ಹಾಸನಾಂಬ ದೇವಿಯ ದರ್ಶನಕ್ಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಭಕ್ತರ ಸಂಖ್ಯೆ….
ಹಾಸನಾಂಬ ದೇವಿಯ ದರ್ಶನಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಾರ್ವಜನಿಕ ದರ್ಶನಕ್ಕೆ ಆರನೇ ದಿನವಾದ ಇಂದು ರಾಜ್ಯದ ವಿವಿಧೆಡೆಗಳಿಂದಲ್ಲದೇ ಹೊರ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಹಾಸನಾಂಬೆಯ ದರ್ಶನ ಪಡೆದು ಪುನೀತರಾರದರು. ಇಂದು ಬೆಳಿಗ್ಗೆ ಸ್ವಲ್ಪ ಕಡಿಮೆಯಿದ್ದ ಭಕ್ತರ ಸಂಖ್ಯೆ 11 ಗಂಟೆಯ ಬಳಿಕ ಹೆಚ್ಚಾಗಿದ್ದು, ನೂಕುನುಗ್ಗಲು ಉಂಟಾಯಿತು.
ಹಾಸನದ ಅಧಿದೇವತೆ ಹಾಸನಾಂಬ ದೇವಿಯ ದರ್ಶನಕ್ಕೆ ಈ ಬಾರಿ ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಿರುವುದ್ರಿಂದ ಯಾವುದೇ ಗೊಂದಲವಿಲ್ಲದೇ ಭಕ್ತರು ಸರಾಗವಾಗಿ ದರ್ಶನ ಮಾಡಿದ್ರು. 6 ದಿನಗಳಲ್ಲಿ ಈ ವರೆಗೂ ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಇಂದು ಯಾರೂ ಗಣ್ಯಾತಿಗಣ್ಯರು ದರ್ಶನ ಆಗಮಿಸಿಲ್ಲಾ ಸಾಮಾನ್ಯ ಭಕ್ತರಷ್ಟೇ ದೇವಿಯ ದರ್ಶನ ಪಡೆದ್ರು. ಸಾಮಾನ್ಯ ಸಾಲಿನಲ್ಲಿ ಎಂದಿನಂತೆ ಭಕ್ತರ ಸಂಖ್ಯೆ ಹೆಚ್ಚಾಗಿತ್ತು, ಆದ್ರೆ ನೇರ ದರ್ಶನದ ಸಾಲಿನಲ್ಲಿ ಭಕ್ತರ ಸಂಖ್ಯೆ ಸ್ವಲ್ಪ ಕಡಿಮೆಯಾಗಿತ್ತು. ಮದ್ಯಾಹದ ಬಳಿಕ ಭಕ್ತರ ಸಂಖ್ಯೆ ಹೆಚ್ಚಾಗಿದ್ದು ನೂಕು ನುಗ್ಗಲು ಉಂಟಾಯಿತು.
ಇಂದು ಕೂಡ ಬೆಳಿಗ್ಗೆ 6 ಗಂಟೆಯಿಂದ ಮದ್ಯಾಹ್ನ 1 ಗಂಟೆಯವರೆಗೆ ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. 1 ರಿಂದ 3 ಗಂಟೆಯವರೆಗೆ ದೇವಿಗೆ ನೈವೇದ್ಯ ಮಾಡುತ್ತಿದ್ದರಿಂದ ಗರ್ಭಗುಡಿಯ ಬಾಗಿಲು ಮುಚ್ಚಲಾಗಿತ್ತು. ಮತ್ತೆ ಮಧ್ಯಾಹ್ನ 3 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೂ 24 ಗಂಟೆಗಳ ಕಾಲ ದೇವಿಯ ದರ್ಶನ ಪಡೆಯಬಹುದಾಗಿದೆ. ದೇವಾಲಯದ ಸುತ್ತಲೂ ಭಕ್ತರಿಗೆ ಯಾವುದೇ ಅಡಚಣೆಯಾಗದಂತೆ ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕಳೆದ ಬಾರಿಗಿಂತಲೂ ಈ ಬಾರಿ ಭಕ್ತರಿಗೆ ಜಿಲ್ಲಾಡಳಿತದಿಂದ ಸೂಕ್ತ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ನೇರದರ್ಶನದ 1000 ಮತ್ತು 300 ರೂಪಾಯಿಯ ಟಿಕೇಟ್ ನಲ್ಲಿ ಆರು ದಿನಗಳಲ್ಲಿ ಈವರೆಗೂ ಸುಮಾರು 50 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದೆ. ಕೊನೆಯ ಎರಡು ದಿನಗಳಲ್ಲಿ ಲಕ್ಷಾಂತರ ಮಂದಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು ಒಟ್ಟಾರೆ ಎಲ್ಲಾ ಭಕ್ತರಿಗೂ ಯಾವುದೇ ಅಡಚಣೆಯಾಗದಂತೆ ಸುಸೂತ್ರವಾಗಿ ದೇವಿಯ ದರ್ಶನವಾಗುತ್ತಿದೆ.

