ಫ್ಯಾಕ್ಟ್‌ಚೆಕ್ : ಸೂಜಿಯಲ್ಲಿ ಚುಚ್ಚಿ ಮಾರಕ ರೋಗಗಳನ್ನು ಹರಡುವ ಜಾಲ ಹುಟ್ಟಿಕೊಂಡಿದೆಯೇ? ಈ ಸ್ಟೋರಿ ಓದಿ

ಜನಸಂದಣಿ ಇರುವ ಸ್ಥಳಗಳಲ್ಲಿ ಈ ರೀತಿ HIV ಅಥವಾ ಇತರೆ ಮಾರಕ ರೋಗಗಳ ವೈರಸ್‌ಗಳನ್ನು ಸೂಜಿಯ ಮೂಲಕ ಚುಚ್ಚಿ ರೋಗ ಹರಡುವ ಜಾಲವೊಂದು ಹುಟ್ಟಿಕೊಂಡಿದೆ ಎಂದು ಪ್ರತಿಪಾದಿಸಿ ಯುವತಿಯೊಬ್ಬಳ ಹಿಂದೆ ನಿಂತ ಮಹಿಳೆಯೊಬ್ಬರು ಬುಜಕ್ಕೆ ಚುಚ್ಚುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋ ಫೇಸ್‌ಬುಕ್ ಮಾತ್ರವಲ್ಲದೆ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಹೆಚ್ಚು ಹಂಚಿಕೆಯಾಗುತ್ತಿದೆ. ಆದರೆ ಈ ಘಟನೆ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂಬುದಾಗಲಿ, ಚುಚ್ಚುತ್ತಿರುವ ಮಹಿಳೆ ಯಾರು ಎಂಬುದಾಗಲಿ ಯಾವ ಮಾಹಿತಿಯೂ ವಿಡಿಯೋದಲ್ಲಿ ಲಭ್ಯವಿಲ್ಲ. ಆದರೆ ಕೆಲವರು ವಿಡಿಯೋವನ್ನು ತಮ್ಮ ವಾಟ್ಸಾಪ್‌ ಮೂಲಕ ಹಂಚಿಕೊಳ್ಳುತ್ತ ಜನರಲ್ಲಿ ಭೀತಿಯನ್ನುಂಟು ಮಾಡುತ್ತಿದ್ದಾರೆ. ಹಾಗಿದ್ದರೆ ಈ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: 

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವಿಡಿಯೋದಲ್ಲಿ ಕಂಡುಬರುವ ಯುವತಿ ಮತ್ತು ಮಹಿಳೆ ಇಬ್ಬರು ಸಂಬಂಧಿಕರು ಎಂದು ಟರ್ಕಿ ಮಾಧ್ಯಮೊಂದು ವರದಿ ಮಾಡಿದೆ.

ಈ ವಿಡಿಯೋದಲ್ಲಿರುವ ದೃಶ್ಯಗಳು 2022ರ ಟರ್ಕಿಯಲ್ಲಿ ನಡೆದ ಮದುವೆ ಸಮಾರಂಭಕ್ಕೆ ಸಂಬಂಧಿಸಿದ್ದು ಎಂದು ತಿಳಿದುಬಂದಿದೆ. ಚಿನ್ನದ ಆಭರಣದಿಂದ ಮುಂದೆ ನಿಂತ ತನ್ನ ಮಗಳಿಗೆ ತಾಯಿ ತಮಾಷೆಗೆ ಚುಚ್ಚುತ್ತಿರುವ ದೃಶ್ಯ ಎಂದು ಇಜಲ್ಸೆನ್.ಕಾಮ್ ಎಂಬ ಸುದ್ದಿ ತಾಣದಲ್ಲಿ ಈ ದೃಶ್ಯವನ್ನು ಹಂಚಿಕೊಂಡು ತಾಯಿ ಮಾಡಿದ ತಮಾಷೆ ನೋಡಿ ಎಂದು ಟೈಟಲ್ ನೀಡಲಾಗಿದೆ.

ಈ ವಿಡಿಯೋಗೆ ಸಂಬಂಧಿಸಿದಂತೆ ಟರ್ಕಿಶ್ ಭಾಷೆಯಲ್ಲಿ ಒಬ್ಬರು ಕಮೆಂಟ್ ಮಾಡಿದ್ದು “ತಾಯಿ ಮಗಳ ನಡವೆ ತಮಾಷೆ ಇರುವುದು ಸಹಜ, ಒಂದು ವೇಳೆ ನನಗೇನಾದರೂ ಹೀಗೆ ಮಾಡಿರುತ್ತಿದ್ದರೆ ನಾನು ಮೊಕದ್ದೊಮ್ಮೆ ಹೂಡುತ್ತಿದೆ” ಎಂದು ಬರೆದಿದ್ದಾರೆ.

ಈ ವೈರಲ್ ವಿಡಿಯೋವನ್ನು ಕನ್ನಡ ಫ್ಯಾಕ್ಟ್‌ಚೆಕ್ ತಂಡವು ವಿವರಣೆಯೊಂದಿಗೆ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದು, ಇದು ದಾರಿ ತಪ್ಪಿಸುವ ಸುಳ್ಳಿನ ಹೇಳಿಕೆಯ ದೃಶ್ಯಗಳು ಎಂದು ಫ್ಯಾಕ್ಟ್‌ಚೆಕ್ ವಿಡಿಯೋವನ್ನು ಪ್ರಕಟಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಟರ್ಕಿ ಅಮ್ಮ ಮಗಳ ನಡುವಿನ ತಮಾಷೆಯ ವಿಡಿಯೋನ್ನು HIV ವೈರಸ್‌ಅನ್ನು ಸೂಜಿಯ ಮೂಲಕ ಚುಚ್ಚಿ ರೋಗ ಹರಡುವ ಜಾಲ ಹುಟ್ಟಿಕೊಂಡಿದೆ ಎಂದು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

 


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಪಾಕಿಸ್ತಾನದ ಕ್ರಿಕೆಟ್ ಆಟಗಾರರು ಊಟಕ್ಕಾಗಿ ಕಿತ್ತಾಟ ನಡೆಸಿದ್ದಾರೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights