇದುವರೆಗೂ ಒಟ್ಟು 60 ಕಾರ್ಮಿಕರನ್ನು ವಜಾ ಮಾಡಿದೆ.

ಈ ನಡುವೆ ರಾಜ್ಯ ಸರ್ಕಾರವು ಕೈಗಾರಿಕಾ ವಿವಾದ ಕಾಯ್ದೆ 1947 ಕಲಂ 10(3) ರ ಅಧಿಕಾರ ಬಳಿಸಿ ಕಾರ್ಮಿಕರು ಮುಷ್ಕರ ನಿಲ್ಲಿಸಬೇಕು ಮತ್ತು ಕಂಪೆನಿಯು ಲಾಕ್‌ಔಟ್‌‌ ತೆರವುಗೊಳಿಸಬೇಕೆಂದು ನವೆಂಬರ್‌ 18 ರಂದು ಆದೇಶ ಹೊರಡಿಸಿತ್ತು. ಆದರೆ ಕಾರ್ಮಿಕರು ತಮ್ಮ ಕರ್ತವ್ಯಕ್ಕೆ ತೆರಳುತ್ತೇವೆ ಎಂದು ಹೊರಟರೂ ಕಂಪೆನಿಯು ಅವರನ್ನು ಒಳಕ್ಕೆ ಬಿಡುತ್ತಿಲ್ಲ ಎಂದು ಕಾರ್ಮಿಕರು ಆರೋಪಿದ್ದಾರೆ.


Read also: ಪ್ರತಿಭಟನೆ ಪೆಂಡಾಲ್‌ ಕಿತ್ತೆಸೆದು ಟೊಯೊಟಾ ಕಂಪನಿ ದರ್ಪ; ಛತ್ರಿ ಚಳುವಳಿ ಆರಂಭಿಸಿದ ಕಾರ್ಮಿಕರು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights