ಭಾರತಕ್ಕೆ ಮೊದಲ ವಿಶ್ವಕಪ್‌ ತಂದುಕೊಟ್ಟ ಕಪಿಲ್‌ದೇವ್‌: ಬರ್ತಡೇ ಸ್ಪೆಷಲ್‌ ಸ್ಟೋರಿ!

ಕಪಿಲ್ ದೇವ್ ಜನಿಸಿದ್ದು ಜನವರಿ 6, 1959ರಂದು. ಕಳೆದ ಶತಮಾನದ ಭಾರತೀಯ ಕ್ರಿಕೆಟ್ ಆಟಗಾರರಲ್ಲಿ ಶ್ರೇಷ್ಠರೆಂದು ‘ವಿಸ್ಡೆನ್’ನಿಂದ ಪರಿಗಣಿತರಾದವರು ಕಪಿಲ್. ಅವರು ಕ್ರಿಕೆಟ್ ಆಡುವವರೆಗೆ ಟೆಸ್ಟ್ ಕ್ರಿಕೆಟ್ಟಿನಲ್ಲಿ ಅವರೇ ಅತ್ಯದಿಕ ವಿಕೆಟ್ ಗಳಿಸಿದ್ದವರು. ಮುಂದೆ ಆ ದಾಖಲೆಯನ್ನು ಮುತ್ತಯ್ಯ ಮುರಳೀಧರನ್,ಶೇನ್ ವಾರ್ನ್, ಅನಿಲ್ ಕುಂಬ್ಳೆ, ಮೆಕ್ದಾಗ್ರಾಥ್, ವಾಲ್ಷ್ ಮುಂತಾದವರು ದಾಟಿದರು. ಅವರು ಟೆಸ್ಟ್ ಆಟದಲ್ಲಿ ನಾನೂರು ವಿಕೆಟ್ಟುಗಳು ಮತ್ತು ಐದು ಸಾವಿರ ರನ್ನುಗಳನ್ನೂ ಪೂರೈಸಿದ ವಿಶ್ವದ ಏಕೈಕ ಆಟಗಾರ ಕೂಡಾ. ಭಾರತಕ್ಕೆ ಯುವ ಸಂಚಲನವನ್ನು ತಂದು ಎಳೆ ಹುಡುಗರ ತಂಡದ ಮೂಲಕ ಸ್ಫೂರ್ತಿ ಇದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿ ಎಂಬಂತೆ ಭಾರತಕ್ಕೆ ಪ್ರಪ್ರಥಮ ವಿಶ್ವಕಪ್ ಪ್ರಶಸ್ತಿ ತಂದು ಕೊಟ್ಟ ಧೀಮಂತನೀತ.

ಕಪಿಲ್ ಇದ್ದಾರೆ ಎಂದರೆ ಅಂದಿನ ದಿನದಲ್ಲಿ ಅದೆಂತದ್ದೋ ಭರವಸೆ. ಅಂತಹ ‘ಆಲ್ ರೌಂಡರ್’ ಎಂದು ಕರೆಯಲಾಗುವ ಸರ್ವಾಂಗೀಣ ಕ್ರಿಕೆಟ್ಟಿಗ ವಿಶ್ವದಲ್ಲಿ ವಿರಳ. ಈಗಂತೂ ಇಲ್ಲವೇ ಇಲ್ಲ ಎಂದರೂ ತಪ್ಪಿಲ್ಲ. ಕಪಿಲ್ ಆಡಲು ಬಂದಾಗ ಆತನನ್ನು ಒಬ್ಬ ಹಳ್ಳಿಯ ಮುಕ್ಕ ಎಂದು ಜನ ಭಾವಿಸಿದ್ದರು. ಆದರೆ ಆತ ಮುಂದೆ ತೋರಿದ ಶ್ರದ್ಧೆ, ಸ್ಥೈರ್ಯ, ಸಾಮರ್ಥ್ಯಗಳು ಭಾರತೀಯ ಕ್ರಿಕೆಟ್ಟಿಗೆ ಹೊಸ ಭಾಷ್ಯ ಬರೆದವು. ಭಾರತೀಯನೊಬ್ಬ ಅಂದಿನ ದಿನ ಕ್ರಿಕೆಟ್ಟಿಗೆ ಬಂದಾಗ, ಮುಂಬೈಯವ ಆದರೆ ಪ್ರಥಮ ಪ್ರಾಶಸ್ತ್ಯ, ಮದರಾಸಿನವನಿಗೆ ಎರಡನೇ ಪ್ರಾಶಸ್ತ್ಯ, ಈ ಎರಡು ಊರಲ್ಲಿ ಬಂದ ಆಟಗಾರರು ಶೋಚನೀಯವಾಗಿ ಆಡಿ ಪತ್ರಿಕೆಗಳು ಟೀಕಿಸಿದರೆ ಉಳಿದ ಬೆಂಗಳೂರು, ಹೈದರಾಬಾದು, ದಿಲ್ಲಿ ಕ್ರಿಕೆಟ್ಟಿಗರಿಗೆ ಅವಕಾಶ ಇಂತಹ ಪರಿಸ್ಥಿತಿ ದೇಶದಲ್ಲಿತ್ತು. ಹೀಗಿದ್ದ ದಿನಗಳಲ್ಲಿ ಅಚಾನಕ್ಕಾಗಿ ಮೂಡಿದ ಕಪಿಲ್ ತನ್ನ ಪ್ರತಿಭೆಮಾತ್ರದಿಂದ ಭಾರತೀಯ ಕ್ರಿಕೆಟ್ ತಂಡಕ್ಕೆ ತಾನು ಅನಿವಾರ್ಯವೆನ್ನುವಂತೆ ಮಾಡಿದ. ಜೊತೆಗೆ ಅಧಿಕಾರಶಾಹಿಗಳಿಗೆ ಪ್ರತಿಭೆ ಎಂಬುದು ಕೇವಲ ಒಂದು ಊರಿನ ಸ್ವತ್ತಲ್ಲ ಎಂಬುದನ್ನು ಮನದಟ್ಟು ಮಾಡಿಕೊಟ್ಟ. ಅಂದಿನ ದಿನದವರೆಗೆ ಭಾರತ ಒಂದಿಷ್ಟು ಸಾಧನೆ ತೋರಬೇಕೆಂದರೆ ಅದು ಉತ್ತಮ ಸ್ಪಿನ್ ಆಗುವ ಮೈದಾನವೇ ಆಗಿರಬೇಕೆಂಬ ನಾಣ್ಣುಡಿಯನ್ನು ಬದಲಾಯಿಸಲಾರಂಭಿಸಿದ.

ಇದನ್ನೂ ಓದಿ: ಭಾರತೀಯ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್​ಗೆ ಹೃದಯಾಘಾತ!

1983ರ ವಿಶ್ವಕಪ್ ತಂಡದ ನಾಯಕತ್ವ ಕಪಿಲ್ ದೇವ್ ಕೈಗೆ ಬಂದಾಗ ಆತನ ಜೊತೆಯಲ್ಲಿದ್ದ ಬಹಳಷ್ಟು ಆಟಗಾರರು ಕ್ರಿಕೆಟ್ ರಂಗದಲ್ಲಿ ಅತೀವ ಕಡಿಮೆ ಸಾಧನೆ ಮಾಡಿದವರು. ಅಂತಹವರನ್ನು ಹುರಿದುಂಬಿಸಿ ತಂಡಕ್ಕೆ ಅವಶ್ಯಕತೆ ಇದ್ದಾಗಲೆಲ್ಲಾ ತಾನೇ ಪ್ರಮುಖ ಪಾತ್ರ ವಹಿಸಿ ತನ್ನ ತಂಡ ವಿಶ್ವ ಕಪ್ ಪ್ರಶಸ್ತಿಯನ್ನೇ ಗಳಿಸುವಂತೆ ಮಾಡಿ, ಭಾರತೀಯ ಕ್ರಿಕೆಟ್ ರಂಗವನ್ನು ಅತ್ಯಂತ ಶ್ರೀಮಂತಗೊಳಿಸುವ ಹಾದಿಯಲ್ಲಿ ಪ್ರಥಮ ಭಾಷ್ಯ ಬರೆದರು. ಆ ಸರಣಿಯಲ್ಲಿ ಜಿಂಬಾವ್ವೆ ವಿರುದ್ಧದ ಪಂದ್ಯದಲ್ಲಿ ಕೇವಲ ಮೊದಲ ಓವರುಗಳಲ್ಲಿ ಇಪ್ಪತ್ತು ರನ್ನುಗಳಿಗೆ 5 ವಿಕೆಟ್ಟುಗಳನ್ನು ಕಳೆದುಕೊಂಡು ತಮ್ಮ ತಂಡ ದುಸ್ಥಿತಿಯಲ್ಲಿದ್ದಾಗ ಕೆಳಹಂತದ ಆಟಗಾರರೊಡನೆ ನಿಂತು ವಿಶ್ವದಾಖಲೆಯ ಅಮೋಘ ಆಟವಾಡಿ 175ರನ್ನುಗಳನ್ನು ಪೇರಿಸಿ ಆ ಪಂದ್ಯವನ್ನು ಜಯಗಳಿಸುವಂತೆ ಮಾಡಿದ್ದು ಇಡೀ ತಂಡಕ್ಕೆ ವಿಶ್ವಕಪ್ ಗೆಲ್ಲುವ ಬಗ್ಗೆ ಆತ್ಮವಿಶ್ವಾಸ ತುಂಬಿದ ವಿಶೇಷ ಘಟನೆ ಎಂದು ಇಡೀ ಕ್ರಿಕೆಟ್ ವಿಶ್ವ ನಂಬಿದೆ.

OPINION | Kapil Dev: The greatest Indian cricketer of all time - opinion -  Hindustan Times

ಮುಂದೆ ಕೂಡ ಭಾರತ ಗಳಿಸಿದ ಹಲವಾರು ಟೆಸ್ಟ್ ಮತ್ತು ಏಕದಿನದ ಪಂದ್ಯಗಳ ವಿಜಯದಲ್ಲಿ ಕಪಿಲ್ ಮಹತ್ತರ ಪಾತ್ರ ವಹಿಸಿದರು. ಗಾವಸ್ಕರ್ ಅಂತಹ ಸ್ವಪ್ರತಿಷ್ಟೆಯ ಆಟಗಾರರು ಹಲವಾರು ಘಳಿಗೆಗಳಲ್ಲಿ ಕಪಿಲ್ ದೇವ್ ಅವರ ಮೇಲೇರಿಕೆಗೆ ಸಾಕಷ್ಟು ತೊಡರುಗಾಲು ಹಾಕಿದ್ದನ್ನು ಇಡೀ ದೇಶ ಕಂಡಿತು. ಆದರೂ ಅದ್ಯಾವುದನ್ನೂ ವೈಯಕ್ತಿಕವಾಗಿ ಗಣಿಸದೆ ಉತ್ತಮ ಕ್ರಿಕೆಟ್ ರಾಯಭಾರಿಯಾಗಿ ವಿಜ್ರಂಭಿಸಿದರು ಕಪಿಲ್. ಮತ್ತೊಂದು ಮಹತ್ವದ ವಿಚಾರವೆಂದರೆ ಅಂದಿನ ಬಹುತೇಕ ಮಧ್ಯಮ ವೇಗದ ಮತ್ತು ವೇಗದ ಬೌಲರುಗಳು ವಿಶ್ವದಾದ್ಯಂತ ತಮ್ಮ ದೇಹ ಕ್ಷಮತೆಯನ್ನು ಉಳಿಸಿಕೊಳ್ಳುವಲ್ಲಿ ನಿರಂತರ ಕಷ್ಟ ಪಟ್ಟರೂ ಕಪಿಲ್ ದೇವ್ ಅವರು ಅಷ್ಟು ಸುದೀರ್ಘ ಕಾಲ ತಡೆ ಇಲ್ಲದೆ ಆಡಿದ್ದು ಆತ ಎಷ್ಟು ಕಟ್ಟುನಿಟ್ಟಿನ ಶಿಸ್ತಿನ ಕ್ರೀಡಾಜೀವನ ನಡೆಸಿದವರು ಎಂಬುದಕ್ಕೆ ನಿದರ್ಶನ. ಆತನ ಬಗ್ಗೆ ಕೆಲವು ಆಟಗಾರರು ಕ್ಷುಲ್ಲಕ ಮ್ಯಾಚ್ ಫಿಕ್ಸಿಂಗ್ ಆಪಾದನೆ ಮಾಡಿ ಮಾತನಾಡಿದಾಗ, ಇಡೀ ದೇಶವೇ ಅದು ಶುದ್ಧ ಬೊಗಳೆ ಎಂದು ಕಪಿಲ್ ಪರವಾಗಿ ನಿಂತಿದ್ದು, ಕಪಿಲ್ ಪಡೆದ ಜನಪ್ರಿಯತೆ, ತೋರಿದ ದೇಶಭಕ್ತಿ, ವಿಶಿಷ್ಟ ಕ್ರೀಡಾ ಮನೋಭಾವನೆ, ಅಪಾರ ಸಾಧನೆಗಳಿಗೆ ಪೂರಕವಾಗಿ ನಿಂತಿದೆ.

ಇಂದು ಐ.ಪಿ.ಎಲ್ ಎಂದು ಪ್ರಖ್ಯಾತವಾಗಿರುವ ಕ್ರೀಡಾ ಮಾದರಿಗೆ ಬುನಾದಿ ಹಾಕಿದವರು ಕಪಿಲ್. ಅವರು ಅದನ್ನು ಐ.ಸಿ.ಎಲ್ ಎಂದು ಖಾಸಗಿ ಉದ್ಯಮಗಳ ಜೊತೆ ಮಾಡಿದರು ಎಂಬ ನೆಪ ಒಡ್ಡಿ ಪಟ್ಟಭದ್ರ ಹಿತಾಸಕ್ತಿಗಳು ಅದನ್ನು ಚಿವುಟಿ ಹಾಕಿ, ತಮ್ಮದೇ ಆದ ಹೊಸಚಿಂತನೆ ಎಂಬಂತೆ ಐ.ಪಿ.ಎಲ್ ಎಂಬ ಒಂದು ದಂಧೆಯನ್ನು ಸೃಷ್ಟಿಸಿದ್ದಾರೆ. ಸುಶೀಲರಾದ, ನಿಷ್ಠಾವಂತರಾದ ವ್ಯಕ್ತಿಗಳ ಚಿಂತನೆಗಳು ನಮ್ಮ ದೇಶದಲ್ಲಿ ಕೊನೆಯಾಗುವ ಪರಿ ಇದು. ಅಂದು ಕಪಿಲ್ ಇಂಡಿಯನ್ ಕ್ರಿಕೆಟ್ ಲೀಗ್ ಸ್ಥಾಪಿಸಿದರು ಎಂದು ದೂರವಿಟ್ಟಿದ್ದ ಕ್ರಿಕೆಟ್ ಮಂಡಳಿ ಕಪಿಲ್ ದೇವ್ ಅವರನ್ನು ಇತ್ತೀಚಿನ ದಿನಗಳಲ್ಲಿ ಪುನಃ ತನ್ನ ತೆಕ್ಕೆಗೆ ತೆಗೆದುಕೊಂಡು ತನ್ನ ಗೌರವವನ್ನು ಸ್ವಲ್ಪಮಟ್ಟಿಗೆ ವೃದ್ಧಿಸಿಕೊಂಡಿದೆ. ಕಪಿಲ್, ತೆಂಡುಲ್ಕರ್, ದ್ರಾವಿಡ್, ಲಕ್ಷ್ಮಣ್, ಕುಂಬ್ಳೆ, ಶ್ರೀನಾಥ್ ಅಂತಹ ಆಟಗಾರರಿಲ್ಲದೆ ಹೆಚ್ಚು ಹೊಸ ಮುಖಗಳು ತುಂಬಿರುವ ನಮ್ಮ ಭಾರತೀಯ ಕ್ರಿಕೆಟ್ನಲ್ಲಿ ಕಪಿಲ್ ಅಂತಹ ಧೀಮಂತರ ಮಾರ್ಗದರ್ಶನವನ್ನು ಅಗತ್ಯವಾಗಿ ಪಡೆಯಬೇಕಾಗಿದೆ.

ಒಬ್ಬ ನೈಜ ಕ್ರೀಡಾಮನೋಭಾವದ ಆಟಗರನಾಗಿ, ಕ್ರೀಡೆಗಾಗಿ ಕ್ರೀಡೆಯನ್ನು ಪರಿಗಣಿಸಿ; ನೋಡುವ ಪ್ರೇಕ್ಷಕನನ್ನೂ, ದೇಶ ಪ್ರತಿಷ್ಠೆಯನ್ನೂ, ತನ್ನ ಸಾಮರ್ಥ್ಯವನ್ನೂ, ದೇಹ ದಾರ್ಢ್ಯತೆಯನ್ನೂ ಸಮೀಕರಿಸಿ ಔನ್ನತ್ಯ ತೋರಿದ ಭಾರತೀಯನಾಗಿ ಕಪಿಲ್ ದೇವ್ ನಮ್ಮ ಕಾಲದ ಕ್ರೀಡಾಭಿಮಾನಿಗಳ ಹೃದಯದಲ್ಲಿ ನಿರಂತರವಾಗಿದ್ದಾರೆ. ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳು.


ಇದನ್ನೂ ಓದಿ: Cricket : world cup ಗೆದ್ದ ನಾಯಕನಿಗು Lock down effect, ಹೊಸ ಅವತಾರದಲ್ಲಿ ದೇವ್..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights