“ಕೇಂದ್ರ ಸರ್ಕಾರಕ್ಕೆ ನವೆಂಬರ್ 26ರವರೆಗೆ ಸಮಯವಿದೆ; ಇಲ್ಲದಿದ್ದರೆ…”: ಸರ್ಕಾರಕ್ಕೆ ರೈತ ಮುಖಂಡರ ಎಚ್ಚರಿಕೆ!

ನವೆಂಬರ್ 26 ರೊಳಗೆ ಕೇಂದ್ರ ಸರ್ಕಾರವು ವಿವಾದಾತ್ಮಕ ಕೃಷಿ ಕಾನೂನನ್ನು ಹಿಂತೆಗೆದುಕೊಳ್ಳದಿದ್ದರೆ ದೆಹಲಿ ಗಡಿಯಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕಳೆದ ಹನ್ನೊಂದು ತಿಂಗಳುಗಳಿಂದ ರೈತರು ದೆಹಲಿ ಗಡಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ದ ಹೋರಾಟ ನಡೆಸುತ್ತಿದ್ದಾರೆ. ಇದೇ ನವೆಂಬರ್ 26ಕ್ಕೆ ರೈತ ಹೋರಾಟ ಒಂದು ವರ್ಷವನ್ನು ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ರಾಕೇಶ್‌ ಟಿಕಾಯತ್‌ ಅವರು ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

“ಕೇಂದ್ರ ಸರ್ಕಾರಕ್ಕೆ ನವೆಂಬರ್ 26 ರವರೆಗೆ ಸಮಯವಿದೆ. ಅದರ ನಂತರ (ನವೆಂಬರ್ 27 ರಿಂದ) ಇನ್ನೂ ಹೆಚ್ಚಿನ ಸಂಖ್ಯೆಯ ರೈತರು ಹಳ್ಳಿಗಳಿಂದ ಟ್ರ್ಯಾಕ್ಟರ್‌ಗಳ ಮೂಲಕ ದೆಹಲಿ ಸುತ್ತಲೂ ನಡೆಯುತ್ತಿರುವ ಪ್ರತಿಭಟನಾ ಸ್ಥಳಗಳಗೆ (ದೆಹಲಿ ಗಡಿಗಳು) ತಲುಪುತ್ತಾರೆ. ಪ್ರತಿಭಟನೆಯ ಸ್ಥಳವನ್ನು ಘನಕೋಟೆಯನ್ನಾಗಿ ಬಲಪಡಿಸುತ್ತಾರೆ” ಎಂದು ಟಿಕಾಯತ್‌ ಟ್ವೀಟ್ ಮಾಡಿದ್ದಾರೆ.

ಎರಡು ದಿನಗಳಲ್ಲಿ ಕೇಂದ್ರಕ್ಕೆ ಇದು ಎರಡನೇ ಎಚ್ಚರಿಕೆಯಾಗಿದೆ. ದೆಹಲಿ ಗಡಿಯಿಂದ ಪ್ರತಿಭಟನಾಕಾರರನ್ನು ಬಲವಂತವಾಗಿ ತೆರವುಗೊಳಿಸಲು ಪ್ರಯತ್ನಿಸಿದರೆ ಸರ್ಕಾರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಟಿಕಾಯತ್‌ ಭಾನುವಾರ ಎಚ್ಚರಿಕೆ ನೀಡಿದ್ದಾರೆ.

ಕಳೆದ ವರ್ಷ ಜಾರಿಗೆ ತಂದ ಮೂರು ಕಾನೂನುಗಳು ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ಕಳೆದ ವರ್ಷ ನವೆಂಬರ್ 26 ರಿಂದ ರೈತರು ದೆಹಲಿಯ ಮೂರು ಗಡಿ ಬಿಂದುಗಳಾದ ಟಿಕ್ರಿ, ಸಿಂಘು ಮತ್ತು ಗಾಜಿಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ನಿರತ ರೈತರ ಮೇಲೆ ಹಲವು ಭಾರೀ ದಾಳಿಗಳು ನಡೆದಿವೆ. ಸುಮಾರು 500ಕ್ಕೂ ರೈತರು ಪ್ರತಿಭಟನಾ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ

ಇದನ್ನೂ ಓದಿ: ರೈತ ಹೋರಾಟ: ದೆಹಲಿಯ ಟಿಕ್ರಿ ಗಡಿಯಲ್ಲಿ ಬ್ಯಾರಿಕೇಡ್ ತೆರವು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights