ಸಂಭಾವನೆ ಪಡೆಯದೇ ಪುನೀತ್‌ ಅಭಿನಯಿಸಿದ್ದ ಸಾಲು ಸಾಲು ಜಾಹೀರಾತುಗಳು!

ಸ್ಯಾಂಡಲ್‌ವುಡ್‌ನ ಫಿಟೆಸ್ಟ್‌ ನಟರಾಗಿದ್ದ ಪುನೀತ್‌ ರಾಜ್‌ಕುಮಾರ್‌ ಅವರು ಹಠಾತ್‌ನೆ ಅಭಿಮಾನಿಗಳನ್ನಗಲಿದ್ದಾರೆ. ಸರಳತೆ, ಸಜ್ಜನಿಕೆ, ಸಹೃದತೆಯಿಂದಲೇ ಅಭಿಮಾನಿಗಳ ಸ್ಟಾರ್‌ ಆಗಿದ್ದ ಪುನೀತ್‌, ತಮ್ಮ ನಟನೆಯ ಆಚೆಗೂ ಎಲ್ಲರ ಮನ ಗೆದ್ದಿದ್ದರು. ಮಾತ್ರವಲ್ಲ, ಹಲವಾರು ಸರ್ಕಾರಿ, ಸಹಕಾರಿ ಸಂಸ್ಥೆಗಳಿಗೆ ಸಂಭಾವನೆ ಪಡೆಯದೇ ಜಾಹೀರಾತುಗಳನ್ನು ನೀಡಿದ್ದರು.

ಕರ್ನಾಟಕದಲ್ಲಿ ಅತೀ ಹೆಚ್ಚು ಸರ್ಕಾರಿ ಜಾಹಿತಾರುಗಳಲ್ಲಿ ಬ್ರಾಂಡ್‌ ಅಂಬಾಸಿಡರ್‌ ಆಗಿ ಅಥವಾ ಜಾಗೃತಿ ಅಭಿಯಾನಗಳಲ್ಲಿ ಕಾಣಿಸಿಕೊಂಡ ನಟ ಪುನೀತ್‌ ರಾಜ್‌ಕುಮಾರ್. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಪಕ್ಷಬೇಧವಿಲ್ಲದೇ ಸರ್ಕಾರಿ ಜಾಹೀರಾತುಗಳಲ್ಲಿ ಪುನೀತ್ ಕಾಣಿಸಿಕೊಳ್ಳುತ್ತಿದ್ದರು. ಅದೂ ಕೂಡ ಸಂಭಾವನೆ ಪಡೆಯದೇ…..

ಕರ್ನಾಟಕ ಹಾಲು ಒಕ್ಕೂಟದ ಉತ್ಪನ್ನವಾದ ನಂದಿನಿ ಬ್ರಾಂಡ್‌ನ ಹಲವು ಉತ್ಪನ್ನಗಳ ಬ್ರಾಂಡ್‌ ಅಂಬಾಸಿಡರ್‌ ಆಗಿ ಹಲವು ವರ್ಷ ನಟ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಂಡರು. ಆದರೆ ಅದಕ್ಕಾಗಿ ಅವರು ಹಣ ಪಡೆಯಲಿಲ್ಲ. ನಟ ರಾಜ್‌ಕುಮಾರ್ ಸಹ ನಂದಿನಿ ಜಾಹೀರಾತನ್ನು ಉಚಿತವಾಗಿ ಮಾಡಿದ್ದರು.

ಪುನೀತ್‌ ಅವರು ಚಾಮರಾಜ ನಗರ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ರಾಯಭಾರಿಯೂ ಆಗಿದ್ದರು. ಸ್ವತಃ ನಿಸರ್ಗ ಪ್ರೇಮಿಯಾಗಿದ್ದ ಪುನೀತ್ ಈ ಕಾರ್ಯಕ್ರಮವನ್ನು ಉಚಿತವಾಗಿ ಮಾಡಿದ್ದರು.

ಕೌಶಲ್ಯ ಕರ್ನಾಟಕ ಯೋಜನೆಯ ರಾಯಭಾರಿಯೂ ಆಗಿದ್ದ ಪುನೀತ್, ಉದ್ಯಮಶೀಲತೆ, ಎಫಿಷಿಯಂಟ್ ಲೈಂಟಿಂಗ್ ಪ್ರೋಗ್ರಾಂಗಳಿಗೂ ಉಚಿತವಾಗಿ ನಟಿದ್ದರು.

ಬೆಂಗಳೂರಿನ ಬಿಎಂಟಿಸಿ ಬಸ್ ಆದ್ಯತಾ ಪಥ ಕಾರ್ಯಕ್ರಮಕ್ಕೂ ಪುನೀತ್ ರಾಜ್‌ಕುಮಾರ್ ಅಂಬಾಸಿಡರ್ ಆಗಿದ್ದರು. ಪುನೀತ್ ನಿಧನರಾದಾಗ ಅದೇ ಜಾಹೀರಾತಿ ವಿಡಿಯೋವನ್ನು ಟ್ವೀಟ್‌ ಮಾಡಿ, ಪುನೀತ್‌ ಅವರಿಗೆ ಬಿಎಂಟಿಸಿ ಸಂತಾಪ ಸೂಚಿಸಿತ್ತು.

ಸಬ್ಸಿಡಿ ದರದಲ್ಲಿ ಎಲ್‌ಇಡಿ ಬಲ್ಬ್ ವಿತರಣೆ ಯೋಜನೆ ಜಾರಿ ಬಂದಾಗ, ಆ ಯೋಜನೆಗೂ ಪುನೀತ್ ಮತ್ತು ನಟಿ ರಮ್ಯಾ ಜಾಹೀರಾತು ನೀಡಿದ್ದರು. ಆಗ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದರು.

ಕಿಮ್ಮನೆ ರತ್ನಾಕರ್ ಶಿಕ್ಷಣ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ, ಆರ್‌ಟಿಇ ಕಾರ್ಯಕ್ರಮಕ್ಕೆ ಪ್ರಚಾರಕ್ಕೆ ಪುನೀತ್ ಜಾಹೀರಾತು ನೀಡಿದ್ದರು. ಹಣ ಪಡೆಯದೇ ಜಾಹೀರಾತು ನೀಡಿದ್ದ ಪುನೀತ್‌ ಅವರನ್ನು ‘ನೀವು ಹೆಸರಲ್ಲೇ ಅಲ್ಲ ಗುಣದಲ್ಲೂ ರಾಜಕುಮಾರನೇ ಮಗನೇ’ ಎಂದು ಕಿಮ್ಮನೆ ಬಣ್ಣಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ, ಪುನೀತ್‌, ‘ಅಪ್ಪಾಜಿಯ ಆಶೀರ್ವಾದ’ ಎಂದಿದ್ದರು.

ರಾಜಕೀಯದಿಂದ ದೂರವೇ ಉಳಿದಿದ್ದ ಪುನೀತ್‌ ರಾಜ್‌ಕುಮಾರ್, ಸರ್ಕಾರಿ ಯೋಜನೆಗಳ ಜೊತೆಗೆ ಸದಾ ಇದ್ದರು. ಯಾವುದನ್ನೂ ನಿರೀಕ್ಷಿಸದೇ, ಜಾಹೀರಾತುಗಳನ್ನು ನೀಡಿದ್ದರು.

ಇದನ್ನೂ ಓದಿ: ಅರ್ಧಕ್ಕೆ ಉಳಿದುಹೋಗಿವೆ ಪುನೀತ್‌ ನಟನೆಯ ಸಾಲು ಸಾಲು ಸಿನಿಮಾಗಳು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights